ಹಣದ ಅಗತ್ಯ ಎದುರಾದಾಗ ಮೊದಲಿಗೆ ನೆನಪಾಗೋದು ವೈಯಕ್ತಿಕ ಸಾಲ. ಇಂದು ಬ್ಯಾಂಕ್ ಗಳು ಹಾಗೂ ಇತರ ಅನೇಕ ಸಂಸ್ಥೆಗಳು ವೈಯಕ್ತಿಕ ಸಾಲವನ್ನು ನೀಡುತ್ತವೆ. ಆದರೆ, ವೈಯಕ್ತಿಕ ಸಾಲ ಪಡೆಯಲು ಕೆಲವೊಂದು ಅರ್ಹತೆಗಳನ್ನು ಹೊಂದಿರೋದು ಅಗತ್ಯ. ಹಾಗಾದ್ರೆ ವೈಯಕ್ತಿಕ ಸಾಲ ಸುಲಭವಾಗಿ ಸಿಗಬೇಕೆಂದ್ರೆ ಏನ್ ಮಾಡ್ಬೇಕು? ಇಲ್ಲಿದೆ ಮಾಹಿತಿ.
Business Desk:ಹಣದ ಅಡಚಣೆ ಯಾವಾಗ, ಯಾವ ರೂಪದಲ್ಲಿ ಎದುರಾಗುತ್ತದೆ ಎಂದು ಹೇಳಲಾಗದು. ಕೆಲವೊಂದು ಅನಿಶ್ಚಿತ ಘಟನೆಗಳನ್ನು ನಿಭಾಯಿಸಲು ಹಣದ ತುರ್ತು ಅಗತ್ಯ ಎದುರಾಗುತ್ತದೆ. ಇಂಥ ಸಂದರ್ಭಗಳಲ್ಲಿ ನಮ್ಮ ನೆರವಿಗೆ ಬರುವುದೇ ವೈಯಕ್ತಿಕ ಸಾಲ. ಹೌದು, ಎಲ್ಲ ಬ್ಯಾಂಕ್ ಗಳು ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ವೈಯಕ್ತಿಕ ಸಾಲವನ್ನು ಒದಗಿಸುತ್ತವೆ. ಅಲ್ಲದೆ, ಈ ಸಾಲ ಪಡೆಯುವ ಪ್ರಕ್ರಿಯೆ ಕೂಡ ಅಷ್ಟು ಕಠಿಣವಿಲ್ಲದ ಕಾರಣ ಹಣದ ಅವಶ್ಯಕತೆ ಉಂಟಾದಾಗ ಮೊದಲಿಗೆ ನೆನಪಾಗೋದೇ ವೈಯಕ್ತಿಕ ಸಾಲ. ವೈದ್ಯಕೀಯ ವೆಚ್ಚ, ಹಳೆಯ ಸಾಲ ತೀರಿಸಲು, ಪ್ರವಾಸ, ಮಕ್ಕಳ ಶೈಕ್ಷಣಿಕ ವೆಚ್ಚ ಮುಂತಾದ ಖರ್ಚುಗಳನ್ನು ನಿಭಾಯಿಸಲು ಇದು ನೆರವಿಗೆ ಬರುತ್ತದೆ. ವೈಯಕ್ತಿಕ ಸಾಲದಲ್ಲಿ ಎರಡು ಮಾದರಿಗಳಿವೆ. ಒಂದು ಯಾವುದೇ ಭದ್ರತೆಯಿಲ್ಲದೆ ನೀಡುವ ಸಾಲ, ಇನ್ನೊಂದು ಭದ್ರತೆಯೊಂದಿಗೆ ನೀಡುವ ಸಾಲ. ಈ ಭದ್ರತೆ ಅಥವಾ ಸೆಕ್ಯುರಿಟಿ ಇಲ್ಲದ ವೈಯಕ್ತಿಕ ಸಾಲವನ್ನು ಯಾವುದೇ ಭದ್ರತೆ ನೀಡದೆ ಸುಲಭವಾಗಿ ಪಡೆಯಬಹುದು. ವೈಯಕ್ತಿಕ ಸಾಲ ಪಡೆಯುವಾಗ ಸಮರ್ಪಕವಾದ ಸಾಲದಾತ ಸಂಸ್ಥೆಯನ್ನು ಆಯ್ದುಕೊಳ್ಳೋದು ಅಗತ್ಯ. ಇದರಿಂದ ನಿಮಗೆ ಪ್ರಯೋಜನದ ಜೊತೆಗೆ ಯಾವುದೇ ಸಮಸ್ಯೆಗಳು ಕೂಡ ಎದುರಾಗೋದಿಲ್ಲ. ಇನ್ನು ವೈಯಕ್ತಿಕ ಸಾಲ ಪಡೆಯುವ ಮುನ್ನ ವಿವಿಧ ಬ್ಯಾಂಕ್ ಗಳು ಅಥವಾ ಇತರ ಸಂಸ್ಥೆಗಳು ವಿಧಿಸುವ ಬಡ್ಡಿದರವನ್ನು ಗಮನಿಸಿ ಮುಂದುವರಿಯೋದು ಉತ್ತಮ. ಹಾಗೆಯೇ ಅನೇಕ ವೆನ್ ಸೈಟ್ ಗಳಲ್ಲಿ ವೈಯಕ್ತಿಕ ಸಾಲದ ಅರ್ಹತೆ ಲೆಕ್ಕಾಚಾರದ ಕ್ಯಾಲ್ಕುಲೇಟರ್ ಲಭ್ಯವಿದ್ದು, ಅದನ್ನು ಬಳಸಿ ಸಾಲ ಪಡೆಯಲು ನಿಮಗಿರುವ ಅರ್ಹತೆಯನ್ನು ಪರಿಶೀಲಿಸಬಹುದು. ವೈಯಕ್ತಿಕ ಸಾಲ ನೀಡುವ ಮುನ್ನ ಬ್ಯಾಂಕ್ ಗಳು ನಿಮ್ಮ ಅರ್ಹತೆ ಪರಿಶೀಲಿಸುತ್ತವೆ. ಹೀಗಾಗಿ ವೈಯಕ್ತಿಕ ಸಾಲ ಪಡೆಯಲು ನಿಮ್ಮ ಅರ್ಹತೆ ಹೆಚ್ಚಿಸಿಕೊಳ್ಳಲು ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ.
1.ಉತ್ತಮ ಕ್ರೆಡಿಟ್ ಸ್ಕೋರ್ ನಿರ್ವಹಣೆ ಮಾಡಿ
ಯಾವುದೇ ಬ್ಯಾಂಕ್ ಸಾಲ ನೀಡುವ ಮುನ್ನ ನಿಮ್ಮ ಕ್ರೆಡಿಟ್ ಸ್ಕೋರ್ ಚೆಕ್ ಮಾಡುತ್ತದೆ. ಕ್ರೆಡಿಟ್ ಸ್ಕೋರ್ ಅಂದ್ರೆ 3 ಅಂಕೆಗಳ ರೂಪದಲ್ಲಿರುವ ಗ್ರಾಹಕರ ಕ್ರೆಡಿಟ್ ವಿವರ. ಇದು ಗ್ರಾಹಕರು ಈ ಹಿಂದೆ ಸಾಲಗಳನ್ನು ಪಡೆದಿರೋದು ಹಾಗೂ ಅದನ್ನು ಮರುಪಾವತಿಸಿದ ಬಗ್ಗೆ ಬ್ಯಾಂಕ್ ಗಳು ಹಾಗೂ ಸಾಲಗಾರರು ನಿಯಮಿತವಾಗಿ ಕ್ರೆಡಿಟ್ ಇನ್ಫಾರ್ಮೇಷನ್ ಬ್ಯುರೋ ಆಫ್ ಇಂಡಿಯಾ ಲಿಮಿಟೆಡ್ ಗೆ (ಸಿಬಿಲ್) ನೀಡಿರುವ ಮಾಹಿತಿಗಳನ್ನು ಆಧರಿಸಿರುತ್ತದೆ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡೋದು. ಅನಗತ್ಯವಾಗಿ ಸಾಲ ಪಡೆಯದಿದ್ರೆ ಅಂಥವರ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುತ್ತದೆ. ಕ್ರೆಡಿಟ್ ಸ್ಕೋರ್ ಹೆಚ್ಚಾಗಿದ್ರೆ ನಿಮಗೆ ಸಾಲ ಪಡೆಯಲು ಹೆಚ್ಚು ಅರ್ಹತೆ ಇರುತ್ತದೆ. ಕೆಲವು ಬ್ಯಾಂಕುಗಳು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರೋರಿಗೆ ಕಡಿಮೆ ಬಡ್ಡಿದರಕ್ಕೆ ಸಾಲ ಕೂಡ ನೀಡುತ್ತವೆ. ಕ್ರೆಡಿಟ್ ಸ್ಕೋರ್ 300 ರಿಂದ 900ರ ನಡುವೆ ಇರುತ್ತದೆ. 750ಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಇದ್ರೆ ಅದನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಇನ್ನು 750-900 ನಡುವಿನ ಸಿಬಿಲ್ ಸ್ಕೋರ್ ಇದ್ರೆ ಅದನ್ನು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ.
ಇನ್ಮುಂದೆ ಬ್ಯಾಂಕ್ ಖಾತೆ ತೆರೆಯೋದು, ಸಿಮ್ ಕಾರ್ಡ್ ಪಡೆಯೋದು ಅಷ್ಟು ಸುಲಭವಲ್ಲ!
2.ಇಎಂಐ ಪಾವತಿ ಸಾಮರ್ಥ್ಯ ಪರಿಶೀಲಿಸಿ
ವೈಯಕ್ತಿಕ ಸಾಲ ಪಡೆಯುವ ಮುನ್ನ ಪ್ರತಿ ತಿಂಗಳು ನಿಮಗೆ ಎಷ್ಟು ಮೊತ್ತದ ಇಎಂಐ ಪಾವತಿಸುವ ಸಾಮರ್ಥ್ಯವಿದೆ ಎಂಬುದನ್ನು ಲೆಕ್ಕ ಹಾಕಿ. ಯಾವುದೇ ಬ್ಯಾಂಕ್ ಸಾಲ ನೀಡುವ ಮುನ್ನ ನಿಮ್ಮ ತಿಂಗಳ ವೆಚ್ಚಗಳನ್ನು ಲೆಕ್ಕ ಹಾಕುತ್ತದೆ. ಅಂದ್ರೆ ಹೊಸ ಸಾಲದ ಇಎಂಐ ಸೇರಿದಂತೆ ನಿಮ್ಮ ವೆಚ್ಚಗಳು ಒಟ್ಟು ವೇತನದ ಶೇ.60 ಮೀರದಿದ್ರೆ ಮಾತ್ರ ನಿಮಗೆ ಸಾಲ ನೀಡಲಾಗುತ್ತದೆ. ಹೀಗಾಗಿ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಎಷ್ಟು ಮೊತ್ತದ ಇಎಂಐ ಪಾವತಿಸಬಹುದು ಹಾಗೂ ಎಷ್ಟು ಅವಧಿಗೆ ಸಾಲ ಪಡೆಯಬಹುದು ಎಂಬುದನ್ನು ಲೆಕ್ಕ ಹಾಕಿ.ವೆಬ್ ಸೈಟ್ ಗಳಲ್ಲಿ ಇಎಂಐ ಕ್ಯಾಲ್ಕುಲೇಟರ್ ಗಳು ಲಭ್ಯವಿವೆ. ಹೀಗಾಗಿ ಅವುಗಳನ್ನು ಬಳಸಿ ಇಎಂಐ ಲೆಕ್ಕ ಹಾಕಿ.
3.ಅನೇಕ ಬ್ಯಾಂಕ್ ಅಥವಾ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಬೇಡಿ
ವೈಯಕ್ತಿಕ ಸಾಲಕ್ಕಾಗಿ ಅನೇಕ ಬ್ಯಾಂಕುಗಳು ಅಥವಾ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಬೇಡಿ. ಏಕೆಂದ್ರೆ ಈ ರೀತಿ ನೀವು ಸಾಲಕ್ಕಾಗಿ ವಿಚಾರಣೆ ನಡೆಸಿದಾಗ ಪ್ರತಿ ಬ್ಯಾಂಕ್ ಅಥವಾ ಸಂಸ್ಥೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆಕ್ ಮಾಡುತ್ತದೆ. ನೀವು ಸಾಲಕ್ಕೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಸಾಲ ನೀಡುವ ಬ್ಯಾಂಕ್ ಅಥವಾ ಸಂಸ್ಥೆ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲನೆಗೆ ವಿನಂತಿಸಿದರೆ ಅದನ್ನು ಕಠಿಣ ತನಿಖೆ ಎಂದು ಕರೆಯಲಾಗುತ್ತದೆ. ಈ ಕಠಿಣ ತನಿಖೆಗಳು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ತಗ್ಗಿಸುತ್ತವೆ.
ಒಂದೇ ಐಟಿಆರ್ ಅರ್ಜಿ ನಮೂನೆ ಭರ್ತಿ ಮಾಡಿದ್ರೆ ಸಾಕು; ಏಕರೂಪದ ಫಾರ್ಮ್ ಗೆ ಐಟಿ ಇಲಾಖೆ ಪ್ರಸ್ತಾವನೆ
4.ಸಹ ಅರ್ಜಿದಾರರನ್ನು ಸೇರಿಸಿಕೊಳ್ಳಿ
ವೈಯಕ್ತಿಕ ಸಾಲವನ್ನು ಒಬ್ಬರ ಹೆಸರಲ್ಲೇ ಪಡೆಯುವ ಬದಲು ಇಬ್ಬರು ಜಂಟಿಯಾಗಿ ಪಡೆಯೋದು ಉತ್ತಮ. ವೈಯಕ್ತಿಕ ಸಾಲಕ್ಕೆ ಜಂಟಿಯಾಗಿ ಅರ್ಜಿ ಸಲ್ಲಿಸಿದಾಗ ಸಿಗುವ ಸಾಧ್ಯತೆ ಜಾಸ್ತಿ. ಏಕೆಂದ್ರೆ ಸಾಲ ಮರುಪಾವತಿ ಜವಾಬ್ದಾರಿ ಇಬ್ಬರ ಮೇಲೂ ಇರುವ ಕಾರಣ ಸುಲಭವಾಗಿ ಸಾಲ ಸಿಗುತ್ತದೆ. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿಲ್ಲದಿದ್ರೂ ನಿಮ್ಮ ಸಹ ಅರ್ಜಿದಾರರ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ರೆ ನಿಮಗೆ ಸುಲಭವಾಗಿ ಸಾಲ ಸಿಗುತ್ತದೆ.