ಉದ್ಯೋಗ ಕಡಿತದ ಈ ಸಮಯದಲ್ಲಿ ನಿಮ್ಮ ಬಜೆಟ್ ಹೀಗಿರಲಿ!
ಅನೇಕ ಬಹುರಾಷ್ಟ್ರೀಯ ಕಂಪನಿಗಳು ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಆರ್ಥಿಕ ಹಿಂಜರಿತ ಜಗತ್ತನ್ನು ಆವರಿಸಿಕೊಳ್ಳುತ್ತಿದೆಯಾ ಎಂಬ ಭೀತಿ ಪ್ರಾರಂಭವಾಗಿದೆ. ಇಂಥ ಸಮಯದಲ್ಲಿ ಯಾರಿಗೂ ಉದ್ಯೋಗ ಭದ್ರತೆ ಇಲ್ಲ.ಹೀಗಿರುವಾಗ ಮುಂದೆ ಸಂಕಷ್ಟದ ದಿನಗಳು ಎದುರಾದ್ರೆ ಅದನ್ನು ಧೈರ್ಯದಿಂದ ಎದುರಿಸಲು ಇಂದೇ ಸಿದ್ಧತೆ ನಡೆಸೋದು ಅಗತ್ಯ. ಹಾಗಾದ್ರೆ ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಹಣಕಾಸಿ ಯೋಜನೆ ಹೇಗಿರಬೇಕು?
Business Desk: ಟ್ವಿಟ್ಟರ್ ನಿಂದ ಪ್ರಾರಂಭವಾದ ಉದ್ಯೋಗ ಕಡಿತದ ಪರ್ವ ಈಗ ಬಹುತೇಕ ಎಲ್ಲ ಅಂತಾರಾಷ್ಟ್ರೀಯ ಕಂಪನಿಗಳನ್ನು ಆವರಿಸಿದೆ. ಅಮೆಜಾನ್ ಹಾಗೂ ಮೆಟಾದಂತಹ ಸಂಸ್ಥೆಗಳು ಕೂಡ ಉದ್ಯೋಗಿಗಳನ್ನು ವಜಾಗೊಳಿಸಿವೆ. ಇನ್ನಷ್ಟು ಕಂಪನಿಗಳು ಕೂಡ ಇದೇ ಹಾದಿಯಲ್ಲಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಜನರು ಉದ್ಯೋಗ ಕಳೆದುಕೊಳ್ಳುವುದು ನಿಶ್ಚಿತ. ಆರ್ಥಿಕ ಹಿಂಜರಿತ ಹಾಗೂ ಉದ್ಯೋಗದ ಕಡಿತದ ಭೀತಿ ಈಗ ಎಲ್ಲೆಡೆ ಹರಡುತ್ತಿದೆ. ಇತ್ತೀಚೆಗೆ ಅಮೆಜಾನ್ ಸಂಸ್ಥಾಪಕ ಹಾಗೂ ಬಿಲಿಯನೇರ್ ಉದ್ಯಮಿ ಜೆಫ್ ಬೆಜೋಸ್ ಕೂಡ ಮುಂದಿನ ದಿನಗಳಲ್ಲಿ ಆರ್ಥಿಕ ಹಿಂಜಿರಿತ ಎದುರಾಗುವ ಸಾಧ್ಯತೆಯಿದ್ದು, ಅನೇಕ ವಲಯಗಳಲ್ಲಿ ಉದ್ಯೋಗ ಕಡಿತವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಕೊರೋನಾ ಸಂಕ್ರಾಮಿಕದ ಬಳಿಕ ಆರ್ಥಿಕತೆ ಮತ್ತೆ ಹಳಿಗೆ ಬರುತ್ತಿದೆ ಎನ್ನುವಾಗಲೇ ಹಣದುಬ್ಬರ ಹೆಚ್ಚಳ, ಜಾಗತಿಕ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಸೇರಿದಂತೆ ಅನೇಕ ಸಮಸ್ಯೆಗಳು ಜಾಗತಿಕ ಆರ್ಥಿಕತೆಗೆ ಸವಾಲಾಗಿ ಪರಿಣಮಿಸಿದ್ದವು. ಈ ನಡುವೆ ಆರ್ಥಿಕ ಹಿಂಜರಿತದ ಭೀತಿ ಕೂಡ ಎದುರಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಾರ ಉದ್ಯೋಗಕ್ಕೆ ಕಡಿತ ಬೀಳುತ್ತದೆ ಎಂದು ಹೇಳೋದು ಕಷ್ಟ. ಆದಕಾರಣ ಮುಂದೆ ಎದುರಾಗಲಿರುವ ಸನ್ನಿವೇಶವನ್ನು ಎದುರಿಸಲು ಇಂದೇ ಸಿದ್ಧತೆ ನಡೆಸಬೇಕಾದ ಅಗತ್ಯವಿದೆ. ಹಾಗಾದ್ರೆ ಉದ್ಯೋಗ ಕಳೆದುಕೊಂಡ ನಂತರದ ದಿನಗಳಿಗೆ ಈಗಿನ ತಯಾರಿ ಹೇಗಿರಬೇಕು? ಇಲ್ಲಿದೆ ಮಾಹಿತಿ.
ಮಾಸಿಕ ಬಜೆಟ್ ಸಿದ್ಧಪಡಿಸಿ
ಸಾಮಾನ್ಯವಾಗಿ ಬಹುತೇಕರು ಮಾಸಿಕ ಬಜೆಟ್ ಸಿದ್ಧಪಡಿಸುತ್ತಾರೆ. ಒಂದು ವೇಳೆ ನಿಮಗೆ ಅಂಥ ಅಭ್ಯಾಸ ಇಲ್ಲವೆಂದಾದರೆ ಮುಂದಿನ ತಿಂಗಳಿಂದಲೇ ಕಾರ್ಯರೂಪಕ್ಕೆ ತನ್ನಿ. ಪ್ರತಿ ತಿಂಗಳ ಖರ್ಚು-ವೆಚ್ಚಗಳಿಗೆ ಯೋಜನೆ ರೂಪಿಸಿ. ಅನವಶ್ಯಕವಾದ ಖರ್ಚುಗಳಿಗೆ ಬಜೆಟ್ ನಲ್ಲೇ ಕಡಿವಾಣ ಹಾಕಿ. ತಿಂಗಳ ವೆಚ್ಚ ನಿಮ್ಮ ಬಜೆಟ್ ಅನ್ನು ಮೀರದಂತೆ ಜಾಣ್ಮೆಯಿಂದ ಖರ್ಚು ಮಾಡಿ. ಹಾಗೆಯೇ ಇನ್ನು ಮುಂದಿನ ನಿಮ್ಮ ತಿಂಗಳ ಬಜೆಟ್ ನಲ್ಲಿ ಖರ್ಚಿಗಿಂತ ಉಳಿತಾಯಕ್ಕೆ ಹೆಚ್ಚಿನ ಮಹತ್ವ ಇರಲಿ.
ಮಿತವ್ಯಯಕ್ಕೆ ಆದ್ಯತೆ
ಎಲ್ಲೆಲ್ಲ ಹಣ ಉಳಿಸಲು ಸಾಧ್ಯವಾಗುತ್ತದೋ ಅಲ್ಲೆಲ್ಲ ಉಳಿಸಿ. ಮನೆಗೆ ತರುವ ದಿನಸಿ ಸಾಮಗ್ರಿಯಿಂದ ಹಿಡಿದು ವಿದ್ಯುತ್ ಬಿಲ್ ತನಕ ಪ್ರತಿಯೊಂದರಲ್ಲೂ ಒಂದಿಷ್ಟು ಕಡಿತ ಮಾಡಲು ಪ್ರಯತ್ನಿಸಿ. ಹೋಟೆಲ್, ಮಾಲ್, ಸಿನಿಮಾ, ಔಟಿಂಗ್, ಶಾಪಿಂಗ್ ಗೆ ಕಡಿವಾಣ ಹಾಕಿ.
ಯುಪಿಐ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಆದಾಯ ತೆರಿಗೆ ಪಾವತಿಸೋದು ಹೇಗೆ? ಇಲ್ಲಿದೆ ಮಾಹಿತಿ
ದೊಡ್ಡ ಖರ್ಚುಗಳನ್ನು ಮುಂದೂಡಿ
ವಿದೇಶಿ ಪ್ರವಾಸ, ಕಾರು, ಡಬಲ್ ಡೋರ್ ಫ್ರಿಜ್, ಟಿವಿ, ವಾಷಿಂಗ್ ಮಷಿನ್ ಖರೀದಿಯಂತಹ ದೊಡ್ಡ ಯೋಜನೆಗಳನ್ನು ಮುಂದೂಡಿ. ಇನ್ನು ಈ ವರ್ಷ ಮನೆ ಅಥವಾ ನಿವೇಶನ ಖರೀದಿ ಪ್ಲ್ಯಾನ್ ಮಾಡಿರೋರು ಕೂಡ ಸ್ವಲ್ಪ ದಿನ ಕಾದು ನೋಡೋದು ಉತ್ತಮ. ಏಕೆಂದ್ರೆ ದೊಡ್ಡ ವೆಚ್ಚಗಳು ಮುಂದೆ ಸಮಸ್ಯೆ ಸೃಷ್ಟಿಸಬಹುದು.
ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ
ಇಂದು ಆನ್ ಲೈನ್ ಶಾಪಿಂಗ್, ಮಾಲ್ ಸಂಸ್ಕೃತಿಯ ಕಾರಣಕ್ಕೆ ನೋಡಿದ್ದೆಲ್ಲವನ್ನೂ ಖರೀದಿಸಬೇಕೆಂಬ ಬಯಕೆ ತುಸು ಹೆಚ್ಚೇ ಆಗಿದೆ. ಪರಿಣಾಮ ಅಗತ್ಯವಿಲ್ಲದ ವಸ್ತುಗಳನ್ನು ಕೂಡ ಖರೀದಿಸುತ್ತೇವೆ. ಇದ್ರಿಂದ ಖರ್ಚು ಹೆಚ್ಚುತ್ತ ಸಾಗುತ್ತದೆ. ಆದಕಾರಣ ಪ್ರಸಕ್ತ ಸನ್ನಿವೇಶದಲ್ಲಿ ಬಯಕೆಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ.
ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರ
ಇಂದು ಬಹುತೇಕ ಎಲ್ಲರ ಬಳಿ ಕ್ರೆಡಿಟ್ ಕಾರ್ಡ್ ಇದೆ. ಪರಿಣಾಮ ಖಾತೆಯಲ್ಲಿ ಹಣವಿಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಬಳಸಿ ಕಂಡಿದ್ದೆಲ್ಲವನ್ನೂ ಖರೀದಿಸುವ ಮನೋಭಾವ ಹೆಚ್ಚಿದೆ. ಪರಿಣಾಮ ಕ್ರೆಡಿಟ್ ಕಾರ್ಡ್ ಬಿಲ್ ಹೆಚ್ಚುತ್ತದೆ. ಇನ್ನು ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸದಿದ್ರೆ ಹೆಚ್ಚಿನ ಬಡ್ಡಿ ವಿಧಿಸಲಾಗುತ್ತದೆ. ಆದಕಾರಣ ಕ್ರೆಡಿಟ್ ಕಾರ್ಡ್ ಬಳಕೆಯನ್ನು ಆದಷ್ಟು ತಗ್ಗಿಸಿ. ಅಗತ್ಯವೆನಿಸಿದ್ರೆ ಮಾತ್ರ ಬಳಸಿ.
ಆನ್ ಲೈನ್ ವಂಚಕರು ಇಪಿಎಫ್ ಖಾತೆನೂ ಬಿಡ್ತಿಲ್ಲ; ಒಟಿಪಿ ಶೇರ್ ಮಾಡ್ಬೇಡಿ, ಖಾತೆದಾರರಿಗೆ ಇಪಿಎಫ್ಒ ಮನವಿ
ಉಳಿತಾಯಕ್ಕೆ ಮಹತ್ವ ನೀಡಿ
ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಉಳಿಸಲು ಯೋಜನೆ ರೂಪಿಸಿ. ಹಾಗಂತ ಎಲ್ಲ ಹಣವನ್ನೂ ದೀರ್ಘಾವಧಿ ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ಬದಲಿಗೆ ಸ್ವಲ್ಪ ಮೊತ್ತವನ್ನು ಅಗತ್ಯ ಬಿದ್ದಾಗ ಕೈಗೆ ಸಿಗುವಂತೆ ವ್ಯವಸ್ಥೆ ಮಾಡಿಟ್ಟುಕೊಳ್ಳಿ.
ಇಎಂಐಗಾಗಿಯೇ ಒಂದಿಷ್ಟು ಸಂಗ್ರಹಿಸಿಡಿ
ಇನ್ನು ನೀವು ಗೃಹಸಾಲದಂತಹ ದೀರ್ಘಾವಧಿ ಸಾಲ ಹೊಂದಿದ್ದು, ಪ್ರತಿ ತಿಂಗಳು ಇಎಂಐ ಪಾವತಿಸುತ್ತಿದ್ರೆ, ಹೆಚ್ಚಿನ ಎಚ್ಚರ ಅಗತ್ಯ. ಕನಿಷ್ಠ 6 ತಿಂಗಳ ಇಎಂಐ ಪಾವತಿಗೆ ಸಾಕಾಗುವಷ್ಟು ಹಣವನ್ನು ಸಂಗ್ರಹಿಸಿಡಿ.