ಮದುವೆ ಇಬ್ಬರ ನಡುವೆ ಆದ್ರೂ ಕುಟುಂಬ, ಸಂಬಂಧಿಕರು ಮಾತ್ರವಲ್ಲ ಮದುವೆ ವ್ಯವಹಾರ ನಂಬಿರುವ ಅನೇಕರಿಗೆ ಖುಷಿ ನೀಡುವ ಸಂಗತಿ. ಮದುವೆ ಋತು ಬರ್ತಿದ್ದಂತೆ ಕೆಲ ವ್ಯಾಪಾರದಲ್ಲಿ ಬಿರುಸು ಕಾಣಿಸಿಕೊಳ್ಳುತ್ತೆ. ಲಾಭದ ಮೇಲೆ ಲಾಭ ಲೆಕ್ಕ ಹಾಕ್ತಾರೆ.
ಇದು ಮದುವೆ ಋತು. ಜನವರಿ ಹದಿನೈದರಿಂದ ಜುಲೈ ಹದಿನೈದರವರೆಗೆ ಮದುವೆಗಳು ನಡೆಯಲಿವೆ. ಒಂದೇ ದಿನ ಮೂರ್ನಾಲ್ಕು ಆಪ್ತರ ಮದುವೆಗಳ ಕರೆಯೋಲೆ ಮನೆಗೆ ಬಂದಿರುತ್ತದೆ. ಮದುವೆ ಜೊತೆ ಮನೆ ಪ್ರವೇಶ, ಕಚೇರಿ ಉದ್ಘಾಟನೆ, ಮುಂಜಿ ಸೇರಿದಂತೆ ನಾನಾ ಶುಭ ಕಾರ್ಯಗಳು ನಡೆಯುವ ಸಮಯ ಇದು. ಈ ಬಾರಿ ಮದುವೆ ಸಂಖ್ಯೆ 45 ಲಕ್ಷಕ್ಕೇರಿದೆ. ಆರು ತಿಂಗಳಲ್ಲಿ ದೇಶದಲ್ಲಿ 45 ಲಕ್ಷಕ್ಕೂ ಹೆಚ್ಚು ಮದುವೆಗಳು ನಡೆಯಲಿವೆ ಎಂದು ಅಂದಾಜಿಸಲಾಗಿದೆ. ಈ ಮದುವೆಯ ಶುಭ ಸಂದರ್ಭದಲ್ಲಿ ಸುಮಾರು 5.5 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆಯಲಿದೆ.
ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAT) ನ ಸಂಶೋಧನಾ ವಿಭಾಗವಾದ ಕ್ಯಾಟ್ ಸಂಶೋಧನೆ ಮತ್ತು ವ್ಯಾಪಾರ ಅಭಿವೃದ್ಧಿ ಸೊಸೈಟಿ ಈ ಅಂದಾಜು ಮಾಡಿದೆ. ಸೊಸೈಟಿ, ದೇಶದ ವಿವಿಧ ರಾಜ್ಯಗಳ 30 ವಿವಿಧ ನಗರಗಳ ವ್ಯಾಪಾರಿಗಳು ಮತ್ತು ಸೇವಾ ಪೂರೈಕೆದಾರರೊಂದಿಗಿನ ಸಂಭಾಷಣೆ ನಡೆಸಿ ಈ ಮಾಹಿತಿಯನ್ನು ಕಲೆ ಹಾಕಿದೆ. ಯಾವ ರಾಜ್ಯದಲ್ಲಿ ಎಷ್ಟು ಮದುವೆ (Marriage) ನಡೆಯಲಿದೆ ಎನ್ನುವ ಬಗ್ಗೆಯೂ ಸೊಸೈಟಿ ಲೆಕ್ಕ ಹಾಕಿದೆ.
ಕೋಟ್ಯಾಂತರ ಸಾಲದಲ್ಲಿ ಮುಳುಗಿರೋ ಅನಿಲ್ ಅಂಬಾನಿಯ ಕಂಪೆನಿ ಖರೀದಿಸಲು ಮುಂದಾದ ಹೆಸರಾಂತ ಉದ್ಯಮಿ!
ಕ್ಯಾಟ್ ಸಂಶೋಧನೆ (Research) ಮತ್ತು ವ್ಯಾಪಾರ ಅಭಿವೃದ್ಧಿ ಸೊಸೈಟಿ ಅಂದಾಜಿನ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿ (Delhi) ಯಲ್ಲಿ ನಾಲ್ಕು ಲಕ್ಷ ಮದುವೆಗಳು ನಡೆಯುವ ಸಾಧ್ಯತೆ ಇದೆ. 1.5 ಲಕ್ಷ ಕೋಟಿ ವ್ಯವಹಾರದ ಲಾಭ ಸಿಗುವ ಸಾಧ್ಯತೆ ಇದೆ. ಹಿಂದಿನ ವರ್ಷ ಡಿಸೆಂಬರ್ ಹದಿನಾಲ್ಕರವರೆಗೆ ದೇಶದಲ್ಲಿ 35 ಲಕ್ಷ ಮದುವೆಗಳು ನಡೆದಿದ್ದವು. ಆ ಸಮಯದಲ್ಲಿ ಸುಮಾರು 4.25 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆದಿತ್ತು.
ಆ್ಯಪಲ್, ಮ್ಯಾಂಗೋ ಜ್ಯೂಸ್ ಮಾರಿ ಬರೋಬ್ಬರಿ 8000 ಕೋಟಿಯ ಬೃಹತ್ ಉದ್ಯಮ ಕಟ್ಟಿದ ಮಹಿಳೆ!
ಮೂರು ಲಕ್ಷ ರೂಪಾಯಿಯ ಸುಮಾರು ಐದು ಲಕ್ಷ ಮದುವೆ ಆಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಆರು ಲಕ್ಷ ರೂಪಾಯಿಯ ಹತ್ತು ಲಕ್ಷ ಮದುವೆ ಆಗುವ ಸಾಧ್ಯತೆ ಇದೆ. ಇನ್ನು ಹತ್ತು ಲಕ್ಷ ಖರ್ಚು ಮಾಡುವ ಮದುವೆ ಬಗ್ಗೆ ಹೇಳೋದಾದ್ರೆ ಈ ಋತುವಿನಲ್ಲಿ ಹತ್ತು ಲಕ್ಷ ಇಂಥ ಮದುವೆ ಆಗಲಿದೆ ಎಂದು ಸೊಸೈಟಿ ಅಂದಾಜಿಸಿದೆ. ಹದಿನೈದು ಲಕ್ಷ ಖರ್ಚು ಮಾಡುವ ಹತ್ತು ಲಕ್ಷ ಮದುವೆಗಳಾದ್ರೆ ಇಪ್ಪತ್ತೈದು ಲಕ್ಷ ಖರ್ಚು ಮಾಡುವ ಆರು ಲಕ್ಷ ಮದುವೆಗಳು ನಡೆಯಲಿವೆ. ಐವತ್ತು ಲಕ್ಷದವರೆಗೆ ಖರ್ಚು ಮಾಡುವ ಜನರೂ ಇದ್ದು, ಅಂಥಹ ಆರವತ್ತು ಸಾವಿರ ಮದುವೆ ಆಗಲಿದೆ ಎಂದು ಅಂದಾಜಿಸಲಾಗಿದೆ. ಒಂದು ಕೋಟಿ ಖರ್ಚು ಮಾಡುವ ನಲವತ್ತು ಸಾವಿರ ಮದುವೆಗಳಾಗುವ ಸಂಭವವಿದೆ. ಮದುವೆ ಖರ್ಚು ಹೆಚ್ಚಾದಂತೆ ವ್ಯಾಪಾರಸ್ಥರಿಗೆ ಲಾಭವಾಗಲಿದೆ.
ಮದುವೆಗೆ ಅಗತ್ಯವಿರುವ ಎಲ್ಲ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಈ ಮದುವೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ ಸಂಬಂಧಿಸಿದ ವ್ಯಾಪಾರಿಗಳು ಮದುವೆಗೆ ಸಂಬಂಧಿಸಿದ ವಸ್ತುಗಳನ್ನು ಸಾಕಷ್ಟು ದಾಸ್ತಾನು ಮಾಡಿರುವುದರಿಂದ ಗ್ರಾಹಕರ ಆಯ್ಕೆ ಮತ್ತು ಬೇಡಿಕೆಯನ್ನು ಪೂರೈಸಬಹುದು. ಮದುವೆಗೆ ಜನರು ಮಾಡುವ ಖರ್ಚು ಬರೀ ಮದುವೆ ದಿನಕ್ಕೆ ಸೀಮಿತವಾಗಿಲ್ಲ.
ಮದುವೆಗೂ ಮುನ್ನ ಅನೇಕ ರೀತಿಯಲ್ಲಿ ಹಣ ಖರ್ಚಾಗುತ್ತದೆ. ಅದಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ವೃದ್ಧಿಯಾಗುತ್ತದೆ. ಮದುವೆ ತಯಾರಿ ಹಿನ್ನಲೆಯಲ್ಲಿ ಜನರು ಮನೆ ರಿಪೇರಿ, ಪೇಟಿಂಗ್ ವ್ಯಾಪಾರದಲ್ಲೂ ವೃದ್ಧಿಯಾಗಿದೆ. ಇದಲ್ಲದೆ ಸೀರೆ, ಆಭರಣ, ಪಿಠೋಪಕರಣ, ಅಲಂಕಾರಿಕ ವಸ್ತುಗಳು, ಪಾದರಕ್ಷೆ, ಬಟ್ಟೆ, ಮದುವೆ ಹಾಲ್, ಕಾರ್ಡ್, ಡ್ರೈ ಫ್ರೂಟ್ಸ್, ಆಹಾರ ಸಾಮಗ್ರಿ, ಎಲೆಕ್ಟ್ರಿಕ್ ವಸ್ತುಗಳು, ಮೆಹಂದಿ, ಬ್ಯೂಟಿ ಪಾರ್ಲರ್, ಮದುವೆ ಬ್ರೋಕರ್, ಮದುವೆ ಕಂಟ್ರಾಕ್ಟರ್ ಸೇರಿದಂತೆ ಅನೇಕರಿಗೆ, ಅನೇಕ ವ್ಯಾಪಾರಕ್ಕೆ ಬೇಡಿಕೆ ಹೆಚ್ಚಾಗ್ತಿದೆ. ನೀವೂ ಈ ಕ್ಷೇತ್ರಗಳಲ್ಲಿ ವ್ಯವಹಾರ ಶುರು ಮಾಡುವ ಪ್ಲಾನ್ ನಲ್ಲಿದ್ದರೆ ಒಳ್ಳೆ ಅವಕಾಶವಿದೆ.