ಸಾಲದಲ್ಲಿದ್ದ ಅನಿಲ್‌ ಅಂಬಾನಿಗೆ 4,660 ಕೋಟಿ ಬಂಪರ್‌!

Published : Sep 10, 2021, 01:22 PM ISTUpdated : Sep 10, 2021, 01:44 PM IST
ಸಾಲದಲ್ಲಿದ್ದ ಅನಿಲ್‌ ಅಂಬಾನಿಗೆ 4,660 ಕೋಟಿ ಬಂಪರ್‌!

ಸಾರಾಂಶ

* ದೆಹಲಿ ಮೆಟ್ರೋ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಜಯ * ಸಾಲದಲ್ಲಿದ್ದ ಅನಿಲ್‌ ಅಂಬಾನಿಗೆ 4,660 ಕೋಟಿ ಬಂಪರ್‌

ನವದೆಹಲಿ(ಸೆ.10): ಸಾಲದ ಸುಳಿಯಲ್ಲಿ ಸಿಲುಕಿರುವ ಖ್ಯಾತ ಉದ್ಯಮಿ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಲಿ. ಕಂಪನಿಗೆ 4660 ಕೋಟಿ ರು. ಮೊತ್ತದ ಕಾನೂನು ಹೋರಾಟದಲ್ಲಿ ಜಯ ಲಭಿಸಿದೆ. ದೆಹಲಿ ಮೆಟ್ರೋ ಸಂಸ್ಥೆಯ ಜೊತೆ ಈ ಮೊತ್ತದ ಹಣದ ಮೇಲಿನ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ವ್ಯಾಜ್ಯದಲ್ಲಿ ಸುಪ್ರೀಂಕೋರ್ಟ್‌ ಅಂಬಾನಿ ಪರ ಆದೇಶ ನೀಡಿದ್ದು, ನಷ್ಟದಲ್ಲಿದ್ದ ಅವರ ಕಂಪನಿಗೆ ಮರುಜೀವ ಬಂದಂತಾಗಿದೆ.

2038ರವರೆಗೆ ದೇಶದ ಮೊದಲ ಖಾಸಗಿ ಸಿಟಿ ರೈಲ್ವೆ ಯೋಜನೆಯನ್ನು ಮುನ್ನಡೆಸಲು ದೆಹಲಿ ಮೆಟ್ರೋ ಜೊತೆ ರಿಲಯನ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, 2012ರಲ್ಲಿ ಈ ಒಪ್ಪಂದ ಮುರಿದುಬಿದ್ದಿತ್ತು. ಅಂದಿನಿಂದ ಈ ಯೋಜನೆಯ ಹೆಸರಿನಲ್ಲಿದ್ದ ಹಣದ ಮೇಲಿನ ಒಡೆತನದ ಬಗ್ಗೆ ದೆಹಲಿ ಮೆಟ್ರೋ ಹಾಗೂ ರಿಲಯನ್ಸ್‌ ಮಧ್ಯೆ ಕಾನೂನು ಸಮರ ನಡೆಯುತ್ತಿತ್ತು. ಬಡ್ಡಿ ಸೇರಿ ಆ ಮೊತ್ತವೀಗ 4660 ಕೋಟಿ ರು. ಆಗುತ್ತದೆ. 2017ರಲ್ಲೇ ಅನಿಲ್‌ ಅಂಬಾನಿ ಪರ ಮಧ್ಯಸ್ಥಿಕೆ ನ್ಯಾಯಾಧಿಕರಣ ಆದೇಶ ನೀಡಿತ್ತು. ಅದರ ವಿರುದ್ಧ ದೆಹಲಿ ಮೆಟ್ರೋ ಮೇಲ್ಮನವಿ ಸಲ್ಲಿಸಿತ್ತು. ಗುರುವಾರ ಸುಪ್ರೀಂಕೋರ್ಟ್‌ನ ಇಬ್ಬರು ಜಡ್ಜ್‌ಗಳ ಸಮಿತಿಯು ನ್ಯಾಯಾಧಿಕರಣದ ಆದೇಶವನ್ನು ಎತ್ತಿಹಿಡಿದಿದೆ. ಹೀಗಾಗಿ ಈ ಹಣ ಬಳಸಿಕೊಳ್ಳಲು ಅಂಬಾನಿಗಿದ್ದ ಅಡ್ಡಿ ನಿವಾರಣೆಯಾದಂತಾಗಿದೆ.

ಹಣವನ್ನು ತಮ್ಮ ಕಂಪನಿಯ ಸಾಲ ತೀರಿಸಲು ಬಳಸಿಕೊಳ್ಳುವುದಾಗಿ ಅನಿಲ್‌ ಅಂಬಾನಿ ಪರ ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ. ಕಂಪನಿಯ ಬ್ಯಾಂಕ್‌ ಖಾತೆಗಳನ್ನು ಸುಸ್ತಿಸಾಲದ ಖಾತೆ ಪಟ್ಟಿಯಿಂದ ಕೈಬಿಡಬೇಕೆಂದು ಇದೇ ವೇಳೆ ಕೋರ್ಟ್‌ ಸೂಚಿಸಿದೆ. ಕೋರ್ಟ್‌ ಆದೇಶದ ಬೆನ್ನಲ್ಲೇ ರಿಲಯನ್ಸ್‌ ಇನ್‌ಫ್ರಾ ಷೇರುಗಳ ಬೆಲೆ ಭಾರಿ ಏರಿಕೆಯಾಗಿದ್ದು, ಶೇ.5ರಷ್ಟುಏರಿಕೆಯಾಗುತ್ತಿದ್ದಂತೆ ದಿನದ ವಹಿವಾಟು ಸ್ತಬ್ಧಗೊಂಡಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ