ಜಿಯೋ, ಏರ್‌ಟೆಲ್‌ಗೆ ಟಕ್ಕರ್, BSNL ಹಾಗೂ ವೊಡಾಫೋನ್ ಐಡಿಯಾ ಮಹತ್ವದ ನೆಟ್‌ವರ್ಕ್ ಒಪ್ಪಂದ!

Published : Aug 27, 2026, 05:02 PM IST
Vodafone Idea BSNL

ಸಾರಾಂಶ

ವೊಡಾಫೋನ್ ಐಡಿಯಾ (Vi) ಮತ್ತು BSNL ತಮ್ಮ ನೆಟ್‌ವರ್ಕ್ ಜಾಲವನ್ನು ಹಂಚಿಕೊಳ್ಳಲು ಐತಿಹಾಸಿಕ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದ ಮೂಲಕ, ನಗರ ಪ್ರದೇಶಗಳಲ್ಲಿ BSNL ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 'ವಿ' ಬಳಕೆದಾರರಿಗೆ ಉತ್ತಮ ಸಂಪರ್ಕ ಲಭಿಸಲಿದ್ದು, ಎರಡೂ ಕಂಪನಿಗಳು ತಮ್ಮ ವೆಚ್ಚವನ್ನು ಕಡಿತಗೊಳಿಸಿ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಜ್ಜಾಗಿವೆ.

ನವದೆಹಲಿ: ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಎದುರಿಸುತ್ತಿರುವ ವೊಡಾಫೋನ್ ಐಡಿಯಾ (Vi) ಮತ್ತು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತಮ್ಮ ನೆಟ್‌ವರ್ಕ್ ಜಾಲವನ್ನು ಒಗ್ಗಟ್ಟಾಗಿವೆ. ದೇಶದ ಎಲ್ಲಾ ಟೆಲಿಕಾಂ ವಲಯಗಳಲ್ಲಿ ಮೂಲಸೌಕರ್ಯ ಮತ್ತು ನೆಟ್‌ವರ್ಕ್ ಹಂಚಿಕೊಳ್ಳಲು ಎರಡೂ ಕಂಪನಿಗಳು ಐತಿಹಾಸಿಕ ಒಪ್ಪಂದಕ್ಕೆ ಬಂದಿವೆ.

ವೊಡಾಫೋನ್ ಐಡಿಯಾ ಸಿಇಒ ಅಭಿಜಿತ್ ಕಿಶೋರ್ ಹಾಗೂ BSNL ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಬರ್ಟ್ ಜೆ. ರವಿ ನಡುವೆ ನಡೆದ ಉನ್ನತ ಮಟ್ಟದ ಸಭೆಯ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು 'ಸಿಎನ್‌ಬಿಸಿ ಆವಾಜ್' (CNBC Awaaz) ವರದಿ ಮಾಡಿದೆ.

ಒಪ್ಪಂದದ ಪ್ರಮುಖ ಮುಖ್ಯ ಅಂಶಗಳು ಇಂತಿದೆ

ಮೂಲಸೌಕರ್ಯ ಹಂಚಿಕೆ: ಟೆಲಿಕಾಂ ಟವರ್‌ಗಳು, ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ಹಾಗೂ ಇಂಟ್ರಾ/ಇಂಟರ್-ಸರ್ಕಲ್ ರೋಮಿಂಗ್ (ICR) ಸೇವೆಗಳನ್ನು ಪರಸ್ಪರ ಹಂಚಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ನಗರ ಮತ್ತು ಗ್ರಾಮೀಣ ಸಂಪರ್ಕ ಹೆಚ್ಚಳ: Vi ಕಂಪನಿಯ ಬಲವಾದ ನಗರ ನೆಟ್‌ವರ್ಕ್ BSNL ಚಂದಾದಾರರಿಗೆ ಸುಲಭವಾಗಿ ಸಿಗಲಿದೆ. ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ BSNL ನೆಟ್‌ವರ್ಕ್ ಅನ್ನು 'ವಿ' ಬಳಕೆದಾರರು ಬಳಸಬಹುದಾಗಿದೆ.

ವೆಚ್ಚ ಕಡಿತ ಮತ್ತು 5G ವಿಸ್ತರಣೆ: ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ನೀಡುತ್ತಿರುವ ಸವಾಲನ್ನು ಎದುರಿಸಲು, ಹೊಸದಾಗಿ ಸಾವಿರಾರು ಕೋಟಿ ರೂ. ಹೂಡಿಕೆ ಮಾಡುವ ಬದಲು ಸಂಪನ್ಮೂಲ ಹಂಚಿಕೆಯ ಮೂಲಕ ಕಾರ್ಯನಿರ್ವಹಿಸಲು ನಿರ್ಧರಿಸಲಾಗಿದೆ.

ಎರಡೂ ಕಂಪನಿಗಳಿಗಾಗುವ ಆರ್ಥಿಕ ಪ್ರಯೋಜನಗಳು

ವೊಡಾಫೋನ್ ಐಡಿಯಾಗೆ ಹೆಚ್ಚುವರಿ ಆದಾಯ: BSNL ವ್ಯಾಪ್ತಿ ಕಡಿಮೆಯಿರುವ ಪ್ರದೇಶಗಳಲ್ಲಿ BSNL ಗ್ರಾಹಕರು 'Vi' ನೆಟ್‌ವರ್ಕ್ ಬಳಸುವುದರಿಂದ ವೊಡಾಫೋನ್ ಐಡಿಯಾಗೆ ರೋಮಿಂಗ್ ಆದಾಯ ಲಭಿಸಲಿದೆ.

BSNL ಸೇವಾ ಸುಧಾರಣೆ: Vi ಮೂಲಸೌಕರ್ಯ ಬಳಸಿಕೊಳ್ಳುವ ಮೂಲಕ BSNL ತನ್ನ ಗ್ರಾಹಕರಿಗೆ ನಗರ ಪ್ರದೇಶಗಳಲ್ಲಿ ಸುಧಾರಿತ ಸಂಪರ್ಕ ಮತ್ತು ಉತ್ತಮ ಡೇಟಾ ವೇಗವನ್ನು ನೀಡಲು ಸಾಧ್ಯವಾಗುತ್ತದೆ.

ಟವರ್ ಗುತ್ತಿಗೆ: ದೂರಸಂಪರ್ಕ ಇಲಾಖೆಯ ಮಾಹಿತಿಯಂತೆ, ಏಪ್ರಿಲ್ 2026 ರ ವೇಳೆಗೆ BSNL ಈಗಾಗಲೇ ಸುಮಾರು 1,441 ಟವರ್‌ಗಳನ್ನು ವೊಡಾಫೋನ್ ಐಡಿಯಾಗೆ ಗುತ್ತಿಗೆ ಆಧಾರದ ಮೇಲೆ ನೀಡಿದೆ. (ಈಗಾಗಲೇ ದೆಹಲಿ ಮತ್ತು ಮುಂಬೈನಲ್ಲಿ ಈ ಮಾದರಿಯ ವ್ಯವಸ್ಥೆ ಚಾಲ್ತಿಯಲ್ಲಿದೆ).

ಎರಡೂ ಕಂಪನಿಗಳ ಪ್ರಸ್ತುತ ಹಣಕಾಸು ಸ್ಥಿತಿ (Q1 FY27):

ವೊಡಾಫೋನ್ ಐಡಿಯಾ: ಕಂಪನಿಯು ತನ್ನ ಮೂರು ವರ್ಷಗಳ ಬಂಡವಾಳ ವೆಚ್ಚಕ್ಕಾಗಿ (Capex) ₹45,000 ಕೋಟಿ ನಿಧಿ ಸಂಗ್ರಹಿಸಲು ವಿವಿಧ ಬ್ಯಾಂಕುಗಳು ಮತ್ತು ಸಾಲದಾತರೊಂದಿಗೆ ಚರ್ಚೆ ನಡೆಸಿದ್ದು, ಪ್ರಗತಿ ಸಾಧಿಸಿದೆ. ಮೊದಲ ಹಂತದಲ್ಲಿ ₹6,400 ಕೋಟಿ ಸಂಗ್ರಹಿಸಿದ್ದು, ಸುಮಾರು ₹9,000 ಕೋಟಿ ಮೌಲ್ಯದ ನೆಟ್‌ವರ್ಕ್ ಆರ್ಡರ್‌ಗಳನ್ನು ನೀಡಲು ಪ್ರಾರಂಭಿಸಿದೆ.

BSNL: 2027 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1 FY27) BSNL ತನ್ನ ಕಾರ್ಯಾಚರಣೆಯ ಆದಾಯದಲ್ಲಿ ಶೇ. 10 ರಷ್ಟು ಪ್ರಗತಿ ಕಾಣುವ ಮೂಲಕ ₹4,418 ಕೋಟಿ ತಲುಪಿದೆ. ಉದ್ಯಮ ವ್ಯವಹಾರ (Enterprise Business) ಮತ್ತು ಚಲನಶೀಲತೆ (Mobility) ವಿಭಾಗಗಳ ಉತ್ತಮ ಕಾರ್ಯಕ್ಷಮತೆ ಇದಕ್ಕೆ ಕಾರಣವಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

539 ಅಂಕ ಕುಸಿದ ಸೆನ್ಸೆಕ್ಸ್‌, ನಾಲ್ಕು ವರ್ಷದ ಕನಿಷ್ಠಕ್ಕೆ HDFC Bank ಷೇರು!
EPFO: 25 ವರ್ಷ ಸೇವೆ ಸಲ್ಲಿಸಿದರೆ ನಿಮಗೆಷ್ಟು ಸಿಗುತ್ತೆ ಪೆನ್ಷನ್? ನೀವೇ ಲೆಕ್ಕ ಹಾಕಲು, ಇಲ್ಲಿದೆ ಸರಳ ಸೂತ್ರ!