ನಿಮ್ಮವರ ಭವಿಷ್ಯಕ್ಕೆ ಆರ್ಥಿಕ ಸುರಕ್ಷೆ ನೀಡಬಯಸ್ತೀರಾ? ಹಾಗಾದ್ರೆ ತಪ್ಪದೇ ಈ ಇನ್ಯುರೆನ್ಸ್‌ ಮಾಡಿಸಿ

By Suvarna NewsFirst Published Aug 27, 2021, 5:21 PM IST
Highlights

ನಿಮ್ಮನ್ನೇ ನಂಬಿರೋ ಕುಟುಂಬ ಸದಸ್ಯರ ಆರ್ಥಿಕ ಭವಿಷ್ಯವನ್ನುಸುರಕ್ಷಿತವಾಗಿಡಲು ಟರ್ಮ್‌ ಇನ್ಯುರೆನ್ಸ್‌ ಮಾಡೋದು ಉತ್ತಮ.ಆದ್ರೆ ಈ ವಿಮೆ ಖರೀದಿಸೋ ಮುನ್ನ ಕೆಲವು ವಿಚಾರ ತಿಳಿದಿರಲಿ.

ಹಿಂದೆಲ್ಲ ಜೀವ ವಿಮೆ ಮಾಡಿಸಲು ಜನರು ಹೆಚ್ಚು ಉತ್ಸುಕತೆ ತೋರುತ್ತಿದ್ದರು. ಇದ್ರಿಂದ ವಿಮೆ ಕವರೇಜ್‌ ಸಿಗೋ ಜೊತೆಗೆ ಉತ್ತಮ ರಿಟರ್ನ್ಸ್‌ ಕೂಡ ಸಿಗುತ್ತೆ ಎಂಬುದು ಅವರ ಲೆಕ್ಕಾಚಾರ. ಜೀವವಿಮೆಯನ್ನು ಸುರಕ್ಷತೆಗಾಗಷ್ಟೇ ಅಲ್ಲ, ಹೂಡಿಕೆಯ ಸಾಧನವಾಗಿಯೂ ಪರಿಗಣಿಸುತ್ತಿದ್ದರು. ಆದ್ರೆ ಇಂದು ಜನರು ಜೀವವಿಮೆಗಳಿಗಿಂತ ಟರ್ಮ್‌ ಇನ್ಯುರೆನ್ಸ್‌ ಪಾಲಿಸಿಗಳತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಅಂದ್ರೆ ಜನರು ಕೇವಲ ಸುರಕ್ಷತೆಗಾಗಷ್ಟೇ ವಿಮೆ ಖರೀದಿಸುತ್ತಿದ್ದಾರೆ. ಹೂಡಿಕೆಗೆ ಬೇರೆ ಕ್ಷೇತ್ರಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಇದ್ರಿಂದ ಕಡಿಮೆ ಹಣಕ್ಕೆ ದೊಡ್ಡ ಮೊತ್ತದ ಇನ್ಯುರೆನ್ಸ್‌ ಕವರೇಜ್‌ ಸಿಗುತ್ತಿದೆ. ಇದೇ ಕಾರಣಕ್ಕೆ ಜನರು ಟರ್ಮ್‌ ಇನ್ಯುರೆನ್ಸ್ನತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ.

ಗೃಹಸಾಲ ಮಾಡಿದೋರಿಗಷ್ಟೇ ಸಿಗುತ್ತೆ ಈ ಲೋನ್?

ಟರ್ಮ್‌ ಇನ್ಯುರೆನ್ಸ್‌ ಅಂದ್ರೇನು?
ಮನೆಯ ಆಧಾರಸ್ತಂಭವಾಗಿರೋ ವ್ಯಕ್ತಿ ಅಕಾಲಿಕವಾಗಿ ಮರಣ ಹೊಂದಿದ್ರೆ ಕುಟುಂಬ ಸದಸ್ಯರ ಬದುಕು ದುಸ್ತರವಾಗುತ್ತದೆ. ಇಂಥ ಸಮಯದಲ್ಲಿಅಗಲಿದ ವ್ಯಕ್ತಿಯು ಟರ್ಮ್‌ ಇನ್ಯುರೆನ್ಸ್‌ ಮಾಡಿದ್ರೆ ಅದು ಕುಟುಂಬ ಸದಸ್ಯರ ಬದುಕಿಗೆ ನೆರವಾಗುತ್ತದೆ. ಸರಳವಾಗಿ ಹೇಳಬೇಕೆಂದ್ರೆ ಟರ್ಮ್‌ ಇನ್ಯುರೆನ್ಸ್‌ ನಿಮ್ಮ ಬದುಕಿನ ಅನಿಶ್ಚಿತತೆಗಳಿಗೆ ಆರ್ಥಿಕ ಸುರಕ್ಷೆ ಒದಗಿಸುತ್ತದೆ. ಕುಟುಂಬದ ಆಧಾರಸ್ತಂಭವಾಗಿರೋ ಅಥವಾ ಸಾಲಗಳನ್ನು ಹೊಂದಿರೋ ವ್ಯಕ್ತಿ ತಾನು ಅಕಾಲಿಕವಾಗಿ ಮರಣ ಹೊಂದಿದರೂ ಕುಟುಂಬಕ್ಕೆ ಆರ್ಥಿಕವಾಗಿ ಯಾವುದೇ ಸಂಕಷ್ಟ ಎದುರಾಗಬಾರದು ಎಂಬ ಕಾರಣಕ್ಕೆ ಮಾಡೋ ವಿಮೆಯೇ ಟರ್ಮ್‌ ಇನ್ಯುರೆನ್ಸ್‌. ಇದರಲ್ಲಿ ವ್ಯಕ್ತಿಯ ಮರಣದ ಬಳಿಕ ಆತನ ಕುಟುಂಬ ಸದಸ್ಯರಿಗೆ ನಿಗದಿತ ಮೊತ್ತವನ್ನು ಪಾವತಿಸಲಾಗುತ್ತದೆ. 

ಕವರೇಜ್‌ ಎಷ್ಟು?
ಟರ್ಮ್‌ ಇನ್ಯುರೆನ್ಸ್‌ ಕವರೇಜ್‌ ಎಷ್ಟಿರಬೇಕು ಎಂಬುದನ್ನು ನಿರ್ಧರಿಸಲು ನೀವು ಆನ್‌ಲೈನ್‌ ಕ್ಯಾಲ್ಕುಲೇಟರ್‌ಗಳ ನೆರವು ಪಡೆಯಬಹುದು. ವಯಸ್ಸು, ಜೀವನಶೈಲಿ, ಕುಟುಂಬ ಸದಸ್ಯರು, ಪ್ರಸಕ್ತವಿರೋ ಸಾಲಗಳು, ಮಾಸಿಕ ಸರಾಸರಿ ವೆಚ್ಚ, ಹಣದುಬ್ಬರದ ಪ್ರಮಾಣವನ್ನು ಪರಿಗಣಿಸಿ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. ಎಷ್ಟು ಕವರೇಜ್‌ ತೆಗೆದುಕೊಳ್ಳಬೇಕೆಂಬ ವಿಚಾರವಾಗಿ ನೀವು ಹಣಕಾಸು ತಜ್ಞರ ಸಲಹೆಯನ್ನು ಕೂಡ ಪಡೆಯಬಹುದು.
 

ಎಷ್ಟು ಅವಧಿ?
ವಿಮೆಯ ಮೊತ್ತ ಎಷ್ಟಿರಬೇಕೆಂಬುದನ್ನು ಲೆಕ್ಕ ಹಾಕಿದ ಬಳಿಕ ಗರಿಷ್ಠ ಎಷ್ಟು ವರ್ಷಗಳ ಅವಧಿಯ ಪಾಲಿಸಿ ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಬೇಕು. ಕಡಿಮೆ ವಯಸ್ಸಿನಲ್ಲಿ ಈ ಪಾಲಿಸಿ ಖರೀದಿಸೋರು ಗರಿಷ್ಠ ವರ್ಷಗಳ ಅವಧಿಯನ್ನು ಆಯ್ದುಕೊಳ್ಳೋದು ಉತ್ತಮ. ಇದ್ರಿಂದ ಪಾಲಿಸಿ ಅವಧಿಯುದ್ದಕ್ಕೂ ಪ್ರೀಮಿಯಂ ಮೊತ್ತ ಕಡಿಮೆಯಿರುತ್ತದೆ. ಹೀಗಾಗಿ ಪ್ರೀಮಿಯಂ ಭರಿಸೋದು ದೊಡ್ಡ ಹೊರೆಯಾಗೋದಿಲ್ಲ.

ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡೋದು ಎಷ್ಟು ಸುರಕ್ಷಿತ?

ಖರೀದಿ ಹೇಗೆ?
ಏಜೆಂಟ್‌ಗಳ ಮುಖಾಂತರ ಅಥವಾ ನೇರವಾಗಿ ವಿಮಾ ಕಂಪನಿಗಳಿಂದ ಪಾಲಿಸಿಗಳನ್ನು ಖರೀದಿಸಬಹುದು. ವಿಮಾ ಕಂಪನಿಗಳ ವೆಬ್‌ಸೈಟ್‌ನಲ್ಲೇ ಟರ್ಮ್‌ ಇನ್ಯುರೆನ್ಸ್‌ ಪಾಲಿಸಿಗಳ ಅರ್ಜಿ ಲಭ್ಯವಿದ್ದು, ಅಲ್ಲಿಯೇ ಸಲ್ಲಿಸಬಹುದು. ಪ್ರೀಮಿಯಂ ಕೂಡ ಆನ್‌ಲೈನ್‌ ಮೂಲಕವೇ ಪಾವತಿಸಿ ಪಾಲಿಸಿ ಖರೀದಿಸಬಹುದು.

ಕಂಪನಿ ಆಯ್ಕೆ ಹೇಗೆ?
ಯಾವ ವಿಮಾ ಕಂಪನಿಯ ಟರ್ಮ್‌ ಇನ್ಯುರೆನ್ಸ್‌ ಖರೀದಿಸಬೇಕೆಂಬ ಗೊಂದಲ ಕಾಡೋದು ಸಹಜ. ಆದ್ರೆ ಯಾವುದೇ ವಿಮಾ ಕಂಪನಿಯಿಂದ ಪಾಲಿಸಿ ಖರೀದಿಸೋ ಮುನ್ನ ಅದರ ಇತಿಹಾಸ, ಗ್ರಾಹಕರ ಅಭಿಪ್ರಾಯ, ಆ ಸಂಸ್ಥೆಯ ಆರ್ಥಿಕ ಸ್ಥಿತಿ ಹಾಗೂ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳೋದು ಅಗತ್ಯ. ಯಾಕೆಂದ್ರೆ ನೀವು ತೊಡಗಿಸೋ ಹಣ ಸುರಕ್ಷಿತವಾಗಿರಬೇಕೆಂದ್ರೆ ಈ ಅಂಶಗಳನ್ನು ಗಮನಿಸೋದು ಅಗತ್ಯ.

ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡೋ ಉದ್ಯಮಿಗೆ ಸಿಗಲಿದೆ 50 ಲಕ್ಷ ರೂ. ಸಾಲ!

ಯಾರು ಮಾಡಬೇಕು?
ಕುಟುಂಬಕ್ಕೆ ಆಧಾರವಾಗಿರೋರು, ಸಾಲಗಳನ್ನು ಹೊಂದಿರೋರು ಕುಟುಂಬದ ಭವಿಷ್ಯದ ಆರ್ಥಿಕ ಸ್ಥಿತಿಯನ್ನು ಸುರಕ್ಷಿತವಾಗಿಡಲು ಟರ್ಮ್‌ ಇನ್ಯುರೆನ್ಸ್‌ ಮಾಡೋದು ಅಗತ್ಯ. ಒಂದು ವೇಳೆ ನೀವು ಉದ್ಯೋಗದಿಂದ ನಿವೃತ್ತರಾಗಿದ್ರೆ ಅಥವಾ ಯಾವುದೇ ಉದ್ಯೋಗ ಮಾಡುತ್ತಿಲ್ಲವಾದ್ರೆ, ನಿಮ್ಮ ಮೇಲೆ ಕುಟುಂಬ ಸದಸ್ಯರು ಅವಲಂಬಿತರಾಗಿಲ್ಲವೆಂದಾದ್ರೆ ನೀವು ಟರ್ಮ್‌ ಇನ್ಯುರೆನ್ಸ್‌ ಖರೀದಿಸೋ ಅಗತ್ಯವಿಲ್ಲ.
 

ಈ ವಿಷಯಗಳನ್ನು ಗಮನಿಸಿ
-ನಿವೃತ್ತಿ ವಯಸ್ಸನ್ನೂ ಮೀರಿದ ಅವಧಿಗೆ ಟರ್ಮ್‌ ಇನ್ಯುರೆನ್ಸ್‌ ತೆಗೆದುಕೊಳ್ಳಬೇಡಿ. ಏಕೆಂದ್ರೆ ಈ ಸಮಯದಲ್ಲಿ ನಿಮ್ಮ ಮೇಲೆ ಅವಲಂಬಿತರಾಗಿರೋರು ಉದಾಹರಣೆಗೆ ನಿಮ್ಮ ಮಕ್ಕಳು  ನೀವು ನಿವೃತ್ತಿಯಾಗೋ ವಯಸ್ಸಿಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಿರುತ್ತಾರೆ. 
-ಟರ್ಮ್‌ ಇನ್ಯುರೆನ್ಸ್‌ ಆದಷ್ಟು ಕಡಿಮೆ ವಯಸ್ಸಿನಲ್ಲಿ ಮಾಡಿದ್ರೆ ಪ್ರೀಮಿಯಂ ಮೊತ್ತ ಕಡಿಮೆ ಇರುತ್ತದೆ. ಅದೇ ನಡುವಯಸ್ಸಿನಲ್ಲಿ ಮಾಡಿದ್ರೆ ತುಸು ಜಾಸ್ತಿ ಪ್ರೀಮಿಯಂ ಕಟ್ಟಬೇಕಾಗುತ್ತದೆ. 

click me!