ಗೂಗಲ್ ಪೇ, ಪೇಟಿಎಂ ವಹಿವಾಟುಗಳಿಗೆ ಕಡಿವಾಣ? ಶೀಘ್ರದಲ್ಲೇ ಯುಪಿಐ ಪಾವತಿ ಆ್ಯಪ್ ಗಳಿಗೆ ಮಿತಿ ಹೇರಿಕೆ

By Suvarna News  |  First Published Nov 24, 2022, 3:11 PM IST

ಇಂದು ಡಿಜಿಟಲ್ ಪಾವತಿ ಭಾರತದಲ್ಲಿ ಜನಪ್ರಿಯತೆ ಗಳಿಸಿದೆ. ಪೇಟಿಎಂ, ಗೂಗಲ್ ಪೇ ಹಾಗೂ ಫೋನ್ ಪೇಯಂತಹ ಆ್ಯಪ್ ಗಳನ್ನು ಜನ ನೆಚ್ಚಿಕೊಂಡಿದ್ದಾರೆ. ಇಲ್ಲಿಯ ತನಕ ಈ ಪಾವತಿ ಆ್ಯಪ್ಗಳ ವಹಿವಾಟಿನ ಮೇಲೆ ಯಾವುದೇ ಮಿತಿ ಇರಲಿಲ್ಲ. ಆದರೆ, ಶೀಘ್ರದಲ್ಲೇ ವಹಿವಾಟಿನ ಮೇಲೆ ಮಿತಿ ವಿಧಿಸಲು ಚಿಂತನೆ ನಡೆಯುತ್ತಿದೆ. 


ನವದೆಹಲಿ (ನ.24): ಫೋನ್ ಪೇ, ಗೂಗಲ್ ಪೇ , ಪೇಟಿಎಂ ಮುಂತಾದ  ಯುಪಿಐ ಪಾವತಿ ಆ್ಯಪ್  ಗಳ ವಹಿವಾಟುಗಳಿಗೆ ಮಿತಿ ವಿಧಿಸುವ ಕುರಿತು ಭಾರತದ ರಾಷ್ಟ್ರೀಯ ಪಾವತಿಗಳ ನಿಗಮವು (ಎನ್ ಪಿಸಿಐ) ಭಾರತೀಯ ರಿಸರ್ವ್ ಬ್ಯಾಂಕ್ ಜೊತೆಗೆ ಸಮಾಲೋಚನೆ ನಡೆಸಿದೆ. ಪ್ರಸ್ತುತ ಡಿಜಿಟಲ್ ಪಾವತಿ ಆ್ಯಪ್  ಗಳ ವಹಿವಾಟುಗಳಿಗೆ ಯಾವುದೇ ಮಿತಿಯಿಲ್ಲ. ವರದಿಗಳ ಪ್ರಕಾರ ಥರ್ಡ್ ಪಾರ್ಟಿ ಆ್ಯಪ್ ಪೂರೈಕೆದಾರರಿಗೆ (ಟಿಪಿಎಪಿ) ಶೇ.30ರಷ್ಟು ವಹಿವಾಟಿನ ಮಿತಿ ವಿಧಿಸುವಂತೆ ಎನ್ ಪಿಸಿಐ ನವೆಂಬರ್ ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಡಿಜಿಟಲ್ ಪಾವತಿ  ಆ್ಯಪ್ ವಲಯದಲ್ಲಿ ಗೂಗಲ್ ಪೇ ಹಾಗೂ ಫೋನ್ ಪೇ ಶೇ.80ರಷ್ಟು ಮಾರುಕಟ್ಟೆ ಪಾಲು ಹೊಂದಿವೆ. ಹೀಗಾಗಿ ಈ ಕ್ಷೇತ್ರದಲ್ಲಿ ಮುಂದೊಂದು ದಿನ ಏಕಸ್ವಾಮ್ಯ ಸೃಷ್ಟಿಯಾಗಬಹುದು ಎಂಬ ಆತಂಕ ಕೂಡ ಇದೆ ಎನ್ನಲಾಗಿದೆ. ಇಲ್ಲಿಯ ತನಕ ಡಿಜಿಟಲ್ ಪಾವತಿ  ಆ್ಯಪ್ ಬಳಸಿ ಎಲ್ಲ ಕಡೆ ಪಾವತಿ ಮಾಡಿರೋರಿಗೆ ಮಿತಿ ಹೆಚ್ಚಳದಿಂದ ಮುಂದಿನ ದಿನ ಕಿರಿಕಿರಿಯುಂಟಾಗುವ ಸಾಧ್ಯತೆಯಂತೂ ಇದೆ. ನಗದುರಹಿತ ವ್ಯವಹಾರಕ್ಕೆ ಹೊಂದಿಕೊಂಡವರಿಗೆ ಈ ಮಿತಿ ತೊಂದರೆಯುಂಟು ಮಾಡುವ ಸಾಧ್ಯತೆಯಿದೆ.

ಡಿಜಿಟಲ್ ಪಾವತಿ ಆ್ಯಪ್  ಗಳ ವಹಿವಾಟುಗಳಿಗೆ ಗರಿಷ್ಠ ಮಿತಿ ವಿಧಿಸುವ ಸಂಬಂಧ ನಡೆದ ಸಭೆಯಲ್ಲಿ ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ (NPCI) ಅಧಿಕಾರಿಗಳ ಜೊತೆಗೆ ಹಣಕಾಸು ಸಚಿವಾಲಯ ಹಾಗೂ ಆರ್ ಬಿಐ ಹಿರಿಯ ಅಧಿಕಾರಿಗಳು ಕೂಡ ಭಾಗವಹಿಸಿದ್ದರು. ಆದರೆ, ಮಿತಿ ವಿಧಿಸುವ ಕುರಿತು ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. 

Tap to resize

Latest Videos

ಉದ್ಯೋಗ ಕಡಿತದ ಈ ಸಮಯದಲ್ಲಿ ನಿಮ್ಮ ಬಜೆಟ್ ಹೀಗಿರಲಿ!

2020ರಲ್ಲಿ ಡಿಜಿಟಲ್ ಪಾವತಿ ಆ್ಯಪ್  ಗಳ ವಹಿವಾಟುಗಳಿಗೆ  ಶೇ.30ರ ಮಿತಿ ವಿಧಿಸುವ ಕುರಿತು ಎನ್ ಪಿಸಿಐ ಪ್ರಸ್ತಾವನೆ ಸಲ್ಲಿಸಿತ್ತು. 2021ರ ಜನವರಿ 1ರಿಂದ ಇದನ್ನು ಜಾರಿಗೊಳಿಸುವ ಬಗ್ಗೆ ಯೋಚಿಸಿತ್ತು. ಆದರೆ, ಗೂಗಲ್ ಪೇ ಹಾಗೂ ಫೋನ್ ಪೇ ಸೇರಿದಂತೆ ಪ್ರಸ್ತುತವಿರುವ ಡಿಜಿಟಲ್ ಪಾವತಿ ಆ್ಯಪ್ ಗಳಿಗೆ ಮತ್ತೆ ಎರಡು ವರ್ಷಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು. ಯುಪಿಐ ಪಾವತಿ ವ್ಯವಸ್ಥೆಗಳ ಮೇಲಿನ ಶುಲ್ಕಕ್ಕೆ ಸಂಬಂಧಿಸಿ ಆರ್ ಬಿಐ ಈ ವರ್ಷದ ಪ್ರಾರಂಭದಲ್ಲಿ ಸಮಾಲೋಚನ ವರದಿಯನ್ನು ಬಿಡುಗಡೆ ಮಾಡಿತ್ತು. ಆದರೆ, ಈ ವರದಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಯುಪಿಐ ಪಾವತಿ ವ್ಯವಸ್ಥೆ ಜನರಿಗೆ ಅನುಕೂಲರವಾಗಿದ್ದು, ಅದರ ಮೇಲೆ ಶುಲ್ಕ ವಿಧಿಸುವ ಯಾವುದೇ ಯೋಚನೆಗಳಿಲ್ಲ ಎಂದು ಕೇಂದ್ರ ಸರ್ಕಾರ ಆಗ ತಿಳಿಸಿತ್ತು.

ಯುಪಿಐ ಪಾವತಿ ಆ್ಯಪ್  ಗಳ ವಹಿವಾಟುಗಳಿಗೆ ಮಿತಿ ಹೇರುವ ಚರ್ಚೆ ಈಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಡಿಸೆಂಬರ್ 31ರ ಬಳಿಕ ಗೂಗಲ್ ಪೇ, ಪೇಟಿಎಂ ಮುಂತಾದ ಡಿಜಿಟಲ್ ಆ್ಯಪ್  ಗಳ ವಹಿವಾಟುಗಳ ಮೇಲೆ ಮಿತಿ ಬೀಳುವ ಸಾಧ್ಯತೆಯನ್ನು ಸದ್ಯ ತಳ್ಳಿ ಹಾಕುವಂತಿಲ್ಲ ಕೂಡ. ಪೇಮೆಂಟ್​ ಗೇಟ್​ವೇ ಉದ್ಯಮದ ಪ್ರತಿನಿಧಿಗಳು ಇತ್ತೀಚೆಗೆ ನಡೆದ ಸಭೆಯಲ್ಲಿ ಪಾಲ್ಗೊಂಡಿರೋದ್ರಿಂದ ಈ ತಿಂಗಳ ಅಂತ್ಯದೊಳಗೆ ಎನ್ ಪಿಸಿಐ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. 

ಯುಪಿಐ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಆದಾಯ ತೆರಿಗೆ ಪಾವತಿಸೋದು ಹೇಗೆ? ಇಲ್ಲಿದೆ ಮಾಹಿತಿ

ಭಾರತದಲ್ಲಿ ನಗದು ಚಲಾವಣೆಯಿಂದ ಡಿಜಿಟಲ್ ಪೇಮೆಂಟ್ ವರ್ಗಾವಣೆ ಪ್ರಮುಖ ಘಟ್ಟವಾಗಿದೆ. ಯುಪಿಐ, ವ್ಯಾಲೆಟ್, ಪಿಪಿಐ, ಇಂಟರ್ ಆಪರೇಬಲ್ ಪಾವತಿಗಳಿಂದ ಸುಲಭವಾಗಿ ಹಣ ಟ್ರಾನ್ಸಾಕ್ಷನ್ ಮಾಡಬಹುದು. ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಮಾತ್ರ ಸೀಮಿತವಾಗಿದ್ದ ಈ ಟ್ರಾನ್ಸಾಕ್ಷನ್ ಇದೀಗ ಯಾರೂ ಬೇಕಾದರು ಸುಲಭವಾಗಿ ಯುಪಿಐ ಟ್ರಾನ್ಸಾಕ್ಷನ್ ಮಾಡಬಹುದಾಗಿದೆ. ಡಿಜಿಟಲ್ ಪಾವತಿ ಆ್ಯಪ್  ಗಳು ಭಾರತದಲ್ಲಿ ನಗದುರಹಿತ ವಹಿವಾಟಿನ ಪ್ರಮಾಣವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. 
 

click me!