ಐಟಿ ಉದ್ಯೋಗಿಗಳು ಪುನಃ ಕಚೇರಿಗೆ ಕರೆಸಿಕೊಳ್ಳಲು ಸಿದ್ಧತೆ!

By Suvarna News  |  First Published Sep 14, 2021, 8:29 AM IST

* ಹೈಬ್ರಿಡ್‌ ಮಾದರಿಯಲ್ಲಿ ನೌಕರರನ್ನು ಕಚೇರಿಗೆ ಕರೆಸಿಕೊಳ್ಳಲು ಸಿದ್ಧತೆ

* ಐಟಿ ಉದ್ಯೋಗಿಗಳು ಪುನಃ ಕಚೇರಿಗೆ

* ವಾರದಲ್ಲಿ 2 ದಿನ ಕಚೇರಿಯಲ್ಲಿ ಕೆಲಸ, 3 ದಿನ ವರ್ಕ್ಫ್ರಂ ಹೋಂ


ನವದೆಹಲಿ(ಸೆ.14): ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಕೆ ಆಗುತ್ತಿರುವುದು ಹಾಗೂ ಬಹುತೇಕ ಉದ್ಯೋಗಿಗಳು ಲಸಿಕೆಯನ್ನು ಪಡೆದುಕೊಂಡಿರುವ ಹಿನ್ನೆಯಲ್ಲಿ ಐಟಿ ಕಂಪನಿಗಳು ತಮ್ಮ ನೌಕರರನ್ನು ಕಚೇರಿಗೆ ಕರೆಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ವಾರದಲ್ಲಿ 2-3 ದಿನ ವರ್ಕ್ ಫ್ರಂ ಆಫೀಸ್‌ ಮತ್ತು 2-3 ದಿನ ವರ್ಕ್ ಫ್ರಂ ಹೋಮ್‌ ಎಂಬ ಹೈಬ್ರಿಡ್‌ ಮಾದರಿಯನ್ನು ಅನುಸರಿಸಲು ಟಿಸಿಎಸ್‌, ವಿಪ್ರೋ, ಆ್ಯಪಲ್‌ ನಂತಹ ಪ್ರಮುಖ ಐಟಿ ಕಂಪನಿಗಳು ಮುಂದಾಗಿವೆ.

ವಿಪ್ರೋದಲ್ಲಿ ಉನ್ನತ ಹುದ್ದೆಯಲ್ಲಿರುವ ಸಿಬ್ಬಂದಿ ಸೋಮವಾರದಿಂದಲೇ ಕಚೇರಿಗೆ ಆಗಮಿಸಿದ್ದಾರೆ. ನಮ್ಮ ಸಂಸ್ಥೆಯ ಮುಖಂಡರುಗಳು ವಾರದಲ್ಲಿ 2 ದಿನ ಕಚೇರಿಗೆ ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಹಾಗೂ ಸಮಾಜಿಕ ಅಂತರವನ್ನು ಕಾಪಾಡಲಾಗುವುದು ಎಂದು ವಿಪ್ರೋ ಮುಖ್ಯಸ್ಥ ರಶೀದ್‌ ಪ್ರೇಮ್‌ ಜೀ ಟ್ವೀಟ್‌ ಮಾಡಿದ್ದಾರೆ.

Latest Videos

undefined

ಇದೇ ವೇಳೆ ಪ್ರಮುಖ ಐಟಿ ಕಂಪನಿಗಳ ಪೈಕಿ ಒಂದಾದ ಟಿಸಿಎಸ್‌ ಕೂಡ ಶೇ.70ರಿಂದ 80ರಷ್ಟುಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುವುದಕ್ಕೆ ಯೋಜನೆ ಹಾಕಿಕೊಂಡಿದೆ. ತನ್ನ ಶೇ.90ರಷ್ಟುಉದ್ಯೋಗಿಗಳು ಈಗಾಗಲೇ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಎಷ್ಟುಸಾಧ್ಯವೋ ಅಷ್ಟುಉದ್ಯೋಗಿಗಳನ್ನು ಪುನಃ ಕಚೇರಿಗೆ ಕರೆಸಿಕೊಳ್ಳುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೋನಾ 3ನೇ ಅಲೆಯ ಆಧಾರದ ಮೇಲೆ ಈ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ಟಿಸಿಎಸ್‌ ಸಿಇಒ ರಾಜೇಶ್‌ ಗೋಪಿನಾಥನ್‌ ಹೇಳಿದ್ದಾರೆ.

ಇನ್ನೊಂದೆಡೆ ಐಟಿ ದೈತ್ಯ ಇಸ್ಫೋಸಿಸ್‌ ಕೂಡ ತನ್ನ ಉದ್ಯೋಗಿಗಳನ್ನು ಪೂರ್ಣ ಪ್ರಮಾಣದಲ್ಲಿ ಕಚೇರಿಗೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ಯೋಜಿಸುತ್ತಿದೆ. ಕೊರೋನಾ 3ನೇ ಅಲೆಯ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಸಿಬ್ಬಂದಿಗಳ ಸರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ. ಅದೇ ರೀತಿ, ಎಚ್‌ಸಿಎಲ್‌, ನಸ್ಕಾಂ, ಆ್ಯಪಲ್‌ ಕಂಪನಿಗಳು ಕೂಡ ಉದ್ಯೋಗಿಗಳನ್ನು ಹೈಬ್ರಿಡ್‌ ಮಾದರಿಯಲ್ಲಿ ಕಚೇರಿಗೆ ಕರೆಸಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಂಡಿವೆ.

click me!