
Business Desk:ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ನಮ್ಮ ಪ್ರತಿಯೊಂದು ನಿರ್ಧಾರ, ಯೋಚನೆಗಳ ಮೇಲೆ ಪ್ರಭಾವ ಬೀರುತ್ತಿದೆ. ಹೀಗಿರುವಾಗ ಆರೋಗ್ಯ, ಹಣಕಾಸು, ಹೂಡಿಕೆ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿ ಬಿಟ್ಟಿ ಸಲಹೆ ನೀಡುವವರ ಸಂಖ್ಯೆಯೂ ಹೆಚ್ಚಿದೆ. ಒಂದರ್ಥದಲ್ಲಿ ಎಲ್ಲರೂ ಈಗ ಆರೋಗ್ಯ ತಜ್ಞರು, ಆರ್ಥಿಕ ತಜ್ಞರು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಇತ್ತೀಚೆಗೆ ಹೂಡಿಕೆ ಸಲಹೆಗೆ ಸಂಬಂಧಿಸಿದ ಟ್ವೀಟ್ ವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಟ್ವೀಟ್ ಓದಿದ ತಕ್ಷಣ ದುಡ್ಡು ಉಳಿಸೋದು, ಹೂಡಿಕೆ ಮಾಡೋದು ಬಿಡಿ. ಹೀಗೂ ಆಲೋಚಿಸುವ ಜನರಿರುತ್ತಾರಾ ಎಂಬ ಅಚ್ಚರಿ ಮೂಡದೆ ಇರದು. ಅಂದ ಹಾಗೇ ಈ ಸೋಕಾಲ್ಡ್ ಹಣಕಾಸು ಸಲಹೆಗಾರ ನೀಡಿರುವ ಸಲಹೆ ಏನು ಗೊತ್ತಾ? ಒಳ ಉಡುಪು ಖರೀದಿಸದೆ ನೀವು ಹೇಗೆ ಲಕ್ಷಾಂತರ ರೂಪಾಯಿ ಉಳಿಸಬಹುದು ಅನ್ನೋದು. ನಂಬೋದಕ್ಕೆ ನಿಮಗೆ ಕಷ್ಟವಾಗಬಹುದು. ಆದ್ರೆ, ಈ ಹಣಕಾಸು ಸಲಹೆಗಾರ ಇದರ ಲೆಕ್ಕಾಚಾರ ಕೂಡ ನೀಡಿದ್ದಾನೆ. ಆತನ ಪ್ರಕಾರ ಒಂದು ಒಳ ಉಡುಪು ಅಂದ್ರೆ ಚಡ್ಡಿಗೆ 245ರೂ. ತಗಲುತ್ತದೆ. ಒಬ್ಬ ವ್ಯಕ್ತಿಗೆ ಕನಿಷ್ಠ 6 ಜೊತೆ ಚಡ್ಡಿಗಳು ಬೇಕಾಗುತ್ತವೆ. ಅಂದ್ರೆ ಒಟ್ಟು 1,470ರೂ. ತಗಲುತ್ತದೆ. ಹೀಗೆ ಈತ ಜೀವನಪೂರ್ತಿ ನಾವು ಚಡ್ಡಿ ಖರೀದಿಸಲು ಎಷ್ಟು ಖರ್ಚು ಮಾಡುತ್ತೇವೆ ಎಂಬುದರ ಲೆಕ್ಕ ನೀಡಿದ್ದಾನೆ. ಹಾಗಾದ್ರೆ ಚಡ್ಡಿ ಖರೀದಿಸದೆ ಉಳಿಸಿದ ಹಣವನ್ನು ಏನ್ ಮಾಡ್ಬೇಕು ಎಂಬ ಸಲಹೆಯನ್ನು ಈತ ನೀಡಿದ್ದಾನೆ? ನೋಡೋಣ ಬನ್ನಿ.
ಎಟರ್ನಲ್ ಫೂಲ್ ಎಂಬ ಟ್ವಿಟ್ಟರ್ ಬಳಕೆದಾರ ಇತ್ತೀಚೆಗೆ ಮಾಡಿರುವ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈತನ ಪ್ರಕಾರ ಒಬ್ಬ ವ್ಯಕ್ತಿಗೆ ಕನಿಷ್ಠ 6 ಜೊತೆ ಚಡ್ಡಿಗಳು ಬೇಕು. ಇನ್ನು ಬಡವನಾದ್ರೆ 3 ಚಡ್ಡಿಗಳಾದ್ರೂ ಬೇಕು. ಒಂದು ಚಡ್ಡಿಗೆ ಕಡಿಮೆ ಅಂದ್ರೂ 245ರೂ. ತಗಲುತ್ತದೆ. ಅಂದ್ರೆ 6 ಚಡ್ಡಿಗೆ 1,470ರೂ. ಖರ್ಚಾಗುತ್ತದೆ. ಹಾಗಾದ್ರೆ ಈತನ ಪ್ರಕಾರ ಚಡ್ಡಿ ಹಾಕದೆ ಉಳಿಸಿದ 1,470ರೂ. ಹಣವನ್ನು ಏನ್ ಮಾಡ್ಬೇಕು? ಇಂಡೆಕ್ಸ್ ಫಂಡ್ ನಲ್ಲಿ ಹೂಡಿಕೆ ಮಾಡಬೇಕು ಎಂಬ ಸಲಹೆಯನ್ನು ಈ ಪುಣ್ಯಾತ್ಮ ನೀಡಿದ್ದಾನೆ. ಶೇ.12ರಷ್ಟು ಬಡ್ಡಿ ನೀಡುವ ಇಂಡೆಕ್ಸ್ ಫಂಡ್ ನಲ್ಲಿ 1,470ರೂ. ಹಣವನ್ನು 30 ವರ್ಷಗಳ ಅವಧಿಗೆ ಹೂಡಿಕೆ ಮಾಡಿದ್ರೆ 44,048ರೂ. ಗಳಿಸಬಹುದಂತೆ.
ಈತನ ಲೆಕ್ಕಾಚಾರ ಇಷ್ಟಕ್ಕೆ ನಿಲ್ಲಲಿಲ್ಲ. ಹವಮಾನ ಬದಲಾವಣೆಯಿಂದ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಹೀಗಾಗಿ ಚಡ್ಡಿಗಳು ಬೇಗ ಹರಿದು ಹೋಗುತ್ತವಂತೆ ಹೀಗಾಗಿ ಪ್ರತಿ ವರ್ಷ ಹೆಚ್ಚುವರಿ 6 ಚಡ್ಡಿಗಳು ಬೇಕಾಗುತ್ತವೆ. ಅಂದ್ರೆ ವರ್ಷಕ್ಕೆ 12 ಚಡ್ಡಿಗಳು.ಈಗ ನೀವು ವರ್ಷಕ್ಕೆ ಚಡ್ಡಿ ಮೇಲೆ 1,470ರೂ. ವ್ಯಯಿಸುತ್ತಿದ್ದೀರಿ ಅಂದಾದ್ರೆ 1,470ರೂ. ರಿಂದ 12 ಭಾಗಿಸಿ. ಆಗ ತಿಂಗಳಿಗೆ 122ರೂ. ಅನ್ನು ಚಡ್ಡಿ ಮೇಲೆ ಖರ್ಚು ಮಾಡಬೇಕಾಗುತ್ತದೆ. ಈಗ ಈ 122ರೂ.ಅನ್ನು ಶೇ.12ರಷ್ಟು ನಿರೀಕ್ಷಿತ ಬೆಳವಣಿಗೆ ದರದಲ್ಲಿ 50 ವರ್ಷಗಳ ಅವಧಿಗೆ ಹೂಡಿಕೆ ಮಾಡಿದ್ರೆ 48,12,769ರೂ. ಸಿಗುತ್ತದೆ. ಆರ್ ಬಿಐ ಹಾಗೂ ಜವಳಿ ಸಚಿವಾಲಯದ ಪ್ರಕಾರ ದೇಶದಲ್ಲಿ ಸರಾಸರಿ ಒಳ ಉಡುಪು ಹಣದುಬ್ಬರ ಶೇ.8ರಷ್ಟಿದೆ. ಹೀಗಿರುವಾಗ 50 ವರ್ಷಗಳ ಅವಧಿಯ ನಿಮ್ಮ ಹೂಡಿಕೆಗೆ 1,15,03,406ರೂ. ಸಿಗುತ್ತದೆ. ಒಟ್ಟಾರೆ ಈತಮ ಲೆಕ್ಕಾಚಾರದ ಪ್ರಕಾರ ಪ್ರತಿವರ್ಷ ಚಡ್ಡಿ ಮೇಲೆ ಹೂಡಿಕೆ ಮಾಡುವ ಹಣವನ್ನು SIPಯಲ್ಲಿ ಹೂಡಿಕೆ ಮಾಡಿದ್ರೆ ನೀವು ಕೋಟ್ಯಧೀಶರಾಗ್ಬಹುದು!
ಅದಾನಿ ಸಮೂಹ ಷೇರುಗಳ ಜಿಗಿತ: 2 ದಿನದಲ್ಲಿ 3,102 ಕೋಟಿ ರೂ. ಲಾಭ ಮಾಡಿಕೊಂಡ ಎನ್‌ಆರ್‌ಐ
ಇದನ್ನು ಓದಿದವರ ಮನಸ್ಸಿನಲ್ಲಿ ಹಾಗಾದ್ರೆ ಚಡ್ಡಿ ಹಾಕದೆ ಇರಲು ಆಗುತ್ತಾ? ಎಂಬ ಪ್ರಶ್ನೆ ಮೂಡೋದು ಸಹಜ. ಇದಕ್ಕೂ ಹಣಕಾಸು ಸಲಹೆಗಾರ ಉತ್ತರ ನೀಡಿದ್ದಾನೆ. ಚಡ್ಡಿ ಬದಲು ನ್ಯೂಸ್ ಪೇಪರ್, ಎಲೆಗಳು ಅಥವಾ ಬಳಕೆ ಮಾಡಿದ ಬಟ್ಟೆಗಳಿಂದ ಸಿದ್ಧಪಡಿಸಿದ ಚಡ್ಡಿ ಬಳಸುವಂತೆ ಸಲಹೆ ನೀಡಿದ್ದಾನೆ. ಈತನ ಟ್ವೀಟ್ ವೈರಲ್ ಆಗಿದ್ದು, 76 ಸಾವಿರಕ್ಕೂ ಅಧಿಕ ವೀಕ್ಷಣೆಯಾಗಿದ್ದು, 2 ಸಾವಿರಕ್ಕೂ ಅಧಿಕ ಲೈಕ್ ಗಳನ್ನು ಪಡೆದಿದೆ. ಅಲ್ಲದೆ, ಅನೇಕ ಬಾರಿ ರೀಟ್ವೀಟ್ ಕೂಡ ಆಗಿದೆ. ಇದಕ್ಕೆ ಅನೇಕರು ಮಜವಾಗಿರುವ ಪ್ರತಿಕ್ರಿಯೆಗಳನ್ನು ಕೂಡ ನೀಡಿದ್ದಾರೆ. ಅದೇನೇ ಇರಲಿ, ಕೇಳೋದಕ್ಕೆ ಮಜವಾಗಿರುವ ಈ ಸಲಹೆಯನ್ನು ವಾಸ್ತವದಲ್ಲಿ ಪಾಲಿಸಲು ಆಗುತ್ತಾ?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.