ನೀವು ಹೊಸದಾಗಿ ಉದ್ಯೋಗಕ್ಕೆ ಸೇರ್ಪಡೆಗೊಂಡಿದ್ದರೆ ನಿಮ್ಮ ಇಪಿಎಫ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡೋದು ಕಡ್ಡಾಯ. ನಿಮ್ಮ ಇಪಿಎಫ್ ಯುಎಎನ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಈ ಕೆಳಗಿನ ಸರಳ ವಿಧಾನವನ್ನು ಅನುಸರಿಸಿ.
Business Desk:ತಿಂಗಳ ವೇತನ ಪಡೆಯೋರು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆ ಹೊಂದಿರುತ್ತಾರೆ. ಇಪಿಎಫ್ ಖಾತೆಗೆ ಸೂಕ್ತ ಮೊಬೈಲ್ ಸಂಖ್ಯೆ ನೀಡೋದು ಅಗತ್ಯ. ಒಂದು ವೇಳೆ ನೀವು ಹೊಸ ಉದ್ಯೋಗಿಯಾಗಿದ್ದು, ಇಪಿಎಫ್ ಖಾತೆಗೆ ನಾಮಿನಿ ಸೇರ್ಪಡೆ, ವಿತ್ ಡ್ರಾ ಕ್ಲೇಮ್ ಮಾಡಲು ಸೂಕ್ತ ಮೊಬೈಲ್ ಸಂಖ್ಯೆ ನೀಡೋದು ಅಗತ್ಯ. ಎಫ್ ಖಾತೆ ಹೊಂದಿರೋ ನೌಕರರಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಒಂದು ಸಂಖ್ಯೆ ನೀಡಿರುತ್ತದೆ. ಇದನ್ನು ಯುನಿವರ್ಸಲ್ ಅಕೌಂಟ್ ನಂಬರ್ (UAN) ಎಂದು ಕರೆಯಲಾಗುತ್ತದೆ. ಈ ಸಂಖ್ಯೆ ಅತ್ಯಂತ ಮುಖ್ಯವಾಗಿದ್ದು, ನೀವು ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ಸೇರಿದ ಬಳಿಕವೂ ಈ ಸಂಖ್ಯೆ ಮುಂದುವರಿಯುತ್ತದೆ. ಅಂದ್ರೆ ಈ ಸಂಖ್ಯೆಯ ಮೂಲಕ ನೀವು ಇನ್ನೊಂದು ಸಂಸ್ಥೆಗೆ ಉದ್ಯೋಗಕ್ಕೆ ಸೇರಿದ ಬಳಿಕವೂ ಈ ಹಿಂದಿನ ಪಿಎಫ್ ಖಾತೆಯನ್ನು ಮುಂದುವರಿಸಲು ಸಾಧ್ಯ. ಇನ್ನು ಪಾಸ್ ಬುಕ್ ನಲ್ಲಿ ಬ್ಯಾಲೆನ್ಸ್ ಅಪ್ಡೇಟ್, ಅಡ್ವಾನ್ಸ್ ವಿತ್ ಡ್ರಾ ಹಾಗೂ ನಿವೃತ್ತಿ ಬಳಿಕದ ಅಂತಿಮ ಸೆಟ್ಲಮೆಂಟ್ ಸೇರಿದಂತೆ ಇಪಿಎಫ್ ಖಾತೆಯಿಂದ ಮಾಡುವ ಎಲ್ಲ ವಹಿವಾಟುಗಳಿಗೆ ಯುಎಎನ್ ಸಂಖ್ಯೆ ಕಡ್ಡಾಯ. ಇಪಿಎಫ್ ಮಾರ್ಗಸೂಚಿಗಳ ಅನ್ವಯ ನೀವು ಯುಎಎನ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡೋದು ಕಡ್ಡಾಯ.
ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಯುಎಎನ್ ಜೊತೆಗೆ ಲಿಂಕ್ ಮಾಡಿದ ಬಳಿಕ ಭವಿಷ್ಯ ನಿಧಿ ಖಾತೆಗೆ ಸಂಬಂಧಿಸಿದ ಎಲ್ಲ ಅಪ್ಡೇಟ್ ಗಳು ಕೂಡ ಸಿಗುತ್ತವೆ. ಒಂದು ವೇಳೆ ನೀವು ಉದ್ಯೋಗಿಗಳ ಭವಿಷ್ಯ ನಿಧಿಗೆ ಹೊಸ ಸದಸ್ಯರಾಗಿದ್ದು, ಇನ್ನೂ ಮೊಬೈಲ್ ಸಂಖ್ಯೆಯನ್ನು ಯುಎಎನ್ ಗೆ ಲಿಂಕ್ ಮಾಡದಿದ್ರೆ ತಕ್ಷಣ ಮಾಡಿ. ಹಾಗೆಯೇ ನೀವು ಮೊಬೈಲ್ ಸಂಖ್ಯೆ ಬದಲಾಯಿಸಿದ್ದರೆ ಅದನ್ನು ಕೂಡ ನಿಮ್ಮ ಇಪಿಎಫ್ ಒ ಪ್ರೊಫೈಲ್ ನಲ್ಲಿ ಅಪ್ಡೇಟ್ ಮಾಡೋದು ಅಗತ್ಯ. ಅಂದಹಾಗೇ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನೇ ಇಪಿಎಫ್ ಒ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಬೇಕು.
ಇಪಿಎಫ್ ಕುರಿತ ದೂರುಗಳನ್ನು ಎಲ್ಲಿ ದಾಖಲಿಸಬಹುದು? ಹೇಗೆ? ಇಲ್ಲಿದೆ ಮಾಹಿತಿ
ಯುಎಎನ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡೋದು ಹೇಗೆ?
*ಮೊದಲಿಗೆ ಇಪಿಎಫ್ ಒ ಅಧಿಕೃತ ವೆಬ್ ಸೈಟ್ www.epfindia.gov.in/site_en/index.php ಭೇಟಿ ನೀಡಿ.
*ಆ ಬಳಿಕ ಮುಖಪುಟದಲ್ಲಿ 'For Employees'ಆಯ್ಕೆ ಮೇಲೆ ಕ್ಲಿಕ್ ಮಾಡಿ.
*ನಂತರ ಲಾಗಿನ್ ಪುಟ ತೆರೆಯಲು 'Member UAN/Online services'ಆಯ್ಕೆ ಮಾಡಿ.
*ಯುಎಎನ್ ಸಂಖ್ಯೆ, ಪಾಸ್ ವರ್ಡ್ ಹಾಗೂ ಒಟಿಪಿ ಬಳಸಿ ಲಾಗಿನ್ ಆಗಿ.
*ಆ ಬಳಿಕ 'Contact details'ಆಯ್ಕೆ ಮೇಲೆ ಕ್ಲಿಕ್ ಮಾಡಿ.
*ನಂತರ ನೀವು ಪರಿಶೀಲನೆ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು ಹಾಗೂ ಮೊಬೈಲ್ ಸಂಖ್ಯೆ ಬದಲಾಯಿಸಬೇಕು.
*ಆ ಬಳಿಕ ಆಧಾರ್ ಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಬೇಕು ಹಾಗೂ 'Get OTP'ಮೇಲೆ ಕ್ಲಿಕ್ ಮಾಡಬೇಕು.
* ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿ ನಮೂದಿಸಿ ಮನವಿ ಸಲ್ಲಿಕೆ ಮಾಡಿ.
EPF ಖಾತೆ ಮಾಹಿತಿ ಅಪ್ಡೇಟ್ ಮಾಡಲು ಹೊಸ ನಿಯಮ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ
ವೇತನ ಮಾಹಿತಿ ಸಲ್ಲಿಕೆ ಗಡುವು ವಿಸ್ತರಣೆ
ಇತ್ತೀಚೆಗಷ್ಟೇ ಇಪಿಎಫ್ ಒ ಉದ್ಯೋಗದಾತ ಸಂಸ್ಥೆಗಳಿಗೆ ಅಧಿಕ ಪಿಂಚಣಿ ಆಯ್ಕೆಗೆ ಸಂಬಂಧಿಸಿ ಉದ್ಯೋಗಿಗಳ ವೇತನ ಹಾಗೂ ಇತರ ಮಾಹಿತಿಗಳನ್ನು ಅಪ್ಲೋಡ್ ಮಾಡಲು ನೀಡಿರುವ ಗಡುವನ್ನು ಡಿಸೆಂಬರ್ 31ರ ತನಕ ವಿಸ್ತರಿಸಿದೆ. ಉದ್ಯೋಗದಾತ ಸಂಸ್ಥೆಗಳು ಹಾಗೂ ಅವರ ಸಂಘಟನೆಗಳಿಂದ ಅನೇಕ ಮನವಿಗಳು ಬಂದ ಹಿನ್ನೆಲೆಯಲ್ಲಿ ಗಡುವನ್ನು ಇಪಿಎಫ್ ಒ ವಿಸ್ತರಿಸಿದೆ. ಈ ವರ್ಷದ ಜುಲೈ 12ರ ತನಕ ಸುಮಾರು 1.8 ಮಿಲಿಯನ್ ಪಿಂಚಣಿದಾರರು ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 5.52 ಲಕ್ಷ ಅರ್ಜಿಗಳು ದೃಢೀಕರಣ ಅಥವಾ ಜಂಟಿ ಆಯ್ಕೆಗಳಿಗೆ ಸಂಬಂಧಿಸಿದಂತೆ ಇನ್ನೂ ಉದ್ಯೋಗದಾತರ ಬಳಿಯೇ ಬಾಕಿ ಉಳಿದಿವೆ ಎಂದು ಇಪಿಎಫ್ ಒ ತಿಳಿಸಿದೆ.