ಕನಿಕಾ ಟೆಕ್ರಿವಾಲ್ ಐಐಟಿ, ಐಐಎಂ ವಿದ್ಯಾರ್ಥಿನಿಯಲ್ಲ. ಶ್ರೀಮಂತ ಕುಟುಂದ ಹಿನ್ನೆಲೆ ಹೊಂದಿಲ್ಲ.ಆದರೂ ಈಕೆ 10 ಜೆಟ್ ವಿಮಾನಗಳ ಒಡತಿ.ಜೆಟ್ ಸೆಟ್ ಗೋ ಎಂಬ ವಾಯುಯಾನ ಆಧಾರಿತ ಸ್ಟಾರ್ಟ್ಅಪ್ ಸಿಇಒ.400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸಂಪತ್ತು ಹೊಂದಿರುವ ಈಕೆ ಭಾರತದ ಶ್ರೀಮಂತ ಮಹಿಳಾ ಉದ್ಯಮಿಗಳಲ್ಲಿ ಒಬ್ಬಳು.
Business Desk:ಈಕೆ ಬದುಕೇ ಒಂದು ಹೋರಾಟ. ಸ್ವಂತ ವಾಯುಯಾನ ಆಧಾರಿತ ಸಂಸ್ಥೆ ಹುಟ್ಟು ಹಾಕುವ ಕನಸು ಕಂಡಿದ್ದ ಈಕೆಯ ಓಟಕ್ಕೆ ಕ್ಯಾನ್ಸರ್ ಬ್ರೇಕ್ ಹಾಕಿತ್ತು. ಆದರೆ, ಈ ಮರಣಾಂತಿಕ ಕಾಯಿಲೆಯ ವಿರುದ್ಧ ಹೋರಾಟ ನಡೆಸಿ ಬದುಕುಳಿದ ಈಕೆ, ಕೊನೆಗೂ ತನ್ನ ಕನಸನ್ನು ನನಸಾಗಿಸಿಕೊಂಡಳು. ಐಐಟಿ, ಐಐಎಂನಂತಹ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯದಿದ್ದರೂ ಈಕೆ ಇಂದು 10 ಖಾಸಗಿ ಜೆಟ್ ಗಳ ಮಾಲಕಿ. ಕಿರಿಯ ವಯಸ್ಸಿನಲ್ಲೇ ಸ್ವಂತ ವಾಯುಯಾನ ಆಧಾರಿತ ಸ್ಟಾರ್ಟ್ಅಪ್ ಸ್ಥಾಪಿಸಿರುವ ಈಕೆ ಬಳಿ ಪ್ರಸ್ತುತ 10 ಖಾಸಗಿ ಜೆಟ್ ವಿಮಾನಗಳಿವೆ. ಈಕೆ ಸಂಪತ್ತಿನ ಒಟ್ಟು ಮೌಲ್ಯ 400 ಕೋಟಿ ರೂಪಾಯಿಗೂ ಅಧಿಕ. ಈಕೆ ಹೆಸರು ಕನಿಕಾ ಟೆಕ್ರಿವಾಲ್. ಜೆಟ್ ಸೆಟ್ ಗೋ ಸಂಸ್ಥೆ ಸಿಇಒ. ಭಾರತದ ಶ್ರೀಮಂತ ಮಹಿಳೆಯರಲ್ಲಿ ಈಕೆ ಕೂಡ ಒಬ್ಬಳು. ಜೆಟ್ ಸೆಟ್ ಗೋ ಕಂಪನಿ ಗ್ರಾಹಕರಿಗೆ, ಸಂಸ್ಥೆಗಳಿಗೆ ಹಾಗೂ ಉದ್ಯಮಿಗಳಿಗೆ ವಿಮಾನ, ಹೆಲಿಕಾಪ್ಟರ್ ಸೇವೆ ಒದಗಿಸುತ್ತದೆ. ಇದು ಭಾರತದ ಮೊದಲ ವಿಮಾನಯಾನ ಗುತ್ತಿಗೆಯಾಧಾರಿತ ಸಂಸ್ಥೆಯಾಗಿದ್ದು, ಅಂದಾಜು ಒಂದು ಲಕ್ಷ ಪ್ರಯಾಣಿಕರನ್ನು ನಿರ್ವಹಿಸುತ್ತಿದೆ.
ಕನಿಕಾ ಟೆಕ್ರಿವಾಲ್ ಅವರು ಜೆಟ್ ಸೆಟ್ ಗೋ ಸಂಸ್ಥೆಯನ್ನು 2012ರಲ್ಲಿ ಕೇವಲ 22ನೇ ವಯಸ್ಸಿನಲ್ಲಿ ಪ್ರಾರಂಭಿಸಿದರು. ಈ ಸಂಸ್ಥೆ ಪ್ಲೇನ್ ಅಗ್ರಗೇಟರ್ ಸ್ಟಾರ್ಟ್ ಅಪ್ ಅಗಿದ್ದು, ವಿಮಾನ ಹಾಗೂ ಹೆಲಿಕಾಪ್ಟರ್ ಸೇವೆಗಳನ್ನು ಒದಗಿಸುತ್ತದೆ. ಭೋಪಾಲ್ ನಲ್ಲಿ ಜನಿಸಿದ ಟೇಕ್ರಿವಾಲ್, ಲಾರೆನ್ಸ್ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದರು. ಅ ಬಳಿಕ ಭೋಪಾಲ್ ಜವಾಹರಲಾಲ್ ನೆಹರೂ ಸೀನಿಯರ್ ಸೆಕೆಂಡರಿ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಇನ್ನು ಕೋವೆಂಟ್ರಿ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದರು.
ಅಮೆರಿಕದಲ್ಲಿ ಹೋಟೆಲ್ ಉದ್ಯಮ ಪ್ರಾರಂಭಿಸಿ ಯಶಸ್ವಿಯಾದ ಭಾರತೀಯ ಮಹಿಳೆ; ಯಾರೀಕೆ ಆಯೇಷಾ ಥಾಪರ್?
'ಸುಮಾರು ಮೂರು ವರ್ಷಗಳಿಂದ ಸ್ವಂತ ವಾಯುಯಾನ ಆಧಾರಿತ ಸಂಸ್ಥೆ ಸ್ಥಾಪಿಸುವ ಕನಸಿತ್ತು. ಆದರೆ, ನಾನು ನನ್ನ ಕನಸಿನ ನೀಲಿ ನಕಾಶೆ ಸ್ಥಾಪಿಸಿ ಇದರ ಮೇಲೆ ಕೆಲಸ ಮಾಡಲು ಪ್ರಾರಂಭಿಸುತ್ತಿದ್ದಂತೆ ಕ್ಯಾನ್ಸರ್ ಇರೋದು ಪತ್ತೆಯಾಗಿತ್ತು. ಇದರಿಂದ ಒಂದು ವರ್ಷ ನನಗೆ ಹಿನ್ನಡೆಯಾಗಿತ್ತು' ಎಂದು ಕನಿಕಾ ಟೆಕ್ರಿವಾಲ್ ತಿಳಿಸಿದರು. 'ಅದೃಷ್ಟವಶಾತ್ ನನ್ನ ಕ್ಯಾನ್ಸರ್ ಚಿಕಿತ್ಸೆ ಮುಗಿಯುವ ತನಕ ಹಾಗೂ ಇಲ್ಲಿಯವರೆಗೆ ದೇಶಾದ್ಯಂತ ಯಾರೂ ಕೂಡ ಈ ರೀತಿ ಮಾಡುವ ಯೋಚನೆ ಹೊಂದಿರಲಿಲ್ಲ' ಎಂದು ಹೇಳಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಬಂದ ಕನಿಕಾ ತಮ್ಮ ಕನಸಿನ ಸಂಸ್ಥೆಯನ್ನು ಸ್ಥಾಪಿಸಿ ಅದನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಹೆಣ್ಣುಕೊಟ್ಟಅತ್ತೆ ಕೈಗೇ 800 ಕೋಟಿ ಮೌಲ್ಯದ ಕಂಪನಿ ನೀಡಿದ ಧೋನಿ; ಸಿಇಒ ಶೀಲಾ ಸಿಂಗ್ ಕುರಿತ ಮಾಹಿತಿ ಇಲ್ಲಿದೆ
ಹೈದರಾಬಾದ್ ಮೂಲದ ಉದ್ಯಮಿಯನ್ನು ವಿವಾಹವಾಗಿರುವ ಕನಿಕಾ ಟೆಕ್ರಿವಾಲ್ ಅವರನ್ನು ಕೋಟಕ್ ಪ್ರೈವೇಟ್ ಬ್ಯಾಂಕಿಂಗ್ ಹುರುನ್ ಲೀಡಿಂಗ್ ವೆಲ್ತಿ ವಿಮೆನ್ ಲಿಸ್ಟ್ 2021 ಭಾರತದ ಅತ್ಯಂತ ಕಿರಿಯ ಸೆಲ್ಫ್ ಮೇಡ್ ಎಂಟರ್ ಪ್ರೈನರ್ ಎಂದು ಗುರುತಿಸಿದೆ. ಇನ್ನು ಕನಿಕಾ ಅವರ ಉದ್ಯಮ ಕೌಶಲಗಳನ್ನು ಮೆಚ್ಚಿ ಅವರಿಗೆ ಅನೇಕ ಪ್ರಶಸ್ತಿಗಳು ಹಾಗೂ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ. ಇದರಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಉದ್ಯಮಿ ಪ್ರಶಸ್ತಿ, ವರ್ಲ್ಡ್ ಎಕಾನಾಮಿಕ್ ಫೋರಮ್ ಯಂಗ್ ಗ್ಲೋಬಲ್ ಲೀಡರ್ಸ್ ಪ್ರಶಸ್ತಿಗಳು ಸೇರಿವೆ.ಇನ್ನು ಈಕೆಗೆ 'ದಿ ಸ್ಕೈ ಕ್ವೀನ್' ಎಂಬ ಬಿರುದು ಕೂಡ ನೀಡಿ ಗೌರವಿಸಲಾಗಿದೆ. ಇನ್ನು ಭಾರತದ ಚಾರ್ಟೆಡ್ ಪ್ಲೇನ್ ವಲಯವನ್ನು ಬದಲಾಯಿಸಿದ ಸಂಪೂರ್ಣ ಕ್ರೆಡಿಟ್ ಕನಿಕಾ ಟೆಕ್ರಿವಾಲ್ ಅವರಿಗೆ ಸಲ್ಲುತ್ತದೆ. ಒಂದು ವಿಶಿಷ್ಟ ಆಲೋಚನೆ ಹೇಗೆ ಬದುಕಿನ ದಿಕ್ಕನ್ನು ಬದಲಾಯಿಸಬಲ್ಲದು, ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಬಲ್ಲದು ಎಂಬುದಕ್ಕೆ ಕನಿಕಾ ಟೆಕ್ರಿವಾಲ್ ಅತ್ಯುತ್ತಮ ನಿದರ್ಶನ.