"ಈ ದೀಪಾವಳಿಯಲ್ಲಿ #VocalForLocal ಗಾಗಿ ಪ್ರಧಾನಮಂತ್ರಿ ಮೋದಿ ಕರೆ ನೀಡಿದ್ದರು. ಈ ಹಿನ್ನೆಲೆ ದೇಶದಲ್ಲಿ ಸ್ಥಳೀಯ ಉತ್ಪನ್ನಗಳಿಗಾಗಿ ಡಿಮ್ಯಾಂಡ್ ಹೆಚ್ಚಾಗುತ್ತಿದ್ದು, ಇದರಿಂದ ಚೀನಾಗೆ ಈ ದೀಪಾವಳಿ ವ್ಯವಹಾರದಲ್ಲಿ 1 ಲಕ್ಷ ಕೋಟಿ ರೂ. ವ್ಯವಹಾರ ನಷ್ಟವಾಗುತ್ತಿದೆ ಎಂದು ಅಂದಾಜಿಸಲಾಗಿದೆ.
ನವದೆಹಲಿ (ನವೆಂಬರ್ 10, 2023): ದೀಪಾವಳಿ ಹಬ್ಬದ ಸಂಭ್ರಮ ಇಂದಿನಿಂದಲೇ ಪ್ರಾರಂಭವಾಗಿದೆ. ಇಂದು ಧನ್ತೇರಸ್ ಅಂದರೆ ಚಿನ್ನ, ಬೆಳ್ಳಿ ಸೇರಿದಂತೆ ಲೋಹ ಖರೀದಿಸಲು ಮಂಗಳಕರವಾದ ದಿನ ಎನ್ನಲಾಗುತ್ತದೆ. ಇನ್ನು, ದೀಪಾವಳಿ ಹಬ್ಬದ ಸಮಯದಲ್ಲಿ ಹಬ್ಬದ ಸಡಗರ ಮಾತ್ರವಲ್ಲ ವ್ಯಾಪಾರಿಗಳಿಗೂ ಭರ್ಜರಿ ಆದಾಯ ಲಭಿಸುತ್ತದೆ.
ದೇಶಾದ್ಯಂತ ಧನ್ತೇರಸ್ ಹಬ್ಬದ ದಿನ ವ್ಯಾಪಾರಿಗಳಿಗೆ ಅಂದಾಜು 50 ಸಾವಿರ ಕೋಟಿ ರೂ. ವ್ಯವಹಾರವಾಗುತ್ತದೆ ಎಂದು ಅಂದಾಜಿಸಲಾಗಿದೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾರ್ಟಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಅವರು ಈ ಭವಿಷ್ಯ ನುಡಿದಿದ್ದಾರೆ.
ಇದನ್ನು ಓದಿ: ದೀಪಾವಳಿಗೆ ಚಿನ್ನ ತಗೊಳ್ಳೋ ಪ್ಲ್ಯಾನ್ ಇದ್ಯಾ? ಹಾಗಾದ್ರೆ ಇಲ್ಲಿದೆ ನೋಡಿ ಮಂಗಳಕರ ಸಮಯ!
"ಈ ದೀಪಾವಳಿಯಲ್ಲಿ #VocalForLocal ಗಾಗಿ ಪ್ರಧಾನಮಂತ್ರಿ ಮೋದಿ ಕರೆಯನ್ನು ನಾವು ಪೂರ್ಣ ಹೃದಯದಿಂದ ಬೆಂಬಲಿಸುತ್ತೇವೆ, ಜೊತೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ #NaariSeKharidaari ಮನವಿ ಮಾಡಿದ್ದರು. ಈ ಹಿನ್ನೆಲೆ ನಾವು ಸಣ್ಣ ದೀಪಗಳನ್ನು ತಯಾರಿಸುವವರಿಂದ ಹಿಡಿದು ಅಂಗಡಿಗಳನ್ನು ನಿರ್ವಹಿಸುವವರೆಗೆ ಸೇರಿ ಎಲ್ಲಾ ಮಹಿಳಾ ಉದ್ಯಮಿಗಳಿಗೆ ರಾಷ್ಟ್ರದ ಮಾರುಕಟ್ಟೆಯ ಬಾಗಿಲುಗಳನ್ನು ತೆರೆಯುತ್ತಿದ್ದೇವೆ. ಮಹಿಳಾ ಉದ್ಯಮಿಗಳಿಂದ ಶಾಪಿಂಗ್ ಮಾಡಲು ಮತ್ತು ಅವರ ಸಂಸ್ಥೆಗಳಿಗೆ ಭೇಟಿ ನೀಡಲು ನಾವು ನಿಮ್ಮನ್ನು ಮನವಿ ಮಾಡುತ್ತೇವೆ ಎಂದು ಇತ್ತೀಚೆಗೆ ಪ್ರವೀಣ್ ಖಂಡೇಲ್ವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
ಒಟ್ಟಾರೆ, ಭಾರತದಲ್ಲಿ ತಯಾರಾದ ಉತ್ಪನ್ನಗಳಿಗೆ ಗ್ರಾಹಕರು ಪ್ರಬಲವಾದ ಆದ್ಯತೆಯನ್ನು ಪ್ರದರ್ಸಿದ್ದು,, 'ವೋಕಲ್ ಫಾರ್ ಲೋಕಲ್' ಆಂದೋಲನಕ್ಕೆ ಹೆಚ್ಚು ಬೆಂಬಲ ವ್ಯಕ್ತವಾಗಿದೆ. ಇದರಿಂದ ದೀಪಾವಳಿ ಸಂಬಂಧಿತ ವ್ಯವಹಾರದಲ್ಲಿ ಚೀನಾ ಸುಮಾರು 1 ಲಕ್ಷ ಕೋಟಿ ರೂಪಾಯಿಗಳಷ್ಟು ಗಣನೀಯ ನಷ್ಟ ಅನುಭವಿಸುವ ನಿರೀಕ್ಷೆಯಿದೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.
ಇದನ್ನೂ ಓದಿ: Mann Ki Baat: ‘ವೋಕಲ್ ಫಾರ್ ಲೋಕಲ್’ಗೆ ಮೋದಿ ಒತ್ತು; ಯುಪಿಐ ಬಳಸಿ ಎಂದೂ ಪ್ರಧಾನಿ ಕರೆ
ಧನ್ತೇರಸ್ ಹಬ್ಬದ ದಿನ ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ಪಾತ್ರೆ, ಅಡುಗೆ ಸಾಮಾನು, ವಾಹನ, ಬಟ್ಟೆ, ಎಲೆಕ್ಟ್ರಾನಿಕ್ಸ್ ಮತ್ತು ಹೆಚ್ಚಿನವುಗಳು ದೃಢವಾದ ಮಾರಾಟಕ್ಕೆ ಸಾಕ್ಷಿಯಾಗುತ್ತಿವೆ. ಗಮನಾರ್ಹವಾಗಿ, ಈ ಸಂದರ್ಭದಲ್ಲಿ ಪೊರಕೆ ಖರೀದಿಯನ್ನು ವಿಶೇಷವಾಗಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ವರ್ತಕರು ಬೇಡಿಕೆಯ ಹೆಚ್ಚಳವನ್ನು ನಿರೀಕ್ಷಿಸುತ್ತಿರುವುದರಿಂದ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳಲ್ಲಿ ಹೊಸ ವಿನ್ಯಾಸಗಳು ಸೇರಿದಂತೆ ಅಂಗಡಿಗಳಲ್ಲಿ ಹೆಚ್ಚಿನ ದಾಸ್ತಾನು ನಿರೀಕ್ಷಿಸಲಾಗಿದೆ. ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು, ನೋಟುಗಳು ಮತ್ತು ವಿಗ್ರಹಗಳ ಗಣನೀಯ ಖರೀದಿ ಜೊತೆಗೆ ಕೃತಕ ಆಭರಣಗಳು ಸಹ ಈ ವರ್ಷ ಗಮನಾರ್ಹ ಆಸಕ್ತಿ ಕಂಡಿವೆ.
ಇನ್ನು, ಈ ವೋಕಲ್ ಫಾರ್ ಲೋಕಲ್ ಅನ್ನೋದು ದೀಪಾವಳಿ ಹಬ್ಬಕ್ಕೆ ಮಾತ್ರ ಸೀಮಿತವಾಗಿಲ್ಲ. ಸೆಮಿಕಂಡಕ್ಟರ್ ಚಿಪ್‌ಗಳಿಂದ ಸರಕುಗಳವರೆಗೆ, ಭಾರತವು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಿದ್ದು, ತನ್ನದೇ ಆದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಈ ಹಿನ್ನೆಲೆ ಭಾರತ ಆತ್ಮನಿರ್ಭರ ದೇಶ ಎನಿಸಿಕೊಂಡಿದೆ.