ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ಡಿಎ ಹಾಗೂ ಡಿಆರ್ ಅನ್ನು ಕಳೆದ ತಿಂಗಳಷ್ಟೇ ಶೇ.4ರಷ್ಟು ಹೆಚ್ಚಳ ಮಾಡಲಾಗಿತ್ತು.ಆದರೆ, ಕೆಲವರಿಗೆ ಪರಿಷ್ಕೃತ ಡಿಎ ಹಾಗೂ ಡಿಆರ್ ಮೊತ್ತ ಇನ್ನೂ ಬಂದಿಲ್ಲ.ಈ ಮೊತ್ತ ಏಪ್ರಿಲ್ ತಿಂಗಳ ವೇತನದಲ್ಲಿ ಉದ್ಯೋಗಿಗಳಿಗೆ ಸಿಗಲಿದೆ ಎಂದು ವರದಿಯಾಗಿದೆ.
ನವದೆಹಲಿ (ಏ.17): ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಕಳೆದ ತಿಂಗಳಷ್ಟೇ ಶೇ.4ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿತ್ತು. ಆದರೆ, ಪರಿಷ್ಕೃತ ಡಿಎ ಹಾಗೂ ಡಿಆರ್ ಮೊತ್ತ ಕೆಲವು ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಮಾರ್ಚ್ ತಿಂಗಳ ವೇತನದಲ್ಲಿ ಸಿಕ್ಕಿಲ್ಲ. ಹೀಗಾಗಿ ಇವರು ಮೂರು ತಿಂಗಳ ಬಾಕಿ ಡಿಎ ಅಥವಾ ಡಿಆರ್ ಮೊತ್ತವನ್ನೊಳಗೊಂಡ ಪರಿಷ್ಕೃತ ವೇತನವನ್ನು ಏಪ್ರಿಲ್ ತಿಂಗಳ ವೇತನದಲ್ಲಿ ಪಡೆಯಲಿದ್ದಾರೆ ಎಂದು ವರದಿಗಳು ಸ್ಪಷ್ಟಪಡಿಸಿವೆ. ಡಿಎ ಅನ್ನುಸರ್ಕಾರಿ ಉದ್ಯೋಗಿಗಳಿಗೆ ನೀಡಿದರೆ, ಡಿಆರ್ ಅನ್ನು ಪಿಂಚಣಿದಾರರಿಗೆ ನೀಡಲಾಗುತ್ತದೆ. ಇನ್ನು ಡಿಎ ಹಾಗೂ ಡಿಆರ್ ಅನ್ನು ವರ್ಷದಲ್ಲಿ ಎರಡು ಬಾರಿ ಅಂದರೆ ಜನವರಿ ಹಾಗೂ ಜುಲೈನಲ್ಲಿ ಹೆಚ್ಚಳ ಮಾಡಲಾಗುತ್ತದೆ.
ಕಳೆದ ತಿಂಗಳು ಡಿಎ ಹೆಚ್ಚಳದ ಘೋಷಣೆ ಸಂದರ್ಭದಲ್ಲಿ ಬಾಕಿ ಮೊತ್ತವನ್ನು ಮಾರ್ಚ್ ತಿಂಗಳ ವೇತನ ವಿತರಣೆಗಿಂತ ಮುಂಚೆ ಪಾವತಿಸೋದಿಲ್ಲ ಎಂದು ಸರ್ಕಾರ ತಿಳಿಸಿತ್ತು. ಮಾರ್ಚ್ 7ರಂದು ಕೇಂದ್ರ ಸಚಿವ ಸಂಪುಟ ಮೂಲವೇತನದ ಶೇ.50ಕ್ಕೆ ಶೇ.4ರಷ್ಟು ತುಟ್ಟಿ ಭತ್ಯೆ (ಡಿಎ) ಹೆಚ್ಚಳ ಮಾಡಲು ಅನುಮೋದನೆ ನೀಡಿತ್ತು. ಶೇ.4ರಷ್ಟು ಡಿಎ ಹೆಚ್ಚಳ ಒಂದು ಕೋಟಿಗೂ ಅಧಿಕ ಕೇಂದ್ರ ಸರ್ಕಾರಿ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಪ್ರಯೋಜನ ನೀಡಲಿದೆ. ಇದು 2024ರ ಜನವರಿ 1ರಿಂದ ಜಾರಿಗೆ ಬರಲಿದೆ. ಇದರ ಹೊರತಾಗಿ ಉದ್ಯೋಗಿಗಳಿಗೆ ಎಚ್ ಆರ್ ಎ ಅನ್ನು ಕೂಡ ಹೆಚ್ಚಳ ಮಾಡಲಾಗಿದೆ. ಈ ಹೆಚ್ಚಳದಿಂದ ಕೇಂದ್ರ ಸರ್ಕಾರಿ ನೌಕರರ ಡಿಎ ಶೇಕಡಾ 50ಕ್ಕೆ ಏರಿದಂತಾಗಿದೆ.
Breaking News: ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 4ರಷ್ಟು ಹೆಚ್ಚಿಸಿದ ಮೋದಿ ಸರ್ಕಾರ!
ಅಕ್ಟೋಬರ್ 2023 ರಲ್ಲಿ, ಕೇಂದ್ರ ಸಚಿವ ಸಂಪುಟವು 48.67 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 67.95 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗುವಂತೆ 2023ರ ಜುಲೈ 1 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು 4 ಶೇಕಡಾ ಪಾಯಿಂಟ್ ಏರಿಕೆ ಮಾಡುವ ಮೂಲಕ ಶೇ. 46ಕ್ಕೆ ಹೆಚ್ಚಿಸಿತು. DR ಮತ್ತು DA ಹೆಚ್ಚಳದಿಂದ ಉಂಟಾಗುವ ಸಂಚಿತ ಆರ್ಥಿಕ ಪರಿಣಾಮವು ವಾರ್ಷಿಕವಾಗಿ 12,857 ಕೋಟಿ ಎಂದು ಅಂದಾಜಿಸಲಾಗಿತ್ತು. 7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಸ್ವೀಕೃತ ಸೂತ್ರಕ್ಕೆ ಅನುಗುಣವಾಗಿ ಹೆಚ್ಚಳವಾಗಿದೆ
ಕೇಂದ್ರ ಸರ್ಕಾರಿ ನೌಕರರಿಗೆ ಎಷ್ಟು ವೇತನ ಹೆಚ್ಚಳವಾಗಲಿದೆ?
ಉದಾಹರಣೆಗೆ ಒಬ್ಬ ಉದ್ಯೋಗಿಯ ವೇತನ ತಿಂಗಳಿಗೆ 50,000ರೂ. ಇದ್ದು, ಆತನ ಮೂಲವೇತನ 15,000ರೂ. ಆಗಿದ್ದರೆ ಆತ ಈ ಹಿಂದೆ ಶೇ.40ರಷ್ಟು ಅಂದ್ರೆ 6,900 ಡಿಎ ಗಳಿಸುತ್ತಿದ್ದ. ಈಗ ಶೇ.4ರಷ್ಟು ಡಿಎ ಹೆಚ್ಚಳದ ಬಳಿಕ ಆ ಉದ್ಯೋಗಿ ತಿಂಗಳಿಗೆ 7,500 ರೂ. ಗಳಿಸಲಿದ್ದಾನೆ. ಇದು ಈ ಹಿಂದಿನ 6,900ರೂ.ಗೆ ಹೋಲಿಸಿದರೆ 600ರೂ. ಅಧಿಕ. ಹೀಗಾಗಿ ಒಂದು ವೇಳೆ ಒಬ್ಬ ವ್ಯಕ್ತಿ ತಿಂಗಳಿಗೆ 50,000ರೂ. ವೇತನ ಗಳಿಸುತ್ತಿದ್ದರೆ, ಆತನ ಮೂಲವೇತನ 15,000ರೂ. ಆಗಿದ್ದರೆ ಆತನ ವೇತನದಲ್ಲಿ ತಿಂಗಳಿಗೆ 600ರೂ. ಹೆಚ್ಚಳವಾಗಿದೆ.
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಸಾರ್ವತ್ರಿಕ ವರ್ಗಾವಣೆ ಅವಧಿ ವಿಸ್ತರಣೆ
ಡಿಎ ಹೆಚ್ಚಳವನ್ನು ಹೇಗೆ ನಿರ್ಧರಿಸಲಾಗುತ್ತದೆ?
ಉದ್ಯೋಗಿಗಳ ಜೀವನ ನಿರ್ವಹಣಾ ವೆಚ್ಚದ ಆಧಾರದಲ್ಲಿ ಡಿಎ ನಿಗದಿಪಡಿಸಲಾಗುತ್ತದೆ. ಉದ್ಯೋಗಿ ನಗರ, ಗ್ರಾಮೀಣ, ಅರೆಪಟ್ಟಣ ಹೀಗೆ ಯಾವ ಪ್ರದೇಶದಲ್ಲಿ ವಾಸಿಸುತ್ತಾನೆ ಎಂಬ ಆಧಾರದಲ್ಲಿ ಡಿಎ ನಿಗದಿಪಡಿಸಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ಡಿಎ ಲೆಕ್ಕಾಚಾರ ಮಾಡೋ ಫಾರ್ಮುಲಾವನ್ನು ಕೇಂದ್ರ ಸರ್ಕಾರ 2006ರಲ್ಲಿ ಬದಲಾಯಿಸಿತ್ತು.ಅದು ಈ ಕೆಳಗಿನಂತಿದೆ.
ತುಟ್ಟಿ ಭತ್ಯೆ %= (ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 12 ತಿಂಗಳು-115.76)/115.76)x100.
ಕೇಂದ್ರೀಯ ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ =(ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 3 ತಿಂಗಳು-126.33)/126.33)x100.
ಈ ಸೂತ್ರ ಬಳಸಿ ಲೆಕ್ಕಾಚಾರ ಹಾಕಿದರೆ ಡಿಎ ಎಷ್ಟು ಶೇಕಡಾವಾರು ಏರಿಕೆಯಾಗಬೇಕು ಎಂಬುದು ಸಿಗುತ್ತದೆ. ಈ ಸೂತ್ರದಲ್ಲಿ CPI-IW ಅಂದರೆ ಕೈಗಾರಿಕಾ ಕಾರ್ಮಿಕರ ಬೆಲೆ ಸೂಚ್ಯಂಕ. ಇದು ಕಳೆದ 12 ತಿಂಗಳ ಸರಾಸರಿ ಬೆಲೆ ಏರಿಕೆ ಮಾಹಿತಿ ಒದಗಿಸುತ್ತದೆ.