ಅದಾನಿ ಆಯ್ತು,ಈಗ ಟ್ವಿಟ್ಟರ್ ಮಾಜಿ ಸಿಇಒ ಮೇಲೆ ಹಿಂಡೆನ್ ಬರ್ಗ್ ಕೆಂಗಣ್ಣು;ಡೋರ್ಸೆ ಮೇಲಿನ ಆರೋಪಗಳೇನು?

By Suvarna NewsFirst Published Mar 24, 2023, 12:18 PM IST
Highlights

ಭಾರತದ ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಮೇಲೆ ಕಳೆದ ತಿಂಗಳು ವಂಚನೆ ಆರೋಪ ಮಾಡುವ ಮೂಲಕ ಸಾಕಷ್ಟು ಸದ್ದು ಮಾಡಿದ್ದ ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್‌ ಈಗ ಮತ್ತೊಂದು ಬಾಂಬ್ ಸಿಡಿಸಿದೆ. ಟ್ವಿಟ್ಟರ್ ಮಾಜಿ ಸಿಇಒ ಜಾಕ್ ಡೋರ್ಸೆ ವಿರುದ್ಧ ವಂಚನೆಗಳ ಆರೋಪವನ್ನು ಹಿಂಡೆನ್ ಬರ್ಗ್ ಮಾಡಿದೆ. ಎರಡು ವರ್ಷಗಳ ಸುದೀರ್ಘಾವಧಿಯ ಅಧ್ಯಯನದ ಆಧಾರದಲ್ಲಿ ಈ ಆರೋಪಗಳನ್ನು ಮಾಡುತ್ತಿರೋದಾಗಿ ಹಿಂಡೆನ್ ಬರ್ಗ್ ತಿಳಿಸಿದೆ. 
 

ನವದೆಹಲಿ (ಮಾ.24): ಕಳೆದ ತಿಂಗಳು ಅದಾನಿ ಗ್ರೂಪ್ ಮೇಲೆ ವಂಚನೆ ಆರೋಪ ಮಾಡುವ ಮೂಲಕ ಗೌತಮ್ ಅದಾನಿ ಸಂಪತ್ತನ್ನು ಸಾಕಷ್ಟು ಕರಗಿಸಿದ್ದ ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಹಾಗೂ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್‌ ಗುರುವಾರ ಮತ್ತೊಂದು ಬಾಂಬ್ ಸಿಡಿಸಿದೆ. ಆದರೆ, ಈ ಬಾರಿ ಹಿಂಡೆನ್ ಬರ್ಗ್ ಕೆಂಗಣ್ಣಿಗೆ ಗುರಿಯಾಗಿರೋದು ಗೌತಮ್ ಅದಾನಿಯಲ್ಲ, ಬದಲಿಗೆ ಟ್ವಿಟ್ಟರ್ ಮಾಜಿ ಸಿಇಒ ಜಾಕ್ ಡೋರ್ಸೆ. ಹೊಸ ವಂಚನೆ ಪ್ರಕರಣವೊಂದನ್ನು ಬಯಲು ಮಾಡೋದಾಗಿ ಹಿಂಡೆನ್ ಬರ್ಗ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ನಿನ್ನೆಯಷ್ಟೇ ಪೋಸ್ಟ್ ಹಾಕುವ ಮೂಲಕ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿತ್ತು. ಈಗ ಹೆಸರನ್ನು ಬಹಿರಂಗಪಡಿಸಿದ್ದು, ಟ್ವಿಟ್ಟರ್ ಮಾಜಿ ಸಿಇಒ ಮೇಲೆ ವಂಚನೆ ಆರೋಪಗಳನ್ನು ಮಾಡಿದೆ. ಜಾಕ್ ಡೋರ್ಸೆ ಅವರ ಬ್ಲಾಕ್ ಇಂಕ್ ಸಂಸ್ಥೆಯ ಮೇಲೆ ತನ್ನ ಎರಡು ವರ್ಷಗಳ ಸುದೀರ್ಘ ಅವಧಿಯ ತನಿಖೆ ಆಧಾರದಲ್ಲಿ ಹಿಂಡೆನ್ ಬರ್ಗ್ ಹಲವಾರು ವಂಚನೆ ಆರೋಪಗಳನ್ನು ಮಾಡಿದೆ. ಈ ಹಿಂದೆ ಸ್ಕ್ವೇರ್ ಇಂಕ್ ಎಂದು ಕರೆಯಲಾಗುತ್ತಿದ್ದ ಜಾಕ್ ಅವರ ಬ್ಲಾಕ್ ಇಂಕ್ ಸಂಸ್ಥೆಯ ಮಾರುಕಟ್ಟೆ ಬಂಡವಾಳ 44 ಬಿಲಿಯನ್ ಡಾಲರ್ ಆಗಿದೆ. ಕೋವಿಡ್ -19 ಪೆಂಡಾಮಿಕ್ ಬಳಿಕ ಬ್ಲಾಕ್ಸ್ ಕ್ಯಾಶ್ ಅಪ್ಲಿಕೇಷನ್ ಪ್ಲ್ಯಾಟ್ ಫಾರ್ಮ್ ಸಾಕಷ್ಟು ಪ್ರಗತಿ ಕಂಡಿದ್ದು, ಈ ಬಗ್ಗೆ ಅನೇಕ ವಿಶ್ಲೇಷಕರು ಅಚ್ಚರಿ ವ್ಯಕ್ತಪಡಿಸಿದ್ದರು. ಬ್ಲಾಕ್ ಇಂಕ್ ಸುಳ್ಳು ಖಾತೆಗಳನ್ನು ಸೃಷ್ಟಿಸಿ ವಂಚನೆ ಮಾಡುತ್ತಿದೆ. ಅಲ್ಲದೆ, ನಿಯಮಗಳನ್ನು ಪಾಲಿಸುತ್ತಿಲ್ಲ, ಹಣದುಬ್ಬರದ ಸಮಯದಲ್ಲೂ ಜನರನ್ನು ವಂಚಿಸುತ್ತಿದೆ ಎಂಬುದು ಸೇರಿದಂತೆ ಹಿಂಡೆನ್ ಬರ್ಗ್ ಅನೇಕ ಆರೋಪಗಳನ್ನು ಮಾಡಿದೆ.

ನಕಲಿ ಖಾತೆಗಳು
ಬ್ಲಾಕ್ ಇಂಕ್ ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರ ಪ್ರಕಾರ ಪರಿಶೀಲನೆ ಸಂದರ್ಭದಲ್ಲಿ ಸಂಸ್ಥೆಯಲ್ಲಿರುವ ಶೇ.40-ಶೇ.70ರಷ್ಟು ಖಾತೆಗಳು ನಕಲಿ ಎಂಬುದು ತಿಳಿದು ಬಂದಿದೆ. ಈ ಖಾತೆಗಳ ಮೂಲಕ ವಂಚನೆ ಮಾಡಲಾಗುತ್ತಿದೆ. ಅಲ್ಲದೆ, ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಅನೇಕ ಖಾತೆಗಳನ್ನು ತೆರೆಯಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಹಿಂಡೆನ್ ಬರ್ಗ್ ತನ್ನ ವರದಿಯಲ್ಲಿ ತಿಳಿಸಿದೆ. ಬ್ಲಾಕ್ ಇಂಕ್ ಸಂಸ್ಥೆಯ ಅನೇಕ ಮಾಜಿ ಉದ್ಯೋಗಿಗಳ ಜೊತೆಗೆ ನಡೆಸಿದ ಸಂದರ್ಶನಗಳಲ್ಲಿ ಈ ಸಂಸ್ಥೆ ಅಪರಾಧ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುತ್ತಿರುವ ಜೊತೆಗೆ ನಕಲಿ ಬಳಕೆದಾರರು ವಂಚನೆ ಖಾತೆಗಳನ್ನು ಹೊಂದಿರೋದು ತಿಳಿದು ಬಂದಿದೆ ಎಂದು ವರದಿ ತಿಳಿಸಿದೆ. ಜ್ಯಾಕ್ ಡೋರ್ಸೆ ಅವರೇ ಹಲವಾರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಈ ಖಾತೆಗಳಲ್ಲಿ ಕೆಲವನ್ನು ಬ್ಲಾಕ್ಸ್ ಕ್ಯಾಶ್ ಆಪ್ ಬಳಕೆದಾರರಿಗೆ ವಂಚಿಸಲು ಬಳಸಲಾಗುತ್ತಿದೆ. ಇನ್ನು ಎಲಾನ್ ಮಸ್ಕ್ ಹಾಗೂ ಡೊನಾಲ್ಡ್ ಟ್ರಂಪ್ ಹೆಸರಿನಲ್ಲಿ ಕೂಡ ಹಲವಾರು ನಕಲಿ ಖಾತೆಗಳನ್ನು ಸೃಷ್ಟಿಸಲಾಗಿದೆ ಎಂದು ಹಿಂಡೆನ್ ಬರ್ಗ್ ವರದಿ ಆರೋಪಿಸಿದೆ.

NEW FROM US:

Block—How Inflated User Metrics and "Frictionless" Fraud Facilitation Enabled Insiders To Cash Out Over $1 Billionhttps://t.co/pScGE5QMnX

(1/n)

— Hindenburg Research (@HindenburgRes)

Latest Videos

ಕೋವಿಡ್ -19 ಪೆಂಡಾಮಿಕ್ ಸಮಯದಲ್ಲಿ ಕ್ಯಾಶ್ ಅಪ್ಲಿಕೇಷನ್ ಸರ್ಕಾರದ ಕೋವಿಡ್ ಪರಿಹಾರ ಪಾವತಿಗಳನ್ನು ದೊಡ್ಡ ಪ್ರಮಾಣದಲ್ಲಿ ಮಾಡಿತ್ತು. ಯಾವುದೇ ಬ್ಯಾಂಕ್ ಖಾತೆ ಅಗತ್ಯವಿಲ್ಲದೆ ಬಳಕೆದಾರರು ಕ್ಯಾಷ್ ಅಪ್ಲಿಕೇಷನ್ ಬಳಸಿ ತಕ್ಷಣ ಸರ್ಕಾರದ ಪಾವತಿಗಳನ್ನು ಪಡೆಯಬಹುದು ಎಂದು ಕೋವಿಡ್ ಸಮಯದಲ್ಲಿ ಡೋರ್ಸೆಟ್ವೀಟ್ ಮಾಡಿದ್ದರು ಕೂಡ ಎಂದು ವರದಿ ತಿಳಿಸಿದೆ. ಅಲ್ಲದೆ, ಒಂದೇ ಖಾತೆ ಮೂಲಕ ವಿವಿಧ ರಾಜ್ಯಗಳ ಅನೇಕ ಜನರು ನಿರುದ್ಯೋಗ ಪಾವತಿಗಳನ್ನು ಪಡೆಯಲು ಅವಕಾಶ ಕಲ್ಪಿಸುವ ಮೂಲಕ ವಂಚನೆಗೆ ಅವಕಾಶ ಒದಗಿಸಿಕೊಟ್ಟಿದೆ ಎಂದು ಹಿಂಡೆನ್ ಬರ್ಗ್ ವರದಿ  ಆರೋಪಿಸಿದೆ.

ಒಂದೇ ಒಂದು ರಿಪೋರ್ಟ್‌, 1.44 ಲಕ್ಷ ಕೋಟಿ ಕಳೆದುಕೊಂಡ ಗೌತಮ್‌ ಅದಾನಿ!

ಶೋಷಿತ ಜನರ ಮೇಲೆ ಕಾಳಜಿ ತೋರಿಸುವಂತೆ ನಾಟಕವಾಡುತ್ತಿರುವ ಡೋರ್ಸೆ ವೈಯಕ್ತಿಕವಾಗಿ ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ಡೋರ್ಸಿ ಹಾಗೂ ಸಂಸ್ಥೆಯ ಮುಖ್ಯ ಅಧಿಕಾರಿಗಳು ಒಂದು ಬಿಲಿಯನ್ ಡಾಲರ್ ಈಕ್ವಿಟಿ ಮಾರಾಟ ಮಾಡಿದ್ದಾರೆ. ಬೇರೆಯವರಿಗೆ ಏನಾದರೂ ಚಿಂತೆಯಿಲ್ಲ ನಾವು ಮಾತ್ರ ಸೇಫ್ ಆಗಿರಬೇಕು ಎಂಬುದು ಅವರ ಉದ್ದೇಶವಾಗಿತ್ತು ಎಂದು ಹಿಂಡೆನ್ ಬರ್ಗ್ ಆರೋಪ ಮಾಡಿದೆ. 

click me!