ರೂಲ್ ಆಫ್ 72 ಅಂದ್ರೇನು? ಎಫ್ ಡಿ ಯಲ್ಲಿ ಹೂಡಿಕೆ ಮಾಡೋರು ಈ ನಿಯಮದ ಬಗ್ಗೆ ತಿಳಿಯಲೇಬೇಕು

By Suvarna News  |  First Published Dec 21, 2022, 5:22 PM IST

ಸ್ಥಿರ ಠೇವಣಿ ಅಥವಾ ಎಫ್ ಡಿಯಲ್ಲಿ ಹೂಡಿಕೆ ಮಾಡೋರು ರೂಲ್ ಆಫ್ 72 ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಇದ್ರಿಂದ ನೀವು ಹೂಡಿಕೆ ಮಾಡಿದ ಹಣ ಡಬಲ್ ಆಗಲು ಎಷ್ಟು ಸಮಯ ಹಿಡಿಯುತ್ತದೆ? ಎಷ್ಟು ಬಡ್ಡಿ ದರ ಇರಬೇಕು? ಎಂಬ ಲೆಕ್ಕಾಚಾರವನ್ನು ನೀವೇ ಮಾಡಿ ನೋಡಬಹುದು. 


Business Desk:ಆದಾಯದಲ್ಲಿ ಒಂದಿಷ್ಟು ಉಳಿತಾಯ ಮಾಡಿದ್ರೆ ಮಾತ್ರ ಭವಿಷ್ಯದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ. ಉಳಿತಾಯದ ಯೋಚನೆ ಬಂದಾಗ ಮೊದಲಿಗೆ ನೆನಪಾಗೋದೆ ಸ್ಥಿರ ಠೇವಣಿ ಅಥವಾ ಎಫ್ ಡಿ. ಎಲ್ಲ ಬ್ಯಾಂಕ್ ಗಳು ಕೂಡ ಎಫ್ ಡಿ ಸೇವೆ ಒದಗಿಸುತ್ತವೆ. ಭಾರತದಲ್ಲಿ ಹೂಡಿಕೆ ಅಥವಾ ಉಳಿತಾಯಕ್ಕೆ ಇಂದು ಅನೇಕ ಅವಕಾಶಗಳಿದ್ರೂ ಬ್ಯಾಂಕ್ ಸ್ಥಿರ ಠೇವಣಿ (ಎಫ್ ಡಿ) ಮಾತ್ರ  ಜನಪ್ರಿಯತೆ ಕಳೆದುಕೊಂಡಿಲ್ಲ. ಇಂದಿಗೂ ಮಧ್ಯಮ ವರ್ಗದ ಜನರು ಹಾಗೂ ಹಿರಿಯ ನಾಗರಿಕರು ಉಳಿತಾಯಕ್ಕೆ ಎಫ್ ಡಿಯನ್ನೇ ನೆಚ್ಚಿಕೊಂಡಿದ್ದಾರೆ. ಎಫ್ ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ನಿಯಮ 72ರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಇದ್ರಿಂದ ಯಾವ ಎಫ್ ಡಿ ಯೋಜನೆಯಲ್ಲಿ ನಿಮ್ಮ ಹಣ ಹೂಡಿಕೆ ಮಾಡಬೇಕು? ಎಷ್ಟು ಅವಧಿಗೆ ಹೂಡಿಕೆ ಮಾಡಿದ್ರೆ ನಿಮ್ಮ ಹಣ ದುಪ್ಪಟ್ಟಾಗುತ್ತದೆ? ಎಂಬ ಮಾಹಿತಿಗಳು ತಿಳಿಯುತ್ತವೆ. ಈಗಂತೂ ಎಲ್ಲರ ಕೈಯಲ್ಲೂ ಮೊಬೈಲ್ ಇದೆ. ಮೊಬೈಲ್ ನಲ್ಲಿ ಕ್ಯಾಲ್ಕುಲೇಟರ್ ಇದ್ದೇ ಇರುತ್ತದೆ. ಅದರ ಮೂಲಕ ಎಫ್ ಡಿ ಬಡ್ಡಿಯನ್ನು ಸುಲಭವಾಗಿ ಲೆಕ್ಕ ಹಾಕಬಹುದು. ಆದರೆ, ಈ ಬಡ್ಡಿ ಲೆಕ್ಕಾಚಾರಕ್ಕೆ ನಿಯಮ 72ರ ಸೂತ್ರ ಗೊತ್ತಿರಬೇಕು. ಹಾಗಾದ್ರೆ ನಿಯಮ 72 (ರೂಲ್ ಆಫ್ 72 ) ಅಂದ್ರೇನು? 

ಏನಿದು ರೂಲ್ ಆಫ್ 72 ?
ರೂಲ್ ಆಫ್ 72 ಅನ್ನೋದು ಹೂಡಿಕೆ ದುಪ್ಪಟ್ಟು (double) ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಲೆಕ್ಕ ಹಾಕಲು ಇರುವ ಸೂತ್ರ. ಇದನ್ನು ರಿಟರ್ನ್ ದರದ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಇದು ಕಂಪೌಂಡ್ ಬಡ್ಡಿದರಕ್ಕೆ ಮಾತ್ರ ಅನ್ವಯಿಸುತ್ತದೆ. ಇದು ಶೇ.6-10 ಶ್ರೇಣಿಯಲ್ಲಿರುವ ಬಡ್ಡಿದರಕ್ಕೆ ಮಾತ್ರ ನಿಖರವಾಗಿರುತ್ತದೆ. ರೂಲ್ ಆಫ್ 72 ಮಾದರಿಯಲ್ಲೇ ಬೇರೆ ಬೇರೆ ಪರಿಸ್ಥಿತಿಗಳಲ್ಲಿ ರೂಲ್ ಆಫ್ 69, ರೂಲ್ ಆಫ್  70 ಅಥವಾ ರೂಲ್ ಆಫ್ 73 ಅನ್ನು ಬಳಸಲಾಗುತ್ತದೆ. 

Tap to resize

Latest Videos

ಕೆವೈಸಿ ನವೀಕರಿಸದ ಪಾಲಿಸಿದಾರರಿಗೆ ಎಲ್ಐಸಿ ದಂಡ ವಿಧಿಸಿದೆಯಾ? ಈ ಬಗ್ಗೆ ಎಲ್ಐಸಿ ಏನ್ ಹೇಳಿದೆ?

ಸೂತ್ರ ಏನು?
ನೀವು ಹೂಡಿಕೆ ಮಾಡಿದ ಹಣ ದುಪ್ಪಟ್ಟು ಆಗಲು ಕನಿಷ್ಠ ಎಷ್ಟು ಬಡ್ಡಿದರ ಅಗತ್ಯ ಎಂಬುದನ್ನು ಪತ್ತೆ ಹಚ್ಚಲು 72 ÷ n ಸೂತ್ರ ಬಳಸಿ. ಇಲ್ಲಿ ‘n’ಅಂದ್ರೆ ಎಷ್ಟು ವರ್ಷಗಳ ಕಾಲ ನೀವು ಹೂಡಿಕೆ ಮಾಡಲು ಇಚ್ಛಿಸುತ್ತೀರಿ ಎಂಬುದು. ಉದಾಹರಣೆಗೆ ನೀವು 10 ವರ್ಷಗಳಲ್ಲಿ ನಿಮ್ಮ ಹಣವನ್ನು ದುಪ್ಪಟ್ಟು ಮಾಡಲು ಬಯಸಿದ್ದೀರಿ ಎಂದು ಭಾವಿಸೋಣ. ಆಗ 72 ÷10 ಅಂದ್ರೆ 7.2 ಉತ್ತರ ಬರುತ್ತದೆ. ಅಂದ್ರೆ 10 ವರ್ಷಗಳ ಅವಧಿಯಲ್ಲಿ ನೀವು ಹೂಡಿಕೆ ಮಾಡಿದ ಹಣ ದುಪ್ಪಟ್ಟು ಆಗಲು ಶೇ. 7.2 ಬಡ್ಡಿದರ ಅಗತ್ಯ.

ಎಷ್ಟು ವರ್ಷಗಳಲ್ಲಿ ದುಪ್ಪಟ್ಟು ಆಗುತ್ತೆ?
ಒಂದು ವೇಳೆ ನೀವು ಕನಿಷ್ಠ ಸಮಯದಲ್ಲಿ ಹೂಡಿಕೆಯನ್ನು ದುಪ್ಪಟ್ಟು ಮಾಡಲು ಬಯಸಿದ್ರೆ 72 ÷i ಬಳಸಬೇಕು. ಇಲ್ಲಿ 'i' ಅಂದ್ರೆ ಎಫ್ ಡಿ ಮೇಲಿನ ಬಡ್ಡಿದರ. ಉದಾಹರಣೆಗೆ ನಿಮ್ಮ ಎಫ್ ಡಿ ಮೇಲೆ ಶೇ.7ರಷ್ಟು ಬಡ್ಡಿ ನೀಡಲಾಗುತ್ತಿದ್ದರೆ 72÷7 ಮಾಡಿದ್ರೆ 7.29 ಎಂಬ ಉತ್ತರ ಸಿಗುತ್ತದೆ. ಅಂದರೆ ನೀವು 7 ವರ್ಷ 4 ತಿಂಗಳ ಕಾಲ ಹೂಡಿಕೆ ಮಾಡಬೇಕು.

ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಮಾಡ್ತಿದ್ದೀರಾ? ಸಾವರಿನ್ ಗೋಲ್ಡ್ ಬಾಂಡ್ ಅಥವಾ ಚಿನ್ನದ ಇಟಿಎಫ್, ಯಾವುದು ಉತ್ತಮ?

ಸಾಲಕ್ಕೂ ಈ ಸೂತ್ರ ಬಳಸಬಹುದಾ?
ಈ ಸೂತ್ರವನ್ನು ಸಾಲಗಳು (loans), ಹಣದುಬ್ಬರ (inflation) ಹಾಗೂ ಜನಸಂಖ್ಯೆ (population) ಲೆಕ್ಕಾಚಾರಕ್ಕೆ ಕೂಡ ಬಳಸಬಹುದು. ಆದರೆ, ನೆನಪಿರಲಿ, ಈ ನಿಯಮ ನಿಮಗೆ ನಿಖರವಾದ ಮೌಲ್ಯ ನೀಡೋದಿಲ್ಲ. ಬದಲಿಗೆ ಅಂದಾಜು ದರವನ್ನಷ್ಟೇ ತಿಳಿಸುತ್ತದೆ. 

click me!