ವೇತನ ಖಾತೆ ಹೊಂದಿರುವ ಗ್ರಾಹಕರಿಗೆ ಬ್ಯಾಂಕ್ ಎಷ್ಟೊಂದು ಸೌಲಭ್ಯ ನೀಡುತ್ತೆ ಗೊತ್ತಾ?

By Suvarna News  |  First Published Apr 20, 2023, 4:36 PM IST

ವೇತನ ಖಾತೆ ಹೊಂದಿರುವ ಗ್ರಾಹಕರಿಗೆ ಬ್ಯಾಂಕ್ ಕೆಲವು ವಿಶೇಷ ಸೌಲಭ್ಯಗಳನ್ನು ಒದಗಿಸುತ್ತದೆ. ಉಚಿತ ಎಟಿಎಂ ವಹಿವಾಟು, OD ಹಾಗೂ ಸಾಲ ಸೌಲಭ್ಯವನ್ನು ಕಲ್ಪಿಸುತ್ತದೆ. ಹಾಗೆಯೇ ಕೆಲವು ಬ್ಯಾಂಕ್ ಗಳು ಉಚಿತ ಆನ್ ಲೈನ್ ವಹಿವಾಟಿನ ಸೌಲಭ್ಯವನ್ನು ಕೂಡ ಒದಗಿಸುತ್ತವೆ.
 


Business Desk: ಭಾರತದಲ್ಲಿ ಒಬ್ಬ ವ್ಯಕ್ತಿ ಎರಡು ವಿಧದ ಬ್ಯಾಂಕ್ ಖಾತೆಗಳನ್ನು ತೆರೆಯಬಹುದು. ಒಂದು ವೇತನ ಖಾತೆ ಹಾಗೂ ಇನ್ನೊಂದು ಉಳಿತಾಯ ಖಾತೆ.ವೇತನ ಖಾತೆ ಹಾಗೂ ಉಳಿತಾಯ ಖಾತೆ ಎರಡು ವಿಭಿನ್ನ ವಿಧದ ಬ್ಯಾಂಕ್ ಖಾತೆಗಳಾಗಿದ್ದು, ವಿವಿಧ ಉದ್ದೇಶಗಳನ್ನು ಈಡೇರಿಸುತ್ತವೆ. ನೀವು ಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಮಾತ್ರ ವೇತನ ಖಾತೆ ತೆರೆಯಬಹುದು. ಹಾಗೆಯೇ ಈ ಖಾತೆಯಲ್ಲಿ ಯಾವುದೇ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡಬೇಕಾದ ಅಗತ್ಯವಿಲ್ಲ. ಈಗಾಗಲೇ ಈ ಖಾತೆ ನಿಮಗೆ ಶೂನ್ಯ ಬ್ಯಾಲೆನ್ಸ್ ಸೌಲಭ್ಯ ಒದಗಿಸುತ್ತದೆ. ಅಂದರೆ ನಿಮ್ಮ ಖಾತೆಯಲ್ಲಿ ನಯಾಪೈಸೆ ಇಲ್ಲದಿದ್ದರೂ ಯಾವುದೇ ದಂಡ ವಿಧಿಸೋದಿಲ್ಲ. ಇನ್ನು ಉಳಿತಾಯ ಖಾತೆಯಲ್ಲಿ ಗ್ರಾಹಕರು ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡೋದು ಅಗತ್ಯ. ಒಂದು ವೇಳೆ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ಶುಲ್ಕ ವಿಧಿಸಲಾಗುತ್ತದೆ. ತಮ್ಮ ಉದ್ಯೋಗಿಗಳಿಗೆ ವೇತನ ಖಾತೆಗಳನ್ನು ತೆರೆಯಲು ಕಂಪನಿಗಳು ಬ್ಯಾಂಕ್ ಗಳ ಜೊತೆಗೆ ಸಹಭಾಗಿತ್ವ ಹೊಂದಿರುತ್ತವೆ. ವೇತನ ಖಾತೆಯಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಹಾಗಾದ್ರೆ ಯಾವೆಲ್ಲ ಪ್ರಯೋಜನಗಳಿವೆ? ಇಲ್ಲಿದೆ ಮಾಹಿತಿ.

* ಉಚಿತ ಎಟಿಎಂ ವಹಿವಾಟು ಸೌಲಭ್ಯ
ಬ್ಯಾಂಕ್ ಗಳು ವೇತನ ಖಾತೆ ಹೊಂದಿರುವ ಗ್ರಾಹಕರಿಗೆ ಉಚಿತ ಎಟಿಎಂ ವಹಿವಾಟು ಸೌಲಭ್ಯವನ್ನು ಒದಗಿಸುತ್ತವೆ. ಈ ಸೌಲಭ್ಯದಡಿ ನೀವು ತಿಂಗಳಲ್ಲಿ ಎಷ್ಟು ಬಾರಿ ಎಟಿಎಂ ಬಳಸಬಹುದು ಎಂದು ಲೆಕ್ಕ ಹಾಕಬೇಕಾಗಿಲ್ಲ. ವೇತನ ಖಾತೆ ಹೊಂದಿರೋರಿಗೆ ಎಟಿಎಂ ಬಳಕೆ ಮೇಲಿನ ವಾರ್ಷಿಕ ಶುಲ್ಕವನ್ನು ಬ್ಯಾಂಕ್ ಗಳು ರದ್ದುಗೊಳಿಸಿವೆ.

Tap to resize

Latest Videos

ಸಾಲ ಮರುಪಾವತಿಸಲು ತೊಂದರೆ, ಕಿರುಕುಳ ನೀಡುತ್ತಿರುವ ರಿಕವರಿ ಏಜೆಂಟ್; ಎಲ್ಲಿ ದೂರು ನೀಡಬೇಕು?

*ಸಾಲ ಸೌಲಭ್ಯ
ವೇತನ ಖಾತೆ ಮೇಲೆ ನೀಡುವ ವೈಯಕ್ತಿಕ ಸಾಲಕ್ಕೆ ವಿಶೇಷ ಆಫರ್ ಕೂಡ ಸಿಗಲಿದೆ. ಇನ್ನು ನಿಮ್ಮ ವೇತನ ಖಾತೆ ಮೇಲೆ ಮೊದಲೇ ಅಂಗೀಕಾರವಾದ ಸಾಲ ಸೌಲಭ್ಯ ಕೂಡ ಸಿಗಲಿದೆ. ಇನ್ನು ಗೃಹ ಹಾಗೂ ಕಾರ್ ಸಾಲಗಳ ಮೇಲೆ ವಿಶೇಷ ಆಫರ್ ಗಳು ಕೂಡ ಸಿಗಲಿವೆ.

*OD ಸೌಲಭ್ಯ
ಕೆಲವು ವೇತನ ಖಾತೆಗಳಿಗೆ ಓವರ್ ಡ್ರಾಫ್ಟ್ ಸೌಲಭ್ಯ ಕೂಡ ಲಭ್ಯವಿದೆ. ಈ ಸೌಲಭ್ಯ ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟಿದೆ ಕೂಡ. ಕನಿಷ್ಠ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯನ್ನು ಹೊಂದಿರುತ್ತದೆ. ಈ ಸೌಲಭ್ಯ ನಿಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ ನಿರ್ದಿಷ್ಟ ಮಿತಿಯ ತನಕ ಹಣ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸುತ್ತದೆ. 

* ಉಚಿತ ಪಾಸ್ ಬುಕ್ ಹಾಗೂ ಚೆಕ್ ಬುಕ್ ಸೌಲಭ್ಯ
ಅನೇಕ ಬ್ಯಾಂಕ್ ಗಳು ವೇತನ ಖಾತೆ ಹೊಂದಿರೋರಿಗೆ ಉಚಿತ ಪಾಸ್ ಪುಸ್ತಕ, ಚೆಕ್ ಪುಸ್ತಕ ಹಾಗೂ ಇ-ಸ್ಟೇಟ್ ಮೆಂಟ್ ಸೌಲಭ್ಯಗಳನ್ನು ಒದಗಿಸುತ್ತವೆ. ಇದು ಖಾತೆದಾರರಿಗೆ ತಮ್ಮ ವಹಿವಾಟುಗಳು ಹಾಗೂ ಖಾತೆ ಬ್ಯಾಲೆನ್ಸ್ ಮೇಲೆ ಟ್ರ್ಯಾಕ್ ಇಡಲು ನೆರವು ನೀಡುತ್ತದೆ. ಇದಕ್ಕಾಗಿ ಯಾವುದೇ ಹೆಚ್ಚುವರಿ ವೆಚ್ಚ ಕೂಡ ಮಾಡಬೇಕಾಗಿಲ್ಲ.

EPF ಬ್ಯಾಲೆನ್ಸ್ ಚೆಕ್ ಮಾಡಲು ಇಂಟರ್ನೆಟ್ ಬೇಕಿಲ್ಲ; ಮನೆಯಲ್ಲೇ ಕುಳಿತು ಈ ವಿಧಾನದಿಂದ ಪರಿಶೀಲಿಸಬಹುದು

*ಉಚಿತ ವಿಮಾ ಸೌಲಭ್ಯ
ವೇತನ ಖಾತೆ ಹೊಂದಿರೋರು 20 ಲಕ್ಷ ರೂ. ತನಕ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯ ಹೊಂದಲು ಕೂಡ ಅರ್ಹತೆ ಗಳಿಸಿದ್ದಾರೆ.

*ಉಚಿತ ಆನ್ ಲೈನ್ ವಹಿವಾಟು
ಕೆಲವು ಬ್ಯಾಂಕ್ ಗಳು ವೇತನ ಖಾತೆ ಹೊಂದಿರುವ ತಮ್ಮ ಗ್ರಾಹಕರಿಗೆ ಉಚಿತ ಆನ್ ಲೈನ್ ವಹಿವಾಟಿನ ಸೌಲಭ್ಯ ಒದಗಿಸುತ್ತವೆ. ಅಂದರೆ NEFT ಹಾಗೂ RTGS ಸೇವೆಗಳು ಉಚಿತವಾಗಿರುತ್ತವೆ. ಅನೇಕ ಬ್ಯಾಂಕ್ ಗಳು ತಕ್ಷಣ ಪಾವತಿ ಸೇವೆ  (IMPS) ಕೂಡ ಒದಗಿಸುತ್ತವೆ. 


 

click me!