ಜೀವ ವಿಮೆ ಎಂದ ತಕ್ಷಣ ಮೊದಲು ನೆನಪಾಗೋದೆ ಎಲ್ಐಸಿ. ಇದಕ್ಕೆ ಕಾರಣ ಸುರಕ್ಷತೆ. ಹಾಗಾದ್ರೆ ಎಲ್ಐಸಿಯ ಯಾವ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಪಾಲಿಸಿದಾರರಿಗೆ ಉತ್ತಮ ರಿಟರ್ನ್ ಸಿಗುತ್ತದೆ? ಇಲ್ಲಿದೆ ಮಾಹಿತಿ.
Business Desk: ಜೀವ ವಿಮೆ ಕುಟುಂಬಕ್ಕೆ ಆರ್ಥಿಕ ಸುರಕ್ಷತೆ ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ವಿಮೆಯಂತೆ ಜೀವ ವಿಮೆ ಹೊಂದುವುದು ಕೂಡ ಅಗತ್ಯ. ಕೋವಿಡ್ ಬಳಿಕ ಜೀವ ವಿಮೆಗೆ ಜನರು ಹೆಚ್ಚಿನ ಮಹತ್ವ ನೀಡಲು ಪ್ರಾರಂಭಿಸಿದ್ದಾರೆ. ಜೀವ ವಿಮೆ ಕುಟುಂಬಕ್ಕೆ ಬೆಂಬಲವಾಗಿರುವ ವ್ಯಕ್ತಿ ಆಕಸ್ಮಾತ್ ಆಗಿ ಮರಣ ಹೊಂದಿದ್ರೆ ಅಂಥ ಸಂದರ್ಭದಲ್ಲಿ ಆ ಕುಟುಂಬಕ್ಕೆ ಆರ್ಥಿಕ ಸುರಕ್ಷತೆ ಒದಗಿಸುತ್ತದೆ. ಜೀವ ವಿಮೆ ಎಂದ ತಕ್ಷಣ ಭಾರತೀಯರಿಗೆ ಮೊದಲು ನೆನಪಾಗುವುದೇ ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ). ಇದಕ್ಕೆ ಕಾರಣ ಎಲ್ಐಸಿ ಕೇಂದ್ರ ಸರ್ಕಾರದ ಬೆಂಬಲಿ ಸಂಸ್ಥೆಯಾಗಿದ್ದು, ಇದರ ಪಾಲಿಸಿಗಳಲ್ಲಿ ಹೂಡಿಕೆ ಮಾಡಿದ್ರೆ ಹಣ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ. ಎಲ್ಐಸಿ ಕೂಡ ಆಯಾ ವಯೋಮಾನ, ವರ್ಗಕ್ಕೆ ಅನುಕೂಲವಾಗುವಂತಹ ಪಾಲಿಸಿಗಳನ್ನು ರೂಪಿಸುತ್ತಲಿರುತ್ತದೆ. ಹೀಗಾಗಿ ಎಲ್ಲ ವರ್ಗದ ಜನರಿಗೂ ಎಲ್ಐಸಿಯಲ್ಲಿ ಹೂಡಿಕೆ ಮಾಡಲು ಅನುಕೂಲ ಒದಗಿಸುವಂತಹ ಪಾಲಿಸಿಗಳು ಲಭ್ಯವಿವೆ. ಹಾಗೆಯೇ ವಿವಿಧ ಮಾದರಿಯ ಪಾಲಿಸಿಗಳು ಕೂಡ. ಉದಾಹರೆಗೆ ಜೀವ ವಿಮೆ, ಟರ್ಮ್ ಇನ್ಯೂರೆನ್ಸ್, ಯುಎಲ್ಐಪಿ, ಕ್ಯಾನ್ಸರ್ ಇನ್ಯೂರೆನ್ಸ್, ಮನಿ ರಿಟರ್ನ್ ಪ್ಲಾನ್ಸ್, ಎಂಡೋಮೆಂಟ್ ಪಾಲಿಸಿಗಳು, ಪಿಂಚಣಿ ಯೋಜನೆಗಳು ಇತ್ಯಾದಿ. ಹಾಗಾದ್ರೆ ಉತ್ತಮ ರಿಟರ್ನ್ ನೀಡುವ ನಾಲ್ಕು ಎಲ್ಐಸಿ ಯೋಜನೆಗಳು ಯಾವುವು? ಇಲ್ಲಿದೆ ಮಾಹಿತಿ.
ಎಲ್ಐಸಿ ಜೀವನ ಅಕ್ಷಯ್ 6
ಎಲ್ಐಸಿ ಜೀವನ ಅಕ್ಷಯ್ 6 ಯೋಜನೆ ಪಾಲಿಸಿದಾರರಿಗೆ ನಿಯಮಿತ ಆದಾಯ ಕೂಡ ನೀಡುತ್ತದೆ. ಈ ಪ್ಲ್ಯಾನ್ ನಿವೃತ್ತಿ ಬಳಿಕ ನಿಮಗೆ ಆರ್ಥಿಕ ಭದ್ರತೆ ಒದಗಿಸುತ್ತದೆ. ನಿವೃತ್ತಿ ಬಳಿಕ ಜೀವನದ ಕೊನೆಯ ತನಕ ಈ ಪಾಲಿಸಿ ನಿಮಗೆ ವರ್ಷಾಶನ ನೀಡುತ್ತದೆ. ಈ ಪಾಲಿಸಿ ವೈಯಕ್ತಿ, ಸಿಂಗಲ್ ಪ್ರೀಮಿಯಂ, ನಾನ್ ಲಿಂಕ್ಡ್ ಹಾಗೂ ಸಹಭಾಗಿತ್ವ ಹೊಂದಿರದ ವರ್ಷಾಶನ ಯೋಜನೆಯಾಗಿದೆ. ಇದರಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು ನಿವೃತ್ತಿ ಬಳಿಕ ಪ್ರತಿ ತಿಂಗಳು ಪಿಂಚಣಿ (Pension) ಪಡೆಯಬಹುದು. 35ರಿಂದ 85 ವಯಸ್ಸಿನ ನಡುವಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ವಿಶೇಷ ಚೇತನ ವ್ಯಕ್ತಿಗಳು ಕೂಡ ಈ ಪಾಲಿಸಿ ಪ್ರಯೋಜನ ಪಡೆಯಬುದು. ಎಲ್ಐಸಿ ಜೀವನ ಅಕ್ಷಯ ಯೋಜನೆಯಲ್ಲಿ 10 ವಿಧದ ಆಯ್ಕೆಗಳಿವೆ. ನಿಮ್ಮ ಆಯ್ಕೆ ಆಧರಿಸಿ ಹಾಗೂ ವಯಸ್ಸಿನ ಆಧಾರದಲ್ಲಿ ಪಿಂಚಣಿ (Pension) ಮೊತ್ತ ಬದಲಾಗುತ್ತದೆ. ಎಲ್ಐಸಿ ಜೀವನ ಅಕ್ಷಯ ಯೋಜನೆಯಲ್ಲಿ ಸಣ್ಣ ಮೊತ್ತ ಕೂಡ ಹೂಡಿಕೆ (Invest) ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆಗೆ ನಿರ್ದಿಷ್ಟ ಗರಿಷ್ಠ ಮಿತಿಯಿಲ್ಲ. ಪಾಲಿಸಿದಾರರು ಈ ಯೋಜನೆ ಮೇಲೆ ಸಾಲ ಕೂಡ ಪಡೆಯಬಹುದು. ಈ ಪಾಲಿಸಿಯಲ್ಲಿ ಮಾಡಿದ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ರಡಿಯಲ್ಲಿ ತೆರಿಗೆ ವಿನಾಯ್ತಿ ಇದೆ. ಆದರೆ, ಪಿಂಚಣಿ ಮೊತ್ತಕ್ಕೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ.
2022 ಮುಗಿಯೋ ಮುನ್ನ ತಪ್ಪದೇ ಈ ಕೆಲ್ಸ ಮಾಡಿ ಮುಗಿಸಿ
ಎಲ್ಐಸಿ ನ್ಯೂ ಚಿಲ್ಡ್ರನ್ಸ್ ಮನಿ ಬ್ಯಾಕ್ ಪ್ಲ್ಯಾನ್
ಈ ಪ್ಲ್ಯಾನ್ ಅನ್ನು 12 ವರ್ಷದ ತನಕದ ಮಕ್ಕಳಿಗಾಗಿಯೇ ರೂಪಿಸಲಾಗಿದೆ. ಇದು ಮಕ್ಕಳ ಶೈಕ್ಷಣಿಕ ಹಾಗೂ ಮದುವೆ ವೆಚ್ಚಗಳನ್ನು ಭರಿಸೋದಕ್ಕಾಗಿ ರೂಪಿಸಲಾಗಿದೆ. ಇದು ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಪಾಲಿಸಿ ಅವಧಿಯಲ್ಲಿ ಮಕ್ಕಳಿಗೆ ರಿಸ್ಕ್ ಕವರೇಜ್ ಕೂಡ ಸಿಗುತ್ತದೆ. ಪಾಲಕರು ತಮ್ಮ ಮಕ್ಕಳ ಭವಿಷ್ಯದ ಭದ್ರತೆಗೆ ಈ ಯೋಜನೆ ಖರೀದಿಸಬಹುದು. ಪಾಲಿಸಿ ಮಾಡುವಾಗಿನ ಮಕ್ಕಳ ವಯಸ್ಸು ಪಾಲಿಸಿಯ ಅವಧಿ ಮೇಲೆ ಪರಿಣಾಮ ಬೀರುತ್ತದೆ. ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದಲ್ಲಿ ಪಾವತಿಸಬಹುದು.
ಎಲ್ಐಸಿ ಆಕ್ಸಿಡೆಂಟಲ್ ಡೆತ್ ಹಾಗೂ ಡೆಸೇಬಿಲಿಟಿ ರೈಡರ್
ಜಗತ್ತಿನಾದ್ಯಂತ ಅಪಘಾತದಿಂದ ಮರಣ ಹೊಂದುತ್ತಿರೋರ ಪ್ರಮಾಣ ಹೆಚ್ಚಿದೆ. ಹೀಗಾಗಿ ವಿಮೆ ಮಾಡಿಸೋದು ಅಗತ್ಯ. ಪಾಲಿಸಿದಾರ ಅಪಘಾತದಲ್ಲಿ ಮರಣ ಹೊಂದಿದ್ರೆ ಅಥವಾ ಅಂಗವೈಕಲ್ಯಕ್ಕೆ ತುತ್ತಾದ್ರೆ ಎಲ್ಐಸಿ ಆಕ್ಸಿಡೆಂಟಲ್ ಡೆತ್ ಹಾಗೂ ಡೆಸೇಬಿಲಿಟಿ ರೈಡರ್ ಫಲಾನುಭವಿಗಳಿಗೆ ನಗದು ಪರಿಹಾರ ಒದಗಿಸುತ್ತದೆ. ಈ ಪಾಲಿಸಿಯ ಖರೀದಿಗೆ ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ ವಯಸ್ಸು 65. ಈ ಪಾಲಿಸಿಯಲ್ಲಿ ಭರವಸೆ ನೀಡಿರುವ ಕನಿಷ್ಠ ಮೊತ್ತ 2ಲಕ್ಷ ರೂ. ಹಾಗೂ ಗರಿಷ್ಠ ಮೊತ್ತ 2ಕೋಟಿ ರೂ.
ವಾಟ್ಸ್ಆ್ಯಪ್ ಬಳಕೆದಾರರೇ ಎಚ್ಚರ; ಸೈಬರ್ ವಂಚಕರು ನಿಮ್ಮ ಬ್ಯಾಂಕ್ ಖಾತೆಗೂ ಕನ್ನ ಹಾಕ್ಬಹುದು!
ಎಲ್ಐಸಿ ನ್ಯೂ ಎಂಡೋಮೆಂಟ್ ಪ್ಲ್ಯಾನ್
ಪ್ರೀಮಿಯಂ ಪಾವತಿ ಹಾಗೂ ಪಾಲಿಸಿದಾರರ ವಯಸ್ಸು ಎರಡೂ ವಿಮೆಯ ಭರವಸೆ ನೀಡಿರುವ ಮೊತ್ತದ ಮೇಲೆ ಪರಿಣಾಮ ಬೀರುತ್ತದೆ. ಪಾಲಿಸಿ ಖರೀದಿಗೆ ಕನಿಷ್ಠ ವಯಸ್ಸು ಎಂಟು ಹಾಗೂ ಗರಿಷ್ಠ ವಯಸ್ಸು 55 ವರ್ಷಗಳು. ಈ ಪಾಲಿಸಿಯಲ್ಲಿ ಭರವಸೆ ನೀಡಿರುವ ಕನಿಷ್ಠ ಮೊತ್ತ 1ಲಕ್ಷ ರೂ. ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಇನ್ನು ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿಸಬಹುದು.