ನವರಾತ್ರಿ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಗಿಫ್ಟ್ ಸಿಕ್ಕಿದೆ. ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯನ್ನು(ಡಿಎ) ಶೇ.4ರಷ್ಟು ಏರಿಕೆ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ಡಿಎ ಮೂಲವೇತನದ ಶೇ.38ಕ್ಕೆ ಏರಿಕೆಯಾಗಿದೆ.
ನವದೆಹಲಿ (ಸೆ.28): ದಸರಾ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸರ್ಕಾರ ಗಿಫ್ಟ್ ನೀಡಿದೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯನ್ನು(ಡಿಎ) ಶೇ.4ರಷ್ಟು ಏರಿಕೆ ಮಾಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪರಿಣಾಮ ಕೇಂದ್ರ ಸರ್ಕಾರಿ ನೌಕರರ ಡಿಎ ಮೂಲವೇತನದ ಶೇ.38ಕ್ಕೆ ಏರಿಕೆಯಾಗಿದೆ. ಸರ್ಕಾರದ ಈ ನಿರ್ಧಾರದಿಂದ ಸುಮಾರು 47.68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ನಾಗರಿಕ ಸೇವೆ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ಕೂಡ ಇದರ ಪ್ರಯೋಜನ ಸಿಗಲಿದೆ. ಪರಿಷ್ಕೃತ ತುಟ್ಟಿ ಭತ್ಯೆ ಜುಲೈ 1ರಿಂದಲೇ ಅನ್ವಯಿಸಲಿದೆ. ಹೀಗಾಗಿ ಕೇಂದ್ರ ಸರ್ಕಾರಿ ನೌಕರರಿಗೆ ತಿಂಗಳ ಸಂಬಳದೊಂದಿಗೆ ಜುಲೈಯಿಂದ ಇಲ್ಲಿಯ ತನಕದ ತುಟ್ಟಿ ಭತ್ಯೆ ಹೆಚ್ಚಳದ ಹಣ ಕೂಡ ಸಿಗಲಿದೆ. ಕೇಂದ್ರ ಸರ್ಕಾರ ತನ್ನ ನೌಕರರ ತುಟ್ಟಿ ಭತ್ಯೆ ಹಾಗೂ ತುಟ್ಟಿ ಪರಿಹಾರವನ್ನು (ಡಿಆರ್) ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಂದು ಪರಿಷ್ಕರಿಸುತ್ತದೆ. ಆದರೆ, ಈ ನಿರ್ಧಾರವನ್ನು ಮಾತ್ರ ಸರ್ಕಾರ ಮಾರ್ಚ್ ಮತ್ತು ಸೆಪ್ಟೆಂಬರ್ ನಲ್ಲಿ ಪ್ರಕಟಿಸುತ್ತದೆ.
ಡಿಎ ಪರಿಷ್ಕರಣೆಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಮಾನದಂಡವಾಗಿದ್ದು,ಅದರ ಆಧಾರದಲ್ಲೇ ಪರಿಷ್ಕರಿಸಲಾಗುತ್ತದೆ. ಈಗ ಎಐಸಿಪಿಐ ಆರ್ ಬಿಐಯ ಸಹನ ಮಟ್ಟಕ್ಕಿಂತ ಮೇಲಿದೆ. ಸದ್ಯ ಚಿಲ್ಲರೆ ಹಣದುಬ್ಬರ ಆರ್ ಬಿಐ ಸಹನ ಮಟ್ಟವಾದ ಶೇ.2-6ಕ್ಕಿಂತ ಹೆಚ್ಚಿದೆ. ಹೀಗಾಗಿ ಹೀಗಾಗಿ ತುಟ್ಟಿ ಭತ್ಯೆಯನ್ನು ಶೇ. 4ರಷ್ಟು ಹೆಚ್ಚಿಸಲಾಗಿದೆ. ಈ ವರ್ಷದ ಮಾರ್ಚ್ ನಲ್ಲಿ ಕೇಂದ್ರ ಸಚಿವ ಸಂಪುಟ ಡಿಎಯನ್ನು ಶೇ.3ಕ್ಕೆ ಏರಿಕೆ ಮಾಡಲು ಒಪ್ಪಿಗೆ ನೀಡಿತ್ತು. ಪರಿಣಾಮ ಡಿಎ ಮೂಲವೇತನದ ಶೇ.34ಕ್ಕೆ ಹೆಚ್ಚಳವಾಗಿತ್ತು.ತುಟ್ಟಿ ಭತ್ಯೆ ಅಥವಾ ಡಿಎ ಅನ್ನು ಸರ್ಕಾರಿ ನೌಕರರಿಗೆ ನೀಡಿದ್ರೆ, ಡಿಯರನೆಸ್ ರಿಲೀಫ್ (DR) ಅನ್ನು ಪಿಂಚಣಿದಾರರಿಗೆ ನೀಡಲಾಗುತ್ತದೆ.
ಈ ಬ್ಯಾಂಕ್ ಗಳ ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಸಿ ಹಬ್ಬದ ಶಾಪಿಂಗ್ ಮಾಡಿದ್ರೆ ಆಕರ್ಷಕ ಆಫರ್ ಗಳು!
ಏಳನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುವ ಎಲ್ಲ ನೌಕರರಿಗೂ ಇದು ಅನ್ವಯಿಸಲಿದೆ. 8,000 ರೂ. ಮೂಲ ವೇತನಕ್ಕೆ ತಿಂಗಳಿಗೆ 720 ರೂ. ಡಿಎ ಹೆಚ್ಚಳವಾಗಲಿದೆ. ಇನ್ನು ಮೂಲವೇತನ 25,000 ರೂ. ಆಗಿದ್ದರೆ ತಿಂಗಳಿಗೆ 1,000 ರೂ. ಹೆಚ್ಚಳವಾಗುತ್ತದೆ. ಹಾಗೆಯೇ 50,000 ರೂ. ಮೂಲ ವೇತನ ಪಡೆಯೋರಿಗೆ ತಿಂಗಳಿಗೆ 2,000 ರೂ. ಹೆಚ್ಚಳವಾಗಲಿದೆ. ಇನ್ನು 1,00,000 ರೂ. ಮೂಲ ವೇತನ ಹೊಂದಿರೋರಿಗೆ ತಿಂಗಳಿಗೆ 4,000 ರೂ. ಹೆಚ್ಚುವರಿ ಹಣ ಸಿಗಲಿದೆ. ಕೇಂದ್ರ ಸರ್ಕಾರದಿಂದ ಪಿಂಚಣಿ ಪಡೆಯುವವರಿಗೂ ಇದೇ ದರದಲ್ಲಿ ಡಿಆರ್ ಹೆಚ್ಚಳವಾಗಲಿದೆ.
ಕೋವಿಡ್ -19 ಕಾರಣದಿಂದ ಸೃಷ್ಟಿಯಾದ ಹೆಚ್ಚುವರಿ ವೆಚ್ಚಗಳನ್ನು ಭರಿಸಲು ಕೇಂದ್ರ ಸರ್ಕಾರ ಡಿಎ (DA) ಹಾಗೂ ಡಿಆರ್ (DR) ದರ ಹೆಚ್ಚಳದ ಮೂರು ಕಂತುಗಳನ್ನು ತಡೆ ಹಿಡಿದಿತ್ತು. 2020 ಜನವರಿ 1, 2020 ಜುಲೈ 1 ಹಾಗೂ 2021ರ ಜನವರಿ 1ರ ಡಿಎ ಹಾಗೂ ಡಿಆರ್ ಕಂತುಗಳನ್ನು ಸರ್ಕಾರ ತಡೆ ಹಿಡಿದಿತ್ತು. 2021ರ ಜುಲೈನಲ್ಲಿ ಡಿಎ ಹಾಗೂ ಡಿಆರ್ ಹೆಚ್ಚಳದ ಮೇಲಿನ ತಡೆಯನ್ನು ಹಿಂಪಡೆದ ಸರ್ಕಾರ, ಆ ಬಳಿಕ ಒಟ್ಟು ಮೂರು ಬಾರಿ ಡಿಎ ಹಾಗೂ ಡಿಆರ್ ಭತ್ಯೆಗಳಲ್ಲಿ ಹೆಚ್ಚಳ ಮಾಡಿತ್ತು.
58 ಸಾವಿರ ಕೋಟಿ ರೂ. ಆನ್‌ಲೈನ್ ಬಹುಮಾನಕ್ಕೆ ತೆರಿಗೆಯೇ ಬಂದಿಲ್ಲ: ಟ್ಯಾಕ್ಸ್ ವಂಚಕರಿಗೆ IT Notice
ಡಿಎ ಲೆಕ್ಕಚಾರ ಹೀಗೆ
ಉದ್ಯೋಗಿಗಳ ಜೀವನ ನಿರ್ವಹಣಾ ವೆಚ್ಚದ ಆಧಾರದಲ್ಲಿ ಡಿಎ ನಿಗದಿಪಡಿಸಲಾಗುತ್ತದೆ. ಉದ್ಯೋಗಿ ನಗರ, ಗ್ರಾಮೀಣ, ಅರೆಪಟ್ಟಣ ಹೀಗೆ ಯಾವ ಪ್ರದೇಶದಲ್ಲಿ ವಾಸಿಸುತ್ತಾನೆ ಎಂಬ ಆಧಾರದಲ್ಲಿ ಡಿಎ ನಿಗದಿಪಡಿಸಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ಡಿಎ ಲೆಕ್ಕಾಚಾರ ಮಾಡೋ ಫಾರ್ಮುಲಾವನ್ನು ಕೇಂದ್ರ ಸರ್ಕಾರ 2006ರಲ್ಲಿ ಬದಲಾಯಿಸಿತ್ತು.ಅದು ಈ ಕೆಳಗಿನಂತಿದೆ.
ತುಟ್ಟಿ ಭತ್ಯೆ %= (ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 3 ತಿಂಗಳು-126.33)/126.33)x100.