ಸಾಲ ಮರುಪಾವತಿಸಲು ತೊಂದರೆ, ಕಿರುಕುಳ ನೀಡುತ್ತಿರುವ ರಿಕವರಿ ಏಜೆಂಟ್; ಎಲ್ಲಿ ದೂರು ನೀಡಬೇಕು?

By Suvarna News  |  First Published Apr 20, 2023, 12:33 PM IST

ಗೃಹ, ವಾಹನ, ವೈಯಕ್ತಿಕ ಹೀಗೆ ನಾನಾ ಮಾದರಿಯ ಸಾಲಗಳನ್ನು ಪಡೆದಿರುವ ಗ್ರಾಹಕರಿಗೆ ಅದನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಕೆಲವು ತೊಂದರೆಗಳು ಎದುರಾಗಿರಬಹುದು. ಆದರೆ, ಸಾಲ ಮರುಪಾವತಿಗೆ ವಿಳಂಬ ಮಾಡಿದ್ರೆ ಬ್ಯಾಂಕ್ ಗಳು ನೇಮಿಸುವ ರಿಕವರಿ ಏಜೆಂಟ್ ಗಳು ಸಾಲಗಾರರ ಬೆನ್ನಿಗೆ ಬೀಳುತ್ತಾರೆ. ಈ ರಿಕವರಿ ಅಥವಾ ಸಾಲ ವಸೂಲಾತಿ ಏಜೆಂಟ್ ಗಳು ಸಾಲಗಾರರಿಗೆ ಮಾನಸಿಕ, ದೈಹಿಕ ಕಿರುಕುಳ ಕೂಡ ನೀಡುತ್ತಾರೆ. ಇಂಥ ಸಂದರ್ಭದಲ್ಲಿ ಅವರ ವಿರುದ್ಧ ದೂರು ದಾಖಲಿಸೋದು ಹೇಗೆ? ಇಲ್ಲಿದೆ ಮಾಹಿತಿ.
 


Business Desk:ಮನೆ, ಕಾರು ಖರೀದಿ, ಹೊಸ ಉದ್ಯಮ ಪ್ರಾರಂಭಿಸಲು ಹೀಗೆ ನಾನಾ ಕಾರಣಕ್ಕೆ ಜನರು ಸಾಲಗಳನ್ನು ಪಡೆಯುತ್ತಾರೆ. ಇತ್ತೀಚಿನ ದಿನಗಳಂತೂ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯೋದು ಕಷ್ಟದ ಕೆಲಸವೇನಲ್ಲ. ಆದರೆ, ಸಾಲ ಮರುಪಾವತಿ ಮಾಡೋದು ಪಡೆದಷ್ಟು ಸುಲಭದ ಕೆಲಸವಲ್ಲ. ಅದರಲ್ಲೂ ದೀರ್ಘಾವಧಿ ಸಾಲ ಪಡೆದ ಸಂದರ್ಭದಲ್ಲಿ ಬದುಕಿನಲ್ಲಿ ಎದುರಾಗುವ ಅನೇಕ ಅನಿರೀಕ್ಷಿತ ಘಟನೆಗಳು ಅಥವಾ ಏಳುಬೀಳಿನ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡೋದು ಕಷ್ಟವಾಗಬಹುದು. ಹೀಗಿರುವಾಗ ಸಾಲ ಮರುಪಾವತಿಯಲ್ಲಿ ಸ್ವಲ್ಪ ವಿಳಂಬ ಅಥವಾ ಬ್ಯಾಂಕ್ ಗಳ ಜೊತೆಗಿನ ಕೆಲವು ವೈಮನಸ್ಸಿನಿಂದ ನೀವು ಸಾಲ ವಸೂಲಾತಿ ಏಜೆಂಟ್ ಗಳಿಂದ ಸಾಕಷ್ಟು ಒತ್ತಡ ಅನುಭವಿಸಬೇಕಾಗಬಹುದು. ಈ ಏಜೆಂಟ್ ಗಳು ಸಾಲಗಾರರು ಹಾಗೂ ಅವರ ಕುಟುಂಬಕ್ಕೆ ಆಗಾಗ ಅವಮಾನ ಮಾಡುತ್ತಲೇ ಇರುತ್ತಾರೆ. ಹಣವನ್ನು ವಸೂಲಿ ಮಾಡಲು ಅವರಿಗೆ ಮಾನಸಿಕ, ದೈಹಿಕ ಕಿರುಕುಳ ಕೂಡ ನೀಡುತ್ತಾರೆ. ಇದನ್ನೆಲ್ಲ ಗಮನಿಸಿರುವ ಆರ್ ಬಿಐ ಸಾಲ ವಸೂಲಾತಿ ಏಜೆಂಟ್ (ರಿಕವರಿ ಏಜೆಂಟ್) ಸಂಬಂಧಿಸಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ರೂಪಿಸಿದೆ. ಆದರೆ, ಈ ಮಾರ್ಗಸೂಚಿಗಳನ್ನು ಬಹುತೇಕರು ಪಾಲಿಸುವುದಿಲ್ಲ.

ಆರ್ ಬಿಐ ಮಾರ್ಗಸೂಚಿಗಳಲ್ಲಿ ಏನಿದೆ?
*ಸಾಲ ವಸೂಲಾತಿ ಏಜೆಂಟ್ ಗಳು (ರಿಕವರಿ ಏಜೆಂಟ್) ಸಾಲಗಾರರನ್ನು ಬೆಳಗ್ಗೆ 8ರಿಂದ ರಾತ್ರಿ 7ರ ತನಕ ಮಾತ್ರ ವಸೂಲಾತಿಗೆ ಸಂಬಂಧಿಸಿದ ಮಾತುಕತೆಗೆ ಕರೆಯಬಹುದು.
*ರಿಕವರಿ ಏಜೆಂಟ್ ಗಳು ಸಾಲಗಾರರಿಗೆ ಅವಹೇಳನಕಾರಿ ಸಂದೇಶಗಳು ಅಥವಾ ದೈಹಿಕ ಅಥವಾ ಮಾನಸಿಕ ಕಿರುಕುಳ ನೀಡುವಂತಿಲ್ಲ. ಒಂದು ವೇಳೆ ಅವರು ಅನುಚಿತವಾಗಿ ವರ್ತಿಸಿದರೆ ಸಾಲಗಾರರು ತಮ್ಮ ಹಕ್ಕುಗಳ ಬಗ್ಗೆ ತಿಳಿಯಬೇಕು. ಹಾಗೆಯೇ ಅವರು ರಿಕವರಿ ಏಜೆಂಟ್ ವಿರುದ್ಧ ದೂರು ಕೂಡ ದಾಖಲಿಸಬಹುದು.
*ಇನ್ನು ಸಾಲಗಾರರು ರಿಕವರಿ ಏಜೆಂಟ್ ನಿಂದ ಬಂದಿರುವ ಎಲ್ಲ ಸಂದೇಶಗಳು, ಇ-ಮೇಲ್ ಗಳು ಹಾಗೂ ಕರೆಗಳ ರೆಕಾರ್ಡಿಂಗ್ ಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ದೂರು ನೀಡುವಾಗ ಈ ದಾಖಲೆಗಳು ಮುಖ್ಯವಾಗುತ್ತವೆ.
*ರಿಕವರಿ ಏಜೆಂಟ್ ವಿರುದ್ಧದ ಎಲ್ಲ ದಾಖಲೆಗಳೊಂದಿಗೆ ಸಾಲಗಾರ ಲೋನ್ ಆಫೀಸರ್ ಅಥವಾ ಬ್ಯಾಂಕ್ ಅನ್ನು ಸಂಪರ್ಕಿಸಬಹುದು. ಈ ಬಗ್ಗೆ ವಿಚಾರಣೆ ನಡೆಸಿ ಬ್ಯಾಂಕ್ ರಿಕವರಿ ಏಜೆಂಟ್ ವಿರುದ್ಧ ಕ್ರಮ ಕೈಗೊಳ್ಳಬಹುದು.
*ಸಾಲಗಾರರು ಪೊಲೀಸ್ ಠಾಣೆಗೆ ತೆರಳಿ ಕೂಡ ರಿಕವರಿ ಏಜೆಂಟ್ ವಿರುದ್ಧ ದೂರು ದಾಖಲಿಸಬಹುದು. 

Tap to resize

Latest Videos

EPF ಬ್ಯಾಲೆನ್ಸ್ ಚೆಕ್ ಮಾಡಲು ಇಂಟರ್ನೆಟ್ ಬೇಕಿಲ್ಲ; ಮನೆಯಲ್ಲೇ ಕುಳಿತು ಈ ವಿಧಾನದಿಂದ ಪರಿಶೀಲಿಸಬಹುದು

*ಇನ್ನು ಒಂದು ವೇಳೆ ಪೊಲೀಸರು ಸರಿಯಾದ ಮಾರ್ಗದರ್ಶನ ನೀಡದಿದ್ದರೆ, ಆ ಸಾಲಗಾರ ಕೋರ್ಟ್ ನಲ್ಲಿ ಸಿವಿಲ್ ಮೊಕದ್ದಮ್ಮೆ ದಾಖಲಿಸಲು ಕೂಡ ಅವಕಾಶವಿದೆ. ಇದರಿಂದ ಸಾಲಗಾರನಿಗೆ ಬ್ಯಾಂಕಿನಿಂದ ಮಧ್ಯಂತರ ನಿರಾಳತೆ ಸಿಗಲಿದೆ. ಹಾಗೆಯೇ ಕಿರುಕುಳಕ್ಕೆ ಪರಿಹಾರವನ್ನು ಕೂಡ ಪಡೆಯಲು ಅವಕಾಶವಿದೆ.
*ಒಂದು ವೇಳೆ ರಿಕವರಿ ಏಜೆಂಟ್ ಸಾಲಗಾರನ ಚಾರಿತ್ರ್ಯ ವಧೆ ಮಾಡಲು ಪ್ರಯತ್ನಿಸಿದರೆ, ಸಾಲಗಾರ ರಿಕವರಿ ಏಜೆಂಟ್ ಹಾಗೂ ಬ್ಯಾಂಕ್ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ದಾಖಲಿಸಲು ಕೂಡ ಅವಕಾಶವಿದೆ.
*ಒಂದು ವೇಳೆ ಈ ವಿಧಾನಗಳನ್ನು ಅನುಸರಿಸಿದ ಹೊರತಾಗಿಯೂ ಕಿರುಕುಳದಿಂದ ಮುಕ್ತಿ ಸಿಗದಿದ್ದರೆ ಸಾಲಗಾರ ನೇರವಾಗಿ ಆರ್ ಬಿಐಗೆ ದೂರು ನೀಡಬಹುದು. ನಿರ್ದಿಷ್ಟ ಅವಧಿಗೆ ನಿರ್ದಿಷ್ಟ ಪ್ರದೇಶಕ್ಕೆ ರಿಕವರಿ ಏಜೆಂಟ್ ಗಳನ್ನು ನೇಮಿಸದಂತೆ ಬ್ಯಾಂಕಿಗೆ ಆರ್ ಬಿಐ ತಡೆ ನೀಡುತ್ತದೆ.

ಮತ್ತೊಂದು ಮೈಲಿಗಲ್ಲು ಸಾಧಿಸಿದ ಪಿಎಂ ಜನ್ ಧನ್ ಯೋಜನೆ; 2 ಲಕ್ಷ ಕೋಟಿ ರೂ.ಗಡಿ ದಾಟಿದ ಠೇವಣಿ ಮೊತ್ತ

ರಿಕವರಿ ಏಜೆಂಟ್ ಗಳಿಗೆ ಸಂಬಂಧಿಸಿದ ಆರ್ ಬಿಐ ಮಾರ್ಗಸೂಚಿಗಳು  ಸಹಕಾರಿ ಬ್ಯಾಂಕ್ ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು, ಮರುನಿರ್ಮಾಣ ಕಂಪನಿಗಳು ಹಾಗೂ ಬ್ಯಾಂಕಿಂಗೇತರ ಹಣಕಾಸು ಕಂಪನಿಗಳು ಹಾಗೂ ಅಖಿಲ ಭಾರತ ಹಣಕಾಸು ಸಂಸ್ಥೆಗಳಿಗೆ ಅನ್ವಯಿಸುತ್ತವೆ. 

click me!