ಮಹಿಳಾ ಸಬಲೀಕರಣಕ್ಕೆ ನಿರ್ಮಲಾ ಒತ್ತು, ನಾರಿಗೆ ಶಕ್ತಿ ತುಂಬಲು ಕಸರತ್ತು

By Suvarna NewsFirst Published Feb 1, 2024, 1:22 PM IST
Highlights

ಕೇಂದ್ರ ಮಧ್ಯಂತರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ್ದು, ಮಹಿಳೆಯರಿಗೆ ಸಂಬಂಧಿಸಿ ಯಾವುದೇ ಹೊಸ ಯೋಜನೆ ಘೋಷಣೆಯಾಗಿಲ್ಲ. ಅದರೆ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. 
 

ನವದೆಹಲಿ (ಜ.2): ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ ಪೂರ್ಣ ಪ್ರಮಾಣದಲ್ಲಿಲ್ಲದ ಕಾರಣ ಇದರಲ್ಲಿ ಪ್ರಮುಖ ಘೋಷಣೆಗಳೇನೂ ಇರಲಿಲ್ಲ. ಆದರೂ ಮಹಿಳಾ ಸಬಲೀಕರಣಕ್ಕೆ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಒತ್ತು ನೀಡಲು ಪ್ರಯತ್ನಿಸಿದ್ದಾರೆ. ನಾರಿಶಕ್ತಿಗೆ ಬಲ ತುಂಬಲು ಅವರು ಎಂದಿನಂತೆ ಈ ಬಾರಿ ಕೂಡ ಕಸರತ್ತು ಮಾಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಮಹಿಳೆಯರ ಉದ್ಯಮಶೀಲತೆ, ಜಿವನ ಮಟ್ಟ ಹಾಗೂ ಗೌರವದಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಈ ಮೂಲಕ ಮಹಿಳೆಯರ ಸಬಲೀಕರಣ ಕೂಡ ಆಗಿದೆ ಎಂದು ವಿತ್ತ ಸಚಿವೆ ಬಜೆಟ್ ಭಾಷಣದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಹಾಗಾದ್ರ ಈ ಬಾರಿಯ ಬಜೆಟ್ ನಲ್ಲಿ ಮಹಿಳೆಯರಿಗ ಸಂಬಂಧಿಸಿ ಯಾವೆಲ್ಲ ವಿಚಾರಕ್ಕೆ ಪ್ರಾಮುಖ್ಯತೆ ನೀಡಲಾಗಿದೆ?

ಮಹಿಳಾ ಉದ್ಯಮಿಗಳಿಗೆ 'ಮುದ್ರಾ' ಬಲ
ಮಹಿಳಾ ಉದ್ಯಮಿಗಳಿಗೆ 'ಮುದ್ರಾ' ಯೋಜನೆ ಮೂಲಕ  ಬಲ ತುಂಬುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಮಹಿಳಾ ಉದ್ಯಮಿಗಳಿಗೆ ಈ ತನಕ 30 ಕೋಟಿ ಮುದ್ರಾ ಯೋಜನೆ ಸಾಲಗಳನ್ನು ನೀಡಲಾಗಿದೆ. ಈ ಮೂಲಕ ಮಹಿಳೆಯರ ಸ್ವಂತ ಉದ್ಯಮದ ಕನಸನ್ನು ನನಸು ಮಾಡಲಾಗಿದೆ. 

Union Budget 2024: ಪ್ರವಾಸೋದ್ಯಮಕ್ಕೆ ಶುರುವಾದ ಬೇಡಿಕೆ, ಲಕ್ಷದ್ವೀಪಕ್ಕೆ ಸರ್ಕಾರದ ಹೂಡಿಕೆ!

ಲಕ್ಷಪತಿ ದೀದೀ
83ಲಕ್ಷ ಸ್ವಸಹಾಯ ಸಂಘಗಳಲ್ಲಿ 9 ಕೋಟಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಭಾಗದ ಅರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗಳನ್ನು ಸುಧಾರಿಸುತ್ತಿದ್ದಾರೆ. ಈ ಮೂಲಕ ಸಬಲೀಕರಣದತ್ತ ಹೆಜ್ಜೆ ಹಾಕುತ್ತಿದ್ದಾರೆ. ಸ್ವಸಹಾಯ ಸಂಘಗಳ ಯಶಸ್ಸಿನಿಂದ ಇಗಾಗಲೇ ಒಂದು ಕೋಟಿ ಮಹಿಳೆಯರು ಲಕ್ಷಪತಿ ದೀದಿಗಳಾಗಿದ್ದಾರೆ ಎಂದು ವಿತ್ತ ಸಚಿವೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಲಕ್ಷಪತಿ ದೀದಿ ಗುರಿಯನ್ನು ಎರಡು ಕೋಟಿಯಿಂದ ಮೂರು ಕೋಟಿಗೆ ಹೆಚ್ಚಿಸೋದಾಗಿಯೂ ತಿಳಿಸಿದ್ದಾರೆ. 

ಶಿಕ್ಷಣಕ್ಕೆ ಒತ್ತು
ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಶಿಕ್ಷಣ ಅತೀಮುಖ್ಯ ಸಾಧನವಾಗಿದೆ ಎಂಬುದನ್ನು ಸರ್ಕಾರ ಮನಗಂಡಿದೆ. ಹೀಗಾಗಿ ಕೇಂದ್ರ ಸರ್ಕಾರ ಹೆಣ್ಣುಮಕ್ಕಳ  ಶೈಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಪರಿಣಾಮ ಕಳೆದ 10 ವರ್ಷಗಳಲ್ಲಿ ಉನ್ನತ ಶಿಕ್ಷಣಕ್ಕೆ ಸೇರ್ಪಡೆಗೊಳ್ಳುತ್ತಿರುವ ಮಹಿಳೆಯರ ಪ್ರಮಾಣದಲ್ಲಿ ಶೇ.28ರಷ್ಟು ಹೆಚ್ಚಳವಾಗಿದೆ. ಇನ್ನು STEM ಕೋರ್ಸ್ ಗಳಿಗೆ ಹೆಣ್ಣುಮಕ್ಕಳು ಹಾಗೂ ಮಹಿಳೆಯರ ಸೇರ್ಪಡೆ ಶೇ.43ರಷ್ಟಿದೆ. ಇದು ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರಮಾಣದ ಸೇರ್ಪಡೆಯಾಗಿದೆ. ಈ ಎಲ್ಲ ಕ್ರಮಗಳು ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪ್ರಮಾಣ ಹೆಚ್ಚಲು ಕಾರಣವಾಗಿದೆ ಎಂದು ಸಚಿವೆ ತಿಳಿಸಿದ್ದಾರೆ.

ಮಹಿಳೆಯರ ಗೌರವ ಹೆಚ್ಚಳ
ಮೂರು ಬಾರಿ ತಲಾಖ್ ಕೂಗುವ ಮೂಲಕ ವಿಚ್ಛೇದನೆ ನೀಡೋದನ್ನು ಕಾನೂನುಬಾಹಿರಗೊಳಿಸಿರೋದು, ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 1/3ರಷ್ಟು ಸೀಟುಗಳ ಮೀಸಲಾತಿ ಹಾಗೂ ಗ್ರಾಮೀಣ ಭಾಗದಲ್ಲಿ ಪಿಎಂ ಅವಾಸ್ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಶೇ.70ರಷ್ಟು ಮನೆಗಳನ್ನು ನೀಡಿರೋದು ಅವರ ಗೌರವವನ್ನು ಹೆಚ್ಚಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ಆರೋಗ್ಯ ಕಾಳಜಿ
ಇತ್ತೀಚಿನ ದಿನಗಳಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಮಾಣ ದೇಶದಲ್ಲಿ ಹೆಚ್ಚುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇದರ  ತಡೆಗ 9-40 ವರ್ಷದ ಮಹಿಳೆಯರಿಗೆ ಲಸಿಕೆ ಹಾಕಿಸಲು ಪ್ರೋತ್ಸಾಹ ನೀಡೋದಾಗಿ ಬಜೆಟ್ ನಲ್ಲಿ ವಿತ್ತ ಸಚಿವೆ ಘೋಷಿಸಿದ್ದಾರೆ. 

Live Blog ಕೇಂದ್ರ ಬಜೆಟ್‌ 2024: ಜನಪ್ರಿಯ ಬಜೆಟ್ ಅಲ್ಲ, ಜುಲೈನಲ್ಲಿ ವಿಕಸಿತ ಭಾರತದ ನೀಲಿನಕ್ಷೆ ಘೋಷಣೆ...

ಕಳೆದ  ಬಜೆಟ್ ನಲ್ಲಿ ಏನಿತ್ತು?
ಕಳೆದ ಬಜೆಟ್ ನಲ್ಲಿ ಮಹಿಳೆಯರಿಗೆ ಬಂಪರ್ ಕೊಡುಗೆಗಳನ್ನು ನೀಡಲಾಗಿತ್ತು. ಆಜಾದಿ ಕಾ ಅಮೃತ ಮಹೋತ್ಸವದ ನೆನಪಿಗಾಗಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ವಿತ್ತ ಸಚಿವೆ 'ಮಹಿಳಾ ಸಮ್ಮಾನ್ ಉಳಿತಾಯ ಪತ್ರ' ಯೋಜನೆ ಘೋಷಿಸಿದ್ದರು. ಇದರಲ್ಲಿ ಎರಡು ವರ್ಷಗಳ ಅವಧಿಗೆ ಮಹಿಳೆಯರು ಹೂಡಿಕೆ ಮಾಡಬಹುದಾಗಿದ್ದು, ಶೇ.7.5 ಬಡ್ಡಿದರ ನೀಡಲಾಗುತ್ತದೆ. ಈ ಬಡ್ಡಿ ದರ ಸ್ಥಿರವಾಗಿದ್ದು, ಬದಲಾವಣೆ ಆಗೋದಿಲ್ಲ. ಈ ಯೋಜನೆ  2025ರ ಮಾರ್ಚ್ ತನಕ ಎರಡು ವರ್ಷಗಳ ಅವಧಿಗೆ ಲಭ್ಯವಿರುತ್ತದೆ. ಭಾಗಶಃ ಹೂಡಿಕೆ ಹಿಂಪಡೆಯುವ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ. 


 

click me!