ತಪ್ಪು ಅಕೌಂಟ್‌ಗೆ ಹಣ ವರ್ಗಾವಣೆ ಆಗಿದೆಯಾ? ಚಿಂತೆ ಬೇಡ ಹಣ ಹೀಗೆ ಹಿಂಪಡೆಯಿರಿ

Published : Nov 30, 2018, 04:14 PM IST
ತಪ್ಪು ಅಕೌಂಟ್‌ಗೆ ಹಣ ವರ್ಗಾವಣೆ ಆಗಿದೆಯಾ? ಚಿಂತೆ ಬೇಡ ಹಣ ಹೀಗೆ ಹಿಂಪಡೆಯಿರಿ

ಸಾರಾಂಶ

ಸದ್ಯ ನಾವು ನೆಟ್ ಬ್ಯಾಂಕಿಂಗ್ ಯುಗದಲ್ಲಿದ್ದೇವೆ. ಹೀಗಿರುವಾಗ ಹಣದ ವ್ಯವಹಾರ ನಡೆಸಲು ಬ್ಯಾಂಕ್‌ಗೇ ಹೋಗಬೇಕಾದ ಅನಿವಾರ್ಯತೆ ಇಲ್ಲ. ಆದರೆ ಈ ನೆಟ್ ಬ್ಯಾಂಕಿಂಗ್ ಅದೆಷ್ಟು ಸುಲಭವೋ ಅಷ್ಟೇ ಡೆಂಜರ್. ಇಲ್ಲಿ ಸಣ್ಣ ತಪ್ಪಾದರೂ ಆಗುವ ನಷ್ಟ ಮಾತ್ರ ದೊಡ್ಡದು, ಹಲವಾರು ಬಾರಿ ನಾವು ಕಳುಹಿಸಿದ ಹಣ ಅದ್ಯಾರದ್ದೋ ಅಕೌಂಟ್ ತಲುಪುತ್ತದೆ. ಹೀಗಿರುವಾಗ ಆ ಹಣವನ್ನು ಮರಳಿ ಪಡೆಯುವುದು ಹೇಗೆ? ಇಲ್ಲಿದೆ ವಿವರ.

ಇದು ನೆಟ್ ಬ್ಯಾಂಕಿಂಗ್ ಯುಗ. ಕೆಲವೇ ಕ್ಷಣಗಳಲ್ಲಿ ನಾವಿದ್ದ ಸ್ಥಳದಿಂದ ಯಾರಿಗೇ ಆಗಲಿ ಹಣ ಕಳುಹಿಸಲು ಸಾಧ್ಯ. ಈ ಸೌಲಭ್ಯ ಅದೆಷ್ಟು ಸರಳ ಹಾಗೂ ಸುಲಭವೋ ಅಷ್ಟೇ ಅಪಾಯಕಾರಿ. ಯಾಕೆಂದರೆ ಎಷ್ಟೋ ಬಾರಿ ನಾವು ಕಳುಹಿಸಿದ ಹಣ ಸಣ್ಣ ಎಡವಟ್ಟಿನಿಂದ ಬೇರೆಯೇ ವ್ಯಕ್ತಿಯ ಅಕೌಂಟ್‌ಗೆ ತಲುಪುತ್ತದೆ. ಕೇವಲ ಒಂದೇ ಒಂದು ಸೊನ್ನೆ ಹೆಚ್ಚು ಹಾಕಿ ಅಥವಾ ಅಕೌಂಟ್ ನಂಬರ್‌ನ ಒಂದು ಸಂಖ್ಯೆ ತಪ್ಪಾಗಿ ನಮೂದಿಸಿದರೂ ನಾವು ವರ್ಗಾಯಿಸುವ ಮೊತ್ತ ಬೇರೆ ಖಾತೆಗೆ ತಲುಪುತ್ತದೆ. ಹಾಗಾದ್ರೆ ಇಂತಹ ತಪ್ಪುಗಳಾದಾಗ ಕಳುಹಿಸಿದ ಹಣ ಹಂಪಡೆಯುವುದು ಹೇಗೆ? ಇಲ್ಲಿದೆ ವಿವರ

ಇದನ್ನೂ ಓದಿ: ನಿಮ್ ಹತ್ರ ಇದಿಲ್ಲದಿದ್ರೆ ಬ್ಯಾಂಕ್ ಖಾತೆ ತೆರೆಯಲು ಬಿಡಲ್ಲ!

ನೆಟ್ ಬ್ಯಾಂಕಿಂಗ್ ನಡೆಸುವುದು ಹೇಗೆ?

ನೀವು ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಆ್ಯಕ್ಟಿವೇಟ್ ಮಾಡಿಕೊಂಡಿದ್ದರೆ ಆನ್ ಲೈನ್ NEFT ಹಾಗೂ RGFT ಮೂಲಕ ಹಣ ವರ್ಗಾಯಿಸಬಹುದು. ಇದಕ್ಕಾಗಿ ಬ್ಯಾಂಕ್ ನೀಡುವ ಪಾಸ್‌ವರ್ಡ್ ಬಳಸಿ ನೆಟ್ ಬ್ಯಾಂಕಿಂಗ್ ಅಕೌಂಟ್‌ಗೆ ಲಾಗಿನ್ ಆಗಿ. ಇದಾದ ಬಳಿಕ ಥರ್ಡ್ ಪಾರ್ಟಿ ಟ್ರಾನ್ಸ್‌ಫರ್ ಆಯ್ಕೆಯನ್ನು ಕ್ಲಿಕ್ ಮಾಡಿ ನೀವು ಹಣ ಕಳುಹಿಸಬೇಕಾದ ವ್ಯಕ್ತಿಯ ವಿವರಗಳನ್ನು ನಮೂದಿಸಿ. ಸುಮಾರು 10 ರಿಂದ 12 ಗಂಟೆಗಳೊಳಗಾಗಿ ಬ್ಯಾಂಕ್ ನೀವು ನಮೂದಿಸಿದ ವಿವರಗಳನ್ನು ಪರಿಶೀಲಿಸಿ ನಿಮ್ಮ ಅಕೌಂಟ್ ಹಾಗೂ ಆ ವ್ಯಕ್ತಿಯ ಅಕೌಂಟ್ ಲಿಂಕ್ ಮಾಡುತ್ತದೆ. ಹಲವಾರು ಬಾರಿ ನಾವು ವಿವರಗಳನ್ನು ನೀಡುವಾಗ ಕಣ್ತಪ್ಪಿನಿಂದಾಗಿ ಖಾತೆ ಸಂಖ್ಯೆಯನ್ನು ತಪ್ಪಾಗಿ ನಮೂದಿಸುತ್ತೇವೆ. ಇದಕ್ಕಾಗೇ ಎರಡೆರಡು ಬಾರಿ ಸಂಖ್ಯೆ ನಮೂದಿಸಲು ತಿಳಿಸಲಾಗುತ್ತದೆ.

ಇದನ್ನೂ ಓದಿ: ಡಿ.1 ರಿಂದ ಎಸ್‌ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಸ್ಥಗಿತ: ನೀವೇನ್ ಮಾಡ್ಬೇಕು?

ಹಲವಾರು ಬಾರಿ ಖಾತೆ ಸಂಖ್ಯೆ ತಪ್ಪಾಗಿದ್ದರೆ ಬ್ಯಾಂಕ್ ನಿಮ್ಮ ಹಣವನ್ನು ನಿಮ್ಮ ಖಾತೆಗೆ ಹಾಕುತ್ತದೆ. ಒಂದು ವೇಳೆ ನೀವು ಹಾಕಿದ ಹಣ ಬೇರೆಯೇ ವ್ಯಕ್ತಿಯ ಖಾತೆಗೆ ಜಮಾ ಆಗಿದ್ದರೆ ಅಥವಾ ನಿಮ್ಮ ಅಕೌಂಟ್‌ಗೆ ಹಣ ಮರಳಿ ಬಂದಿಲ್ಲವಾದರೆ ಈ ವಿಧಾನಗಳನ್ನು ಬಳಸಿ ಹಿಂಪಡೆಯಬಹುದು

ಕೂಡಲೇ ನಿಮ್ಮ ಬ್ಯಾಂಕ್‌ಗೆ ಮಾಹಿತಿ ನೀಡಿ

ಒಂದು ವೇಳೆ ಕಣ್ತಪ್ಪಿನಿಂದಾಗಿ ಬೇರೆ ಖಾತೆಗೆ ಹಣ ಟ್ರಾನ್ಸ್ ಫರ್ ಮಾಡಿದ್ದರೆ, ಎಲ್ಲಕ್ಕಿಂತ ಮೊದಲು ಬ್ಯಾಂಕ್‌ಗೆ ಈ ಬಗ್ಗೆ ಮಾಹಿತಿ ನೀಡಿ. ಬ್ಯಾಂಕ್ ನ ಶಾಖೆಯ ಮ್ಯಾನೇಜರ್‌ನ್ನು ಭೇಟಿ ಮಾಡಿದರೆ ಇನ್ನೂ ಒಳಿತು. ಆದರೂ ಅಂತಿಮವಾಗಿ ನೀವು ಯಾವ ಬ್ಯಾಂಕ್  ಖಾತೆಗೆ ಹಣ ವರ್ಗಾಯಿಸಿದ್ದೀರೋ ಆ ಬ್ಯಾಂಕ್ ಮಾತ್ರ ಈ ಸಮಸ್ಯೆ ಪರಿಹರಿಸಲು ಸಾಧ್ಯ ಎಂಬುವುದು ನಿಮ್ಮ ಗಮನದಲ್ಲಿರಲಿ. ಹೀಗಾಗಿ ನಿಮ್ಮ ಮ್ಯಾನೇಜರ್ ಬಳಿ ಮಾತನಾಡುವಾದ ಯಾವ ದಿನಾಂಕ, ಸಮಯ ಹಾಗೂ ಯಾವ ಖಾತೆ ಸಂಖ್ಯೆಗೆ ಹಣ ವರ್ಗಾಯಿಸಿದ್ದೀರೆಂಬ ಮಾಹಿತಿಯನ್ನು ಸರಿಯಾಗಿ ನೀಡಬೇಕಾಗುತ್ತದೆ.

ದೂರು ದಾಖಲಿಸಿ

ಹಣ ವರ್ಗಾಯಿಸಿದ ಬ್ಯಾಂಕ್ ಖಾತೆ ಇರುವ ಶಾಖೆಗೆ ತೆರಳಿ ದೂರು ನೀಡಿ. ಯಾರೇ ಆಗಲಿ ಬ್ಯಾಂಕ್ ತನ್ನ ಗ್ರಾಹಕರ ಅನುಮತಿ ಇಲ್ಲದೆ ಅವರ ಅಕೌಂಟ್ ನಿಂದ ಹಣ ವರ್ಗಾಯಿಸುವುದಿಲ್ಲ. ಅಲ್ಲದೇ ತನ್ನ ಗ್ರಾಹಕರ ಮಾಹಿತಿಯನ್ನೂ ನೀಡುವುದಿಲ್ಲ. ಹೀಗಾಗಿ ದೂರು ದಾಖಲಿಸುವ ಸಂದರ್ಭದಲ್ಲಿ ನೀವು ಕಣ್ತಪ್ಪಿನಿಂದಾಗಿ ತಪ್ಪು ಖಾತೆಗೆ ಹಣ ವರ್ಗಾಯಿಸಿದ್ದು, ಹೀಗಾಗಿ ಮತ್ತೆ ಆ ಹಣವನ್ನು ನಿಮ್ಮ ಖಾತೆಗೆ ಮರು ವರ್ಗಾಯಿಸುವಂತೆ ಮನವಿ ಮಾಡಿಕೊಳ್ಳುವುದು ಅಗತ್ಯ.

ಇದನ್ನೂ ಓದಿ: ಕನ್ನಡದಲ್ಲೂ ನಡೆಯುತ್ತಾ ಬ್ಯಾಂಕಿಂಗ್ ಪರೀಕ್ಷೆ?

ಆನ್‌ಲೈನ್ ಹಣ ವರ್ಗಾವಣೆ ಮಾಡುವಾಗ ಎಚ್ಚರವಿರಲಿ

ಅಕೌಂಟ್ ನಂಬರ್ ಬರೆಯುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಬಹುದೊಡ್ಡ ಎಡವಟ್ಟಾಗುವ ಸಾಧ್ಯತೆಗಳಿವೆ. ಹೀಗಾಗಿ ಹಣ ವರ್ಗಾಯಿಸುವ ವೇಳೆ ಖಾತೆ ವಿವರವನ್ನು ಪುನರ್ ಪರಿಶೀಲಿಸಬೇಕು. ದೊಡ್ಡ ಮೊತ್ತವನ್ನು ಟ್ರಾನ್ಸ್ಫರ್ ಮಾಡುವ ಸಂದರ್ಭದಲ್ಲಿ ಮೊದಲು ಚಿಕ್ಕ ಮೊತ್ತವನ್ನು ವರ್ಗಾಯಿಸಿ ಅವರ ಖಾತೆಗೆ ತಲುಪಿದೆಯೇ ಎಂದು ಖಚಿತಪಡಿಸಿಕೊಳ್ಳಿ. 

ಹಣ ತಪ್ಪು ಖಾತೆಗೆ ವರ್ಗಾವಣೆಯಾದಾಗ ನಿಮ್ಮ ಅದೃಷ್ಟ ಚೆನ್ನಾಗಿದ್ದು, ಆ ವ್ಯಕ್ತಿಯೂ ಸೌಮ್ಯ ಹಾಗೂ ಒಳ್ಳೆಯ ವ್ಯಕ್ತಿಯಾಗಿದ್ದರೆ ನೀವು ಎಡೆವಟ್ಟಿನಿಂದ ಕಳುಹಿಸಿದ ಹಣ ಹಿಂಪಡೆಯಬಹುದು. ಆದರೆ ಆ ವ್ಯಕ್ತಿ ಹಣ ಹಿಂತಿರುಗಿಸಲು ನಿರಾಕರಿಸಿದರೆ ಮುಂದೆ ಕಾನೂನಾತ್ಮಕ ಹಾದಿ ಹಿಡಿಯಬೇಕಾಗುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಏರಿಕೆಯಾಗ್ತಿರೋ ಚಿನ್ನವನ್ನು ಲಾಭದಾಯಕವಾಗಿ ಹೇಗೆ ಖರೀದಿಸಬೇಕು? ತಜ್ಞರ ಸಲಹೆ
YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ