ಡಿವಿಡೆಂಡ್‌ ತೆರಿಗೆ ರದ್ದು, ಷೇರುದಾರರಿಗೆ ಶಾಕ್!

By Kannadaprabha News  |  First Published Feb 2, 2020, 8:12 AM IST

ಡಿವಿಡೆಂಡ್‌ ತೆರಿಗೆ ರದ್ದು, ಷೇರುದಾರರಿಗೆ ಹೊರೆ| ಕಂಪನಿಗಳು ಶೇ.15ರಷ್ಟುಡಿಡಿಟಿ ತೆರಿಗೆ ಪಾವತಿಯಿಂದ ಬಚಾವ್‌| ಡಿವಿಡೆಂಟ್‌ ಪಡೆಯುವವರು ಇನ್ನು ತೆರಿಗೆ ಪಾವತಿಸಬೇಕು| ಇದರಿಂದಾಗಿ ಕೇಂದ್ರಕ್ಕೆ 25000 ಕೋಟಿ ರು. ನಷ್ಟ


ನವದೆಹಲಿ[ಫೆ.02]: ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿರುವ ಕಾರ್ಪೊರೇಟ್‌ ಕಂಪನಿಗಳು ತಮ್ಮ ಷೇರುದಾರರಿಗೆ ಪಾವತಿಸುವ ಒಟ್ಟಾರೆ ಲಾಭಾಂಶದ ಮೇಲೆ ಪಾವತಿಸಬೇಕಿದ್ದ ಶೇ.15ರ ಡಿವಿಡೆಂಡ್‌ ಡಿಸ್ಟ್ರಿಬ್ಯೂಷನ್‌ ತೆರಿಗೆಯನ್ನು ಬಜೆಟ್‌ನಲ್ಲಿ ರದ್ದುಗೊಳಿಸಲಾಗಿದೆ. ಆದರೆ, ಡಿವಿಡೆಂಡ್‌ ಸ್ವೀಕರಿಸುವ ಷೇರುದಾರರು ತಮಗೆ ಅನ್ವಯಿಸುವ ತೆರಿಗೆ ದರದಡಿ ಈ ಆದಾಯಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಅಂದರೆ, ಕಾರ್ಪೊರೇಟ್‌ ಕಂಪನಿಗಳಿಗೆ ಅನುಕೂಲವಾಗಿ, ಷೇರು ಹೂಡಿಕೆದಾರರಿಗೆ ತೆರಿಗೆ ಬೀಳಲಿದೆ. ಈ ಮೊದಲು ಡಿವಿಡೆಂಡ್‌ ಪಡೆಯುವ ಷೇರು ಹೂಡಿಕೆದಾರರು ಡಿವಿಡೆಂಡ್‌ನ ಆದಾಯಕ್ಕೆ ತೆರಿಗೆ ಪಾವತಿಸುವ ಅಗತ್ಯವಿರಲಿಲ್ಲ. ಅದಕ್ಕೆ ವಿನಾಯ್ತಿಯಿತ್ತು.

ಇನ್ನು, ಕಂಪನಿಗಳು ತಾವು ಗಳಿಸಿದ ಲಾಭದಲ್ಲಿ ಷೇರುದಾರರಿಗೆ ಲಾಭಾಂಶ ಪಾವತಿಸುವ ಮುನ್ನ ಆ ಮೊತ್ತಕ್ಕೆ ಶೇ.15ರಷ್ಟುಡಿವಿಡೆಂಡ್‌ ಡಿಸ್ಟ್ರಿಬ್ಯೂಷನ್‌ ಟ್ಯಾಕ್‌ (ಡಿಡಿಟಿ) ಹಾಗೂ ಅದಕ್ಕೆ ಅನ್ವಯಿಸುವ ಮೇಲ್ತೆರಿಗೆ ಮತ್ತು ಸೆಸ್‌ ಪಾವತಿಸಬೇಕಿತ್ತು. ಇದರಿಂದಾಗಿ ಕಂಪನಿಗಳು ತಮ್ಮ ಲಾಭಕ್ಕೂ ಮತ್ತು ಆ ಲಾಭದಲ್ಲಿ ನೀಡುವ ಲಾಭಾಂಶಕ್ಕೂ ಎರಡು ಬಾರಿ ತೆರಿಗೆ ಪಾವತಿಸಿದಂತಾಗುತ್ತಿತ್ತು. ಎಷ್ಟೋ ಕಂಪನಿಗಳು ತಮ್ಮ ಲಾಭಕ್ಕೆ ಪಾವತಿಸುತ್ತಿದ್ದ ಕಾರ್ಪೊರೇಟ್‌ ತೆರಿಗೆಗಿಂತ ಹೆಚ್ಚು ಡಿಡಿಟಿ ಪಾವತಿಸುತ್ತಿದ್ದವು. ಇದರಿಂದಾಗಿ ತಮಗೆ ಹೊರೆ ಬೀಳುತ್ತಿದೆ ಎಂದು ಕಾರ್ಪೊರೇಟ್‌ ವಲಯದಿಂದ ಸರ್ಕಾರದ ಮೇಲೆ ತೀವ್ರ ಒತ್ತಡವಿತ್ತು. ಹೀಗಾಗಿ ಈ ತೆರಿಗೆಯನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಸಾಂಸ್ಥಿಕ ಹೂಡಿಕೆದಾರರಿಗೆ ಉತ್ತೇಜನ ಸಿಗಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.

Tap to resize

Latest Videos

ಡಿಡಿಟಿ ರದ್ದತಿಯಿಂದ ಸರ್ಕಾರಕ್ಕೆ ವಾರ್ಷಿಕ 25,000 ಕೋಟಿ ರು. ಆದಾಯ ನಷ್ಟವಾಗಲಿದೆ. ಆದರೂ ಭಾರತವನ್ನು ಹೂಡಿಕೆ ಸ್ನೇಹಿ ತಾಣವನ್ನಾಗಿ ಮಾಡುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

click me!