ಭಾರತದ ಎಲಾನ್ ಮಸ್ಕ್ ಯಾರು? ಇಲ್ಲಿದೆ ನೋಡಿ ಸ್ನ್ಯಾಪ್ ಡೀಲ್ ಸಿಇಒ ಕುನಾಲ್ ಬಹ್ಲ್ ನೀಡಿರುವ ಉತ್ತರ

By Suvarna News  |  First Published Apr 30, 2022, 2:58 PM IST

*ಇನ್ಫೋಸಿಸ್ ಸಹಸಂಸ್ಥಾಪಕ ನಂದನ್ ನಿಲೇಕಣಿ ಭಾರತದ ಎಲಾನ್ ಮಸ್ಕ್ ಎಂದ ಕುನಾಲ್  ಬಹ್ಲ್ 
*ಆಧಾರ್, ಯುಪಿಐ ಸೃಷ್ಟಿಯ ಹಿಂದಿನ ನಿಲೇಕಣಿ ಪರಿಶ್ರಮವನ್ನು ಉಲ್ಲೇಖಿಸಿದ  ಸ್ನ್ಯಾಪ್ ಡೀಲ್ ಸಿಇಒ 
*ಎಲಾನ್ ಮಸ್ಕ್ ಹಾಗೂ ನಿಲೇಕಣಿ ಆಯ್ದುಕೊಂಡ ದಾರಿಗಳು ಬೇರೆಯಾದ್ರೂ ಪರಿಣಾಮ ಒಂದೇ ಎಂದ ಬಹ್ಲ್


ನವದೆಹಲಿ (ಏ.30): ಇತ್ತೀಚೆಗೆ ಟ್ವಿಟರ್ (Twitter) ಖರೀದಿಸುವ ಮೂಲಕ ಸುದ್ದಿಯಲ್ಲಿರುವ ಟೆಸ್ಲಾ (Tesla) ಮುಖ್ಯಸ್ಥ ಎಲಾನ್ ಮಸ್ಕ್  (Elon Musk), ದೂರದೃಷ್ಟಿಯುಳ್ಳ ನಾಯಕ ಎಂಬುದನ್ನು ಇಡೀ ವಿಶ್ವವೇ ಒಪ್ಪಿಕೊಳ್ಳುತ್ತದೆ. ಇಂಥದ್ದೇ ಗುಣಗಳನ್ನು ಹೊಂದಿರುವ ಮೇಧಾವಿ ಟೆಕ್ ನಾಯಕ ಭಾರತದಲ್ಲೂ ಇದ್ದಾರಾ? ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿರಬಹುದು. ಇದಕ್ಕೆ ಇ-ಕಾಮರ್ಸ್ ತಾಣ ಸ್ನ್ಯಾಪ್ ಡೀಲ್  (Snapdeal)  ಸಿಇಒ (CEO) ಕುನಾಲ್  ಬಹ್ಲ್ (Kunal Bahl) ಉತ್ತರ ನೀಡಿದ್ದಾರೆ. 

ಹಾಗಾದ್ರೆ ಭಾರತದಲ್ಲಿರುವ ಅಂಥ ಮೇಧಾವಿ ನಾಯಕ ಯಾರು? ಇನ್ಫೋಸಿಸ್ (Infosys) ಸಹಸಂಸ್ಥಾಪಕ ಕನ್ನಡಿಗ ನಂದನ್ ನಿಲೇಕಣಿ (Nandan Nilekani). ಇತ್ತೀಚೆಗೆ ಲಿಂಕ್ಡ್ ಇನ್ (Linked In)  ಪೋಸ್ಟ್ ವೊಂದರಲ್ಲಿ ಕುನಾಲ್ ಬಹ್ಲ್, ಇನ್ಫೋಸಿಸ್ ಸಹಸಂಸ್ಥಾಪಕ ನಂದನ್ ನಿಲೇಕಣಿ  (Nandan Nilekani) ಅವರನ್ನು ನಾನು ಭಾರತದ ಎಲಾನ್ ಮಸ್ಕ್ ( Elon Musk) ಎಂದು  ಪರಿಗಣಿಸುತ್ತೇನೆ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಪುಷ್ಟಿ ನೀಡಲು ನಂದನ್ ನಿಲೇಕಣಿ  ಮಾಡಿರುವ ಕೆಲವು ಕಾರ್ಯಗಳನ್ನು ಕೂಡ  ಬಹ್ಲ್ ಉಲ್ಲೇಖಿಸಿದ್ದಾರೆ. 

Tap to resize

Latest Videos

E-Commerce: ಚಿಲ್ಲರೆ ವ್ಯಾಪಾರಕ್ಕೆ ಸರ್ಕಾರಿ ಆ್ಯಪ್‌: ಎಲ್ಲವೂ ಇದರಲ್ಲಿ ಲಭ್ಯ..!

ಭಾರತದ ವಿಶಿಷ್ಟ ಗುರುತು ಚೀಟಿ ಆಧಾರ್ (Aadhaar) ಸೃಷ್ಟಿಯ ರೂವಾರಿ ನಂದನ್ ನಿಲೇಕಣಿ. ಭಾರತೀಯ ನಾಗರಿಕರಿಗೆ ಬಯೋಮೆಟ್ರಿಕ್ ಐಡಿ (Biometric ID) ಒದಗಿಸಬೇಕೆಂಬ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ನಿಲೇಕಣಿ ಬೆಂಬಲವಾಗಿ ನಿಂತರು. ಅದೇರೀತಿ ರಿಯಲ್ ಟೈಮ್ (real time) ಹಾಗೂ ತಕ್ಷಣ ಪಾವತಿ ವ್ಯವಸ್ಥೆಯಾದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ರೂಪಿಸುವಲ್ಲಿಯೂ ನಿಲೇಕಣಿ ನೀಡಿರುವ ನೆರವು ಗಮನಾರ್ಹ. ಈ ಎರಡೂ ವ್ಯವಸ್ಥೆಗಳು ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗುವ ಜೊತೆಗೆ ಹೊಸ ಕ್ರಾಂತಿ ಸೃಷ್ಟಿಸಿದವು ಕೂಡ.

ಪ್ರಸ್ತುತ ನಿಲೇಕಣಿ ಸರ್ಕಾರದ ಇನ್ನೊಂದು ಯೋಜನೆಗೆ ಬೆಂಬಲವಾಗಿ ನಿಂತಿದ್ದಾರೆ. ಅದೇ ಓಪನ್‌ ನೆಟ್‌ವರ್ಕ್ ಫಾರ್‌ ಡಿಜಿಟಲ್‌ ಕಾಮರ್ಸ್‌ (ONDC).ಇದು ಅಮೆಜಾನ್‌ (Amazon) ಹಾಗೂ ಫ್ಲಿಪ್‌ಕಾರ್ಟ್‌ನಂತಹ (Flipkart) ದೈತ್ಯ ಇ-ಕಾಮರ್ಸ್‌ (e-commerce) ಕಂಪೆನಿಗಳ ಅಬ್ಬರದಿಂದಾಗಿ ಮಂಕಾಗಿರುವ ದೇಶದ ಚಿಲ್ಲರೆ ವ್ಯಾಪಾರಿಗಳ ನೆರವಿಗೆ ಕೇಂದ್ರ ಸರ್ಕಾರ ರೂಪಿಸಿರುವ ಡಿಜಿಟಲ್ ಇ-ಕಾಮರ್ಸ್ (Digital e-commerce) ವೇದಿಕೆ.  ನಂದನ್‌ ನಿಲೇಕಣಿ ಸಹಾಯದೊಂದಿಗೆ ಕೇಂದ್ರ ಸರ್ಕಾರ ಚಿಲ್ಲರೆ ವ್ಯಾಪಾರಿಗಳಿಗಾಗಿ ತಂತ್ರಜ್ಞಾನದ ವೇದಿಕೆ (ಆ್ಯಪ್‌/ವೆಬ್‌ಸೈಟ್‌) ಒದಗಿಸಿಕೊಡಲು ಮುಂದಾಗಿದೆ. ONDC ಸರ್ಕಾರಿ ಸ್ವಾಮ್ಯದ ಮುಕ್ತ ತಂತ್ರಜ್ಞಾನ ಜಾಲವಾಗಿದ್ದು, ಇಲ್ಲಿ ಯಾವುದೇ ವ್ಯಾಪಾರಿ ಹಾಗೂ ಗ್ರಾಹಕ ಏನನ್ನು ಬೇಕಾದರೂ ಮಾರಬಹುದು, ಖರೀದಿಸಬಹುದು. ಈ ವ್ಯವಸ್ಥೆಯನ್ನು ಮುಂದಿನ ತಿಂಗಳು ಬೆಂಗಳೂರು, ದೆಹಲಿ, ಕೊಯಮತ್ತೂರು, ಭೋಪಾಲ್‌ ಹಾಗೂ ಶಿಲ್ಲಾಂಗ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ಸಣ್ಣ ವ್ಯಾಪಾರಿಗಳ ನೆರವಿಗೆ ಸರ್ಕಾರವೇ ತಂತ್ರಜ್ಞಾನದ ಸಹಾಯ ನೀಡುತ್ತಿರುವ ವ್ಯವಸ್ಥೆ ಈ ತನಕ ಎಲ್ಲಿಯೂ ಆಗಿಲ್ಲ. ಹೀಗಾಗಿ  ONDC ಕೂಡ ವಿನೂತನ ಪ್ರಯೋಗವಾಗಲಿದೆ.

Elon Musk: ಟ್ವಿಟರ್ ಆಯ್ತು, ಈಗ ಕೋಕಾ ಕೋಲಾ ಮೇಲೆ ಕಣ್ಣು; ಟ್ವೀಟ್ ಮೂಲಕ ಕಾಮಿಡಿ ಮಾಡ್ತಿದ್ದಾರಾ ಮಸ್ಕ್?

ಇಂಥ ವಿಶಿಷ್ಟ ಯೋಜನೆಗಳಿಗೆ ಬೆನ್ನೆಲುಬಾಗಿ ನಿಂತಿರುವ ನಿಲೇಕಣಿ ಈ ದೇಶದ ಅಭಿವೃದ್ಧಿ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ಹೆಚ್ಚಿಸುವಲ್ಲಿ ನೀಡಿದ ಕೊಡುಗೆ ಅಸಾಮಾನ್ಯ ಎಂದು ಕುನಾಲ್  ಬಹ್ಲ್  ಹೇಳಿದ್ದಾರೆ. 'ಶೂನ್ಯದಿಂದ ಏನನ್ನಾದರೂ ನಿರಂತರವಾಗಿ ಸೃಷ್ಟಿಸುವ ಅವರ ಸಾರ್ಮಥ್ಯ ಕೋಟ್ಯಂತರ ಜನರ ಮೇಲೆ ಸಕಾರಾತ್ಮಕ ಪ್ರಭಾವ ಬೀರಿರುವುದು ನಿಜಕ್ಕೂ ಅದ್ಭುತ' ಎಂದು ಕುನಾಲ್ ಬಹ್ಲ್ ಹೇಳಿದ್ದಾರೆ. 'ನಿಲೇಕಣಿ ಅವರ ವ್ಯಕ್ತಿತ್ವ ಹಾಗೂ ಕಾರ್ಯವಿಧಾನ ಎಲಾನ್ ಮಸ್ಕ್ ಅವರಿಗಿಂತ ಭಿನ್ನವಾಗಿರಬಹುದು. ಆದ್ರೆ ಅದರ ಪರಿಣಾಮ ಮಾತ್ರ ಒಂದೇ ಆಗಿದೆ' ಎಂದಿದ್ದಾರೆ. 

click me!