22 ಸಾವಿರ ಕೋಟಿ ಸಾಲಕ್ಕೆ 6.5 ಕೋಟಿ ರೂಪಾಯಿ ಸೆಟ್ಲ್‌ಮೆಂಟ್‌ ಒಪ್ಪಿದ NCLT, ಬಚಾವ್‌ ಆದ ಉದ್ಯಮಿ!

Published : Aug 27, 2026, 04:02 PM IST
Subhash Chandra Zee

ಸಾರಾಂಶ

ಜೀ ಗ್ರೂಪ್ ಸಂಸ್ಥಾಪಕ ಸುಭಾಷ್ ಚಂದ್ರ ಅವರ 22,006 ಕೋಟಿ ರೂ. ಸಾಲಕ್ಕೆ ಕೇವಲ 6.5 ಕೋಟಿ ರೂ. ಪಾವತಿಸುವ ಯೋಜನೆಗೆ ರಾಷ್ಟ್ರೀಯ ಕಂಪನಿ ಕಾನೂನು ಮಂಡಳಿ (NCLT) ಅನುಮೋದನೆ ನೀಡಿದೆ. ಈ ನಿರ್ಧಾರದಿಂದ ಸಾಲದಾತರಿಗೆ 99.97% ನಷ್ಟವಾಗಲಿದೆ.

ನವದೆಹಲಿ (ಆ.27): ಭಾರತೀಯ ಕ್ರೆಡಿಟ್ ಮತ್ತು ಸಾಲ ಮರುಪಾವತಿ ಇತಿಹಾಸದಲ್ಲೇ ಅತ್ಯಂತ ವಿಶಿಷ್ಟ ಎನ್ನಲಾದ ತೀರ್ಪಿನಲ್ಲಿ, ಜೀ ಗ್ರೂಪ್ ಸಂಸ್ಥಾಪಕ ಸುಭಾಷ್ ಚಂದ್ರ ಅವರ ಒಟ್ಟು 22,006.57 ಕೋಟಿ ರೂಪಾಯಿಗಳ ಬೃಹತ್ ಸಾಲದ ಪೈಕಿ ಕೇವಲ 6.5 ಕೋಟಿ ರೂಪಾಯಿ ಪಾವತಿಸುವ ಮರುಪಾವತಿ ಯೋಜನೆಗೆ ರಾಷ್ಟ್ರೀಯ ಕಂಪನಿ ಕಾನೂನು ಮಂಡಳಿ (NCLT) ಅಂತಿಮ ಒಪ್ಪಿಗೆ ನೀಡಿದೆ. ಈ ಯೋಜನೆಯಿಂದಾಗಿ ಸಾಲ ನೀಡಿದ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಬರೋಬ್ಬರಿ ಶೇಕಡಾ 99.97 ರಷ್ಟು ನಷ್ಟ (ಹೇರ್‌ಕಟ್‌ - Haircut) ಉಂಟಾಗಲಿದ್ದು, ಕೇವಲ 0.03% ರಷ್ಟು ಹಣ ಮಾತ್ರ ಮರುಪಾವತಿಯಾಗಲಿದೆ. ಸಾಲದಾತ ಸಂಸ್ಥೆಗಳ ತೀವ್ರ ವಿರೋಧದ ನಡುವೆಯೂ ಈ ಪ್ರಸ್ತಾವನೆಗೆ ಎನ್‌ಸಿಎಲ್‌ಟಿ ಹಸಿರು ನಿಶಾನೆ ತೋರಿದೆ.

ವಿಭಜಿತ ತೀರ್ಪಿನ ಬಳಿಕ ಮೂರನೇ ಸದಸ್ಯರಿಂದ ಅಂತಿಮ ಅಂಕಿತ

ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ಇಬ್ಬರು ಸದಸ್ಯರ ಪೀಠವು ಭಿನ್ನ ತೀರ್ಪು (Split Verdict) ನೀಡಿತ್ತು. ತದನಂತರ ಪ್ರಕರಣದ ಸೂಕ್ತ ತೀರ್ಮಾನಕ್ಕಾಗಿ ನೇಮಕಗೊಂಡ ಮೂರನೇ ಸದಸ್ಯರಾದ ನೀಲೇಶ್ ಶರ್ಮಾ ಅವರು ದಿವಾಳಿತನ ಮತ್ತು ದಿವಾಳಿತನ ಸಂಹಿತೆಯ (IBC) ಸೆಕ್ಷನ್ 114 ರ ಅಡಿಯಲ್ಲಿ ಈ ಪ್ರಸ್ತಾವಿತ ಮರುಪಾವತಿ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಪ್ರಮುಖವಾಗಿ ಸಾಲದಾತರ ಸಮಿತಿಯಲ್ಲಿ ಶೇಕಡಾ 80.81 ರಷ್ಟು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದ ಸಾಲದಾತರು ಈ ಯೋಜನೆಗೆ ಬೆಂಬಲ ಸೂಚಿಸಿದ್ದನ್ನು ಮಂಡಳಿಯು ಪ್ರಮುಖ ಆಧಾರವಾಗಿ ಪರಿಗಣಿಸಿದೆ.

ಎಲ್‌ಐಸಿ ಹೌಸಿಂಗ್ ಫೈನಾನ್ಸ್ ತೀವ್ರ ಆಕ್ಷೇಪ

ಶೇಕಡಾ 20 ಕ್ಕಿಂತ ಕಡಿಮೆ ಮತದಾನದ ಹಕ್ಕು ಹೊಂದಿರುವ ಸಾಲದಾತರ ಗುಂಪಿನ ನೇತೃತ್ವವನ್ನು ಎಲ್‌ಐಸಿ ಹೌಸಿಂಗ್ ಫೈನಾನ್ಸ್ (LIC Housing Finance) ವಹಿಸಿತ್ತು. ಈ ಕಂಪನಿ ಮಾತ್ರ ಈ ಯೋಜನಗೆ ದೊಡ್ಡ ಮಟ್ಟದ ವಿರೋಧ ವ್ಯಕ್ತಪಡಿಸಿದೆ. ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ಗೆ ಸುಭಾಷ್ ಚಂದ್ರ ಅವರಿಂದ ₹1,322.39 ಕೋಟಿ ರೂಪಾಯಿ ಹಣ ಬರಬೇಕಿದೆ. ಆದರೆ, ಅನುಮೋದಿತ ಯೋಜನೆಯ ಪ್ರಕಾರ ಎಲ್‌ಐಸಿಗೆ ಸಿಗುವುದು ಕೇವಲ ₹38.09 ಲಕ್ಷ (ಅಂದರೆ ಒಟ್ಟು ಬಾಕಿಯ ಬರಿ ಶೇ. 0.028)!

ಇಷ್ಟು ಸಣ್ಣ ಮೊತ್ತದ ಮರುಪಾವತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಮರುಪಾವತಿ ಯೋಜನೆಯು ಕಾನೂನುಬಾಹಿರ ಹಾಗೂ ಕಾರ್ಯಸಾಧುವಲ್ಲದ್ದು" ಎಂದು ಎಲ್‌ಐಸಿ ಹೌಸಿಂಗ್ ಫೈನಾನ್ಸ್ ವಾದ ಮಾಡಿದೆ. ಅಲ್ಲದೆ, ಯೋಜನೆಯಲ್ಲಿ ಸೂಚಿಸಲಾದ 6.5 ಕೋಟಿ ರೂಪಾಯಿ ಖಚಿತವಲ್ಲ, ಬದಲಿಗೆ ಕೇವಲ 'ಸಾಂದರ್ಭಿಕ' ಎಂದಿರುವುದರಿಂದ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಟುವಾಗಿ ಆಕ್ಷೇಪಣೆ ಮಾಡಿದೆ.

ಎನ್‌ಸಿಎಲ್‌ಟಿ ವಾದವೇನು

ಎಲ್‌ಐಸಿಯ ಆಕ್ಷೇಪಣೆಗಳನ್ನು ವಜಾ ಮಾಡಿದ NCLT, ತನ್ನ ತೀರ್ಪಿನಲ್ಲಿ ಪ್ರಮುಖ ಮೂರು ಅಂಶಗಳನ್ನು ಪ್ರಸ್ತಾಪಿಸಿದೆ. ರೆಸಲ್ಯೂಶನ್ ಪ್ರೊಫೆಷನಲ್ ನಡೆಸಿದ ಮೌಲ್ಯಮಾಪನದ ಪ್ರಕಾರ, ಸುಭಾಷ್ ಚಂದ್ರ ಅವರ ವೈಯಕ್ತಿಕ ಆಸ್ತಿಯ ಮೌಲ್ಯವು ಪ್ರಸ್ತಾಪಿಸಲಾದ 6.5 ಕೋಟಿ ರೂಪಾಯಿಗಿಂತ ಅತ್ಯಂತ ಕಡಿಮೆಯಿದೆ. ಒಂದು ವೇಳೆ ಈ ಯೋಜನೆಯನ್ನು ತಿರಸ್ಕರಿಸಿದರೆ ಸುಭಾಷ್ ಚಂದ್ರ ಅವರು ಸಂಪೂರ್ಣವಾಗಿ ದಿವಾಳಿಯಾಗಲಿದ್ದಾರೆ (Bankruptcy). ಇದರಿಂದ ಸಾಲದಾತರಿಗೆ ನಯಾಪೈಸೆ ಸಿಗುವ ಸಾಧ್ಯತೆಯೂ ಕ್ಷೀಣಿಸುತ್ತದೆ. ದಿವಾಳಿತನ ಪ್ರಕ್ರಿಯೆಯು ಸುಸೂತ್ರವಾಗಿ ಮುಗಿದು, ಸುಭಾಷ್ ಚಂದ್ರ ಅವರು ಮತ್ತೆ ಆರ್ಥಿಕವಾಗಿ ಚೇತರಿಸಿಕೊಂಡರೆ, ಭವಿಷ್ಯದಲ್ಲಿ ಸಾಲ ನೀಡಿದ ಸಂಸ್ಥೆಗಳು ಮೂಲ ಸಾಲಗಾರರಿಂದ ತಮ್ಮ ಹಣವನ್ನು ವಸೂಲಿ ಮಾಡುವ ಉತ್ತಮ ಅವಕಾಶವನ್ನು ಹೊಂದಬಹುದು.

ಎನ್‌ಸಿಎಲ್‌ಟಿ ಪಾತ್ರ ಸ್ಪಷ್ಟಪಡಿಸಿದ ಮಂಡಳಿ

ಸಾಲದಾತರ 'ವಾಣಿಜ್ಯಿಕ ನಿರ್ಧಾರ'ದಲ್ಲಿ (Commercial Judgment) ಮೂಗು ತೂರಿಸುವುದು ಅಥವಾ ಇತ್ಯರ್ಥದ ಮೊತ್ತ ಸೂಕ್ತವಾಗಿದೆಯೇ ಇಲ್ಲವೇ ಎಂದು ತೀರ್ಮಾನಿಸುವುದು ಮಂಡಳಿಯ ಕೆಲಸವಲ್ಲ ಎಂದು ಎನ್‌ಸಿಎಲ್‌ಟಿ ಸ್ಪಷ್ಟಪಡಿಸಿದೆ. ತಾನು ಕೇವಲ ಕಾನೂನಿನ ಚೌಕಟ್ಟಿನೊಳಗೆ ಮೇಲ್ವಿಚಾರಣೆ ಮತ್ತು ಸರಿಪಡಿಸುವಿಕೆಯ ನ್ಯಾಯಾಂಗ ಪಾತ್ರವನ್ನು ಮಾತ್ರ ವಹಿಸುವುದಾಗಿ ಹೇಳಿದೆ.

ಅನುಮೋದಿತ ಮರುಪಾವತಿ ಯೋಜನೆಯು ಪರ ಅಥವಾ ವಿರುದ್ಧವಾಗಿ ಮತ ಚಲಾಯಿಸಿದ ಎಲ್ಲಾ ಸಾಲದಾತರಿಗೂ ಕಡ್ಡಾಯವಾಗಿ ಅನ್ವಯಿಸುತ್ತದೆ. ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಸಾಲದಾತರು ಹೊರಗಡೆ ಪ್ರತ್ಯೇಕವಾಗಿ ತಮ್ಮ ಪೂರ್ಣ ಸಾಲ ವಸೂಲಾತಿಗೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿಲ್ಲ, ಹಾಗೆ ಮಾಡಿದರೆ ಅದು ಕಾನೂನಿನ ಮೂಲ ಆಶಯಕ್ಕೆ ಧಕ್ಕೆ ತರುತ್ತದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಮುಂದಿನ ಹಂತವಾಗಿ, ಮಂಡಳಿಯ ಆದೇಶದಂತೆ ಅಂತಿಮ ಸಾಲದಾತರ ಪಟ್ಟಿಯನ್ನು ಪರಿಷ್ಕರಿಸಿ, ಅನುಮೋದಿತ ಮೊತ್ತವನ್ನು ಮರುಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ತದನಂತರ ಕಂಪನಿಗಳ ಕಾಯ್ದೆ 2013 ರ ಸೆಕ್ಷನ್ 419(5) ರ ಪ್ರಕಾರ ಬಹುಮತದ ತೀರ್ಪಿನ ಅಡಿಯಲ್ಲಿ ಪ್ರಮುಖ ವಿಭಾಗೀಯ ಪೀಠಕ್ಕೆ ಔಪಚಾರಿಕ ಆದೇಶಕ್ಕಾಗಿ ಸಲ್ಲಿಸಲಾಗುವುದು.

ಸುಭಾಷ್ ಚಂದ್ರಗೆ ವಿಜಯ್ ಮಲ್ಯ ವ್ಯಂಗ್ಯದ ಅಭಿನಂದನೆ

ಈ ಬೆಳವಣಿಗೆಯ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಉದ್ಯಮಿ ವಿಜಯ್ ಮಲ್ಯ, ಸುಭಾಷ್ ಚಂದ್ರ ಅವರಿಗೆ ಅಭಿನಂದನೆ ಸಲ್ಲಿಸುವ ನೆಪದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ವ್ಯಂಗ್ಯವಾಡಿದ್ದಾರೆ. 'ಈ ವರದಿ ನಿಜವಾಗಿದ್ದರೆ ಸುಭಾಷ್ ಚಂದ್ರ ಅವರಿಗೆ ನನ್ನ ಅಭಿನಂದನೆಗಳು. ನನ್ನ ವಿಷಯದಲ್ಲಿ 6,203 ಕೋಟಿ ರೂಪಾಯಿ ಸಾಲದ ತೀರ್ಪಿನ ವಿರುದ್ಧ ಬ್ಯಾಂಕ್‌ಗಳು ಬರೋಬ್ಬರಿ 14,100 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿವೆ. ಆದರೆ ಭಾರತದಲ್ಲಿ ಇತರ ಹಲವು ಪ್ರಭಾವಿ ಸಾಲಗಾರರು ತಮ್ಮ ಒಟ್ಟು ಸಾಲದ ಕೇವಲ ಅಲ್ಪ ಭಾಗವನ್ನು ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುತ್ತಿದ್ದಾರೆ," ಎಂದು ಮಲ್ಯ ಬೇಸರ ತೋಡಿಕೊಂಡಿದ್ದಾರೆ.

ಇದನ್ನ ಹೇರ್‌ಕಟ್‌ ಅಲ್ಲ, ಬೋಳಿಸೋದು ಅಂತಾರೆ ಎಂದ ಜೈರಾಮ್‌ ರಮೇಶ್‌

ಎನ್‌ಸಿಎಲ್‌ಟಿ ನಿರ್ಧಾರದ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಕಟುವಾಗಿ ಟೀಕೆ ಮಾಡಿದ್ದಾರೆ.'ಹಣಕಾಸು ವಲಯದ ಭಾಷೆಯಲ್ಲಿ ಸಾಲದಾತರು ತಮಗೆ ಬರಬೇಕಾದ ಹಣಕ್ಕಿಂತ ಕಡಿಮೆ ಪಡೆದುಕೊಂಡಾಗ ಅದನ್ನು 'ಹೇರ್‌ಕಟ್' (Haircut) ಎಂದು ಕರೆಯಲಾಗುತ್ತದೆ. ಆದರೆ, 22,000 ಕೋಟಿ ಸಾಲಕ್ಕೆ ಬರಿ 6.5 ಕೋಟಿ ಕೊಟ್ಟು ಮುಗಿಸಿರುವುದನ್ನು ನೋಡಿದರೆ ಇದು 'ಹೇರ್‌ಕಟ್' ಅಲ್ಲ, ಬದಲಿಗೆ ಸಾಲದಾತರನ್ನೇ ಬೋಳಿಸಿದ ಹಾಗೆ ಕಾಣುತ್ತದೆ ಎಂದು ಎಕ್ಸ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಈ ನಿರ್ಧಾರವು 2016 ರ ದಿವಾಳಿತನ ಮತ್ತು ದಿವಾಳಿತನ ಸಂಹಿತೆಯ ಮೂಲ ಆಶಯವನ್ನೇ ಪ್ರಶ್ನಿಸುವಂತೆ ಮಾಡಿದೆ ಎಂದು ಅವರು ಟೀಕಿಸಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

₹1.8 ಕೋಟಿಯ ಮನೆ ಮಾರಿ ಬೈಕ್ ಖರೀದಿಸಿದ ಸ್ಟಾರ್ಟ್‌ಅಪ್ ಉದ್ಯಮಿ! ಕಾರಣ ಕೇಳಿದರೆ ನೀವು ಶಾಕ್ ಆಗ್ತೀರಾ!
ಕಸದಿಂದ ರಸ : ಬೇಡಿಕೆ ಹೆಚ್ತಿರುವ ಈ ಬ್ಯುಸಿನೆಸ್‌ ಶುರು ಮಾಡಿ ಲಕ್ಷಾಂತರ ರೂ. ಗಳಿಸಿ