ವಾಟ್ಸ್ಆ್ಯಪ್ ಬಳಕೆದಾರರೇ ಎಚ್ಚರ; ಸೈಬರ್ ವಂಚಕರು ನಿಮ್ಮ ಬ್ಯಾಂಕ್ ಖಾತೆಗೂ ಕನ್ನ ಹಾಕ್ಬಹುದು!

By Suvarna News  |  First Published Dec 19, 2022, 3:50 PM IST

ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಸೈಬರ್ ವಂಚಕರು ವಾಟ್ಸ್ಆ್ಯಪ್ ಮೂಲಕ  1,150ಕ್ಕೂ ಅಧಿಕ ಮಂದಿಗೆ ವಂಚಿಸಿದ್ದಾರೆ. ವಂಚನೆಗೊಳಗಾದವರು ಒಟ್ಟು 21 ಕೋಟಿ ರೂ. ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಭಾರತದಲ್ಲಿ ಕೂಡ ಇತ್ತೀಚೆಗೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಜನರು ಈ ಬಗ್ಗೆ ಎಚ್ಚರ ವಹಿಸಬೇಕಾದ ಅಗತ್ಯವಿದೆ. 
 


ನವದೆಹಲಿ (ಡಿ.19): ಜಗತ್ತಿನಾದ್ಯಂತ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಭಾರತದಲ್ಲಿ ಡಿಜಿಟಲ್ ವ್ಯವಹಾರ ಜನಪ್ರಿಯತೆ ಗಳಿಸಿದ ಬಳಿಕ ವಂಚನೆ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ವಂಚಕರು ಜನರನ್ನು ವಂಚಿಸಿ ಅವರ ಖಾತೆಗಳಿಗೆ ಕನ್ನ ಹಾಕುತ್ತಿರುವ ಪ್ರಕರಣಗಳು ಕೂಡ ಹೆಚ್ಚಿವೆ. ಎಟಿಎಂ ಕಾರ್ಡ್ ವಂಚನೆ, ಯುಪಿಐ ಅಥವಾ ಸಿಮ್ ಸ್ವ್ಯಾಪ್ ವಂಚನೆ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ವಂಚಕರು ಹೊಸ ವಿಧಾನಗಳನ್ನು ಬಳಸಿ ಬ್ಯಾಂಕ್ ಖಾತೆಗಳಿಂದ ಹಣ ಎಗರಿಸಲು ಪ್ರಯತ್ನಿಸುತ್ತಿರೋದು ಆತಂಕ ಸೃಷ್ಟಿಸಿದೆ. ಇತ್ತೀಚೆಗೆ ಇಂಥದ್ದೇ ಒಂದು ಹೊಸ ವಿಧಾನದ ಮೂಲಕ ಬ್ಯಾಂಕ್ ಖಾತೆಯಿಂದ ಹಣ ಎಗರಿಸಿದ ಪ್ರಕರಣ ಆಸ್ಟ್ರೇಲಿಯಾದಲ್ಲಿ ವರದಿಯಾಗಿದೆ. ಅದೂ ಕುಟುಂಬ ಸದಸ್ಯರ ಸೋಗಿನಲ್ಲಿ ವಾಟ್ಸಾಪ್ ಸಂದೇಶದ ಮೂಲಕ ಹಣ ಪಡೆದು ವಂಚಿಸಲಾಗಿದೆ.  'ಹಾಯ್ ಮಮ್' ಹೆಸರಿನ ಈ ವಂಚನೆಗೆ ಆಸ್ಟ್ರೇಲಿಯಾದಲ್ಲಿ 1,150ಕ್ಕೂ ಅಧಿಕ ಮಂದಿ  ಶಿಕಾರಿಯಾಗಿದ್ದು, ಕಳೆದ ಕೆಲವು ತಿಂಗಳಲ್ಲಿ 21 ಕೋಟಿ ರೂ. ಕಳೆದುಕೊಂಡಿದ್ದಾರೆ. 2022ರಲ್ಲೇ ಆಸ್ಟ್ರೇಲಿಯಾದಲ್ಲಿ 11,100 ಜನರಿಗೆ 57.84 ಕೋಟಿ ರೂ. ವಂಚಿಸಲಾಗಿದೆ. ಇನ್ನು ಬಹುತೇಕ ಪ್ರಕರಣಗಳಲ್ಲಿ 55 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರೇ ವಂಚನೆಗೆ ಗುರಿಯಾಗಿರೋದು ಪತ್ತೆಯಾಗಿದೆ. ಈಗಾಗಲೇ ಆಸ್ಟ್ರೇಲಿಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದು, ಹಣ ವರ್ಗಾವಣೆ ಮಾಡುವ ಮುನ್ನ ಹಣ ಕೋರಿರುವ ವ್ಯಕ್ತಿಯನ್ನು ಸಂಪರ್ಕಿಸಿ ಅವರು ಪರಿಚಿತರು ಹೌದೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಕೋರಿದ್ದಾರೆ.

ಇಂಥ ವಂಚನೆ ಪ್ರಕರಣಗಳು ಆಸ್ಟ್ರೇಲಿಯಾದಲ್ಲಿ ವರದಿಯಾಗಿದ್ದರೂ ಭಾರತೀಯರು ಕೂಡ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಏಕೆಂದ್ರೆ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಕೂಡ ಸೈಬರ್ ವಂಚನೆ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಇತ್ತೀಚೆಗೆ ದೆಹಲಿ ಮೂಲದ ಉದ್ಯಮಿಯೊಬ್ಬರನ್ನು ವಂಚಿಸಿ ಅವರ ವಿವಿಧ ಬ್ಯಾಂಕ್ ಖಾತೆಗಳಿಂದ  ಸುಮಾರು 50 ಲಕ್ಷ ರೂ. ಎಗರಿಸಲಾಗಿತ್ತು. ಸಿಮ್ ಸ್ವ್ಯಾಪಿಂಗ್, ಕ್ಯೂಆರ್ ಕೋಡ್ ಸ್ಕ್ಯಾಮ್ಸ್ ಹಾಗೂ ನಕಲಿ ಲಿಂಕ್ ಗಳ ಮೂಲಕ ಜನರನ್ನು ವಂಚಿಸಿರುವ ಅನೇಕ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಸೈಬರ್ ವಂಚನೆಗಳಿಂದ ರಕ್ಷಿಸಿಕೊಳ್ಳಲು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಎಚ್ಚರಿಕೆ ವಹಿಸಬೇಕು ಕೂಡ.

Tap to resize

Latest Videos

2022 ಮುಗಿಯೋ ಮುನ್ನ ತಪ್ಪದೇ ಈ ಕೆಲ್ಸ ಮಾಡಿ ಮುಗಿಸಿ

ಸೈಬರ್ ವಂಚನೆಯಿಂದ ಸುರಕ್ಷಿತವಾಗಿರೋದು ಹೇಗೆ?
*ಯಾರೊಂದಿಗೂ ನಿಮ್ಮ ಒಟಿಪಿ ( OTP) ಹಂಚಿಕೊಳ್ಳಬೇಡಿ.
*ನಿಮ್ಮ ಡೆಬಿಟ್  (Debit) ಅಥವಾ ಕ್ರೆಡಿಟ್ ಕಾರ್ಡ್ (Credit card) ಪಿನ್ (Pin) ಹಾಗೂ ಸಿವಿವಿ (CVV) ಸಂಖ್ಯೆಯನ್ನು ನಿಮ್ಮ ಕುಟುಂಬ ಸದಸ್ಯರು ಅಥವಾ ಸ್ನೇಹಿತರು ಸೇರಿದಂತೆ ಯಾರೊಂದಿಗೂ ಹಂಚಿಕೊಳ್ಳಬೇಡಿ.
*ಅಪರಿಚಿತ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ (e-mail) ವಿಳಾಸದಿಂದ ಬಂದಿರುವ ಲಿಂಕ್ಸ್ (Links) ಮೇಲೆ ಕ್ಲಿಕ್ ಮಾಡಬೇಡಿ.
*ಸುರಕ್ಷಿತ ಹಾಗೂ ಅಧಿಕೃತ ವೆಬ್ ಸೈಟ್ ಗಳ (Websites) ಮೂಲಕ ಮಾತ್ರ ಬ್ರೌಸ್ (Browse) ಮಾಡಿ.

2 ಕೋಟಿವರೆಗಿನ ಜಿಎಸ್‌ಟಿ ವಂಚನೆಗೆ ವಿಚಾರಣೆ ಇಲ್ಲ

*ಸಂಶಯಭರಿತ ಲಾಗಿನ್ ಗಳು (Login) ಹಾಗೂ ಸಂದೇಶಗಳ (messages) ಬಗ್ಗೆ ಎಚ್ಚರ ವಹಿಸಿ.
*ಆನ್ ಲೈನ್ ಶಾಪಿಂಗ್ (Online shopping) ಸಂದರ್ಭದಲ್ಲಿ ವೆಬ್ ಸೈಟ್ ಗಳಲ್ಲಿ ನಿಮ್ಮ ಪಾವತಿ ಮಾಹಿತಿಗಳನ್ನು ಯಾವುದೇ ಕಾರಣಕ್ಕೂ ಉಳಿಸಬೇಡಿ (Save).
*ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ನಿಮ್ಮ ಬ್ಯಾಂಕ್ (Bank), ಯುಪಿಐ (UPI) ಹಾಗೂ ಇತರ ಮಾಹಿತಿಗಳನ್ನು ಕೋರಿದರೆ ಯಾವುದೇ ಕಾರಣಕ್ಕೂ ನೀಡಬೇಡಿ.
*ಯಾರಾದ್ರೂ ಬ್ಯಾಂಕಿನಿಂದ ಕರೆ ಮಾಡುತ್ತಿರೋದಾಗಿ ಹೇಳಿ ಬ್ಯಾಂಕ್ ಖಾತೆ ಮಾಹಿತಿ ಕೇಳಿದ್ರೆ ನೀಡಬೇಡಿ. 

click me!