ರಾಜ್ಯಕ್ಕೆ ಕೇಂದ್ರದ ತೆರಿಗೆ ಪಾಲು 9000 ಕೋಟಿ ರು. ಖೋತಾ| ಹೊಸ ಮಾನದಂಡಗಳ ಪರಿಣಾಮದಿಂದ ಕರ್ನಾಟಕ್ಕೆ ನಷ್ಟ| ಆಂಧ್ರ ತೆಲಂಗಾಣಕ್ಕೂ ಆರ್ಥಿಕ ನಷ್ಟ| ಬಿಹಾರ, ಮಹಾರಾಷ್ಟ್ರ, ರಾಜಸ್ಥಾನಕ್ಕೆ ಹೊಸ ನೀತಿಯಿಂದ ಲಾಭ
ನವದೆಹಲಿ[ಫೆ.03]: 15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಇದರಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡಬೇಕಾಗಿರುವ ಕೇಂದ್ರೀಯ ತೆರಿಗೆಗಳ ಮಾನದಂಡವನ್ನು ಬದಲಿಸಲಾಗಿದೆ. ಇದರಿಂದಾಗಿ ಕರ್ನಾಟಕ ಸೇರಿದಂತೆ ದಕ್ಷಿಣದ ಕೆಲವು ರಾಜ್ಯಗಳಿಗೆ ಬರುವ ಕೇಂದ್ರೀಯ ತೆರಿಗೆ ಪಾಲಿನಲ್ಲಿ ಭಾರೀ ಹೊಡೆತ ಬೀಳಲಿದೆ. ಕರ್ನಾಟಕಕ್ಕೆ ಸುಮಾರು 9 ಸಾವಿರ ಕೋಟಿ ರು.ನಿಂದ 11 ಸಾವಿರ ಕೋಟಿ ರು. ತೆರಿಗೆ ಪಾಲು ಕಡಿತವಾಗುವ ಸಾಧ್ಯತೆ ಇದೆ. ಇದು ಈಗಾಗಲೇ ಕಳೆದ ಬಜೆಟ್‌ನಲ್ಲಿ ಕೇಂದ್ರದಿಂದ ಘೋಷಣೆಯಾಗಿದ್ದ 30000 ಕೋಟಿ ತೆರಿಗೆ ಬಾಕಿಯನ್ನೇ ಪಡೆಯದ ಕರ್ನಾಟಕಕ್ಕೆ ಭಾರೀ ಹೊಡೆತ ನೀಡುವ ಎಲ್ಲಾ ಸಾಧ್ಯತೆ ಇದೆ. ಜೊತೆಗೆ ಮುಂಬರುವ ಕರ್ನಾಟಕ ಬಜೆಟ್‌ನಲ್ಲಿ ವಿವಿಧ ಯೋಜನೆಗಳಿಗೆ ಹಣಕಾಸು ಒದಗಿಸುವಲ್ಲೂ ಕರ್ನಾಟಕಕ್ಕೆ ಭಾರೀ ಸಮಸ್ಯೆ ತಂದೊಡ್ಡಲಿದೆ ಎನ್ನಲಾಗಿದೆ.
ಹೊಸ ಮಾನದಂಡದಿಂದ ಕರ್ನಾಟಕವಷ್ಟೇ ಅಲ್ಲ, ಕೇರಳ, ತೆಲಂಗಾಣ, ಆಂಧ್ರಪ್ರದೇಶಕ್ಕೆ ಬರಬೇಕಿರುವ ಕೇಂದ್ರೀಯ ತೆರಿಗೆಯಲ್ಲಿನ ಪಾಲಿಗೂ ಹೊಡೆತ ಬೀಳಲಿದೆ. ಆದರೆ, ಈಶಾನ್ಯ ರಾಜ್ಯಗಳು, ಮಹಾರಾಷ್ಟ್ರ, ರಾಜಸ್ಥಾನ, ಅರುಣಾಚಲ ಪ್ರದೇಶ ಹಾಗೂ ಬಿಹಾರಗಳಿಗೆ ಇದರಿಂದ ಲಾಭವಾಗಲಿದೆ.
undefined
ಕೇಂದ್ರದಿಂದ ಕರ್ನಾಟಕಕ್ಕೆ 30 ಸಾವಿರ ಕೋಟಿ ಬಾಕಿ: ಬಾಯ್ಬಿಡದ ಸರ್ಕಾರ!
ಕರ್ನಾಟಕಕ್ಕೆ 14ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರೀಯ ತೆರಿಗೆಯಲ್ಲಿ ಶೇ.4.71ರಷ್ಟುಪಾಲು ದೊರೆತಿತ್ತು. ಇದು 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.3.65ಕ್ಕೆ ಇಳಿಯಲಿದೆ. ಅಂದರೆ ಬರುವ ಕೇಂದ್ರೀಯ ತೆರಿಗೆ ಪಾಲಿನಲ್ಲಿ ಶೇ.22.5ರಷ್ಟುಕುಸಿತವಾಗಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಈ ಹಿಂದೆ 14ನೇ ಹಣಕಾಸು ಆಯೋಗ 5 ವರ್ಷದ ಅವಧಿಗೆ, ಕೇಂದ್ರೀಯ ತೆರಿಗೆಯಲ್ಲಿನ ರಾಜ್ಯಗಳ ಪಾಲಿನ ಬಗ್ಗೆ ಶಿಫಾರಸುಗಳನ್ನು ಮಾಡುತ್ತಿತ್ತು. ಆದರೆ ಈಗ 15ನೇ ಹಣಕಾಸು ಆಯೋಗವು 6 ವರ್ಷದ ಅವಧಿಗೆ ತನ್ನ ಶಿಫಾರಸನ್ನು ಸಲ್ಲಿಸಲಿದೆ. ಇದರ ಮೊದಲ ಭಾಗವಾಗಿ 2020-21ನೇ ಸಾಲಿಗೆ (1 ವರ್ಷದ ಅವಧಿಗೆ) ಮಧ್ಯಂತರ ಶಿಫಾರಸನ್ನು ಅದು ಸಲ್ಲಿಸಿದ್ದು, ಶನಿವಾರ ಸಂಸತ್ತಿನಲ್ಲಿ ಮಂಡನೆಯಾಯಿತು. ಸಂಸದ ಎನ್.ಕೆ. ಸಿಂಗ್ ನೇತೃತ್ವದ ಆಯೋಗವು ಅಂತಿಮ ವರದಿಯನ್ನು ವರ್ಷಾಂತ್ಯಕ್ಕೆ ಸಲ್ಲಿಸಲಿದೆ.
ಕರ್ನಾಟಕಕ್ಕೆ ಹೊಡೆತ ಹೇಗೆ?:
2015-16ರಿಂದ 2019-20ನೇ ಸಾಲಿನಲ್ಲಿ 14ನೇ ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಗಳ ಪಾಲು ಶೇ.42 ಆಗಿತ್ತು. ಹಿಂದಿನ ಶೇ.32ರ ಪಾಲನ್ನು ಅದು ಶೇ.42ಕ್ಕೆ ಹೆಚ್ಚಿಸಿತ್ತು. ಆದರೆ 15ನೇ ಹಣಕಾಸು ಆಯೋಗದ ವರದಿಯಲ್ಲಿ ರಾಜ್ಯಗಳ ಪಾಲನ್ನು ಶೇ.41ಕ್ಕೆ ಇಳಿಸಲಾಗಿದೆ. ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಮಾಡಿರುವುದು ಹಾಗೂ ಜಮ್ಮು-ಕಾಶ್ಮೀರ ವಿಭಜಿಸಿ ಲಡಾಖ್ ಕೇಂದ್ರಾಡಳಿತ ಪ್ರದೇಶ ಸೃಷ್ಟಿಸಿ, ಹೆಚ್ಚು ಪಾಲು ನೀಡಿರುವುದು ಶೇ.1ರಷ್ಟುಇಳಿಕೆಗೆ ಕಾರಣ.
ಇದೇ ವೇಳೆ, ರಾಜ್ಯಗಳ ತಲಾದಾಯ ಹಾಗೂ ದೇಶದ ತಲಾದಾಯವನ್ನು ತುಲನೆ ಮಾಡಿ ಅದರ ಆಧಾರದಲ್ಲಿಯೂ ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಗಳಿಗೆ ಎಷ್ಟುಪಾಲು ನೀಡಬೇಕು ಎಂದು ನಿರ್ಧರಿಸಲಾಗುತ್ತದೆ. ರಾಜ್ಯಗಳ ತಲಾದಾಯ ದೇಶದ ತಲಾದಾಯಕ್ಕಿಂತ ಹೆಚ್ಚಿದ್ದರೆ ಅಂಥ ರಾಜ್ಯಗಳಿಗೆ ಕಡಿಮೆ ತೆರಿಗೆ ಪಾಲನ್ನು ನೀಡಲಾಗುತ್ತದೆ. ರಾಜ್ಯಗಳ ತಲಾದಾಯ ದೇಶದ ತಲಾದಾಯಕ್ಕಿಂತ ಕಮ್ಮಿ ಇದ್ದರೆ ಅಂಥ ರಾಜ್ಯಗಳಿಗೆ ಹೆಚ್ಚು ತೆರಿಗೆ ಪಾಲು ಲಭಿಸುತ್ತದೆ. ಈ ಮಾನದಂಡಕ್ಕೆ ಈವರೆಗೆ ಶೇ.50ರಷ್ಟುಪ್ರಾಮುಖ್ಯತೆ (ವೆಯ್ಟೇಜ್) ನೀಡಲಾಗುತ್ತಿತ್ತು. ಇದೀಗ ಇದರ ಪ್ರಾಮುಖ್ಯತೆಯನ್ನು ಶೇ.45ಕ್ಕೆ ಇಳಿಸಲಾಗಿದೆ. ಇದರಿಂದಾಗಿಯೂ ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳ ತೆರಿಗೆ ಪಾಲಿಗೆ ಹೊಡೆತ ಬೀಳಬಹುದು ಎನ್ನಲಾಗಿದೆ.
ಹೊಸ ತೆರಿಗೆ ವ್ಯವಸ್ಥೆ ಅನುಸರಿಸಿದ್ರೆ 70 ತೆರಿಗೆ ವಿನಾಯ್ತಿಗಳು ರದ್ದು!
ಆದರೆ, ‘ಜನಸಂಖ್ಯೆ ಇಳಿಕೆಗೆ ಕ್ರಮ ಜರುಗಿಸಿದ ಕಾರಣ ನಮ್ಮ ತೆರಿಗೆ ಪಾಲಿಗೆ ಹೊಡೆತ ಬಿದ್ದಿದೆ. ಕಮ್ಮಿ ಜನಸಂಖ್ಯೆ ಇರುವ ನಮಗೆ ಕಡಿಮೆ ತೆರಿಗೆ ಪಾಲು ಸಿಗುತ್ತಿದೆ. ಹೆಚ್ಚು ಜನಸಂಖ್ಯೆ ಇರುವ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ತೆರಿಗೆ ಪಾಲು ಲಭಿಸುತ್ತಿದೆ’ ಎಂದು ಕರ್ನಾಟಕದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ದಕ್ಷಿಣ ಭಾರತದ ಮುಖ್ಯಮಂತ್ರಿಗಳು ಈ ಹಿಂದೆ ಆರೋಪಿಸಿದ್ದರು. ದಕ್ಷಿಣ ಭಾರತದ ರಾಜ್ಯಗಳ ಈ ಅಳಲಿಗೆ 15ನೇ ಹಣಕಾಸು ಆಯೋಗ ಓಗೊಟ್ಟಿದೆ. ಜನಸಂಖ್ಯೆ ಆಧರಿಸಿ ತೆರಿಗೆ ಪಾಲು ಹಂಚುವುದರ ಪ್ರಾಮುಖ್ಯತೆಯನ್ನು ಶೇ.27.5ರಿಂದ ಶೇ.15ಕ್ಕೆ ಇಳಿಸಿದೆ. ಅರಣ್ಯ ಹಾಗೂ ಪರಿಸರದ ಮೇಲಿನ ಮಾನದಂಡವನ್ನು ಶೇ.7.5ರಿಂದ ಶೇ.10ಕ್ಕೆ ಹೆಚ್ಚಿಸಿದೆ.
ಕೇಂದ್ರೀಯ ತೆರಿಗೆಯಲ್ಲಿ ಈ ರಾಜ್ಯಗಳಿಗೆ ಹೊಡೆತ
ಖೋತಾ ಆಗಿದ್ದು ಹೇಗೆ?
1.ತೆರಿಗೆಯಲ್ಲಿ ರಾಜ್ಯಗಳ ಒಟ್ಟು ಪಾಲು ಶೇ.1 ಕಡಿತ
2.ರಾಜ್ಯಗಳ ತಲಾದಾಯದ ಆಧಾರದಲ್ಲಿ ಪಾಲು ಹಂಚಿಕೆ ಮಾಡುತ್ತಿರುವುದರಿಂದ ದಕ್ಷಿಣದ ರಾಜ್ಯಗಳಿಗೆ ನಷ್ಟ
3.ಹೆಚ್ಚಿನ ತಲಾದಾಯದ ರಾಜ್ಯಕ್ಕೆ ಕಡಿಮೆ ತೆರಿಗೆ ಪಾಲು
ಫೆಬ್ರವರಿ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ