
ನಿಮ್ಮ ಮನೆಯಲ್ಲಿ ಹಿರಿಯ ನಾಗರಿಕರಿ (senior citizens )ದ್ರೆ ಅಥವಾ ನೀವೇ ಹಿರಿಯ ನಾಗರಿಕರಾಗಿದ್ರೆ ನಿಮಗೊಂದು ಖುಷಿ ಸುದ್ದಿ ಇದೆ. ನೀವು ಬ್ಯಾಂಕ್ ಎಫ್ ಡಿ (Bank FD)ಯಲ್ಲಿ ಹೂಡಿಕೆ ಮಾಡ್ತಿದ್ರೆ ಇನ್ಮುಂದೆ ಒಂದು ಲಕ್ಷದವರೆಗೆ ಆರಾಮವಾಗಿ ಬಡ್ಡಿ ಪಡೆಯಬಹುದು. ನಿಮ್ಮ ಎಫ್ ಡಿ ಬಡ್ಡಿ ಮೇಲಿನ ಟಿಡಿಎಸ್ (TDS) ಕಡಿತದ ನಿಯಮವನ್ನು ಬ್ಯಾಂಕ್ ಬದಲಿಸಿದೆ. 2025 ರ ಬಜೆಟ್‌ನಲ್ಲಿ, ಸರ್ಕಾರ ಹಿರಿಯ ನಾಗರಿಕರಿಗೆ ಟಿಡಿಎಸ್ ಮಿತಿಯನ್ನು ದ್ವಿಗುಣಗೊಳಿಸಿತ್ತು. ಈಗ ಎಫ್ ಡಿ ಮೇಲೆ ನಿಮಗೆ ವಾರ್ಷಿಕ 1 ಲಕ್ಷ ರೂಪಾಯಿ ಬಡ್ಡಿ ಬಂದ್ರೆ ಟಿಡಿಎಸ್ ಕಡಿತಗೊಳ್ಳುವುದಿಲ್ಲ. ಒಂದು ಲಕ್ಷಕ್ಕಿಂತ ಹೆಚ್ಚು ಬಡ್ಡಿ ಬಂದಲ್ಲಿ ಟಿಡಿಎಸ್ ಕಡಿತಗೊಳ್ಳಲಿದೆ.
ಎಫ್ ಡಿ ಮೇಲಿನ ಬಡ್ಡಿ ಮಿತಿ ಈ ಹಿಂದೆ 50,000 ರೂಪಾಯಿಗಳಷ್ಟಿತ್ತು. 50 ಸಾವಿರಕ್ಕಿಂತ ಹೆಚ್ಚು ಬಡ್ಡಿ ಒಂದು ವರ್ಷಕ್ಕೆ ಬಂದ್ರೆ ಟಿಡಿಎಸ್ ಕಡಿತವಾಗ್ತಿತ್ತು. ಆದ್ರೀಗ ಈ ಮಿತಿಯನ್ನು ಒಂದು ಲಕ್ಷಕ್ಕೆ ಏರಿಸಲಾಗಿದೆ. ಟಿಡಿಎಸ್ ಕಟ್ ಆಗ್ಬಾರದು ಅಂದ್ರೆ ನೀವು ಹೂಡಿಕೆಯನ್ನು ಲೆಕ್ಕಹಾಕಿ ಮಾಡ್ಬೇಕು. ವಾರ್ಷಿಕವಾಗಿ 99,999 ವರೆಗೆ ಬಡ್ಡಿ ಬಂದ್ರೆ ಟಿಡಿಎಸ್ ಕಡಿತವಾಗೋದನ್ನು ತಪ್ಪಿಸಬಹುದು. ನೀವು ಎಷ್ಟು ಎಫ್ ಡಿ ಇಡ್ತೀರಿ ಹಾಗೂ ಬ್ಯಾಂಕ್ ಎಷ್ಟು ಬಡ್ಡಿ ನೀಡುತ್ತದೆ ಎಂಬ ಲೆಕ್ಕಾಚಾರ ಇಲ್ಲಿ ಮುಖ್ಯವಾಗುತ್ತದೆ. ಹಿರಿಯ ನಾಗರಿಕರು ಎಫ್ ಡಿ ಮಾಡ್ವಾಗ ತಮ್ಮ ಒಟ್ಟು ಬಡ್ಡಿ 1 ಲಕ್ಷ ರೂಪಾಯಿಗಳನ್ನು ಮೀರಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿಗೆ ತರಲು ಮುಂದಾಗಿದೆ ಸರ್ಕಾರ, ದೇಶದ ಪ್ರತಿ ಕೆಲಸಗಾರರಿಗೂ ಸಿಗಲಿದೆ ಲಾಭ
ನಿಯಮ ಯಾವಾಗ ಜಾರಿಗೆ ಬರಲಿದೆ? : ಹೊಸ ನಿಯಮ ಏಪ್ರಿಲ್ 2025ರಿಂದ ಜಾರಿಗೆ ಬರಲಿದೆ. ಹಿರಿಯ ನಾಗರಿಕರು ಸೂಕ್ತ ಪ್ರಮಾಣದಲ್ಲಿ ಟಿಡಿಎಸ್ ಲಾಭ ಪಡೆಯುವಂತೆ ಎಲ್ಲ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ತಮ್ಮ ವ್ಯವಸ್ಥೆಯನ್ನು ನವೀಕರಿಸಲಿವೆ.
ಬಡ್ಡಿದರದ ಪ್ರಕಾರ ಒಬ್ಬರು ಎಷ್ಟು ಹೂಡಿಕೆ ಮಾಡಬೇಕು? : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶೇಕಡಾ 8ರ ದರದಲ್ಲಿ ಬಡ್ಡಿ ನೀಡುತ್ತದೆ, ನೀವು 12,13,110 ರೂಪಾಯಿ ಹೂಡಿಕೆ ಮಾಡಿದ್ರೆ ನಿಮಗೆ ವಾರ್ಷಿಕ 99,999 ರೂಪಾಯಿ ಬಡ್ಡಿ ಸಿಗುತ್ತದೆ. ಅದೇ ಬಂಧನ್ ಬ್ಯಾಂಕ್ ನಿಮಗೆ ಶೇಕಡಾ 8.55ರ ದರದಲ್ಲಿ ಬಡ್ಡಿ ನೀಡುತ್ತದೆ. ನೀವು 11,32,751 ರೂಪಾಯಿ ಹೂಡಿಕೆ ಮಾಡಿದ್ರೆ ವಾರ್ಷಿಕ ಬಡ್ಡಿ 99,999 ರೂಪಾಯಿ ಸಿಗುತ್ತದೆ. ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಿಮಗೆ ಶೇಕಡಾ 9.5ರ ದರದಲ್ಲಿ ಬಡ್ಡಿಯನ್ನು ನೀಡುತ್ತದೆ. ನೀವು 10,15,864 ರೂಪಾಯಿಗಳನ್ನು ಎಫ್ ಡಿ ಇಟ್ಟರೆ ಆಗ ನಿಮಗೆ ವಾರ್ಷಿಕ 99,999 ರೂಪಾಯಿ ಬಡ್ಡಿ ಸಿಗುತ್ತದೆ.
ಒಳ್ಳೆ ಕೆಲ್ಸ ಸಿಗ್ಬೇಕು ಅಂದ್ರೆ ಉತ್ತಮ ಕ್ರೆಡಿಟ್ ಸ್ಕೋರ್ ಇರ್ಬೇಕು, ಹೊಸ ರೂಲ್ಸ್ ಫಾಲೋ
ಯಾವ ಎಫ್ ಡಿಗೆ ಟಿಡಿಎಸ್ ಕಡಿತವಾಗುವುದಿಲ್ಲ? : ನೀವು ಕ್ಯುಮಿಲೆಟಿವ್ ಎಫ್ ಡಿ ಮಾಡಿದ್ದು, ಬಡ್ಡಿಯನ್ನು ಮರುಹೂಡಿಕೆ ಮಾಡಿದರೆ ಮೊದಲ ವರ್ಷ ಟಿಡಿಎಸ್ ಕಡಿತಗೊಳ್ಳುವುದಿಲ್ಲ. ಆದ್ರೆ ಎರಡನೇ ವರ್ಷ ಬಡ್ಡಿ 1 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗುವ ಕಾರಣ ಟಿಡಿಎಸ್ ಕಡಿತಗೊಳ್ಳುತ್ತದೆ. ಮೊದಲ ವರ್ಷದ ಬಡ್ಡಿ ಅಸಲಿಗೆ ಸೇರುವುದರಿಂದ ಬಡ್ಡಿ ಹೆಚ್ಚಾಗುತ್ತದೆ. ತ್ರೈಮಾಸಿಕ ವೇತನದಾರರ ಎಫ್ ಡಿಯಲ್ಲಿ, ಪ್ರತಿ ಮೂರು ತಿಂಗಳಿಗೊಮ್ಮೆ ಖಾತೆಗೆ ಬಡ್ಡಿಯನ್ನು ಜಮಾ ಮಾಡಲಾಗುತ್ತದೆ. ಅಸಲು ಒಂದೇ ಆಗಿರುತ್ತದೆ. ಹಾಗಾಗಿ ಅವರ ಬಡ್ಡಿ 1 ಲಕ್ಷ ರೂಪಾಯಿ ಮೀರುವುದಿಲ್ಲ ಮತ್ತು ಟಿಡಿಎಸ್ ಕಡಿತಗೊಳ್ಳುವುದಿಲ್ಲ.
ಇದನ್ನು ನೆನಪಿಡಿ : ಒಂದು ಲಕ್ಷದವರೆಗೆ ಟಿಡಿಎಸ್ ಕಡಿತವಿಲ್ಲ ಅಂದ್ರೆ ತೆರಿಗೆ ಕಡಿತ ಇಲ್ಲ ಎಂದರ್ಥವಲ್ಲ. ನಿಮ್ಮ ಒಟ್ಟೂ ಆದಾಯ, ತೆರಿಗೆ ಮಿತಿಗಿಂತ ಹೆಚ್ಚಿದ್ದರೆ ನೀವು ತೆರಿಗೆ ಪಾವತಿಸಬೇಕಾಗುತ್ತದೆ. ವಾರ್ಷಿಕ ನಿಮ್ಮ ಆದಾಯ 12 ಲಕ್ಷಕ್ಕಿಂತ ಹೆಚ್ಚಿದ್ದರೆ ನೀವು ತೆರಿಗೆ ಪಾವತಿ ಮಾಡ್ಬೇಕು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.