ತೆರಿಗೆದಾರರಿಗೆ ತೆರಿಗೆ ಉಳಿತಾಯ ಮಾಡಲು ಹಲವು ಮಾರ್ಗಗಳಿವೆ. ಆದರೆ, ಅವುಗಳ ಬಗ್ಗೆ ಮಾಹಿತಿ ಹೊಂದಿರುವ ಜೊತೆಗೆ ಕೆಲವೊಂದು ತಪ್ಪುಗಳನ್ನು ಮಾಡದಿದ್ರೆ ದೊಡ್ಡ ಪ್ರಮಾಣದಲ್ಲಿ ತೆರಿಗೆ ಉಳಿತಾಯ ಮಾಡಬಹುದು.
Business Desk: ತೆರಿಗೆ ಉಳಿತಾಯದ ಲೆಕ್ಕಾಚಾರದಲ್ಲಿ ಅನೆಕ ತೆರಿಗೆದಾರರು ಈಗ ನಿರತರಾಗಿದ್ದಾರೆ. 2024-25ನೇ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ ಕೂಡ. ಹೀಗಿರುವಾಗ ತೆರಿಗೆದಾರರು ತೆರಿಗೆ ಉಳಿತಾಯದ ಬಗ್ಗೆ ಒಂದಿಷ್ಟು ಮಾಹಿತಿ ಹೊಂದಿರೋದು ಅಗತ್ಯ. ತೆರಿಗೆ ಕಡಿತಗಳು ಹಾಗೂ ವಿನಾಯ್ತಿಗಳ ಬಗ್ಗೆ ಮೊದಲೇ ಮಾಹಿತಿ ಹೊಂದಿದ್ದರೆ ಒಂದಿಷ್ಟು ತೆರಿಗೆ ಉಳಿತಾಯ ಮಾಡಬಹುದು. ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ತೆರಿಗೆ ಉಳಿತಾಯ ಮಾಡಲು ತೆರಿಗೆದಾರರಿಗೆ ಅನೇಕ ಅವಕಾಶಗಳಿವೆ. ಪಿಪಿಎಫ್, ಇಎಲ್ ಎಸ್ಎಸ್, ಎನ್ ಎಸ್ ಸಿ ಹಾಗೂ ಪಿಪಿಎಫ್ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ತೆರಿಗೆ ಕಡಿತದ ಪ್ರಯೋಜನಗಳು ಸಿಗುತ್ತವೆ. ಆದರೆ, ಈ ತೆರಿಗೆ ಕಡಿತದ ಅವಕಾಶಗಳ ಬಗ್ಗೆ ಸೂಕ್ತ ಮಾಹಿತಿ ಹೊಂದಿರದಿದ್ರೆ ನಿಮ್ಮ ಮೇಲಿನ ತೆರಿಗೆ ಹೊರೆ ಹಚ್ಚುತ್ತದೆ. ಹೀಗಾಗಿ ನಿಮ್ಮ ತೆರಿಗೆ ಉಳಿತಾಯದ ಯೋಜನೆ ಮೇಲೆ ಗಮನಾರ್ಹ ಪರಿಣಾಮ ಬೀರುವ ಈ 5 ಸಾಮಾನ್ಯ ತಪ್ಪುಗಳನ್ನು ಆದಷ್ಟು ನಿರ್ಲಕ್ಷಿಸಬೇಕು.
1.ಕಡಿತಗಳ ಬಗ್ಗೆ ಮಾಹಿತಿ ಇಲ್ಲದಿರೋದು: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ನಿರ್ಲಕ್ಷಿಸೋದ್ರಿಂದ ದೊಡ್ಡ ಮೊತ್ತದ ತೆರಿಗೆ ಉಳಿತಾಯದ ಅವಕಾಶವನ್ನು ತೆರಿಗೆದಾರರು ಕಳೆದುಕೊಳ್ಳುತ್ತಾರೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ (ಇಎಲ್ ಎಸ್ ಎಸ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ) ಹಾಗೂ ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ (ಇಪಿಎಫ್) ಹೂಡಿಕೆ ಮಾಡುವ ಮೂಲಕ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. ಈ ಯೋಜನೆಗಳಲ್ಲಿನ ಹೂಡಿಕೆಗೆ ಪ್ರಸ್ತುತ ವಾರ್ಷಿಕ ಗರಿಷ್ಠ 1.5ಲಕ್ಷ ರೂ. ತನಕ ಉಳಿತಾಯ ಮಾಡಬಹುದು.
ಹಿರಿಯ ನಾಗರಿಕರಿಗೆ ದೊಡ್ಡ ಪ್ರಮಾಣದಲ್ಲಿ ತೆರಿಗೆ ಉಳಿತಾಯಕ್ಕೆ ನೆರವು ನೀಡುವ ಯೋಜನೆಗಳು ಇವೇ ನೋಡಿ
2.ಮನೆ ಬಾಡಿಗೆ ಭತ್ಯೆ (HRA) ವಿನಾಯ್ತಿ ಬಳಸಿಕೊಳ್ಳದಿರೋದು: ನೀವು ವೇತನ ಪಡೆಯುವ ಉದ್ಯೋಗಿಯಾಗಿದ್ದು, ಎಚ್ ಆರ್ ಎ ಪಡೆಯುತ್ತಿದ್ದರೆ ಬಾಡಿಗೆ ಪಾವತಿ ಮೇಲೆ ತೆರಿಗೆ ವಿನಾಯ್ತಿ ಪಡೆಯಬಹುದು. ಆದರೆ, ಇದು ಕೆಲವೊಂದು ಷರತ್ತುಗಳಿಗೆ ಒಳಪಡುತ್ತದೆ. ಬಾಡಿಗೆ ರಸೀದಿಗಳನ್ನು ಸಲ್ಲಿಕೆ ಮಾಡಲು ವಿಫಲರಾದರೆ ಅಥವಾ ಉದ್ಯೋಗ ನೀಡಿದ ಸಂಸ್ಥೆಗೆ ಸಮರ್ಪಕ ದಾಖಲೆಗಳನ್ನು ನೀಡಲು ವಿಫಲರಾದರೆ ತೆರಿಗೆ ಉಳಿತಾಯದ ಅವಕಾಶ ಕಳೆದುಕೊಳ್ಳುತ್ತೀರಿ.
3.ಆರೋಗ್ಯ ವಿಮೆ ಪ್ರೀಮಿಯಂ ನಿರ್ಲಕ್ಷಿಸೋದು: ತನ್ನ, ಸಂಗಾತಿಯ, ಮಕ್ಕಳ ಹಾಗೂ ಪಾಲಕರ ಆರೋಗ್ಯ ವಿಮೆ ಪ್ರೀಮಿಯಂಗಳ ಪಾವತಿ ಕೂಡ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಡಿ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿದೆ. ಅಲ್ಲದೆ, ಈ ಸೆಕ್ಷನ್ ಅಡಿಯಲ್ಲಿ ಹಿರಿಯ ನಾಗರಿಕರು ಹೆಚ್ಚಿನ ತೆರಿಗೆ ಕಡಿತದ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ ಈ ಕಡಿತದ ಪ್ರಯೋಜನಗಳನ್ನು ಬಳಸಿಕೊಳ್ಳದಿದ್ರೆ ದೊಡ್ಡ ಮೊತ್ತದ ತೆರಿಗೆ ಕಡಿತದ ಪ್ರಯೋಜನವನ್ನು ಮಿಸ್ ಮಾಡಿಕೊಳ್ಳುತ್ತೀರಿ.
4. ಎನ್ ಪಿಎಸ್ ಪ್ರಯೋಜನಗಳನ್ನು ಬಳಸಿಕೊಳ್ಳದಿರೋದು: ಎನ್ ಪಿಎಸ್ ಗೆ ನೀಡಿರುವ ಕೊಡುಗೆ ಕೂಡ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80CCD(1B) ಅಡಿಯಲ್ಲಿ ತೆರಿಗೆ ಪ್ರಯೋಜನಕ್ಕೆ ಅರ್ಹವಾಗಿದೆ. ಅಂದರೆ ಸೆಕ್ಷನ್ 80 ಸಿ ಅಡಿಯಲ್ಲಿನ ಮಿತಿ ಮೀರಿದ ಮೊತ್ತಕ್ಕೆ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು.
ತೆರಿಗೆದಾರರೇ ನೆನಪಿಡಿ, ಐಟಿಆರ್ ಸಲ್ಲಿಕೆ ಮಾಡೋವಾಗ ಯಾವುದೇ ಕಾರಣಕ್ಕೂ ಈ 10 ತಪ್ಪುಗಳನ್ನು ಮಾಡ್ಬೇಡಿ
5.ಕೊನೆಯ ಕ್ಷಣದ ತೆರಿಗೆ ಪ್ಲ್ಯಾನಿಂಗ್: ತೆರಿಗೆ ಉಳಿತಾಯದ ಪ್ಲ್ಯಾನಿಂಗ್ ಅನ್ನು ಮುಂದೂಡುವುದು ಭವಿಷ್ಯದಲ್ಲಿ ದುಬಾರಿಯಾಗಬಹುದು. ತೆರಿಗೆ ಉಳಿತಾಯದ ಯೋಜನೆಗಳಲ್ಲಿ ಹೂಡಿಕೆ ಮಾಡಲು ಮಾರ್ಚ್ ತನಕ ಕಾಯಬೇಡಿ. ಆದಷ್ಟು ಬೇಗ ಸೂಕ್ತ ಯೋಜನೆ ರೂಪಿಸೋದ್ರಿಂದ ಹೂಡಿಕೆಯನ್ನು ವರ್ಷವಿಡೀ ಸಮರ್ಪಕವಾಗಿ ಹಂಚಲು ಸಾಧ್ಯವಾಗುತ್ತದೆ. ಅಲ್ಲದೆ, ತೆರಿಗೆಮುಕ್ತ ಬಡ್ಡಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಗಳಿಸಲು ಇದು ನೆರವು ನೀಡುತ್ತದೆ.