
ನವದೆಹಲಿ: ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ದೇಶದ ಪ್ರಮುಖ 10 ಕ್ಷೇತ್ರಗಳ ಭವಿಷ್ಯದ ಅಭಿವೃದ್ದಿ ಗಮನದಲ್ಲಿಟ್ಟುಕೊಂಡು ಮಹತ್ವದ ಘೋಷಣೆ ಮಾಡಿದೆ. ಈ ಬಜೆಟ್‌ನಿಂದ ಯಾರಿಗೇನು ಲಾಭ ಎನ್ನುವುದನ್ನು ನೋಡೋಣ ಬನ್ನಿ.
ಗ್ರಾಮೀಣ ಕೃಷಿಯನ್ನು ಉತ್ತೇಜಿಸುವ ಮತ್ತು ಆಧುನೀಕರಿಸುವ ನಿಟ್ಟಿನಲ್ಲಿ ತೋಟಗಾರಿಕೆ, ಮೀನುಗಾರಿಗೆ ಮತ್ತು ಡಿಜಿಟಲ್ ವ್ಯವಸಾಯಕ್ಕೆ ಒತ್ತು ಕೊಡಲಾಗಿದೆ. ಉತ್ಪಾದನೆ ಹೆಚ್ಚಿಸಲು ಹಳೆ ಹಾಗೂ ನಿರುಪಯುಕ್ತ ತೆಂಗಿನ ಮರಗಳ ಬದಲಿಗೆ ಹೊಸದನ್ನು ನೆಡಲಾಗುವುದು. ಇದರಿಂದ 1 ಕೋಟಿ ರೈತರು ಸೇರಿದಂತೆ 3 ಕೋಟಿ ಜನರಿಗೆ ಉಪಯೋಗವಾಗಲಿದೆ. ಗೇರು ಮತ್ತು ಕೋಕೋವನ್ನು ಜಾಗತಿಕ ಮಟ್ಟದಲ್ಲಿ ಪ್ರೀಮಿಯಂ ಬ್ರ್ಯಾಂಡ್ ಮಾಡಲು ಕಾರ್ಯಕ್ರಮಗಳನ್ನು ಪರಿಚಯಿಸಲಾಗಿದೆ. ಶ್ರೀಗಂಧ ಮರಗಳ ಪುನರುಜ್ಜೀವನಕ್ಕೂ ಪ್ರೋತ್ಸಾಹ ಸಿಗಲಿದೆ.
ಮೀನುಗಾರಿಕೆಗಾಗಿ 500 ಜಲಾಶಯ ಮತ್ತು ಅಮೃತ ಸರೋವರಗಳನ್ನು ನಿರ್ಮಿಸಲಾಗುವುದು. ಬೆಳೆಗಳ ಬಗ್ಗೆ ಉತ್ತಮ ನಿರ್ಧಾರಗಳನ್ನು ಮಾಡಲು, ಅಪಾಯಗಳನ್ನು ತಗ್ಗಿಸಿ ಉತ್ತಮ ಇಳುವರಿ ಪಡೆಯುವಲ್ಲಿ ವ್ಯವಸಾಯಗಾರರಿಗೆ ಅನುಕೂಲ ಮಾಡಿಕೊಡಲು ‘ಭಾರತ್-ವಿಸ್ತಾರ್’ ಎಂಬ ಎಐ ಆಧರಿತ ವೇದಿಕೆಯನ್ನು ಪರಿಚಯಿಸಲಾಗಿದೆ.
ಶಿಕ್ಷಣ ಮತ್ತು ಕೈಗಾರಿಕೆಯನ್ನು ಬೆಸೆಯುವ ಸಲುವಾಗಿ ಕೈಗಾರಿಕಾ ಪ್ರದೇಶಗಳ ಬಳಿ 5 ಯೂನಿವರ್ಸಿಟಿ ಟೌನ್‌ಶಿಪ್‌ಗಳನ್ನು ಸ್ಥಾಪಿಸಿ, ಪೂರ್ವ ಭಾರತದಲ್ಲಿ ರಾಷ್ಟ್ರೀಯ ವಿನ್ಯಾಸ ಸಂಸ್ಥೆಗಳ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿದೆ. ಸ್ತ್ರೀ ಶಿಕ್ಷಣವನ್ನು ಉತ್ತೇಜಿಸಲು ಎಲ್ಲಾ ಜಿಲ್ಲೆಗಳ ಸ್ಟೆಮ್(ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಸಂಸ್ಥೆಗಳಲ್ಲಿ ಮಹಿಳೆಯರಿಗಾಗಿ ವಸತಿ ಗೃಹಗಳನ್ನು ಸ್ಥಾಪಿಸಲಾಗುವುದು. ಖಗೋಳ ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರ ಸಂಶೋಧನೆಯನ್ನು ಉತ್ತೇಜಿಸಲು 4 ಹೊಸ ಅಥವಾ ನವೀಕೃತ ದೂರದರ್ಶಕ ಮೂಲಸೌಕರ್ಯ ಸೌಲಭ್ಯಗಳ ಭರವಸೆ ನೀಡಲಾಗಿದೆ. ಕೌಶಲ್ಯಾಭಿವೃದ್ಧಿ, ಉದ್ಯೋಗ ಮತ್ತು ಎಐ ತಂತ್ರಜ್ಞಾನವ ಒಟ್ಟುಗೂಡಿಸಲು ಕೇಂದ್ರ ಸರ್ಕಾರ ಸ್ಥಾಯಿ ಸಮಿತಿಯೊಂದನ್ನು ಸ್ಥಾಪಿಸಲಿದೆ.
ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗಾಗಿ 10,000 ಕೋಟಿ ರು. ಅನುದಾನ ನೀಡಲಾಗುವುದು. ಸ್ವಾವಲಂಬಿ ಭಾರತ ನಿಧಿಗೆ 2,000 ಕೋಟಿ ರು. ನೀಡಲಾಗುವುದು. ಟ್ರೆಡ್ಸ್ (ವ್ಯಾಪಾರ ಸ್ವೀಕೃತಿ ರಿಯಾಯಿತಿ ವ್ಯವಸ್ಥೆ) ಅಡಿ 7 ಲಕ್ಷ ಕೋಟಿ ರು. ನೀಡಲಾಗುವುದು. ಅನುಸರಣಾ ಒತ್ತಣವನ್ನು ತಗ್ಗಿಸಲು ಟೈರ್-2 ಮತ್ತು ಟೈರ್-3 ನಗರಗಳಲ್ಲಿ ‘ಕಾರ್ಪೊರೇಟ್ ಮಿತ್ರಾ’ ಎಂಬ ಕೇಡರ್ ಶುರು ಮಾಡಲಾಗುವುದು.
ದೇಶದಲ್ಲಿ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಮುಂದಿನ 1 ವರ್ಷದಲ್ಲಿ 1 ಲಕ್ಷ ಆರೋಗ್ಯ ವೃತ್ತಿಪರರು (ರೋಗಗಳ ಪತ್ತೆ, ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸುವವರು), 1.5 ಲಕ್ಷ ಆರೈಕೆ ಮಾಡುವವರನ್ನು ಪಳಗಿಸಲಾಗುವುದು. 3 ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಮತ್ತು ನಿಮ್ಹಾನ್ಸ್-2 ಸ್ಥಾಪಿಸಲಾಗುವುದು. ಹೊಸ ತುರ್ತು ಮತ್ತು ಆಘಾತ ಆರೈಕೆ ಕೇಂದ್ರಗಳ ನಿರ್ಮಾಣದ ಮೂಲಕ ಜಿಲ್ಲಾಸ್ಪತ್ರೆಗಳ ಸಾಮರ್ಥ್ಯವನ್ನು ಶೇ.50ರಷ್ಟು ಹೆಚ್ಚಿಸಲಾಗುವುದು.
ಇದರ ಬಲವರ್ಧನೆಯ ಉದ್ದೇಶದಿಂದ ವಿಕಸಿತ ಭಾರತಕ್ಕಾಗಿ ಬ್ಯಾಂಕಿಂಗ್ ಕುರಿತ ಉನ್ನತ ಮಟ್ಟದ ಸಮಿತಿಯು ಆ ವಲಯವನ್ನು ಪರಿಶೀಲಿಸುತ್ತದೆ. ಬ್ಯಾಂಕೇತರ ಹಣಕಾಸು ಕಂಪನಿಗಳನ್ನು ಪುನರ್ರಚಿಸಲಾಗುವುದು. 1,000 ಕೋಟಿ ರು.ಗಿಂತ ಅಧಿಕ ಮುನಿಸಿಪಲ್ ಬಾಂಡ್‌ಗಳನ್ನು ಬಿಡುಗಡೆ ಮಾಡುವ ನಗರಗಳಿಗೆ ಹೆಚ್ಚುವರಿ 100 ಕೋಟಿ ರು. ನೀಡಲಾಗುವುದು. ಅನಿವಾಸಿ ಭಾರತೀಯರು ಭಾರತದ ಕಂಪನಿಗಳ ಮೇಲೆ ಮಾಡುವ ಹೂಡಿಕೆಯನ್ನೂ ಹೆಚ್ಚಿಸಲಾಗಿದೆ.
ಇನ್ನುಮುಂದೆ ಸಾಫ್ಟ್‌ವೇರ್ ಸೇವೆ, ಐಟಿ ಸೇವೆ, ಕೆಪಿಒ(ಪರಿಣಿತ ಸೇವೆಗಳ ಹೊರಗುತ್ತಿಗೆ), ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಮಾಹಿತಿ ತಂತ್ರಜ್ಞಾನ ಸೇವೆಗಳ ಅಡಿಯಲ್ಲಿ ಪರಿಗಣಿಸಲಾಗುವುದು. ಇವುಗಳಿಗೆ ಸೇಫ್ ಹಾರ್ಬರ್ ಮಾರ್ಜಿನ್(ಕಂಪನಿಯೊಂದರ ಲಾಭ ನಿಗದಿತ ಶೇಕಡವಾರು ತಲುಪಿದರೆ, ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟು ದೊಡ್ಡ ವ್ಯವಹಾರವನ್ನಾದರೂ ಮುಕ್ತವಾಗಿ ಮಾಡಬಹುದು)ಅನ್ನು ಶೇ.15.5ರಷ್ಟು ನಿಗದಿಪಡಿಸಲಾಗಿದೆ. ಇದನ್ನು 300 ಕೋಟಿ ರು.ನಿಂದ ಏಕಾಏಕಿ 2,000 ಕೋಟಿ ರು.ಗೆ ಹೆಚ್ಚಿಸಲಾಗಿದೆ. ಪರಿಣಾಮ ಮಧ್ಯಮ ಗಾತ್ರದ ಐಟಿ ಕಂಪನಿಗಳು ನಿರಾಳವಾಗಿವೆ.
ವೇಗವಾದ ರೈಲು ಸಾರಿಗೆಯನ್ನು ಕಲ್ಪಿಸಲು ಹೈದರಾಬಾದ್–ಚೆನ್ನೈ, ಮುಂಬೈ–ಪುಣೆ, ಪುಣೆ–ಹೈದರಾಬಾದ್, ದೆಹಲಿ–ವಾರಣಾಸಿ, ಮತ್ತು ವಾರಾಣಸಿ–ಸಿಲಿಗುರಿಯಂತಹ 7 ರೈಲ್ವೆ ಕಾರಿಡಾರ್‌ಗಳನ್ನು ಘೋಷಿಸಲಾಗಿದೆ. ಇದರಿಂದ ಪ್ರಯಾಣದ ಸಮಯ ತಗ್ಗುವುದರ ಜತೆಗೆ ನಗರಗಳ ಅಭಿವೃದ್ಧಿ ತ್ವರಿತವಾಗಿ, ಸ್ಥಳೀಯ ಆರ್ಥಿಕತೆಗೆ ಉತ್ತೇಜನ ಸಿಗುತ್ತದೆ.
ಈ ಕ್ಷೇತ್ರವನ್ನು ವಿಸ್ತರಿಸಲು ಪ್ರವಾಸಿಗರಿಗೆ ಅಗತ್ಯ ಅನುಕೂಲಗಳನ್ನು ಒದಗಿಸಬೇಕು. ಇದಕ್ಕಾಗಿ ಆಯುಷ್ ಕೇಂದ್ರ ಮತ್ತು ಆರೈಕೆ ಸೌಲಭ್ಯಗಳುಳ್ಳ 5 ಪ್ರಾದೇಶಿಕ ವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಪ್ರಸ್ತುತ ಇರುವ ಹೋಟೆಲ್ ನಿರ್ವಹಣಾ ಮಂಡಳಿಯನ್ನು ‘ರಾಷ್ಟ್ರೀಯ ಆತಿಥ್ಯ ಸಂಸ್ಥೆ’ಯಾಗಿ ಮಾರ್ಪಡಿಸಲಾಗುವುದು. ದೇಶದ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಪರಂಪರೆಯ ತಾಣಗಳನ್ನು ಗುರುತಿಸಿ, ರಾಷ್ಟ್ರೀಯ ಡೆಸ್ಟಿನೇಷನ್ ಡಿಜಿಟಲ್ ಜ್ಞಾನ ಗ್ರಿಡ್ ಅಭಿವೃದ್ಧಿಪಡಿಸಲಾಗುವುದು. ಜತೆಗೆ 15 ಸಾಂಪ್ರದಾಯಿಕ ಪುರಾತತ್ವ ಸ್ಥಳಗಳ ಅಭಿವೃದ್ಧಿಪಡಿಸಿ, ಈಶಾನ್ಯದಲ್ಲಿನ ಬೌದ್ಧ ಸರ್ಕ್ಯೂಟ್ ಯೋಜನೆಗಳನ್ನು ಬಲಪಡಿಸಲಾಗುವುದು.
ವಿಕಲಾಂಗರಿಗೆ ಕೈಗಾರಿಕಾ ಕೌಶಲ್ಯಗಳನ್ನು ಕಲಿಸಲು ‘ದಿವ್ಯಾಂಗಜನ ಕೌಶಲ್ ಯೋಜನೆ’ ಪರಿಚಯಿಸಲಾಗಿದೆ. ಜತೆಗೆ, ಅಂತಹವರಿಗೆ ಕೃತಕ ಅಂಗಾಗ, ಊರುಗೋಲು, ಬ್ರೈಲ್ ಸಾಧನಗಳ ಅಭಿವೃದ್ಧಿಗೆ ಅಲಿಮ್ಕೋ ಮತ್ತು ಪಿಎಂ ದಿವ್ಯಾಶಾ ಕೇಂದ್ರಗಳು ಒಟ್ಟಾಗಿ ‘ದಿವ್ಯಾಂಗ ಸಹಾರಾ ಯೋಜನೆ’ಯನ್ನೂ ಜಾರಿಗೆ ತರಲಾಗಿದೆ.
ದಶಕದಲ್ಲಿ ಕ್ರೀಡಾಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಮಾಡಲು ಖೇಲೋ ಇಂಡಿಯಾ ಮಿಷನ್ ಘೋಷಣೆಯಾಗಿದೆ. ಇದು ಪ್ರತಿಭೆಗಳ ಗುರುತಿಸುವಿಕೆ, ತರಬೇತುದಾರರ ಅಭಿವೃದ್ಧಿ, ಕ್ರೀಡಾ ವಿಜ್ಞಾನ ಏಕೀಕರಣ ಮತ್ತು ಆಧುನಿಕ ಕ್ರೀಡಾ ಮೂಲಸೌಕರ್ಯಗಳ ಸೃಷ್ಟಿಯತ್ತ ಗಮನ ಹರಿಸುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.