ಕೆವೈಸಿ ನವೀಕರಿಸದ ಪಾಲಿಸಿದಾರರಿಗೆ ಎಲ್ಐಸಿ ದಂಡ ವಿಧಿಸಿದೆಯಾ? ಈ ಬಗ್ಗೆ ಎಲ್ಐಸಿ ಏನ್ ಹೇಳಿದೆ?

By Suvarna NewsFirst Published Dec 21, 2022, 3:49 PM IST
Highlights

ಕೆವೈಸಿ ನವೀಕರಿಸದ ಪಾಲಿಸಿದಾರರಿಗೆ ಎಲ್ಐಸಿ ದಂಡ ವಿಧಿಸುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಎಲ್ಐಸಿ ಸ್ಪಷ್ಟನೆ ನೀಡಿದ್ದು, ಕೆವೈಸಿ ನವೀಕರಿಸುವಂತೆ ಪಾಲಿಸಿದಾರರಿಗೆ ಉತ್ತೇಜನ ನೀಡುತ್ತಿರೋದು ನಿಜ. ಆದರೆ, ಯಾವುದೇ ದಂಡ ವಿಧಿಸುತ್ತಿಲ್ಲ ಎಂದು ತಿಳಿಸಿದೆ. 
 

ನವದೆಹಲಿ (ಡಿ.21): ಕೆವೈಸಿ ಮಾಹಿತಿಗಳನ್ನು ನವೀಕರಿಸದ ಪಾಲಿಸಿದಾರರಿಗೆ ಯಾವುದೇ ದಂಡ ವಿಧಿಸಿಲ್ಲ ಎಂದು ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ) ಸಾರ್ವಜನಿಕ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜೀವ ವಿಮಾ ಪಾಲಿಸಿಗಳಿಗೆ ಕೆವೈಸಿ ಮಾಹಿತಿಗಳನ್ನು ನವೀಕರಿಸದ ಪಾಲಿಸಿದಾರರಿಗೆ ಎಲ್ಐಸಿ ದಂಡ ವಿಧಿಸಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಎಲ್ಐಸಿ ಈ ಸ್ಪಷ್ಟನೆ ನೀಡಿದೆ. ಈ ಕುರಿತು ಟ್ವೀಟ್ ಮಾಡಿರುವ ಎಲ್ಐಸಿ 'ಉತ್ತಮ ಸೇವೆಗಳನ್ನು ಒದಗಿಸಲು ನೆರವಾಗಲಿ ಎಂಬ ಉದ್ದೇಶದಿಂದ ಪಾಲಿಸಿದಾರರಿಗೆ ಕೆವೈಸಿ ನವೀಕರಿಸಲು ನಾವು ಉತ್ತೇಜನ ನೀಡುತ್ತಿರೋದು ನಿಜ. ಆದರೆ, ಕೆವೈಸಿ ನವೀಕರಿಸಲು ವಿಫಲರಾದ ಪಾಲಿಸಿದಾರರಿಗೆ ಯಾವುದೇ ದಂಡ ವಿಧಿಸಿಲ್ಲ ಎನ್ನೋದನ್ನು ಎಲ್ಐಸಿ ಈ ಮೂಲಕ ಸ್ಪಷ್ಟಪಡಿಸುತ್ತಿದೆ' ಎಂದು ತಿಳಿಸಿದೆ. ಪಾಲಿಸಿಗಳ ಬಗ್ಗೆ ವಿಚಾರಿಸಲು ಹಾಗೂ ಮಾಹಿತಿ ಪಡೆಯಲು ಗ್ರಾಹಕರಿಗೆ ಅನುಕೂಲವಾಗಲು ಎಲ್ಐಸಿ ಅಧಿಕೃತ ಚಾನೆಲ್ ಗಳ ಬಗ್ಗೆ ಮಾಹಿತಿ ನೀಡಿದೆ. ಹೀಗಾಗಿ ಎಲ್ ಐಸಿ ಪಾಲಿಸಿಗಳು ಅಥವಾ ಸೇವೆಗಳ ಕುರಿತು ಯಾವುದೇ ಮಾಹಿತಿ ಬೇಕಿದ್ದರೂ ಗ್ರಾಹಕರು ಎಲ್ಐಸಿ ತಿಳಿಸಿರುವ ಸಂಪರ್ಕ ಮಾಧ್ಯಮಗಳ ಮೂಲಕ ಮಾಹಿತಿ ಪಡೆಯಬಹುದು. 

ಮಾಹಿತಿ ಪಡೆಯೋದು ಹೇಗೆ?
ಪಾಲಿಸಿಗಳು ಹಾಗೂ ಇತರ ಮಾಹಿತಿ ಪಡೆಯಲು ಗ್ರಾಹಕರಿಗೆ ಅನುಕೂಲವಾಗುವ ಕೆಲವು ಸಂಪರ್ಕ ಮಾಧ್ಯಮಗಳ ಮಾಹಿತಿಯನ್ನು ಎಲ್ಐಸಿ ಹಂಚಿಕೊಂಡಿದ್ದು, ಹೀಗಿವೆ:
*ಗ್ರಾಹಕರು (022) 6827 6827 ಸಂಖ್ಯೆಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆಯಬಹುದು.
*ಎಲ್ಐಸಿ ಅಧಿಕೃತ ವೆಬ್ ಸೈಟ್ www.licidia.in ಭೇಟಿ ನೀಡಿದರೆ ಮಾಹಿತಿ ಲಭಿಸುತ್ತದೆ.
*ಟ್ವಿಟ್ಟರ್, ಫೇಸ್ಬುಕ್ , ಇನ್ ಸ್ಟಾಗ್ರಾಮ್ ಹಾಗೂ ಯೂ ಟ್ಯೂಬ್ ನಲ್ಲಿ LICIndiaForever ಎಂಬ ಎಲ್ಐಸಿಯ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆ ಮೂಲಕ ಮಾಹಿತಿ ಪಡೆಯಬಹುದು.
*ಎಲ್ಐಸಿ ಏಜೆಂಟ್ ಅಥವಾ ಶಾಖೆಯನ್ನು ಸಂಪರ್ಕಿಸುವ ಮೂಲಕ ಕೂಡ ಮಾಹಿತಿ ಪಡೆಯಬಹುದು. 

ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಮಾಡ್ತಿದ್ದೀರಾ? ಸಾವರಿನ್ ಗೋಲ್ಡ್ ಬಾಂಡ್ ಅಥವಾ ಚಿನ್ನದ ಇಟಿಎಫ್, ಯಾವುದು ಉತ್ತಮ?

ಏನಿದು ಕೆವೈಸಿ?
ಕೆವೈಸಿ (KYC) ಅಂದ್ರೆ know your customer' ಎಂದು ಅರ್ಥ. ಗ್ರಾಹಕ ನೀಡಿರುವ ಮಾಹಿತಿಗಳು ಸಮರ್ಪಕವಾಗಿವೆ ಎಂದು ಪರಿಶೀಲಿಸಿ ದೃಢೀಕರಿಸಲು ಕೆವೈಸಿ ನೆರವು ನೀಡುತ್ತದೆ. ಹೀಗಾಗಿ ಎಲ್ಐಸಿ ಪಾಲಿಸಿ ಮಾಡುವ ಸಮಯದಲ್ಲಿ ಗ್ರಾಹಕನಿಂದ ಕೆವೈಸಿ ಮಾಹಿತಿಗಳನ್ನು ಕೋರುತ್ತದೆ.  ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಪ್ಯಾನ್ ಕಾರ್ಡ್ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಸಂಪೂರ್ಣ ವಿಳಾಸವನ್ನು ಕೆವೈಸಿ ಅರ್ಜಿ ಒಳಗೊಂಡಿರುತ್ತದೆ.

ಎಲ್ಐಸಿಯಲ್ಲಿ ಕೆವೈಸಿ ನವೀಕರಿಸೋದು ಹೇಗೆ?
ನೀವು ಎಲ್ಐಸಿಗೆ ನೀಡಿರುವ ಕೆವೈಸಿ ಮಾಹಿತಿಗಳನ್ನು ನವೀಕರಿಸಬೇಕಿದ್ರೆ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.
ಹಂತ 1:https://merchant.licindia.in ಭೇಟಿ ನೀಡಿ.
ಹಂತ 2: ಪೂರ್ಣ ಹೆಸರು, ಜನ್ಮದಿನಾಂಕ, ಸಂಪರ್ಕ ಸಂಖ್ಯೆಯನ್ನು ನಮೂದಿಸಿ.
ಹಂತ 3: Declaration ಆಯ್ಕೆ ಮೇಲೆ ಕ್ಲಿಕ್ ಮಾಡಿ.  ಆ ಬಳಿಕ submit ಮೇಲೆ ಕ್ಲಿಕ್ ಮಾಡಿ.
ಹಂತ 4: ಮುಂದಿನ ಪುಟದಲ್ಲಿ ಪಾಲಿಸಿ ಮಾಹಿತಿಗಳನ್ನು ನಮೂದಿಸಿ ಆ ಬಳಿಕ ಅದನ್ನು ಪರಿಶೀಲಿಸಿ.

ಟ್ವೀಟರ್‌ನಿಂದ ಈಗ 3 ಬಣ್ಣಗಳ ಟಿಕ್‌: ಗೋಲ್ಡನ್‌, ಗ್ರೇ, ಬ್ಲೂ

ಕೆವೈಸಿ ವಂಚನೆ
ಅನೇಕ ಬ್ಯಾಂಕ್ ಗಳು ಕೆವೈಸಿ ಮಾಹಿತಿ ಕೋರುವ ನಕಲಿ ಸಂದೇಶಗಳಿಗೆ ಸ್ಪಂದಿಸದಂತೆ ಗ್ರಾಹಕರನ್ನು ಕೋರಿವೆ. ಇತ್ತೀಚೆಗೆ ಎಸ್ ಬಿಐ ಕೂಡ ಈ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಬ್ಯಾಂಕ್ ಹೆಸರಲ್ಲಿ ಕೆವೈಸಿ ಮಾಹಿತಿಗಳನ್ನು ಕೋರುವ ಸಂದೇಶಗಳನ್ನು ಕಳುಹಿಸಿ ಗ್ರಾಹಕರನ್ನು ವಂಚಿಸಿರುವ ಅನೇಕ ಪ್ರಕರಣಗಳು ವರದಿಯಾಗಿವೆ. 

click me!