ಹುಬ್ಬಳ್ಳಿ (ಅ.21) : ಅಂದು 8ನೇ ತರಗತಿ ಫೇಲ್ ಆಗಿ ತಂದೆ ಎಲ್ಲಿ ಬೈಯುತ್ತಾರೆ, ಎಲ್ಲಿ ಹೊಡೆಯುತ್ತಾರೆ ಎಂದು ಹೆದರಿ ಮುಂಬೈಗೆ ಓಡಿ ಹೋಗಿದ್ದ ಬಾಲಕ ಇಂದು ದೊಡ್ಡ ಹೋಟೆಲ್ ಉದ್ಯಮಿ. ನೂರಾರು ಜನರಿಗೆ ಕೆಲಸ ಕೊಟ್ಟು ಸೈ ಎನಿಸಿಕೊಂಡಿದ್ದಾನೆ. ಇದು ಇಲ್ಲಿನ ಪಂಜುರ್ಲಿ ಹೋಟೆಲ್‌ನ ಮಾಲೀಕ ರಾಜೇಂದ್ರ ವಿಶ್ವನಾಥ ಶೆಟ್ಟಿಅವರ ಯಶೋಗಾಥೆಯ ಒಂದು ಸಾಲಿನ ವಿವರಣೆ. ಹೋಟೆಲ್ ಉದ್ಯಮಕ್ಕೆ ಬರಲು ಕಾರಣವೇನು? ಹೋಟೆಲ್ ಉದ್ಯಮ ಹೇಗೆ ನಡೆದಿದೆ? ಅದಕ್ಕೆ ಪ್ರೇರಣೆ ಏನು? ಎಂಬ ಬಗ್ಗೆ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
ಹೋಟೆಲ್ ಉದ್ಯಮದ ಮೂಲಕ ಕನ್ನಡ ನಾಡಿನ ಕೀರ್ತಿ ಪಸರಿಸಿದ ಪ್ರಕಾಶ್ ಶೆಟ್ಟಿ!
ಹೋಟೆಲ್ ಉದ್ಯಮಕ್ಕೆ ಬರಲು ಕಾರಣವೇನು?
ನಾನು 8ನೇ ತರಗತಿ ಫೇಲ್ ಆಗಿದ್ದೆ. ನಮ್ಮ ತಂದೆ ಬಹಳ ಸ್ಟ್ರೀಕ್. ಎಲ್ಲಿ ಹೊಡೆಯುತ್ತಾರೆ ಎಂಬ ಹೆದರಿಕೆ ಇತ್ತು. ಹೀಗಾಗಿ ಮನೆಯಲ್ಲಿ ಹೇಳದೇ ಕೇಳದೇ ರೈಲ್ವೆ ನಿಲ್ದಾಣಕ್ಕೆ ಹೋಗಿ ಅಲ್ಲಿ ನಿಂತಿದ್ದ ರೈಲನ್ನು ಹತ್ತಿ ತೆರಳಿದ್ದೆ. ಅದು ನೇರವಾಗಿ ಮುಂಬೈಗೆ ಹೋಗಿತ್ತು. ಅಲ್ಲಿ ನಿಲ್ದಾಣದಲ್ಲಿ ಕೆಲಸಕ್ಕಾಗಿ ಅಲೆಯುತ್ತಿದ್ದ ಸಣ್ಣ ಡಬ್ಬಾ ಅಂಗಡಿಯೊಂದರಲ್ಲಿ ಚಹಾ ಮಾರುವ ಕೆಲಸ ಹುಡುಕಿಕೊಂಡಿದ್ದೆ. ಹೀಗೆ ನನ್ನ ವೃತ್ತಿ ಜೀವನ ಶುರುವಾಯಿತು. ಕೆಲ ತಿಂಗಳ ಬಳಿಕ ರಾತ್ರಿ ವೇಳೆ ತಾಯಿಯ ನೆನಪು ಮಾಡಿಕೊಂಡು ಅಳುತ್ತಾ ಕುಳಿತುಕೊಳ್ಳುತ್ತಿದ್ದೆ. ಆಗ ಡಬ್ಬಾ ಚಹಾದಂಗಡಿಯ ಮಾಲೀಕ ಊರಿನ ನೆನಪು ಮಾಡಿಕೊಳ್ಳುತ್ತಿರಬಹುದು ಎಂದುಕೊಂಡು ನನಗೆ ಹೇಳದೇ ಮತ್ತೆ ಹುಬ್ಬಳ್ಳಿಗೆ ತಂದು ಬಿಟ್ಟಿದ್ದರು. ಮತ್ತೆ ಮನೆಯಲ್ಲಿ ಭೇಟಿಯಾಗಿ ಮತ್ತೆ ಹೇಳದೇ ಕೇಳದೇ ಮುಂಬೈಗೆ ಓಡಿ ಹೋಗಿದ್ದೆ. ಈಗ ಈ ಮೊದಲಿದ್ದ ಚಹಾದಂಗಡಿಗೆ ಹೋಗದೇ ಬೇರೆ ಸ್ಪೋರ್ಚ್ ಕ್ಲಬವೊಂದರಲ್ಲಿದ್ದ ಚಹಾದಂಗಡಿಯೊಂದರಲ್ಲಿ ಕೆಲಸ ಶುರು ಮಾಡಿದೆ. ಎರಡ್ಮೂರು ವರ್ಷ ವೇಟರ್, ಕ್ಲಿನರ್ ಆಗಿ ಕೆಲಸ ಮಾಡಿದ್ದೆ. ಬಳಿಕ ಅಂಬಿಕಾ ಹೋಟೆಲ್ ಅಂತ ಇದೆ ಅಲ್ಲಿ. ಅಲ್ಲಿ ಸುಮಾರು 12 ವರ್ಷ ಮ್ಯಾನೇಜರ್ ಆಗಿ ಕೆಲಸ ಮಾಡಿದೆ. ಆಗೆಲ್ಲ ವರ್ಷಕ್ಕೆ ಒಂದೆರಡ್ಮೂರು ಬಾರಿ ಊರಿಗೆ ಬಂದು ಕುಟುಂಬಸ್ಥರೆಲ್ಲ ಭೇಟಿಯಾಗಿ ಹೋಗುತ್ತಿದ್ದೆ. ತಂದೆ ತಾಯಿ ಯಾರು ಮುಂಬೈಗೆ ಬರಲು ಒಪ್ಪುತ್ತಿರಲಿಲ್ಲ. ಕೊನೆಗೆ ನಮ್ಮ ತಂದೆ ಊರಿಗೆ ಕರೆದು ಇಲ್ಲೇ ಹೋಟೆಲ್ ಪ್ರಾರಂಭಿಸು ಎಂದು ಹೇಳಿದ್ದರು. ಅದರಂತೆ ಧಾರವಾಡದ ಟೋಲ್‌ನಾಕಾ ಬಳಿ ಸ್ನೇಹಿತ ನವೀನ ಕಾಮತ್ ಎಂಬುವವರ ಬಳಿ ಸಾಲ ಪಡೆದು ಚಿಕ್ಕದಾದ ಹೋಟೆಲ್ ಪ್ರಾರಂಭಿಸಿದ್ದೆ. ಪ್ರಾರಂಭದಲ್ಲಿ ವ್ಯಾಪಾರವೇ ಇರಲಿಲ್ಲ. ಆದರೂ ಪಟ್ಟು ಬಿಡದೇ ಪ್ರತಿದಿನ ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೆ. ಹೋಟೆಲ್ ಮಾಲೀಕರು ಕೂಡ ನನಗೆ ಬಾಡಿಗೆ ಕೇಳಿರಲಿಲ್ಲ. ಆಮೇಲೆ ಸಣ್ಣದಾಗಿ ವ್ಯಾಪಾರ ಶುರುವಾಯಿತು. ಅಲ್ಲಿಂದ ಹಿಂದೆ ನೋಡುವ ಪ್ರಶ್ನೆಯೇ ಬರಲಿಲ್ಲ. ಹೋಟೆಲ್ ಉದ್ಯಮಿಯಾದೆ.
ನಿಮ್ಮ ತಂದೆ ಏನು ಮಾಡುತ್ತಿದ್ದರು?
ನಮ್ಮ ತಂದೆ ವಿಶ್ವನಾಥ ಶೆಟ್ಟಿಅವರು ನವನಗರದಲ್ಲಿ ಸಣ್ಣದಾದ ಹೋಟೆಲ್ ಇಟ್ಟುಕೊಂಡಿದ್ದರು. ನಮ್ಮದು ದೊಡ್ಡ ಕುಟುಂಬ. ಇಬ್ಬರು ಸಹೋದರರು, ಇಬ್ಬರು ಸಹೋದರರಿಯರು ನನಗೆ. ಮನೆ ನಡೆಸಲು ತಂದೆ ಬಹಳ ಕಷ್ಟಪಡುತ್ತಿದ್ದರು. ಚೆನ್ನಾಗಿ ಓದಿಸಬೇಕೆಂಬ ಆಸೆ ಅವರದಾಗಿತ್ತು. ಆದರೆ ನನಗೆ ವಿದ್ಯಾಭ್ಯಾಸ ತಲೆಗೆ ಹತ್ತಲಿಲ್ಲ ಅಷ್ಟೇ. ಹೋಟೆಲ್ ಉದ್ಯಮ ನನಗೆ ಕೈ ಹಿಡಿಯಿತು.
ಕೇಟರಿಂಗ್ ಉದ್ಯಮಿಯ ಸಿನಿಮಾ ಸಹಾಸಗಳು
ಈಗ ಎಷ್ಟುಹೋಟೆಲ್‌ಗಳಿವೆ? ಎಲ್ಲಿಲ್ಲೆ ಇವೆ?
ಮೊದಲು ಪ್ರಾರಂಭಿಸಿದ್ದು ಧಾರವಾಡದ ಟೋಲ್‌ನಾಕಾ ಬಳಿ. ಅಂದು ಆ ಹೋಟೆಲ್ ನಡೆಸಲು ಬಹಳ ಕಷ್ಟಪಟ್ಟಿದ್ದೆ. ಮೊದಲು ಆರೇಂಟು ತಿಂಗಳು ಆ ಹೋಟೆಲ್ ನಡೆಯಲೇ ಇಲ್ಲ. ಬಾಡಿಗೆ ಕೊಡಲು ದುಡ್ಡು ಇರುತ್ತಿರಲಿಲ್ಲ. ಒಂದು ವೇಳೆ ಆ ಬಿಲ್ಡಿಂಗ್ ಮಾಲೀಕರೇನಾದರೂ ಪ್ರತಿ ತಿಂಗಳು ಬಾಡಿಗೆ ಕೇಳಿದ್ದರೆ ನಾನು ಅಂದೇ ಹೋಟೆಲ್ ಬಂದ್ ಮಾಡುತ್ತಿದ್ದೆ. ಆದರೆ ಅವರು ನನ್ನ ಹೋಟೆಲ್ ನಡೆಯುವವರೆಗೂ ಬಾಡಿಗೆ ಕೇಳಲೇ ಇಲ್ಲ. ಬಳಿಕ ಹೋಟೆಲ್ ವ್ಯಾಪಾರ ಚೆನ್ನಾಗಿ ಆದ ಮೇಲೆ ಬಾಡಿಗೆ ಕೊಡಲು ಶುರು ಮಾಡಿದೆ. ಹೀಗೆ ಹಂತ ಹಂತವಾಗಿ ಮೇಲೇಳುತ್ತಾ ಇದೀಗ ನಮ್ಮ ಪಂಜುರ್ಲಿ 9 ಹೋಟೆಲ್‌ಗಳಿವೆ. 6 ಹುಬ್ಬಳ್ಳಿ ಧಾರವಾಡದಲ್ಲಿದ್ದರೆ, ಒಂದು ಬೆಳಗಾವಿ ಹಾಗೂ 2 ದಾವಣಗೆರೆಯಲ್ಲಿವೆ. ಎಲ್ಲ ಹೋಟೆಲ್‌ಗಳು ಚೆನ್ನಾಗಿ ನಡೆಯುತ್ತಿವೆ. ಅಂದು ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಾಟ ಮಾಡಿ, ಬಳಿಕ ದೊಡ್ಡ ಹೋಟೆಲ್‌ನಲ್ಲಿ ವೇಟರ್, ಕ್ಲಿನರ್, ಮ್ಯಾನೇಜರ್ ಆಗಿ ಕೆಲಸ ಮಾಡಿ ಇದೀಗ ಉದ್ಯಮಿಯಾಗಿರುವುದು ನಿಜಕ್ಕೂ ಸಂತಸ ತಂದಿದೆ. ತಂದೆ ತಾಯಿ ಆಶೀರ್ವಾದ, ಕುಟುಂಬಸ್ಥರ, ಸ್ನೇಹಿತರ ಸಹಕಾರದಿಂದ ಇದೆಲ್ಲವೂ ಸಾಧ್ಯವಾಗಿದೆ. ಜನತೆ ಗುರುತಿಸುತ್ತಾರೆ. ಸಂಸ್ಥೆಗಳು ಕರೆದು ಸನ್ಮಾನಿಸಿ ಗೌರವಿಸುತ್ತಿವೆ. ಖುಷಿ ಕೊಡುವ ವಿಚಾರ ಇದು.