Union Budget 2023:ಭಾರತೀಯರ ನೆನಪಿನಲ್ಲಿ ಇನ್ನೂ ಹಸಿರಾಗಿದೆ ಈ ವಿತ್ತ ಸಚಿವರ ಬಜೆಟ್ ಭಾಷಣ!

By Suvarna News  |  First Published Jan 31, 2023, 7:15 PM IST

ನಾಳೆ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಈ ಹಿಂದಿನ ಕೆಲವು ಬಜೆಟ್ ಮಂಡನೆ ಸಂದರ್ಭದಲ್ಲಿ ಅಂದಿನ ವಿತ್ತ ಸಚಿವರುಗಳು ಮಾಡಿದ ಭಾಷಣವನ್ನು ದೇಶದ ಜನತೆ ಇನ್ನೂ ಮರೆತಿಲ್ಲ. ಹೀಗಾಗಿ ಈ ಹಿಂದೆ ದೇಶದ ಜನರ ಗಮನ ಸೆಳೆದಿದ್ದ ವಿತ್ತ ಸಚಿವರುಗಳ ಬಜೆಟ್ ಭಾಷಣದ ಮಾಹಿತಿ ಇಲ್ಲಿದೆ. 
 


Business Desk: 2023-24ನೇ ಸಾಲಿನ ಬಜೆಟ್ ಅಧಿವೇಶನ ಇಂದಿನಿಂದ (ಜ.31) ಆರಂಭವಾಗಿದೆ. ನಾಳೆ (ಫೆ.1) ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್  ಮಂಡನೆ ಮಾಡಲಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಅವರ ಐದನೇ ಬಜೆಟ್ ಮಂಡನೆಯಾಗಿದೆ. ಇಂದಿರಾ ಗಾಂಧಿ ಬಳಿಕ ಕೇಂದ್ರ ಬಜೆಟ್ ಮಂಡಿಸಿರುವ ಎರಡನೇ ಮಹಿಳಾ ವಿತ್ತ ಸಚಿವೆ ಎಂಬ ಹೆಗ್ಗಳಿಕೆ ನಿರ್ಮಲಾ ಸೀತಾರಾಮನ್ ಅವರದ್ದು. ಇಂದಿರಾ ಗಾಂಧಿ 1970-71 ಆರ್ಥಿಕ ಸಾಲಿನ ಬಜೆಟ್ ಮಂಡನೆ ಮಾಡಿದ್ದರು. ಬಜೆಟ್ ಮಂಡನೆ ಸಮಯದಲ್ಲಿ ವಿತ್ತ ಸಚಿವರು ಬರೀ ಅಂಕಿಅಂಶಗಳು, ಯೋಜನೆಗಳನ್ನಷ್ಟೇ ಮಂಡಿಸೋದಿಲ್ಲ. ಈ ಸುದೀರ್ಘ ಅವಧಿಯ ಭಾಷಣದ ನಡುವೆ ಕವಿತೆಗಳನ್ನು ಹಾಡುವುದು, ಹಾಸ್ಯ ಚಟಾಕಿ ಹಾರಿಸುವ ಮೂಲಕ ಈ ಹಿಂದಿನ ವಿತ್ತ ಸಚಿವರು ಬಜೆಟ್ ಮಂಡನೆಯನ್ನು ಆಸಕ್ತಿದಾಯಕವಾಗಿಸಿದ ಅನೇಕ ನಿದರ್ಶನಗಳಿವೆ. ಅದರಲ್ಲೂ ಕೆಲವು ಬಜೆಟ್ ಭಾಷಣಗಳು ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿ ಉಳಿದಿವೆ. ನಾಳೆ ಕೇಂದ್ರ ಬಜೆಟ್ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವರುಗಳ ಅತ್ಯಂತ ನೆನಪಿನಲ್ಲಿ ಉಳಿಯುವಂತಹ ಕೆಲವು ಭಾಷಣಗಳನ್ನು ಇಲ್ಲಿ ಸ್ಮರಿಸುವ ಪ್ರಯತ್ನ ಮಾಡಲಾಗಿದೆ.

ಇಂದಿರಾ ಗಾಂಧಿ ಅವರ ಬಜೆಟ್ ಭಾಷಣ
ಇಂದಿರಾ ಗಾಂಧಿ ಭಾರತದ ಪ್ರಧಾನಿ ಹುದ್ದೆಗೇರಿದ ಮೊದಲ ಮಹಿಳೆ ಎಂಬುದು ಎಲ್ಲರಿಗೂ ಗೊತ್ತು. ಹಾಗೆಯೇ ಅವರು ಕೇಂದ್ರ ಬಜೆಟ್ ಮಂಡನೆ ಮಾಡಿದ ಮೊದಲ ಮಹಿಳಾ ವಿತ್ತ ಸಚಿವೆ ಕೂಡ ಹೌದು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವಿತ್ತ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಹೀಗಾಗಿ  1970ರ ಫೆಬ್ರವರಿ 28 ರಂದು ಸಂಜೆ 5 ಗಂಟೆಗೆ ಬಜೆಟ್ ಮಂಡಿಸಿದ್ದರು. ಬಜೆಟ್ ಭಾಷಣವನ್ನು ಹಣಕಾಸು ಹೇಳಿಕೆಯಿಂದ ರಾಜಕೀಯ ವಿಚಾರಕ್ಕೆ ಇಂದಿರಾ ಗಾಂಧಿ ಹೊರಳಿಸಿದ್ದರು ಎಂದು ಇಂಡಿಯನ್ ಎಕ್ಸ್ ಪ್ರೆಸ್ ಗೆ ಔಟ್ ರೀಚ್ ಮುಖ್ಯಸ್ಥ ಛಕ್ಸು ರಾಯ್ ಬರೆದ ಲೇಖನದಲ್ಲಿ ತಿಳಿಸಿದ್ದರು. 1971ರ ಸಾರ್ವತ್ರಿಕ ಚುನಾವಣೆಯ ಘೋಷವಾಕ್ಯ 'ಗರೀಬಿ ಹಟಾವೋ' ಕಡೆಗೆ ಇಂದಿರಾ ಗಾಂಧಿ ತಮ್ಮ ಮಾತನ್ನು ಕೇಂದ್ರೀಕರಿಸಿದ್ದರು. ಆ ಬಳಿಕ ಧೂಮಪಾನಿಗಳಿಗೆ ಶಾಕ್ ನೀಡಿದ ಇಂದಿರಾ ಗಾಂಧಿ, ಧೂಮಪಾನಿಗಳ ಪಾಕೆಟ್ ಅನ್ನು ಮತ್ತೊಮ್ಮೆ ಮುಟ್ಟಬೇಕಾಗಿದ್ದು, ನನ್ನನ್ನು ಕ್ಷಮಿಸಿ' ಎಂದು ಕೋರಿದ್ದರು. ಸಿಗರೇಟ್ ಮೇಲಿನ ತೆರಿಗೆಯನ್ನು ಅಂದು ಹೆಚ್ಚಿಸಲಾಗಿತ್ತು.

Tap to resize

Latest Videos

undefined

Budget 2023:ಬಜೆಟ್ ಅಧಿವೇಶನಕ್ಕೆ ಚಾಲನೆ; 2047ರೊಳಗೆ ಆತ್ಮನಿರ್ಭರ ಭಾರತ ನಿರ್ಮಾಣವಾಗಲಿ: ರಾಷ್ಟ್ರಪತಿ ಮುರ್ಮು

ಮನಮೋಹನ್ ಸಿಂಗ್ ಐತಿಹಾಸಿಕ ಭಾಷಣ
ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ವಿತ್ತ ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು ಮಂಡಿಸಿದ ಬಜೆಟ್ ಭಾರತದ ಆರ್ಥಿಕತೆಗೆ ಹೊಸ ದಿಕ್ಕನ್ನೇ ನೀಡಿತ್ತು. ಲಾಭದಾಯಕವಲ್ಲದ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಸರ್ಕಾರ ಬಂಡವಾಳ ಹಿಂತೆಗೆತ ಅಥವಾ ಖಾಸಗಿ ಹೂಡಿಕೆಗೆ ಅವಕಾಶ, ಆಮದು ಪ್ರಕ್ರಿಯೆ ಸರಳೀಕರಣ ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಮನಮೋಹನ್ ಸಿಂಗ್ ಬಜೆಟ್ ನಲ್ಲಿ ಅವಕಾಶ ನೀಡಲಾಗಿತ್ತು. ಭಾರತದ ಖಾಸಗೀಕರಣ, ಜಾಗತೀಕರಣ ಹಾಗೂ ಉದಾರೀಕರಣ ನೀತಿಗೆ ಈ ಬಜೆಟ್ ಮುನ್ನುಡಿ ಬರೆದಿತ್ತು. ಈ ಬಜೆಟ್ ಮಂಡನೆ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮನಮೋಹನ್ ಸಿಂಗ್ ಪ್ರಸ್ತಾಪ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. 'ನಾನು ಈಗ ಪಾಕಿಸ್ತಾನದ ಭಾಗವಾಗಿರುವ ಬರಪೀಡಿತ ಹಳ್ಳಿಯೊಂದರ ಬಡ ಕುಟುಂಬದಲ್ಲಿ ಜನಿಸಿದ್ದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿವೇತನ ಹಾಗೂ ಅನುದಾನಗಳ ಸಹಾಯದಿಂದ ನನಗೆ ಭಾರತ ಹಾಗೂ ಇಂಗ್ಲೆಂಡ್ ನಲ್ಲಿ ಕಾಲೇಜಿಗೆ ಹೋಗಲು ಸಾಧ್ಯವಾಯಿತು. ನಮ್ಮ ಸಾರ್ವಭೌಮ ಗಣರಾಜ್ಯದ ಮಹತ್ವದ ಸಾರ್ವಜನಿಕ ಹುದ್ದೆಗಳಿಗೆ ನನ್ನನ್ನುನೇಮಕ ಮಾಡುವ ಮೂಲಕ ಈ ದೇಶ ನನಗೆ ಸಾಕಷ್ಟು ಗೌರವ ನೀಡಿದೆ. ಈ ಋಣವನ್ನು ನಾನು ಎಂದಿಗೂ ತೀರಿಸಲು ಸಾಧ್ಯವಿಲ್ಲ' ಎಂದು ಬಜೆಟ್ ಭಾಷಣದ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಭಾವುಕರಾಗಿ ನುಡಿದಿದ್ದರು.

Budget 2023:ಕೇಂದ್ರ ಬಜೆಟ್ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ ಬಜೆಟ್ ಕುರಿತ ಆಸಕ್ತಿಕರ ಸಂಗತಿಗಳು

ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ
2020ರ ಫೆಬ್ರವರಿ 1 ರಂದು ನಿರ್ಮಲಾ ಸೀತಾರಾಮನ್ ಅತ್ಯಂತ ಉದ್ದದ ಬಜೆಟ್ ಭಾಷಣ ಮಾಡಿದ್ದರು. ಎರಡು ಗಂಟೆ 42 ನಿಮಿಷಗಳ ಕಾಲ ಅವರು ಮಾತನಾಡಿದ್ದರು. ಅನಾರೋಗ್ಯದ ಕಾರಣ ಕೊನೆಯ ಎರಡು ಪುಟಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ತಮ್ಮ ಭಾಷಣ ಮುಕ್ತಾಯಗೊಳಿಸಿದ್ದರು. ಅಲ್ಲದೆ, ಈ ಭಾಷಣವನ್ನು ಪೂರ್ಣವೆಂದು ಭಾವಿಸುವಂತೆ ಸ್ಪೀಕರ್ ಅವರನ್ನು ಕೋರಿದ್ದರು. 2019ರ ಚೊಚ್ಚಲ ಬಜೆಟ್ ನಲ್ಲಿ ಅವರು ಲೆದರ್ ಬ್ಯಾಗ್ ನಲ್ಲಿ ಬಜೆಟ್ ಪ್ರತಿಗಳನ್ನು ತರುವ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದರು. ಬದಲಿಗೆ ರಾಷ್ಟ್ರೀಯ ಲಾಂಛನ ಹೊಂದಿರುವ ಕೆಂಪು ರೇಷ್ಮೆ ಬ್ಯಾಗ್ ನಲ್ಲಿ ಬಜೆಟ್ ಪ್ರತಿಗಳನ್ನು ಕೊಂಡ್ಯೊಯುವ ಸಂಪ್ರದಾಯ ಪ್ರಾರಂಭಿಸಿದರು. ಇನ್ನು 2021-22ನೇ ಆರ್ಥಿಕ ಸಾಲಿನಲ್ಲಿ ಅವರು ದೇಶದ ಮೊದಲ ಕಾಗದರಹಿತ ಬಜೆಟ್ ಮಂಡಿಸಿದರು. 

click me!