ನಗದು ಬೇಕಿದ್ರೆ ಎಟಿಎಂ ಎಲ್ಲಿದೆ ಎಂದು ಹುಡುಕಾಡಬೇಕಾದ ಕಾಲ ಮುಗಿಯಿತು. ಇನ್ಮುಂದೆ ಒಟಿಪಿ ಹೇಳಿದ್ರೆ ಅಂಗಡಿಯಲ್ಲೇ ಸಿಗುತ್ತೆ ಹಣ.
ನವದೆಹಲಿ (ಫೆ.14): ಯುಪಿಐ ಪಾವತಿ ವ್ಯವಸ್ಥೆ ದೇಶದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ಮಾಲ್ ಗಳ ತನಕ ಎಲ್ಲ ಕಡೆ ಈಗ ಯುಪಿಐ ಬಳಕೆಯಾಗುತ್ತಿದೆ. ಹೀಗಾಗಿ ಇಂದು ಅನೇಕರು ಹೊರಗಡೆ ಹೋಗುವಾಗ ಜೇಬಿನಲ್ಲಿ ನಗದು ಇರಿಸಿಕೊಂಡು ಹೋಗುವ ಅಭ್ಯಾಸ ಬಿಟ್ಟಿದ್ದಾರೆ. ಕೈಯಲ್ಲೊಂದು ಮೊಬೈಲ್ ಇದ್ರೆ ಸಾಕು ಏನು ಬೇಕಾದರೂ ಖರೀದಿಸಬಹುದು ಎಂಬ ಮನೋಭಾವ ಬೆಳೆದಿದೆ. ಮೊಬೈಲ್ ಹಾಗೂ ಇಂಟರ್ನೆಟ್ ಸಂಪರ್ಕವಿದ್ದರೆ ಆನ್ ಲೈನ್ ಪಾವತಿ ಮಾಡೋದು ಕ್ಷಣ ಮಾತ್ರದ ಕೆಲಸ. ಹೀಗಾಗಿ ಇಂದು ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಅನ್ನು ತೆಗೆದುಕೊಂಡು ಹೋಗುವ ಅಭ್ಯಾಸ ಕೂಡ ತಗ್ಗಿದೆ. ಆದರೆ, ಇದರಿಂದ ಹಣದ ತುರ್ತು ಅಗತ್ಯವಿರುವಾಗ ಕೆಲವೊಮ್ಮೆ ಸಮಸ್ಯೆ ಎದುರಾಗೋದು ಕೂಡ ಇದೆ. ನಗದು ಹಣದ ಅಗತ್ಯವಿರುವಾಗ ಜೇಬಿನಲ್ಲಿ ಡೆಬಿಟ್ ಕಾರ್ಡ್ ಇಲ್ಲದಿದ್ದರೆ ಎಟಿಎಂನಿಂದ ಹಣ ತೆಗೆಯಲು ಕೂಡ ಸಾಧ್ಯವಾಗೋದಿಲ್ಲ.ಇನ್ನು ಗ್ರಾಮೀಣ ಪ್ರದೇಶಗಳಿಗೆ ತೆರಳಿದಾಗ ಅಲ್ಲಿ ಎಟಿಎಂ ಸಿಗದೆ ಸಮಸ್ಯೆ ಎದುರಾಗೋ ಸಾಧ್ಯತೆಯಿದೆ. ಇಂಥ ಸಮಸ್ಯೆಗೆ ಪೇಮಾರ್ಟ್ ಇಂಡಿಯಾ ಪರಿಹಾರವೊಂದನ್ನು ಹುಡುಕಿದೆ. ಅದೇ ಒಟಿಪಿ ಬಳಸಿಕೊಂಡು ಸಮೀಪದ ಅಂಗಡಿಗಳಿಂದ ನಗದು ಪಡೆಯೋದು. ಅಂದರೆ ವರ್ಚುವಲ್ ಎಟಿಎಂ ವ್ಯವಸ್ಥೆ.
ಏನಿದು ವರ್ಚುವಲ್ ಎಟಿಎಂ?
ಚಂಡೀಗಢ ಮೂಲದ ಫಿನ್ ಟೆಕ್ ಕಂಪನಿ ಪೇಮಾರ್ಟ್ ಇಂಡಿಯಾ ವರ್ಚುವಲ್, ಕಾರ್ಡ್ ಲೆಸ್ ಹಾಗೂ ಹಾರ್ಡ್ ವೇರ್ ಲೆಸ್ ನಗದು ವಿತ್ ಡ್ರಾ ಸೇವೆ ಪ್ರಾರಂಭಿಸಿದೆ. ಈ ವ್ಯವಸ್ಥೆ ಬಳಕೆದಾರರಿಗೆ ಸಮೀಪದ ಶಾಪ್ ಗಳಿಂದ ಕೇವಲ ಮೊಬೈಲ್ ಬಳಸಿಕೊಂಡು ನಗದು ಹಣ ಪಡೆಯುವ ಸೌಲಭ್ಯ ಕಲ್ಪಿಸಿದೆ. ಈ ಮೂಲಕ ಎಟಿಎಂ ಹುಡುಕಿಕೊಂಡು ಹೋಗುವ ಅಥವಾ ಕಾರ್ಡ್ ಪಿನ್ ನೆನಪು ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ತಪ್ಪಿಸಿದೆ. ಈ ಸೇವೆಯನ್ನು ಪೇಮಾರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸ್ಥಾಪಕ ಹಾಗೂ ಸಿಇಒ ಅಮಿತ್ ನರಂಗ್ 'ವರ್ಚುವಲ್ ಎಟಿಎಂ' ಎಂದು ಕರೆದಿದ್ದಾರೆ.
ಜಾಗತಿಕ ಮಟ್ಟದಲ್ಲೂ ಈಗ UPI ಹವಾ; ಯುಪಿಐ ಪಾವತಿ ಸ್ವೀಕರಿಸುವ ರಾಷ್ಟ್ರಗಳ ಪಟ್ಟಿ ಪ್ರಕಟಿಸಿದ ಸರ್ಕಾರ
ವರ್ಚುವಲ್ ಎಟಿಎಂ ಮೂಲಕ ಹಣ ವಿತ್ ಡ್ರಾ ಹೇಗೆ?
ನಗದು ವಿತ್ ಡ್ರಾ ಮಾಡಲು 'ವರ್ಚುವಲ್ ಎಟಿಎಂ' ಬಳಸಲು ನಿಮ್ಮ ಬಳಿ ಸ್ಮಾರ್ಟ್ ಫೋನ್ ಇರೋದು ಅಗತ್ಯ. ಅದರಲ್ಲಿ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಕೂಡ ಇರಬೇಕು. ಜೊತೆಗೆ ಸಕ್ರಿಯ ಇಂಟರ್ನೆಟ್ ಸಂಪರ್ಕ. ನಿಮ್ಮ ಮೊಬೈಲ್ ಬ್ಯಾಂಕಿಂಗ್ ಆಪ್ ಮೂಲಕ ವಿತ್ ಡ್ರಾ ಮನವಿ ಸೃಷ್ಟಿಸಿ. ಇನ್ನು ಆಪ್ ಬಳಕೆಗೆ ನಿಮ್ಮ ಫೋನ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿರೋದು ಅಗತ್ಯ.
ನೀವು ಮನವಿ ಮೇರೆಗೆ ಬ್ಯಾಂಕ್ ಒಟಿಪಿ ಸೃಷ್ಟಿಸುತ್ತದೆ ಹಾಗೂ ಅದನ್ನು ನೋಂದಾಯಿತ ಸಂಖ್ಯೆಗೆ ಕಳುಹಿಸುತ್ತದೆ. ಈ ಒಟಿಪಿಯನ್ನು ಪೇಮಾರ್ಟ್ ಜೊತೆಗೆ ಸಹಭಾಗಿತ್ವ ಹೊಂದಿರುವ ಸಮೀಪದ ಅಂಗಡಿಗೆ
ತೋರಿಸಿ ನಗದು ಹಣವನ್ನು ಪಡೆದುಕೊಳ್ಳಬಹುದು.
ಪೇಮಾರ್ಟ್ ಮೂಲಕ ವರ್ಚುವಲ್ ಎಟಿಎಂ ಸೇವೆಗಳನ್ನು ನೀಡುವ ನೋಂದಾಯಿತ ಶಾಪ್ ಗಳ ಪಟ್ಟಿಯನ್ನು ನಿಮ್ಮ ಮೊಬೈಲ್ ಬ್ಯಾಂಕಿಂಗ್ ಆಪ್ ತೋರಿಸುತ್ತದೆ. ಇರಲ್ಲಿ ಶಾಪ್ ಹೆಸರು, ಸ್ಥಳ ಹಾಗೂ ಸಂಪರ್ಕ ಸಂಖ್ಯೆ ಕೂಡ ಇರುತ್ತದೆ. ಯಾವುದೇ ಡೆಬಿಟ್ ಕಾರ್ಡ್ ಅಥವಾ ಸಾಂಪ್ರದಾಯಿಕ ಎಟಿಎಂ ಮಷಿನ್ ಅಥವಾ ಕಿಯೋಸ್ಕ ಅಥವಾ ಯುಪಿಐ ಇಲ್ಲದೆ ವಿತ್ ಡ್ರಾ ಮಾಡಬಹುದು. ಈ ವ್ಯವಸ್ಥಯಲ್ಲಿ ಅಂಗಡಿ ಮಾಲೀಕರು ವರ್ಚುವಲ್ ಎಟಿಎಂ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. www.vatm.in ಮರ್ಚೆಂಟ್ ಪೋರ್ಟಲ್ ಮೂಲಕ ಅವರು ನಗದು ವಹಿವಾಟು ನಡೆಸಲಿದ್ದಾರೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ನಿಷೇಧ ಹೇರಿದ ಇಪಿಎಫ್ಒ; ಈ ಬ್ಯಾಂಕ್ ಖಾತೆ ಹೊಂದಿರೋ ಇಪಿಎಫ್ ಸದಸ್ಯರೇನು ಮಾಡ್ಬೇಕು?
ವರ್ಚುವಲ್ ಎಟಿಎಂ ಯಾರು ಬಳಸಬಹುದು?
ಐಡಿಬಿಐ ಬ್ಯಾಂಕ್ ಜೊತೆಗೆ ವರ್ಚುವಲ್ ಎಟಿಎಂ ಪೈಲಟ್ ಯೋಜನೆ ಕಳೆದ ಆರು ತಿಂಗಳಿಂದ ಯಶಸ್ವಿಯಾಗಿ ನಡೆಯುತ್ತದೆ. ಇನ್ನು ಈ ಫಿನ್ ಟೆf ಕಂಪನಿ ಇಂಡಿಯನ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಹಾಗೂ ಕರೂರ್ ವೈಶ್ಯ ಬ್ಯಾಂಕ್ ಜೊತೆಗೆ ಈ ಸೇವೆ ನೀಡಲು ಒಪ್ಪಂದ ಮಾಡಿಕೊಂಡಿದೆ. ಪ್ರಸ್ತುತ ಈ ವರ್ಚುವಲ್ ಎಟಿಎಂ ಸೇವೆ ಚಂಡೀಗಢ, ದೆಹಲಿ, ಹೈದರಾಬಾದ್, ಚೆನ್ನೈ ಹಾಗೂ ಮುಂಬೈನಲ್ಲಿ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಗರಗಳಲ್ಲಿ ಲಭ್ಯವಾಗಲಿದೆ.
ಎಷ್ಟು ಹಣ ವಿತ್ ಡ್ರಾ ಮಾಡಬಹುದು?
ವರ್ಚುವಲ್ ಎಟಿಎಂನಿಂದ ಒಂದು ವಹಿವಾಟಿನಲ್ಲಿ ಕನಿಷ್ಠ 100ರೂ. ಹಾಗೂ ಗರಿಷ್ಠ 2,000ರೂ. ನಗದು ವಿತ್ ಡ್ರಾ ಮಾಡಬಹುದು. ತಿಂಗಳಿಗೆ 10,000ರೂ. ವಿತ್ ಡ್ರಾ ಮಾಡಲು ಅವಕಾಶವಿದೆ.