ಆರ್‌ಬಿಐನ ದ್ವೈಮಾಸಿಕ ಹಣಕಾಸು ನೀತಿ ಶುಕ್ರವಾರ ಪ್ರಕಟವಾಗಿದ್ದು, ನಿರೀಕ್ಷೆಯಂತೆಯೇ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
ಮುಂಬೈ (ಅ.7): ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ದ್ವೈಮಾಸಿಕ ಹಣಕಾಸು ನೀತಿ ಶುಕ್ರವಾರ ಪ್ರಕಟವಾಗಿದ್ದು, ನಿರೀಕ್ಷೆಯಂತೆಯೇ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಮತ್ತೊಂದೆಡೆ, ಹಣದುಬ್ಬರ ಪ್ರಮುಖ ಸವಾಲಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಅದನ್ನು ಹತ್ತಿಕ್ಕಲು ಬಾಂಡ್ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡುವ ಮೂಲಕ ಮಾರುಕಟ್ಟೆಗೆ ಆರ್‌ಬಿಐ ಅಚ್ಚರಿ ನೀಡಿದೆ.
ಈವರೆಗೆ ಹಣದುಬ್ಬರವನ್ನು ಬಡ್ಡಿ ದರ ಏರಿಕೆಯ ಮೂಲಕ ನಿಗ್ರಹಿಸಲು ಆರ್‌ಬಿಐ ಯತ್ನಿಸುತ್ತಲೇ ಬಂದಿತ್ತು. ಆದರೆ ಇದೀಗ ತನ್ನ ನಿಲುವಿನಲ್ಲಿ ಅದು ಬದಲಾವಣೆ ಮಾಡಿಕೊಂಡಿದ್ದು, ಹಣದುಬ್ಬರವನ್ನು ತನ್ನ ಗುರಿಯ ಸನಿಹಕ್ಕೆ ತರಲು ಬಾಂಡ್ ಬಿಡುಗಡೆ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿದೆ.
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿರುವ ಹೆಚ್ಚುವರಿ ಹಣವನ್ನು ಸೆಳೆಯಲು ಬಾಂಡ್ ಬಿಡುಗಡೆ ಕುರಿತು ಪರಿಶೀಲಿಸಲಾಗುತ್ತದೆ. ಅದರ ಸಮಯ ಹಾಗೂ ಪ್ರಮಾಣವು ಹಣಕಾಸಿನ ಸನ್ನಿವೇಶವನ್ನು ಆಧರಿಸಿರಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಸ್ಥೂಲ ಆರ್ಥಿಕತೆಯ ಸ್ಥಿರತೆ ಹಾಗೂ ಸುಸ್ಥಿರ ಪ್ರಗತಿಗೆ ಹಣದುಬ್ಬರ ಎಂಬುದು ಸವಾಲು ಎಂದು ಗುರುತಿಸಲಾಗಿದೆ. ಅದನ್ನು ಶೇ.4ರ ಗಡಿಗೆ ತರಲು ಆರ್‌ಬಿಐ ಪ್ರಯತ್ನಿಸುತ್ತಿದೆ. ಜುಲೈನಲ್ಲಿ 15 ತಿಂಗಳ ದಾಖಲೆಯ ಮಟ್ಟವಾದ ಶೇ.7.44ಕ್ಕೆ ತಲುಪಿದ್ದ ಚಿಲ್ಲರೆ ಹಣದುಬ್ಬರ, ಆಗಸ್ಟ್‌ನಲ್ಲಿ ಶೇ.6.83ಕ್ಕೆ ಮುಟ್ಟಿದೆ. ಇದು ಶೇ.2ರಿಂದ ಶೇ.6ರೊಳಗೆ ಇರಬೇಕು ಎಂಬುದು ಆರ್‌ಬಿಐನ ನಿರೀಕ್ಷೆಯಾಗಿದೆ.
4ನೇ ಬಾರಿ ಬಡ್ಡಿ ದರ ಯಥಾಸ್ಥಿತಿ: ಈ ನಡುವೆ, ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು, ರೆಪೋ ದರವನ್ನು ಶೇ.6.50ರಷ್ಟೇ ಇಟ್ಟುಕೊಳ್ಳಲು ಆರ್‌ಬಿಐನ ಹಣಕಾಸು ಸಮಿತಿ ನಿರ್ಧರಿಸಿದೆ. ಈ ರೀತಿ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುತ್ತಿರುವುದು ಇದು ಸತತ 4ನೇ ಬಾರಿ.
Highlights of the Monetary Policy announcement today by Governor Shri . pic.twitter.com/ucXMgf4O4G
— ReserveBankOfIndia (@RBI)