
ನವದೆಹಲಿ: ಟೆಸ್ಲಾ ಸಿಇಒ, ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು, ತಾನು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಕಾತುರದಿಂದ ಕಾಯುತ್ತಿರುವೆ ಎಂದು ಟ್ವಿಟ್ ಮಾಡಿದ್ದಾರೆ. ಮಸ್ಕ್ ಅವರು ಈ ತಿಂಗಳ ಕೊನೆಯಲ್ಲಿ ಮಹತ್ವದ ಮಾತುಕತೆಗಾಗಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬ ವರದಿಯ ಮಧ್ಯೆ ಎಲಾನ್ ಮಸ್ಕ್ ಟ್ವಿಟ್ ಮಾಡಿದ್ದು, ಈ ಇಬ್ಬರು ನಾಯಕರ ಭೇಟಿ ಕುತೂಹಲ ಕೆರಳಿಸಿದೆ. ಇದೇ ಭೇಟಿ ವೇಳೆ ಎಲಾನ್ ಮಸ್ಕ್ ಅವರು ಭಾರತದಲ್ಲಿ ತನ್ನ ಕಂಪನಿಯ ಹೂಡಿಕೆ ಯೋಜನೆಗಳನ್ನು ಮತ್ತು ಹೊಸ ಕಾರ್ಖಾನೆಯ ಸ್ಥಾಪನೆಯನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸಲು ನಡೆಯುತ್ತಿರುವ 'ನೈಸರ್ಗಿಕ ಪ್ರಗತಿ' ಎಂದು ಈ ಭೇಟಿಯನ್ನು ಬಣ್ಣಿಸಿರುವ ಮಸ್ಕ್, ಏಪ್ರಿಲ್ 4ನೇ ವಾರದಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಈ ಭೇಟಿಯ ವೇಳೆ ಭಾರತದ ಇತರ ವಾಹನ ಕಂಪನಿಗಳ ಕಾರ್ಯನಿರ್ವಾಹಕರು ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲವೊಂದು ತಿಳಿಸಿದೆ. ಅಲ್ಲದೇ ಈ ಭೇಟಿಯ ನಂತರ ಭಾರತದಲ್ಲಿ ಟೆಸ್ಲಾ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಪ್ರತ್ಯೇಕ ಸಾರ್ವಜನಿಕ ಪ್ರಕಟಣೆಯನ್ನು ಮಾಡುವ ಸಾಧ್ಯತೆಯಿದೆ.
ಭಾರತಕ್ಕೂ ಬರಲಿದೆ ಟೆಸ್ಲಾ, ಎಲೋನ್ ಮಸ್ಕ್ ಉದ್ಯಮಕ್ಕೆ ಹೂಡಿಕೆ ಮಾಡ್ತಿರೋ ಬಿಲಿಯನೇರ್ ಯಾರು?
ಈ ಹಿಂದೆ ಜೂನ್ 2023 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಭೇಟಿಯ ವೇಳೆ ಎಲಾನ್ ಮಸ್ಕ್ ಅವರು ಪ್ರಧಾನಿಯವರನ್ನು ಅಮೆರಿಕಾದಲ್ಲಿ ಭೇಟಿಯಾಗಿದ್ದರು. ಇದೇ ವೇಳೆ ತಮ್ಮ ಟೆಸ್ಲಾ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ 2024 ರಲ್ಲಿ ಭಾರತಕ್ಕೆ ಭೇಟಿ ನೀಡಲು ಬಯಸಿರುವುದಾಗಿ ಹೇಳಿದ್ದರು. ಭಾರತ ಸರ್ಕಾರವೂ ಹೊಸ ಎಲೆಕ್ಟ್ರಿಕ್ ವಾಹನ ನೀತಿಯನ್ನು ಘೋಷಿಸಿದ ವಾರಗಳ ನಂತರ ಎಲಾನ್ ಮಸ್ಕ್ ಭಾರತ ಭೇಟಿ ಘೋಷಣೆಯಾಗಿದ್ದು, ಈ ಭೇಟಿಯ ಮಹತ್ವವನ್ನು ಹೆಚ್ಚಿಸಿದೆ. ಹೊಸ ಎಲೆಕ್ಟ್ರಿಕ್ ವಾಹನ ನೀತಿಯ ಪ್ರಕಾರ ಭಾರತದಲ್ಲಿ ಕನಿಷ್ಠ 500 ಮಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಕಂಪನಿಗಳಿಗೆ ಆಮದು ಸುಂಕದ ರಿಯಾಯಿತಿಗಳನ್ನು ನೀಡಲಾಗುತ್ತದೆ.
ಶಸ್ತ್ರಚಿಕಿತ್ಸೆಯ 5 ತಿಂಗಳ ಬಳಿಕ ಜಿಮ್ ಗೆ ಮರಳಿದ ಜುಕರ್ ಬರ್ಗ್, ಮಸ್ಕ್ ಗೆ ಟಾಂಗ್ ನೀಡಲು ಮಾತ್ರ ಮರೆಯಲಿಲ್ಲ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.