ಹೊಸ ತೆರಿಗೆ ವ್ಯವಸ್ಥೆ ಅನುಸರಿಸಿದ್ರೆ 70 ತೆರಿಗೆ ವಿನಾಯ್ತಿಗಳು ರದ್ದು!

By Kannadaprabha NewsFirst Published Feb 2, 2020, 8:06 AM IST
Highlights

ಆದಾಯ ತೆರಿಗೆ ಸ್ಲಾ$್ಕಬ್‌ಗಳಲ್ಲಿ ಭಾರಿ ಬದಲಾವಣೆ| ಡಿಡಕ್ಷನ್‌ ಬೇಕಾದ್ದರೆ ಹಳೆಯ ವ್ಯವಸ್ಥೆಯಲ್ಲಿ ತೆರಿಗೆ ಕಟ್ಟಿ| ತೆರಿಗೆ ಉಳಿಸಬೇಕೆಂದರೆ ಹೊಸ ವ್ಯವಸ್ಥೆಗೆ ಬನ್ನಿ!| ಇನ್ನುಳಿದ 30ರ ಮೇಲೂ ನಿರ್ಮಲಾ ಕಣ್ಣು!|  ಹೊಸ ತೆರಿಗೆ ವ್ಯವಸ್ಥೆಯಡಿ ಬರುವವರಿಗೆ ಮಾತ್ರ ಈ ವಿನಾಯ್ತಿ ರದ್ದು| ಹಳೆ ವ್ಯವಸ್ಥೆಯಲ್ಲೇ ಮುಂದುವರೆದರೆ ವಿನಾಯ್ತಿ ಈಗಲೂ ಅನ್ವಯ

ನವದೆಹಲಿ[ಫೆ.02]: ಸುಮಾರು ಮೂರು ದಶಕದಿಂದ ಜಾರಿಯಲ್ಲಿದ್ದ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಈ ವರ್ಷದ ಬಜೆಟ್‌ನಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ತೆರಿಗೆ ವಿನಾಯ್ತಿಗಳಿಲ್ಲದ, ತೆರಿಗೆ ಸ್ಲಾ್ಯಬ್‌ಗಳು ಹೆಚ್ಚಿರುವ ಹಾಗೂ ಜನರು ಹೆಚ್ಚು ತೆರಿಗೆ ಉಳಿತಾಯ ಮಾಡಲು ಸಾಧ್ಯವಿರುವ ಹೊಸ ವ್ಯವಸ್ಥೆಯೊಂದನ್ನು ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ ಪರಿಚಯಿಸಿದ್ದಾರೆ. ಆದರೆ, ಈ ಹೊಸ ಪದ್ಧತಿಯಡಿ ತೆರಿಗೆ ಪಾವತಿಸುವುದು ಅಥವಾ ಹಳೆಯ ಪದ್ಧತಿಯನ್ನೇ ಉಳಿಸಿಕೊಳ್ಳುವುದು ಜನರಿಗೆ ಬಿಟ್ಟದ್ದು. ಅಂದರೆ, ಈ ವರ್ಷ ಎರಡು ರೀತಿಯ ಆದಾಯ ತೆರಿಗೆ ದರಗಳು ಚಾಲ್ತಿಯಲ್ಲಿರುತ್ತವೆ. ಜನರು ತಮಗೆ ಯಾವುದು ಹೊಂದುತ್ತದೆಯೋ ಅದರಡಿ ತೆರಿಗೆ ಪಾವತಿಸಬಹುದು!

ಹಳೆಯ ಆದಾಯ ತೆರಿಗೆ ವ್ಯವಸ್ಥೆಯಡಿ ವಾರ್ಷಿಕ 5 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ಪಾವತಿಯಿಂದ ವಿನಾಯ್ತಿಯಿದೆ. 5 ಲಕ್ಷ ರು.ದಿಂದ 10 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.20 ಹಾಗೂ 10 ಲಕ್ಷ ರು.ಗಿಂತ ಹೆಚ್ಚಿನ ಆದಾಯಕ್ಕೆ ಶೇ.30ರಷ್ಟುತೆರಿಗೆ ವಿಧಿಸಲಾಗುತ್ತದೆ. ಈ ತೆರಿಗೆ ದರಗಳು ಈ ವರ್ಷವೂ ಹೀಗೇ ಮುಂದುವರೆಯುತ್ತವೆ.

ಕೇಂದ್ರದಿಂದ ಕರ್ನಾಟಕಕ್ಕೆ 30 ಸಾವಿರ ಕೋಟಿ ಬಾಕಿ: ಬಾಯ್ಬಿಡದ ಸರ್ಕಾರ!

ಆದರೆ, ಹಳೆಯ ವ್ಯವಸ್ಥೆಯ ಜೊತೆಗೇ ಹೊಸ ಆದಾಯ ತೆರಿಗೆ ವ್ಯವಸ್ಥೆಯೊಂದನ್ನು ಸರ್ಕಾರ ಪರಿಚಯಿಸಿದೆ. ಇದು ತೆರಿಗೆದಾರರಿಗೆ ಐಚ್ಛಿಕವಾಗಿದ್ದು, ತಮಗೆ ಬೇಕಿದ್ದರೆ ಮಾತ್ರ ಅವರು ಈ ಹೊಸ ವ್ಯವಸ್ಥೆಯಡಿ ಆದಾಯ ತೆರಿಗೆ ಪಾವತಿಸಬಹುದು. ಇಲ್ಲದಿದ್ದರೆ ಹಳೆಯ ವ್ಯವಸ್ಥೆಯಲ್ಲೇ ತೆರಿಗೆ ಪಾವತಿಸಬಹುದು. ಹೊಸ ವ್ಯವಸ್ಥೆಯಡಿ ತೆರಿಗೆ ಪಾವತಿಸುವವರಿಗೆ ಆದಾಯ ತೆರಿಗೆ ಕಾಯ್ದೆಯಡಿ ಲಭಿಸುತ್ತಿದ್ದ ವಿವಿಧ ರೀತಿಯ ವಿನಾಯ್ತಿಗಳು ಅನ್ವಯಿಸುವುದಿಲ್ಲ. ಅವುಗಳನ್ನು ರದ್ದುಪಡಿಸಲಾಗಿದೆ.

ಹೊಸ ತೆರಿಗೆ ವ್ಯವಸ್ಥೆ ಜಾರಿಯಿಂದ ಸರ್ಕಾರಕ್ಕೆ ವಾರ್ಷಿಕವಾಗಿ 40,000 ಕೋಟಿ ನಷ್ಟವಾಗಲಿದೆ ಎಂದು ನಿರ್ಮಲಾ ಹೇಳಿದ್ದಾರೆ.

ಹೊಸ ವ್ಯವಸ್ಥೆಯಡಿ ತೆರಿಗೆ ಇಳಿಕೆ:

ಹೊಸ ವ್ಯವಸ್ಥೆಯಡಿ 5 ಲಕ್ಷ ರು.ವರೆಗಿನ ಆದಾಯಕ್ಕೆ ಈ ಮೊದಲಿನ ಹಳೆಯ ವ್ಯವಸ್ಥೆಯಲ್ಲಿರುವಂತೆ ತೆರಿಗೆ ಪಾವತಿಯಿಂದ ವಿನಾಯ್ತಿಯಿದೆ. 5 ಲಕ್ಷ ರು.ನಿಂದ 7.5 ಲಕ್ಷ ರು. ಎಂಬ ಹೊಸ ಸ್ಲಾ್ಯಬ್‌ ಸೇರಿಸಲಾಗಿದ್ದು, ಈ ಮೊತ್ತದ ಆದಾಯಕ್ಕೆ ಶೇ.10ರಷ್ಟುತೆರಿಗೆ ವಿಧಿಸಲಾಗುತ್ತದೆ (ಹಳೆ ವ್ಯವಸ್ಥೆಯಲ್ಲಿ ಶೇ.20 ತೆರಿಗೆಯಿದೆ). 7.5 ಲಕ್ಷ ರು.ನಿಂದ 10 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.15ರಷ್ಟುತೆರಿಗೆ ವಿಧಿಸಲಾಗುತ್ತದೆ (ಹಳೆ ವ್ಯವಸ್ಥೆಯಲ್ಲಿ ಶೇ.20 ತೆರಿಗೆಯಿದೆ). ಹಾಗೆಯೇ, 10 ಲಕ್ಷ ರು.ನಿಂದ 12.5 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.20ರಷ್ಟುತೆರಿಗೆ ವಿಧಿಸಲಾಗುತ್ತದೆ (ಹಳೆ ವ್ಯವಸ್ಥೆಯಲ್ಲಿ ಶೇ.30 ತೆರಿಗೆಯಿದೆ). 12.5 ಲಕ್ಷ ರು.ನಿಂದ 15 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.25ರಷ್ಟುತೆರಿಗೆ ವಿಧಿಸಲಾಗುತ್ತದೆ (ಹಳೆ ವ್ಯವಸ್ಥೆಯಲ್ಲಿ ಶೇ.30 ತೆರಿಗೆಯಿದೆ). 15 ಲಕ್ಷ ರು.ಗಿಂತ ಹೆಚ್ಚು ವಾರ್ಷಿಕ ಆದಾಯವಿದ್ದರೆ ಶೇ.30ರಷ್ಟುತೆರಿಗೆ ವಿಧಿಸಲಾಗುತ್ತದೆ.

5 ಲಕ್ಷ ರು.ಗಿಂತ ಕಡಿಮೆ ಆದಾಯವಿರುವವರು ಹೊಸ ವ್ಯವಸ್ಥೆಯಲ್ಲಾಗಲೀ ಹಳೆಯ ವ್ಯವಸ್ಥೆಯಲ್ಲಾಗಲೀ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಹೊಸ ತೆರಿಗೆ ವ್ಯವಸ್ಥೆಯಿಂದ ಮಧ್ಯಮ ವರ್ಗದ ತೆರಿಗೆ ಪಾವತಿದಾರರಿಗೆ ಹೆಚ್ಚು ಉಳಿತಾಯವಾಗಲಿದೆ ಎಂದು ಸಚಿವೆ ನಿರ್ಮಲಾ ಹೇಳಿದ್ದಾರೆ.

ಬಜೆಟ್‌ನಲ್ಲಿ ಮೋದಿ ಭರವಸೆ ಈಡೇರಿಸಿಲ್ಲ: ಈಶ್ವರ ಖಂಡ್ರೆ

ಎಷ್ಟು ತೆರಿಗೆ ಉಳಿಸಬಹುದು:

ಹೊಸ ವ್ಯವಸ್ಥೆಯಡಿ ಜನರಿಗೆ ಹೇಗೆ ಅನುಕೂಲವಾಗಲಿದೆ ಎಂದು ನಿರ್ಮಲಾ ಸೀತಾರಾಮನ್‌ ಉದಾಹರಣೆಯೊಂದನ್ನು ನೀಡಿದ್ದಾರೆ. ನಿಮಗೆ ವರ್ಷಕ್ಕೆ 15 ಲಕ್ಷ ರು. ಆದಾಯವಿದೆ ಎಂದಿಟ್ಟುಕೊಳ್ಳಿ. ಆಗ, ಹೊಸ ವ್ಯವಸ್ಥೆಯಡಿ ನೀವು ಯಾವುದೇ ವಿನಾಯ್ತಿಗಳನ್ನು ಪಡೆಯದೆಯೇ ವರ್ಷಕ್ಕೆ 1,95,000 ರು. ತೆರಿಗೆ ಪಾವತಿಸುತ್ತೀರಿ. ಹಳೆಯ ವ್ಯವಸ್ಥೆಯಲ್ಲಿ 2,73,000 ರು. ತೆರಿಗೆ ಪಾವತಿಸಬೇಕಾಗುತ್ತದೆ. ಅಂದರೆ, ಹೊಸ ವ್ಯವಸ್ಥೆಯಲ್ಲಿ ತೆರಿಗೆ ಪಾವತಿದಾರರಿಗೆ 78,000 ರು. ಉಳಿತಾಯವಾಗಲಿದೆ. ಇವರು ಹಳೆಯ ವ್ಯವಸ್ಥೆಯಲ್ಲಿ ವಿವಿಧ ಆದಾಯ ತೆರಿಗೆ ವಿನಾಯ್ತಿಗಳನ್ನು ಪಡೆದ ಮೇಲೆ ಪಾವತಿಸುವುದಕ್ಕಿಂತಲೂ ಹೊಸ ವ್ಯವಸ್ಥೆಯಲ್ಲಿ ತೆರಿಗೆ ಉಳಿತಾಯವಾಗಲಿದೆ.

ಯಾವ ವ್ಯವಸ್ಥೆ ಒಳ್ಳೆಯದು:

ತಮ್ಮ ಆದಾಯ ಹಾಗೂ ಉಳಿತಾಯದ ವಿಧಾನವನ್ನು ಗಮನಿಸಿಕೊಂಡು ಜನರು ಹೊಸ ವ್ಯವಸ್ಥೆಯಡಿ ತೆರಿಗೆ ಪಾವತಿಸಬೇಕೋ ಅಥವಾ ಹಳೆಯ ವ್ಯವಸ್ಥೆಯಲ್ಲೇ ಉಳಿಯಬೇಕೋ ಎಂಬುದನ್ನು ನಿರ್ಧರಿಸಬಹುದು. ಹೊಸ ವ್ಯವಸ್ಥೆಯಡಿ ತೆರಿಗೆ ಪಾವತಿದಾರರಿಗೆ 80ಸಿ ರೀತಿಯ ವಿವಿಧ ರೀತಿಯ ತೆರಿಗೆ ವಿನಾಯ್ತಿಗಳು ಲಭಿಸುವುದಿಲ್ಲ. ಹೀಗಾಗಿ ನಾನಾ ರೀತಿಯ ಉಳಿತಾಯಕ್ಕೆ ತೆರಿಗೆ ವಿನಾಯ್ತಿ ಪಡೆಯುತ್ತಿರುವವರು ಬೇಕಾದರೆ ಹಳೆಯ ವ್ಯವಸ್ಥೆಯಲ್ಲೇ ಉಳಿದುಕೊಳ್ಳಬಹುದು.

ಮೊದಲೇ ಭರ್ತಿಮಾಡಿದ ಫಾರಂ:

ಹೊಸ ತೆರಿಗೆ ವ್ಯವಸ್ಥೆಯಡಿ ತೆರಿಗೆ ಪಾವತಿಸಲು ಇಚ್ಛಿಸುವವರು ಆದಾಯ ತೆರಿಗೆ ತಜ್ಞರು ಅಥವಾ ಅಕೌಂಟೆಂಟ್‌ಗಳ ಬಳಿಗೆ ಹೋಗಬೇಕಿಲ್ಲ. ಸರ್ಕಾರವೇ ‘ಪೂರ್ವಭರ್ತಿ ಮಾಡಿದ’ ಆದಾಯ ತೆರಿಗೆ ರಿಟನ್ಸ್‌ರ್‍ ಫಾಮ್‌ರ್‍ ಅನ್ನು ಜನರಿಗೆ ನೀಡಲಿದೆ. ಅದನ್ನು ಡೌನ್‌ಲೋಡ್‌ ಮಾಡಿಕೊಂಡು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದರಾಯಿತು.

70 ತೆರಿಗೆ ವಿನಾಯ್ತಿಗಳು ರದ್ದು

ವಿವಿಧ ರೀತಿಯ ಆದಾಯ ತೆರಿಗೆ ವಿನಾಯ್ತಿಗಳನ್ನು ಪಡೆಯುತ್ತಿದ್ದ ಉಳಿತಾಯದಾರರಿಗೆ ಈ ಬಾರಿಯ ಬಜೆಟ್‌ ಶಾಕ್‌ ನೀಡಿದೆ. ಆದಾಯ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಸುಮಾರು 70 ರೀತಿಯ ತೆರಿಗೆ ವಿನಾಯ್ತಿಗಳನ್ನು ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ ರದ್ದುಗೊಳಿಸಿದ್ದಾರೆ. ಇನ್ನೂ ಸುಮಾರು 30 ರೀತಿಯ ವಿನಾಯ್ತಿಗಳು ಉಳಿದಿದ್ದು, ಅವುಗಳನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸುವುದಾಗಿ ಹೇಳಿದ್ದಾರೆ. ಆದರೆ, ರದ್ದುಗೊಳಿಸಿದ ವಿನಾಯ್ತಿಗಳು ಯಾವುವು ಹಾಗೂ ಉಳಿಸಿಕೊಂಡಿರುವ ವಿನಾಯ್ತಿಗಳು ಯಾವುವು ಎಂಬ ಪಟ್ಟಿಯನ್ನು ಅವರು ನೀಡಿಲ್ಲ.

ಗಮನಾರ್ಹ ಸಂಗತಿ ಏನೆಂದರೆ, ಹೊಸ ತೆರಿಗೆ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ಪಾವತಿ ಮಾಡುವವರಿಗೆ ಮಾತ್ರ 70 ರೀತಿಯ ವಿನಾಯ್ತಿಗಳು ರದ್ದಾಗಿವೆ. ಹಳೆಯ ವ್ಯವಸ್ಥೆಯಲ್ಲೇ ತೆರಿಗೆ ಪಾವತಿಸುವವರಿಗೆ ವಿಮೆ, ಉಳಿತಾಯ, ಆರೋಗ್ಯ ವೆಚ್ಚವೂ ಸೇರಿದಂತೆ 80ಸಿ ಅಡಿ ಮತ್ತು ಇನ್ನಿತರ ರೀತಿಯಲ್ಲಿ ಲಭಿಸುತ್ತಿದ್ದ ಆದಾಯ ತೆರಿಗೆ ವಿನಾಯ್ತಿಗಳು ಈಗಲೂ ಲಭಿಸಲಿವೆ.

ಐಡಿಬಿಐ ಬ್ಯಾಂಕ್‌ ಖಾಸಗಿಗೆ ಮಾರಾಟ: ನಿರ್ಮಲಾ ಸೀತಾರಾಮನ್‌

‘ಕಳೆದ ಹಲವು ದಶಕಗಳಿಂದ ಆದಾಯ ತೆರಿಗೆ ಕಾಯ್ದೆಗೆ ನೂರಕ್ಕೂ ಹೆಚ್ಚು ವಿನಾಯ್ತಿಗಳನ್ನು ಸೇರ್ಪಡೆಗೊಳಿಸಲಾಗಿದೆ. ಹೊಸ ಸರಳೀಕೃತ ತೆರಿಗೆ ವ್ಯವಸ್ಥೆಯಲ್ಲಿ ನಾನು ಸುಮಾರು 70 ವಿನಾಯ್ತಿಗಳನ್ನು ತೆಗೆದುಹಾಕಿದ್ದೇನೆ. ತೆರಿಗೆ ದರ ಇಳಿಸಲು ಮತ್ತು ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಲು ಮುಂದಿನ ವರ್ಷಗಳಲ್ಲಿ ಇನ್ನಷ್ಟುವಿನಾಯ್ತಿಗಳನ್ನು ಕಡಿತಗೊಳಿಸುವ ಬಗ್ಗೆ ಪರಿಶೀಲಿಸಲಾಗುವುದು’ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಯಾವ್ಯಾವ ವಿನಾಯ್ತಿ ರದ್ದು?

ಹೊಸ ಆದಾಯ ತೆರಿಗೆ ಪಾವತಿ ವ್ಯವಸ್ಥೆಯಡಿ ತೆರಿಗೆ ಪಾವತಿಸುವವರಿಗೆ ಬಹುತೇಕ ಎಲ್ಲಾ ಪ್ರಮುಖ ಆದಾಯ ತೆರಿಗೆ ವಿನಾಯ್ತಿಗಳನ್ನು ರದ್ದುಪಡಿಸಲಾಗಿದೆ. ಅವುಗಳ ಪಟ್ಟಿಇಲ್ಲಿದೆ:

- ಗೃಹ ಸಾಲದ ಬಡ್ಡಿ, ಜೀವವಿಮೆ ಪ್ರೀಮಿಯಂ, ಮಕ್ಕಳ ಟ್ಯೂಶನ್‌ ಫೀ, ಪಿಎಫ್‌

- ಸೆಕ್ಷನ್‌ 10(5) ಅಡಿ ಲಭಿಸುತ್ತಿದ್ದ ರಜೆ ಪ್ರವಾಸ ಭತ್ಯೆ

- ಸೆಕ್ಷನ್‌ 10(13ಎ) ಅಡಿ ಲಭಿಸುತ್ತಿದ್ದ ಮನೆ ಬಾಡಿಗೆ ಭತ್ಯೆ

- ಸೆಕ್ಷನ್‌ 16ರಡಿ ಲಭಿಸುತ್ತಿದ್ದ 50,000 ರು. ಸ್ಟಾಂಡರ್ಡ್‌ ಡಿಡಕ್ಷನ್‌, ಮನರಂಜನಾ ಭತ್ಯೆ

- ತಾವೇ ವಾಸವಿರುವ ಅಥವಾ ಖಾಲಿಯಿರುವ ಮನೆಯ ಮೇಲಿನ ಸಾಲಕ್ಕೆ ಪಾವತಿಸುವ ಬಡ್ಡಿ

- ಸೆಕ್ಷನ್‌ 35ಎಡಿ ಅಥವಾ ಸೆಕ್ಷನ್‌ 35ಸಿಸಿಸಿ ಅಡಿ ಲಭಿಸುತ್ತಿದ್ದ ವಿನಾಯ್ತಿ

- ಆದಾಯ ತೆರಿಗೆ ಕಾಯ್ದೆಯ 6ಎ ಅಧ್ಯಾಯದಲ್ಲಿರುವ (80ಸಿ, 80ಸಿಸಿಸಿ, 80ಸಿಸಿಡಿ, 80ಡಿ, 80ಡಿಡಿ, 80ಡಿಡಿಬಿ, 80ಇ, 80ಇಇಎ, 80ಇಇಬಿ, 80ಜಿ, 80ಜಿಜಿ, 80ಜಿಜಿಎ, 80ಜಿಜಿಸಿ, 80-ಐಎಬಿ, 80-ಐಎಸಿ, 80-ಐಬಿ, 80-ಐಬಿಎ ಇತ್ಯಾದಿ) ಯಾವುದೇ ರೀತಿಯ ವಿನಾಯ್ತಿ

- ಸಂಸದರು ಹಾಗೂ ಶಾಸಕರಿಗೆ ಲಭಸುತ್ತಿದ್ದ ಕೆಲ ಭತ್ಯೆಗಳು

- ನೌಕರರಿಗೆ ಕಂಪನಿಯಿಂದ ಲಭಿಸುವ ಆಹಾರ ಹಾಗೂ ಪಾನೀಯ ಕೂಪನ್‌ಗಳು

click me!