ಉದ್ಯಮದಲ್ಲಿ ಲಾಭವಾಗುತ್ತಿಲ್ಲ,ನಷ್ಟ ಹೆಚ್ಚುತ್ತಿದೆ ಎಂಬೋರು 80/20 ನಿಯಮದ ಬಗ್ಗೆ ತಿಳಿದುಕೊಳ್ಳೋದು ಅಗತ್ಯ. ಈ ಸರಳ ನಿಯಮವನ್ನು ಉದ್ಯಮಕ್ಕೆ ಅನ್ವಯಿಸಿದ್ರೆ ನಷ್ಟವನ್ನು ತಗ್ಗಿಸಿಕೊಂಡು ಲಾಭವನ್ನು ಹೆಚ್ಚಿಸಿಕೊಳ್ಳಬಹುದು.
ನವದೆಹಲಿ (ಡಿ.15): ಯಶಸ್ಸಿಗೆ ಯಾವುದೇ ಅಡ್ಡ ಹಾದಿಯಿಲ್ಲ ಎಂಬುದು ಖಂಡಿತಾ ಸತ್ಯ. ಆದರೆ, ಉದ್ಯಮದಲ್ಲಿ ಯಶಸ್ಸು ಸಾಧಿಸಲು ಕೆಲವೊಂದು ಸೂತ್ರಗಳು ಖಂಡಿತಾ ನೆರವು ನೀಡುತ್ತವೆ. ಉದ್ಯಮದಲ್ಲಿ ಯಾವುದರಿಂದ ನಿಮಗೆ ಹೆಚ್ಚು ಪ್ರಯೋಜನವಿದೆ ಎಂಬುದನ್ನು ಮೊದಲು ಅರ್ಥೈಸಿಕೊಳ್ಳೋದು ಅಗತ್ಯ. ಆಗ ಆ ವಿಷಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಾಗ ಲಾಭ ಹೆಚ್ಚಿಸಿಕೊಳ್ಳಬಹುದು. ಈ ಸೂತ್ರಕ್ಕೆ 80/20 ನಿಯಮ ಅಥವಾ ಪ್ಯಾರೆಟೋ ಸಿದ್ಧಾಂತ ಎಂದು ಕರೆಯುತ್ತಾರೆ. ಈ 80/20 ಸಿದ್ಧಾಂತ ಹುಟ್ಟಿದ್ದು ಇಟಲಿಯಲ್ಲಿ. 1906ರಲ್ಲಿ ಇಟಲಿಯ ಅರ್ಥಶಾಸ್ತ್ರಜ್ಞ ವಿಲ್ಫ್ರೆಡೋ ಪ್ಯಾರೆಟೋ ಎಂಬಾತ ಈ ನಿಯಮ ರೂಪಿಸಿದ. ಇದನ್ನು ಪ್ರಾರಂಭದಲ್ಲಿ ಮ್ಯಾಕ್ರೋ ಅರ್ಥಶಾಸ್ತ್ರದಲ್ಲಿ ಬಳಸಲಾಗಿತ್ತು. ಇಟಲಿಯಲ್ಲಿ ಸಂಪತ್ತಿನ ವಿತರಣೆಗೆ ಈ ಸೂತ್ರ ಬಳಸಲಾಗಿತ್ತು. ಆ ಬಳಿಕ ಇದನ್ನು ಉದ್ಯಮದಲ್ಲಿ ಅಳವಡಿಸಿಕೊಳ್ಳಲಾಯಿತು. ಹಾಗಾದ್ರೆ ಏನಿದು 80/20 ಸಿದ್ಧಾಂತ? ಇದನ್ನು ಉದ್ಯಮದಲ್ಲಿ ಅಳವಡಿಸಿಕೊಳ್ಳೋದು ಹೇಗೆ? ಇಲ್ಲಿದೆ ಮಾಹಿತಿ.
ಏನಿದು 80/20 ಸಿದ್ಧಾಂತ?
ಸರಳವಾಗಿ ಹೇಳೋದಾದ್ರೆ ಹೆಚ್ಚಿನ ಲಾಭಾಂಶ ನೀಡುವ ವಲಯಕ್ಕೆ ಅಥವಾ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡೋದು. ಈ ಸಿದ್ಥಾಂತ ಜನ್ಮ ತಾಳಿದ್ದು ತೋಟದಲ್ಲಿ. ಹೌದು ಪ್ಯಾರೆಟೋ ತೋಟದಲ್ಲಿ ಬಟಾಣಿ ಬೀಜಗಳನ್ನು ಬಿತ್ತಿದ್ದ. ಹೀಗೆ ಬಿತ್ತಿದ್ದ ಬೀಜಗಳಲ್ಲಿ ಕೇವಲ ಶೇ.20ರಷ್ಟು ಬೀಜಗಳು ಮಾತ್ರ ಅಲ್ಲಿನ ಶೇ.80ರಷ್ಟು ಉತ್ಪಾದನೆಗೆ ಕಾರಣವಾಗಿದ್ದವು, ಈ ಸಿದ್ಧಾಂತವನ್ನು ಪ್ಯಾರೆಟೋ ಇಟಲಿಯ ಆರ್ಥಿಕತೆಗೆ ಅನ್ವಯಿಸಿದರು. ಇಟಲಿಯ ಶೇ.80ರಷ್ಟು ಸಂಪತ್ತು ಶೇ.20ರಷ್ಟು ಜನಸಂಖ್ಯೆಯಲ್ಲಿ ಸಂಗ್ರಹವಾಗಿದೆ ಎಂಬುದನ್ನು ಈ ಸಿದ್ಧಾಂತದ ಮೂಲಕ ಪ್ಯಾರೆಟ್ ಪ್ರತಿಪಾದಿಸಿದ್ದರು.
80ನೇ ವರ್ಷದಲ್ಲಿ ಬಿಲಿಯನೇರ್ ಪಟ್ಟಿಗೆ ಸೇರಿದ 8ಪಿಎಂ ವಿಸ್ಕಿ ಮಾಲೀಕ!
1940ರಲ್ಲಿ ಡಾ.ಜೋಸೆಫ್ ಜುರಾನ್ ಈ ಸಿದ್ಧಾಂತವನ್ನು ಉದ್ಯಮ ಉತ್ಪಾದನೆಯ ಕ್ವಾಲಿಟಿ ಕಂಟ್ರೋಲ್ ನಲ್ಲಿ ಬಳಸಿದರು. ಉತ್ಪಾದನಾ ವಿಧಾನದಲ್ಲಿನ ಶೇ.20ರಷ್ಟು ಸಮಸ್ಯೆಗಳೇ ಶೇ.80ರಷ್ಟು ಉತ್ಪನ್ನ ದೋಷಕ್ಕೆ ಕಾರಣ. ಈಗಾಗಿ ಕಂಪನಿ ಆ ಶೇ.20ರಷ್ಟು ಸಮಸ್ಯೆಯನ್ನು ಸರಿಪಡಿಸಿದರೆ ಶೇ.100ರಷ್ಟು ಪರಿಹಾರ ಸಿಕ್ಕಿದಂತೆ ಎಂದು ಜುರಾನ್ ಪ್ರತಿಪಾದಿಸಿದ್ದರು.
ಪ್ರತಿ ಉದ್ಯಮಕ್ಕೂ ಬಳಸಬಹುದು
ಈ ನಿಯಮ ಅತ್ಯಂತ ಕ್ಲಿಷ್ಟಕರವೇನೂ ಆಗಿಲ್ಲ. ಹೀಗಾಗಿ ಇದನ್ನು ಯಾವುದೇ ಉದ್ಯಮದಲ್ಲಿ ಬಳಸಬಹುದು. ಒಂದು ಪುಟ್ಟ ಅಂಗಡಿಯಿಂದ ಹಿಡಿದು ದೊಡ್ಡ ಉದ್ಯಮದ ತನಕ ಎಲ್ಲ ಕಡೆ ಇದನ್ನು ಬಳಸಬಹುದು. ಹಾಗೆಯೇ ಉತ್ಪಾದನೆ, ಮಾರಾಟದಲ್ಲೂ ಇದನ್ನು ಬಳಸಬಹುದು. ಉದಾಹರಣೆಗೆ ನೀವು ಒಂದು ಅಂಗಡಿ ಹೊಂದಿದ್ದರೆ ಅದರಲ್ಲಿ ಯಾವುದೋ ಒಂದು ಉತ್ಪನ್ನ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಮೂಲಕ ನಿಮಗೆ ಹೆಚ್ಚಿನ ಆದಾಯ ಸಿಗುತ್ತಿರುತ್ತದೆ. ಹೀಗಾಗಿ ಈ ಹೆಚ್ಚಿನ ಆದಾಯ ತಂದುಕೊಡುವ ಉತ್ಪನ್ನದ ಮೇಲೆ ನೀವು ಹೆಚ್ಚಿನ ಹೂಡಿಕೆ ಮಾಡುವ ಮೂಲಕ ಲಾಭವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬಹುದು. ಹಾಗೆಯೇ ಯಾವುದೋ ಒಂದು ಉತ್ಪನ್ನದಿಂದ ನಿಮಗೆ ಜಾಸ್ತಿ ಆದಾಯ ಬಾರದೇ ಇರಬಹುದು. ಅಂಥ ಉತ್ಪನ್ನವನ್ನು ಸ್ಥಗಿತಗೊಳಿಸಬಹುದು ಅಥವಾ ಅದರ ಮೇಲಿನ ಹೂಡಿಕೆ ತಗ್ಗಿಸಬಹುದು.
ಕೇವಲ 8000 ರೂ.ನಿಂದ ಬಿಸಿನೆಸ್ ಆರಂಭಿಸಿದ ವ್ಯಕ್ತಿ, ಈಗ ಬಿಲಿಯನೇರ್ ಮುಕೇಶ್ ಅಂಬಾನಿಗೇ ಪ್ರತಿಸ್ಪರ್ಧಿ!
80/20 ಸಿದ್ಧಾಂತದ ಬಗ್ಗೆ ಇನ್ನೂ ಸರಳವಾಗಿ ಹೇಳಬೇಕೆಂದ್ರೆ ಇದು ನಿಮ್ಮ ಉದ್ಯಮದಲ್ಲಿ ಯಾವ ವಿಷಯದ ಮೇಲೆ ನೀವು ಹೆಚ್ಚಿನ ಗಮನ ಕೇಂದ್ರೀಕರಿಸಬೇಕು ಎಂಬುದನ್ನು ತಿಳಿಸುತ್ತದೆ. ಹಾಗೆಯೇ ಯಾವ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡಬಾರದು ಎಂಬುದನ್ನು ತಿಳಿಸುತ್ತದೆ. ಈ ರೀತಿ ನಿಮ್ಮ ಉದ್ಯಮದಲ್ಲಿ ಯಾವ ವಿಷಯಕ್ಕೆ ಹೆಚ್ಚಿನ ಗಮನ ನೀಡಬೇಕು ಹಾಗೂ ಯಾವುದಕ್ಕೆ ನೀಡಬಾರದು ಎಂಬುದನ್ನು ತಿಳಿಯೋದ್ರಿಂದ ನಿಮ್ಮ ಉತ್ಪಾದನೆ ಹೆಚ್ಚಿಸಿಕೊಳ್ಳಬಹುದು. ಹಾಗೆಯೇ ಅಗತ್ಯವಿಲ್ಲದ ವಿಷಯಕ್ಕೆ ಹೆಚ್ಚಿನ ಗಮನ ಕೇಂದ್ರೀಕರಿಸೋದನ್ನು ನಿಲ್ಲಿಸುತ್ತೀರಿ ಕೂಡ. ಹೀಗೆ ಮಾಡೋದ್ರಿಂದ ನಿಮ್ಮ ಲಾಭದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು.