ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಪಾವತಿಸಲು ಈ ತನಕ ಯುಪಿಐ ವಹಿವಾಟಿನ ದಿನದ ಮಿತಿ 1ಲಕ್ಷ ರೂ. ಇತ್ತು.ಈಗ ಇದನ್ನು 5ಲಕ್ಷ ರೂ.ಗೆ ಏರಿಕೆ ಮಾಡಿರೋದಾಗಿ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ.
ಮುಂಬೈ (ಡಿ.8): ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಪಾವತಿಸಲು ಯುಪಿಐ ವಹಿವಾಟಿನ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಈಗಿರುವ 1ಲಕ್ಷ ರೂ.ನಿಂದ 5ಲಕ್ಷ ರೂ.ಗೆ ಏರಿಕೆ ಮಾಡಿದೆ. ಇಂದು (ಶುಕ್ರವಾರ) ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸುವ ಸಂದರ್ಭದಲ್ಲಿಆರ್ಬಿ ಐ ಗವರ್ನರ್ ಶಕ್ತಿಕಾಂತ ದಾಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹೆಚ್ಚಳದಿಂದ ಈಗ ಆಸ್ಪತ್ರೆ ಹಾಗೂ ಶೈಕ್ಷಣಿಕ ವೆಚ್ಚಗಳಿಗೆ ಯುಪಿಐ ಮೂಲಕ ಒಂದು ದಿನಕ್ಕೆ 5ಲಕ್ಷ ರೂ. ತನಕ ಪಾವತಿಸಬಹುದು. ಈ ಹಿಂದೆ ಒಂದು ದಿನಕ್ಕೆ1ಲಕ್ಷ ರೂ. ತನಕ ಮಾತ್ರ ಯುಪಿಐ ಪಾವತಿಗೆ ಅವಕಾಶವಿತ್ತು. 'ಗ್ರಾಹಕರಿಗೆ ನೆರವಾಗುವುದು ಇದರ ಉದ್ದೇಶವಾಗಿದೆ. ಶಿಕ್ಷಣ ಮತ್ತು ಆರೋಗ್ಯ ಉದ್ದೇಶಗಳಿಗೆ ಹೆಚ್ಚಿನ ಮೊತ್ತವನ್ನು ಗ್ರಾಹಕರು ಇನ್ನು ಮುಂದೆ ಯುಪಿಐ ಮೂಲಕ ಪಾವತಿ ಮಾಡಲು ಅನುಕೂಲವಾಗಲಿದೆ' ಎಂದು ದಾಸ್ ತಿಳಿಸಿದ್ದಾರೆ. ಈ ಸೌಲಭ್ಯದಿಂದ ಆಸ್ಪತ್ರೆ ಹಾಗೂ ಶೈಕ್ಷಣಿಕ ವೆಚ್ಚಗಳ ದೊಡ್ಡ ಮೊತ್ತವನ್ನು ಯುಪಿಐ ಮೂಲಕವೇ ಪಾವತಿ ಮಾಡಲು ಅವಕಾಶ ಸಿಕ್ಕಂತಾಗಿದೆ.
ವಿವಿಧ ವಲಯಗಳಿಗೆ ಸಂಬಂಧಿಸಿದ ಯುಪಿಐ ವಹಿವಾಟು ಮಿತಿಯನ್ನು ಆಗಾಗ ಪರಿಶೀಲಿಸಿ ಪರಿಷ್ಕರಿಸಲಾಗುತ್ತದೆ. ಅದರಂತೆ ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಪಾವತಿಸುವ ಯುಪಿಐ ವಹಿವಾಟಿನ ಮಿತಿಯನ್ನು ದಿನಕ್ಕೆ 1ಲಕ್ಷ ರೂ.ನಿಂದ 5ಲಕ್ಷ ರೂ.ಗೆ ಹೆಚ್ಚಿಸುವ ಪ್ರಸ್ತಾವನೆಗೆ ಸಭೆ ಅಂಗೀಕಾರ ನೀಡಿದೆ. ಇದು ಗ್ರಾಹಕರಿಗೆ ನೆರವು ನೀಡುವ ನಿರ್ಧಾರವಾಗಿದೆ. ಅಲ್ಲದೆ, ಶಿಕ್ಷಣ ಮತ್ತು ಆರೋಗ್ಯ ಸಂಬಂಧಿ ಕಾರ್ಯಗಳಿಗೆ ಹೆಚ್ಚಿನ ಮೊತ್ತವನ್ನು ಯುಪಿಐ ಮೂಲಕ ಪಾವತಿ ಮಾಡಲು ಗ್ರಾಹಕರಿಗೆ ಇದು ಅನುಕೂಲ ಕಲ್ಪಿಸಲಿದೆ' ಎಂದು ಶಕ್ತಿಕಾಂತ ದಾಸ್ ಅಭಿಪ್ರಾಯಪಟ್ಟಿದ್ದಾರೆ.
Hello UPI ಇನ್ಮುಂದೆ ಮಾತಿನ ಮೂಲಕವೇ ಯುಪಿಐ ಪಾವತಿ ಮಾಡ್ಬಹುದು, ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ
ರಿಕರಿಂಗ್ ವಹಿವಾಟುಗಳ ಇ-ಮ್ಯಾಂಡೇಟ್ ಮಿತಿ ಹೆಚ್ಚಳ
ಮ್ಯೂಚುವಲ್ ಫಂಡ್ ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿನ ಹೂಡಿಕೆ, ವಿಮಾ ಪ್ರೀಮಿಯಂ, ಕ್ರೆಡಿಟ್ ಕಾರ್ಡ್ ಮರುಪಾವತಿ ಮುಂತಾದ ರಿಕರಂಗ್ ಅಂದರೆ ಮರುಕಳಿಸುವ ಪಾವತಿಗಳ ಇ-ಮ್ಯಾಂಡೇಟ್ ಮಿತಿಯನ್ನು 1ಲಕ್ಷ ರೂ.ಗೆ ಏರಿಸುವ ನಿರ್ಧಾರವನ್ನು ಆರ್ ಬಿಐ ಎಂಪಿಸಿ ಸಭೆಯಲ್ಲಿ ಕೈಗೊಳ್ಳಲಾಗಿದೆ. ಪ್ರಸ್ತುತ 15,000 ರೂಪಾಯಿಗಿಂತ ಹೆಚ್ಚಿನ ಮರುಕಳಿಸುವ ವಹಿವಾಟುಗಳಿಗೆ ದೃಢೀಕರಣದ ಹೆಚ್ಚುವರಿ ಅಂಶ (ಎಎಫ್‌ಎ) ಅಗತ್ಯವಿದೆ. ಆದರೆ, ಇನ್ನು ಮುಂದೆ 1ಲಕ್ಷ ರೂ. ತನಕದ ಪಾವತಿಗೆ ಎಎಫ್ ಎ ಅಗತ್ಯವಿಲ್ಲ.
Hello UPI ಪರಿಚಯಿಸಿದ್ದ ಆರ್ ಬಿಐ
ಆಗಸ್ಟ್ ನಲ್ಲಿ ಆರ್ ಬಿಐ ಹಣಕಾಸು ನೀತಿ ಘೋಷಿಸುವ ಸಂದರ್ಭದಲ್ಲಿ ಆರ್ ಬಿಐ ಗವರ್ನರ್ ಧ್ವನಿ ಆಧಾರಿತ 'ಹಲೋ ಯುಪಿಐ' ಪರಿಚಿಸುವ ಪ್ರಸ್ತಾವನೆ ಬಗ್ಗೆ ಮಾಹಿತಿ ನೀಡಿದ್ದರು. ಯುಪಿಐಯಲ್ಲಿ ಇದರ ಅಳವಡಿಕೆಯಿಂದ ಧ್ವನಿ ಬಳಸಿ ಕಮಾಂಡ್ ಗಳನ್ನು ನೀಡುವ ಮೂಲಕ ಹಣವನ್ನು ಶೀಘ್ರದಲ್ಲಿ ವರ್ಗಾಯಿಸಬಹುದಾಗಿದೆ. ಈ ಸೌಲಭ್ಯ ಮೊಬೈಲ್ ಸೇರಿದಂತೆ ಡಿಜಿಟಲ್ ಬಳಕೆ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿಲ್ಲದವರಿಗೆ ಹಾಗೂ ಹಿರಿಯ ನಾಗರಿಕರಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗಲಿದ. ಈ ಫೀಚರ್ ಸ್ಮಾರ್ಟ್ ಫೋನ್ ಹಾಗೂ ಫೋನ್ ಆಧಾರಿತ ಯುಪಿಐ ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಿದ್ದು, ಪ್ರಾರಂಭದಲ್ಲಿ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಲಭ್ಯವಾಗಲಿದೆ. ಆ ಬಳಿಕ ಇತರ ಭಾಷೆಗಳಲ್ಲಿ ಈ ಸೌಲಭ್ಯ ಸಿಗಲಿದೆ ಎಂದು ಆರ್ ಬಿಐ ಮಾಹಿತಿ ನೀಡಿತ್ತು.
ಇಂಟರ್‌ನೆಟ್ ಇಲ್ಲದೆಯೂ ಸಲೀಸಾಗಿ ಯುಪಿಐ ಬಳಕೆ ಮಾಡಿ: ಆರ್‌ಬಿಐ ಪರಿಚಯಿಸಿದ ಈ ಹೊಸ ವೈಶಿಷ್ಟ್ಯ ಹೀಗಿದೆ ನೋಡಿ..
ಯುಪಿಐ ಲೈಟ್ ವಹಿವಾಟು ಮಿತಿ ಹೆಚ್ಚಳ
ಯುಪಿಐ ಲೈಟ್ ವಹಿವಾಟು ಮಿತಿಯನ್ನು ಆರ್ ಬಿಐ 200ರೂ.ನಿಂದ 500ರೂ.ಗೆ ಹೆಚ್ಚಳ ಮಾಡಿದೆ. ಯುಪಿಐ ಲೈಟ್ ಪೇಟಿಎಂ, ಭೀಮ್ ಆಪ್, ಗೂಗಲ್ ಪೇ ಸೇರಿದಂತೆ ವಿವಿಧ ಪಾವತಿ ಆಪ್ ಗಳಲ್ಲಿ ಲಭ್ಯವಿದೆ.