ಬ್ಯಾಂಕ್ ಎಟಿಎಂಗಳಲ್ಲಿ 2000ರೂ. ನೋಟುಗಳು ಏಕೆ ಸಿಗುತ್ತಿಲ್ಲ? ಸ್ಪಷ್ಟನೆ ನೀಡಿದ ಹಣಕಾಸು ಸಚಿವೆ

By Suvarna News  |  First Published Mar 24, 2023, 5:13 PM IST

ಎಟಿಎಂಗಳಲ್ಲಿ 2000ರೂ. ಮುಖಬೆಲೆಯ ನೋಟುಗಳನ್ನು ತುಂಬದಂತೆ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನಿರ್ಬಂಧ ವಿಧಿಸಿದೆಯಾ? ಎಂಬ ಪ್ರಶ್ನೆಗೆ ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಿದ್ದು,ಅಂಥ ಯಾವುದೇ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
 


ನವದೆಹಲಿ (ಮಾ.24): ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಎಟಿಎಂಗಳಲ್ಲಿ 2000ರೂ. ಮುಖಬೆಲೆಯ ಗುಲಾಬಿ ಬಣ್ಣದ ನೋಟುಗಳು ಸಿಗುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ 2000ರೂ. ನೋಟ್ ಅನ್ನು ಬ್ಯಾನ್ ಮಾಡುತ್ತಾ ಎಂಬ ಅನುಮಾನ ಅನೇಕರಲ್ಲಿ ಹುಟ್ಟಿತ್ತು. ಈ ಹಿನ್ನೆಲೆಯಲ್ಲಿ ಎಟಿಎಂ ಮುಖಾಂತರ 2000ರೂ. ಮುಖಬೆಲೆಯ ನೋಟುಗಳನ್ನು ವಿತರಿಸದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬ್ಯಾಂಕ್ ಗಳ ಮೇಲೆ ನಿರ್ಬಂಧ ವಿಧಿಸಿದೆಯಾ? ಎಂಬ ಪ್ರಶ್ನೆಯನ್ನು ಲೋಕಸಭೆಯಲ್ಲಿ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬ್ಯಾಂಕ್ ಎಟಿಎಂಗಳಲ್ಲಿ 2000 ರೂ. ನೋಟುಗಳನ್ನು ತುಂಬದಂತೆ ಬ್ಯಾಂಕುಗಳಿಗೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎಟಿಎಂಗಳಲ್ಲಿ ಎಷ್ಟು ಮೊತ್ತ ಹಾಗೂ ಯಾವ ಮುಖಬೆಲೆಯ ನೋಟುಗಳ ಅಗತ್ಯವಿದೆ ಎಂಬುದನ್ನು ಬ್ಯಾಂಕ್ ಗಳೇ ನಿರ್ಧರಿಸುತ್ತವೆ. ಈ ಹಿಂದಿನ ಬಳಕೆ, ಗ್ರಾಹಕರ ಅಗತ್ಯ, ಆ ಸಮಯದ ಟ್ರೆಂಡ್ ಇತ್ಯಾದಿ ಅಂಶಗಳನ್ನು ಆಧರಿಸಿ ಬ್ಯಾಂಕ್ ಗಳು ಈ ನಿರ್ಣಯ ಕೈಗೊಳ್ಳುತ್ತವೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ. ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲಿ 2000ರೂ. ನೋಟಿನ ಕುರಿತು ಈ ಹಿಂದೆ ಕೂಡ ಪ್ರಶ್ನೆಗಳನ್ನು ಕೇಳಲಾಗಿತ್ತು. 

2000ರೂ. ನೋಟುಗಳ ಭವಿಷ್ಯದ ಬಗ್ಗೆ ಕೂಡ ಸಂಸತ್ತಿನಲ್ಲಿ ಚರ್ಚೆ ನಡೆದಿದೆ. ಮಹಾತ್ಮ ಗಾಂಧಿ ಹೊಸ ಸರಣಿಯ ಭಾಗವಾಗಿ ಆರ್ ಬಿಐ ಹೊಸ ವಿನ್ಯಾಸದ 2000ರೂ. ಮುಖಬೆಲೆಯ ನೋಟುಗಳನ್ನು ಪರಿಚಯಿಸುತ್ತದಾ? ಎಂದು ರಾಜ್ಯಸಭೆಯಲ್ಲಿ ಮಂಗಳವಾರ ಸಂಸದ ರಾಜ್ ಮಣಿ ಪಟೇಲ್ ಪ್ರಶ್ನಿಸಿದ್ದರು. ಇದಕ್ಕೆ ಲಿಖಿತ ಉತ್ತರ ನೀಡಿದ್ದ ಹಣಕಾಸು ಸಚಿವಾಲಯದ ರಾಜ್ಯಸಚಿವ ಪಂಕಜ್ ಚೌಧರಿ, ಅಂಥ ಯಾವುದೇ ಯೋಚನೆಯಿಲ್ಲ. ಆರ್ ಬಿಐ 2016ರಲ್ಲಷ್ಟೇ ಹೊಸ ವಿನ್ಯಾಸದ ನೋಟುಗಳನ್ನು ಪರಿಚಯಿಸಿದೆ ಎಂದು ತಿಳಿಸಿದ್ದಾರೆ. 

Tap to resize

Latest Videos

ಏಳನೇ ವೇತನ ಆಯೋಗ: ಸರ್ಕಾರಿ ಉದ್ಯೋಗಿಗಳ ಕನಿಷ್ಠ ವೇತನದಲ್ಲಿ ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ

ಇದೇ ತಿಂಗಳ ಅಂದರೆ ಮಾ.14ರಂದು ಕೂಡ 2000ರೂ. ನೋಟಿನ ಬಗ್ಗೆ ಸರ್ಕಾರ ಪ್ರಶ್ನೆಯನ್ನು ಎದುರಿಸಿತ್ತು. ಸರ್ಕಾರ 2000ರೂ. ನೋಟುಗಳನ್ನು ಸ್ಥಗಿತಗೊಳಿಸಲು ಯೋಚಿಸಿದೆಯಾ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಪಂಕಜ್ ಚೌಧರಿ, 2019-20ನೇ ಸಾಲಿನ ಬಳಿಕ 2000ರೂ. ನೋಟುಗಳನ್ನು ಮುದ್ರಿಸಿಲ್ಲ. ಚಲಾವಣೆಯಲ್ಲಿರುವ ವಿವಿಧ ಮುಖಬೆಲೆಯ ನೋಟುಗಳು ಅಗತ್ಯ ಪ್ರಮಾಣದಲ್ಲಿವೆ ಎಂಬುದು ಪರಿಶೀಲನೆಯಲ್ಲಿ ತಿಳಿದುಬಂದಿದೆ.   ಹೀಗಾಗಿ 2000ರೂ. ನೋಟುಗಳನ್ನು ಸ್ಥಗಿತಗೊಳಿಸುವ ಯಾವುದೇ ಪ್ಲ್ಯಾನ್ ಇಲ್ಲ ಎಂದು ತಿಳಿಸಿದ್ದರು.

ಲೋಕಸಭೆಯಲ್ಲಿ ಮಾ.20ರಂದು ಸಂಸದ ಸಂತೋಷ್ ಕುಮಾರ್ ಅವರು ನೋಟು ಅಮಾನ್ಯೀಕರಣದ ಬಳಿಕ 500ರೂ. ಹಾಗೂ 2000ರೂ. ಮುಖಬೆಲೆಯ ಸುಮಾರು 9.21 ಲಕ್ಷ ಕೋಟಿ ರೂ. ಕರೆನ್ಸಿ ನೋಟುಗಳನ್ನು ವಿತರಿಸಲಾಗಿತ್ತು, ಈ ನೋಟುಗಳು ಸದ್ಯ ಚಲಾವಣೆಯಲ್ಲಿ ಇಲ್ಲವೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ಅಂಥ ಯಾವುದೇ ಮಾಹಿತಿ ಅಥವಾ ಅಂಕಿಅಂಶಗಳು ಲಭ್ಯವಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ವಾರ್ಷಿಕ ವರದಿಗಳ ಅನ್ವಯ 2017ರ ಮಾರ್ಚ್ ಕೊನೆಯಲ್ಲಿ ಹಾಗೂ  2022ರ ಮಾರ್ಚ್ ಕೊನೆಯಲ್ಲಿ ಚಲಾವಣೆಯಲ್ಲಿರುವ 500ರೂ. ಹಾಗೂ 2000ರೂ. ಮುಖಬೆಲೆಯ  ನೋಟುಗಳ ಒಟ್ಟು ಮೌಲ್ಯ ಕ್ರಮವಾಗಿ 9.512ಲಕ್ಷ ಕೋಟಿ ರೂ. ಹಾಗೂ 27.057ಲಕ್ಷ ಕೋಟಿ ರೂ.' ಎಂದು ತಿಳಿಸಿದ್ದಾರೆ. 

ಉದ್ಯೋಗಿಗಳಿಗೆ ಶುಭ ಸುದ್ದಿ; ಈ ವರ್ಷ ವೇತನದಲ್ಲಿ ಶೇ.10.2ರಷ್ಟು ಏರಿಕೆ ನಿರೀಕ್ಷೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಳೆಯ 500 ರೂ. ಹಾಗೂ 1,000 ರೂ. ನೋಟುಗಳನ್ನು ಬ್ಯಾನ್‌ ಮಾಡಿದ ಬಳಿಕ 2016 ರಲ್ಲಿ ಹೊಸ 500 ರೂ. ನೋಟುಗಳ ಜತೆಗೆ 2 ಸಾವಿರ ರೂ. ನೋಟುಗಳನ್ನು ದೇಶದಲ್ಲಿ ಪರಿಚಯಿಸಲಾಯ್ತು. ಕಪ್ಪು ಹಣ, ಭಯೋತ್ಪಾದನೆ ಹಾಗೂ ಇತರೆ ಗುರಿಗಳನ್ನು ಈಡೇರಿಸಲು ಈ ರೀತಿ ಮಾಡಲಾಗಿತ್ತು ಎಂದು ಆಗ ವರದಿಯಾಗಿತ್ತು. 

click me!