ಬಜೆಟ್‌ ಹೇಗೆ ತಯಾರಾಗುತ್ತೆ ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

By Web Desk  |  First Published Feb 1, 2019, 7:50 AM IST

ಪ್ರತಿ ವರ್ಷ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಬಜೆಟ್‌ ಅನ್ನು ಸಿದ್ಧಪಡಿಸುತ್ತದೆ. ಬಳಿಕ ಅದನ್ನು ಹಣಕಾಸು ಸಚಿವರು ಸಂಸತ್ತಿನಲ್ಲಿ ಮಂಡಿಸುತ್ತಾರೆ. ಬಜೆಟ್‌ ಮಂಡಿಸುವುದಕ್ಕೂ ಮುನ್ನ ಸಾಕಷ್ಟುಪೂರ್ವ ಸಿದ್ಧತೆಗಳನ್ನು ಮಾಡಬೇಕಾಗುತ್ತದೆ. ಸುಮಾರು 6 ತಿಂಗಳ ಮುನ್ನವೇ ಬಜೆಟ್‌ ತಯಾರಿಯ ಪ್ರಕ್ರಿಯೆ ಶುರುವಾಗುತ್ತದೆ. ಈ ಪ್ರಕ್ರಿಯೆಯನ್ನು 5 ಹಂತವಾಗಿ ವಿಂಗಡಿಸಬಹುದು.


ಬಜೆಟ್‌ ತಯಾರಿಯ 5 ಹಂತಗಳು

1. ಆರಂಭಿಕ ಹಂತ

Tap to resize

Latest Videos

undefined

ಬಜೆಟ್‌ ಮಂಡನೆಯ ಆರು ತಿಂಗಳು ಮುನ್ನ ಅಂದರೆ, ಆಗಸ್ಟ್‌- ಸೆಪ್ಟೆಂಬರ್‌ನಲ್ಲೇ ಬಜೆಟ್‌ ತಯಾರಿಸುವ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸಂಬಂಧಿಸಿದ ಖರ್ಚು ವೆಚ್ಚದ ವಿವರಗಳು ಮತ್ತು ಬೇಡಿಕೆಗಳ ಕುರಿತು ಹಣಕಾಸು ಸಚಿವಾಲಯ ಪ್ರಾಥಮಿಕ ಮಾಹಿತಿ ಪಡೆದುಕೊಳ್ಳುತ್ತದೆ. ಈ ಮಾಹಿತಿಯನ್ನು ಪ್ರತಿ ಇಲಾಖೆಗಳು ಲಿಖಿತ ರೂಪದಲ್ಲಿ ಹಣಕಾಸು ಸಚಿವಾಲಯಕ್ಕೆ ಸಲ್ಲಿಸಬೇಕು.

2.ಮಾಹಿತಿಗಳ ಶೇಖರಣೆ ಮತ್ತು ದತ್ತಾಂಶಗಳ ವಿಶ್ಲೇಷಣೆ

ತಳ ಮಟ್ಟದ ಅಧಿಕಾರಿಗಳಿಂದ ಪಡೆದ ಸಮಗ್ರ ಮಾಹಿತಿಯನ್ನು ಹಣಕಾಸು ಸಚಿವಾಲಯದ ಅಧಿಕಾರಿಗಳು ವಿಶ್ಲೇಷಣೆ ನಡೆಸುತ್ತಾರೆ. ಬಳಿಕ ಪರಿಷ್ಕೃತ ದತ್ತಾಂಶ ಮತ್ತು ಅಂದಾಜುಗಳನ್ನು ಪುನಃ ಸಂಬಂಧಿಸಿದ ಸಚಿವಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ಅಂತಿಮ ದತ್ತಾಂಶ ಮತ್ತು ಅಂದಾಜುಗಳನ್ನು ಹಣಕಾಸು ಸಚಿವಾಲಯಕ್ಕೆ ರವಾನಿಸಲಾಗುತ್ತದೆ. ಹಣಕಾಸು ಸಚಿವಾಲಯ ಈ ದತ್ತಾಂಶಗಳನ್ನು ಪುನಃ ವಿಶ್ಲೇಷಣೆಗೆ ಒಳಪಡಿಸಿ, ಬಜೆಟ್‌ ಅಂದಾಜಿನೊಂದಿಗೆ ಹೋಲಿಕೆ ಮಾಡುತ್ತದೆ.

3. ಬಜೆಟ್‌ ಸಂಯೋಜನೆ

ದತ್ತಾಂಶ ವಿಶ್ಲೇಷಣೆ ಮತ್ತು ಬಜೆಟ್‌ ಅಂದಾಜು ಪೂರ್ಣಗೊಂಡ ಬಳಿಕ ಹಣಕಾಸು ಸಚಿವಾಲಯ ವಿವಿಧ ಆಡಳಿತಾತ್ಮಕ ಸಚಿವಾಲಯಗಳಿಗೆ ಹಣಕಾಸು ಸಚಿವಾಲಯ ಅನುದಾನ ಹಂಚಿಕೆ ಮಾಡುತ್ತದೆ. ಹೊಸ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಇಲಾಖಾವಾರು ವಿಂಗಡನೆಗೊಳಿಸುತ್ತದೆ. ಈ ವೇಳೆ ಹಣ ಮತ್ತು ಯೋಜನೆಗಳ ಹಂಚಿಕೆ ವಿಚಾರವಾಗಿ ವಿವಿಧ ಸಚಿವಾಲಯಗಳ ಮಧ್ಯೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಇಂತಹ ಸಂದರ್ಭಗಳು ಉದ್ಭವಿಸಿದರೆ ಹಣಕಾಸು ಸಚಿವಾಲಯ ಪ್ರಧಾನಿ ಅಥವಾ ಸಂಪುಟ ಸಭೆಯ ಗಮನಕ್ಕೆ ತರುತ್ತದೆ. ಈ ವಿಷಯದಲ್ಲಿ ಪ್ರಧಾನಿ ಅಥವಾ ಸಂಪುಟ ಸಭೆಯ ನಿರ್ಣಯವೇ ಅಂತಿಮವಾಗಿರುತ್ತದೆ. ಅನುದಾನ ಹಂಚಿಕೆ ಪ್ರಕ್ರಿಯೆ ಮುಕ್ತಾಯದ ಬಳಿಕ ಹಣಕಾಸು ಸಚಿವಾಲಯ ಕೇಂದ್ರೀಯ ನೇರ ತೆರಿಗೆ ಮತ್ತು ಸುಂಕ ಮತ್ತು ಅಬಕಾರಿ ಮಂಡಳಿಯ ಜೊತೆಗೂಡಿ ಕರಡು ವರದಿಯೊಂದನ್ನು ಸಿದ್ಧಪಡಿಸುತ್ತದೆ. ಪರಿಣಾಮಕಾರಿಯಾದ ಬಜೆಟ್‌ ಅನ್ನು ರೂಪಿಸುವ ಸಲುವಾಗಿ ವರದಿಯ ಬಗ್ಗೆ ವಿವಿಧ ಕ್ಷೇತ್ರಗಳ ತಜ್ಞರ ಅಭಿಪ್ರಾಯ ಪಡೆದು ಬಜೆಟ್‌ಗೆ ಅಂತಿಮ ರೂಪ ನೀಡಲಾಗುತ್ತದೆ.

4.ಬಜೆಟ್‌ ಮುದ್ರಣ

ಹಣಕಾಸು ಸಚಿವಾಲಯದಲ್ಲಿ ಹಲ್ವಾ ತಯಾರಿಸುವ ಮೂಲಕ ಬಜೆಟ್‌ ಪ್ರತಿಗಳ ಮುದ್ರಣಕ್ಕೆ ಚಾಲನೆ ನೀಡಲಾಗುತ್ತದೆ. ಹಲ್ವಾ ತಯಾರಿಯ ಸಮಾರಂಭ ಮುಗಿದ ಬಳಿಕ ಬಜೆಟ್‌ ಪ್ರತಿಗಳನ್ನು ಮುದ್ರಣಕ್ಕೆ ಕಳುಹಿಸಿಕೊಡಲಾಗುತ್ತದೆ. ಈ ವೇಳೆ ಅಧಿಕಾರಿಗಳು ಮತ್ತು ಬಜೆಟ್‌ ಪ್ರಕ್ರಿಯೆಯಲ್ಲಿ ಭಾಗಿಯಾದ ಸಿಬ್ಬಂದಿ ಹಣಕಾಸು ಸಚಿವಾಲಯದ ಆವರಣದಲ್ಲೆ ಇರಬೇಕಾಗುತ್ತದೆ. ಬಜೆಟ್‌ ಕುರಿತ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಹೊರಗಿನ ಯಾರೊಂದಿಗೂ ಸಂಪರ್ಕದಲ್ಲಿ ಇರಿಸಿಕೊಳ್ಳ ಕೂಡದು ಎಂಬ ನಿಬಂಧನೆಯನ್ನು ಅಧಿಕರಿಗಳಿಗೆ ವಿಧಿಸಲಾಗಿರುತ್ತದೆ. ಬಜೆಟ್‌ ಮಂಡನೆ ಆಗುವವರೆಗೂ ಹಣಕಾಸು ಸಚಿವಾಲಯದ ಸಿಬ್ಬಂದಿ ಗೃಹ ಬಂಧನಕಕ್ಕೆ ಒಳಗಾಗಬೇಕಾಗುತ್ತದೆ.

5. ಬಜೆಟ್‌ ಮಂಡನೆ

ಹಣಕಾಸು ಸಚಿವರು ಸಂಸತ್ತಿನಲ್ಲಿ ಕೇಂದ್ರ ಬಜೆಟ್‌ ಅನ್ನು ಮಂಡಿಸುತ್ತಾರೆ. ಕಳೆದ ಎರಡು ವರ್ಷಗಳಿಂದ ಬಜೆಟ್‌ ಅನ್ನು ಫೆ.1ರಂದು ಮಂಡಿಸಲಾಗುತ್ತಿದೆ. ಈ ಬಾರಿ ಏಪ್ರಿಲ್‌ - ಮೇನಲ್ಲಿ ಲೋಕಸಭೆ ಚುನಾವಣೆ ನಡೆಯುವ ಕಾರಣ ಮಧ್ಯಂತರ ಬಜೆಟ್‌ ಅನ್ನು ಮಂಡಿಸಲಾಗುತ್ತದೆ. ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ಅವರು ಬೆಳಗ್ಗೆ 11 ಗಂಟೆಗೆ ಬಜೆಟ್‌ ಮಂಡಿಸಲಿದ್ದಾರೆ.

click me!