ಸೌಂದರ್ಯವರ್ಧಕ ಕ್ಷೇತ್ರಕ್ಕೆ ಟಾಟಾ ಗ್ರೂಪ್ ಎಂಟ್ರಿ; ಶೀಘ್ರದಲ್ಲಿ ಬರಲಿವೆಯಾ ಟಾಟಾ ಬ್ಯೂಟಿ ಟೆಕ್ ಮಳಿಗೆಗಳು?

By Suvarna NewsFirst Published Nov 16, 2022, 12:52 PM IST
Highlights

ಕೆಲವು ದಿನಗಳ ಹಿಂದಷ್ಟೇ ರಿಲಯನ್ಸ್ ಇಂಡಸ್ಟ್ರೀಸ್ ಸಲೂನ್ ಉದ್ಯಮಕ್ಕೆ ಕಾಲಿಡುವ ಸೂಚನೆ ನೀಡಿತ್ತು. ಇದೀಗ ಟಾಟಾ ಗ್ರೂಪ್ ಕೂಡ ಸೌಂದರ್ಯವರ್ಧಕ ಕ್ಷೇತ್ರಕ್ಕೆ ಕಾಲಿಡಲು ಸಜ್ಜಾಗಿದೆ. ವಿದೇಶಿ ಬ್ರ್ಯಾಂಡ್ ಗಳು ಸೇರಿದಂತೆ ಅತ್ಯಾಧುನಿಕ ಪ್ರಸಾಧನ ಸಾಮಗ್ರಿಗಳ ಮಾರಾಟಕ್ಕೆ ದೇಶದಲ್ಲಿ ಕನಿಷ್ಠ 20 ಬ್ಯೂಟಿ ಟೆಕ್ ಮಳಿಗೆಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. 

ನವದೆಹಲಿ (ನ.16): ಟಾಟಾ ಗ್ರೂಪ್ ಸೌಂದರ್ಯವರ್ಧಕ ಕ್ಷೇತ್ರಕ್ಕೆ ಕಾಲಿಡಲು ಸಜ್ಜಾಗಿದೆ. ಕೆಲವು ದಿನಗಳ ಹಿಂದಷ್ಟೇ ರಿಲಯನ್ಸ್ ಇಂಡಸ್ಟ್ರೀಸ್ ಸಲೂನ್ ಉದ್ಯಮಕ್ಕೆ ಕಾಲಿಡುವ ಸೂಚನೆ ನೀಡಿದ್ದು, ಚೆನ್ನೈ ಮೂಲದ  'ನ್ಯಾಚುರಲ್ಸ್ ಸಲೂನ್ ಆ್ಯಂಡ್ ಸ್ಪಾ' ಸಲೂನ್ ಕಂಪನಿಯ ಶೇ.49ರಷ್ಟು ಷೇರುಗಳನ್ನು ಖರೀದಿಸಲು ಮುಂದಾಗಿದೆ ಎಂದು ವರದಿಯಾಗಿತ್ತು. ಇದೀಗ ಭಾರತದ ಇನ್ನೊಂದು ಪ್ರಮುಖ ಉದ್ಯಮ ಸಂಸ್ಥೆಯಾದ ಟಾಟಾ ಕೂಡ ದೇಶಾದ್ಯಂತ ಕನಿಷ್ಠ 20 ಬ್ಯೂಟಿ ಟೆಕ್ ಮಳಿಗೆಗಳನ್ನು ಪ್ರಾರಂಭಿಸಲು ಯೋಚಿಸಿದೆ. ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿರುವ ಈ ಮಳಿಗೆಗಳಲ್ಲಿ ವರ್ಚುವಲ್ ಮೇಕಪ್ ಕಿಯೋಸ್ಕ್ ಹಾಗೂ ಡಿಜಿಟಲ್ ಸ್ಕಿನ್ ಟೆಸ್ಟ್ ಸಾಧನಗಳು ಇರಲಿವೆ. ಇದ್ರಿಂದ ಯುವ, ಶ್ರೀಮಂತ ಉದ್ಯಮಿಗಳಿಗೆ  ಪ್ರೀಮಿಯಂ ಕಾಸ್ಮೆಟಿಕ್ ಉತ್ಪನ್ನಗಳನ್ನು ಖರೀದಿಸಲು ನೆರವಾಗಲಿದೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ. ಸೌಂದರ್ಯವರ್ಧಕ ಕ್ಷೇತ್ರಕ್ಕೆ ಕಾಲಿಡುವ ಮೂಲಕ ಟಾಟಾ ಗ್ರೂಪ್ ತನ್ನ ಉದ್ಯಮವನ್ನು ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಲು ಮುಂದಾಗಿರೋದು ಸ್ಪಷ್ಟವಾಗಿದೆ. ಜಗತ್ತಿನ ಎರಡನೇ ಅತೀದೊಡ್ಡ ಸೌಂದರ್ಯವರ್ಧಕ ಮಾರುಕಟ್ಟೆ ಎಂಬ ಪ್ರಸಿದ್ಧಿ ಗಳಿಸಿರುವ ಭಾರತದಲ್ಲಿ ಈಗಾಗಲೇ ಜನಪ್ರಿಯತೆ ಗಳಿಸಿಕೊಂಡಿರುವ ಎಲ್ ವಿಎಂಎಚ್ ಸೆಫೋರ ಹಾಗೂ ದೇಶೀಯ ಕಂಪನಿ ನೈಕಾಕ್ಕೆ ಟಾಟಾ ಭಾರೀ ಪೈಪೋಟಿ ನೀಡುವ ನಿರೀಕ್ಷೆಯಿದೆ. 

ಭಾರತದಲ್ಲಿ 18 ಹಾಗೂ  45 ವಯಸ್ಸಿನ ನಡುವಿನ ಜನರನ್ನು ಗುರಿಯಾಗಿಸಿಕೊಂಡು ಟಾಟಾ ಗ್ರೂಪ್ ಸೌಂದರ್ಯವರ್ಧಕ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಈ ವಯೋಮಾನದ ಭಾರತೀಯರು ಎಸ್ಟಿ ಲೌಂಡರ್ಸ್ ಎಂ.ಎ.ಸಿ ಹಾಗೂ ಬಾಬ್ಬಿ ಬ್ರೋನ್ ಮುಂತಾದ ವಿದೇಶಿ ಬ್ರ್ಯಾಂಡ್ ಉತ್ಪನ್ನಗಳನ್ನು ಖರೀದಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿದೇಶಿ ಬ್ರ್ಯಾಂಡ್ ಗಳು ತನ್ನ ಮಳಿಗೆಯಲ್ಲಿ ಲಭ್ಯವಾಗುವಂತೆ ಮಾಡಲು ಟಾಟಾ ಗ್ರೂಪ್ ಎಲ್ಲೀಸ್ ಬ್ರೂಕ್ಲೆನ್ ಹಾಗೂ ಗಲ್ಲಿನೆ ಸಂಸ್ಥೆಗಳನ್ನು ಪಾಲುದಾರರನ್ನಾಗಿ ಹೊಂದಲು ಆಸಕ್ತಿ ತೋರಿದ್ದು, ಈ ಸಂಬಂಧ ಮಾತುಕತೆ ಕೂಡ ನಡೆಸುತ್ತಿದೆ ಎಂದು ಹೇಳಲಾಗಿದೆ.ತನ್ನ ಹೊಸ ಮಳಿಗೆಗಳಿಗೆ ಉತ್ಪನ್ನಗಳನ್ನು ಪೂರೈಕೆಗೆ ಸಂಬಂಧಿಸಿ ಟಾಟಾ ಸಂಸ್ಥೆ 24ಕ್ಕೂ ಅಧಿಕ ಕಂಪನಿಗಳ ಜೊತೆ ಮಾತುಕತೆಯಲ್ಲಿ ತೊಡಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. ಈ ಯೋಜಿತ ಬ್ಯೂಟಿ ಸ್ಟೋರ್ ಗಳ ಬಗ್ಗೆ ಕಾಮೆಂಟ್ ಮಾಡಲು ಟಾಟಾ ಸಂಸ್ಥೆ ನಿರಾಕರಿಸಿದೆ. ಹೀಗಾಗಿ ಟಾಟಾ ಸಂಸ್ಥೆಯ ಬ್ಯೂಟಿ ಮಳಿಗೆಗಳ ಉದ್ಘಾಟನೆ ಬಗ್ಗೆ ಇನ್ನೂ ಮಾಹಿತಿಗಳು ಬಹಿರಂಗವಾಗಿಲ್ಲ.

ಈ ಎರಡು ರಾಷ್ಟ್ರಗಳಲ್ಲಿದ್ದಾರೆ ಜಗತ್ತಿನ ಅತೀ ಹೆಚ್ಚು ಸಿರಿವಂತರು!

ಇತ್ತೀಚೆಗಷ್ಟೇ ಟಾಟಾ ಸಂಸ್ಥೆ  Tata CLiQ Palette ಎಂಬ ಬ್ಯೂಟಿ ಶಾಪಿಂಗ್ ಅಪ್ಲಿಕೇಷನ್ ಬಿಡುಗಡೆ ಮಾಡಿತ್ತು. ಈ ಅಪ್ಲಿಕೇಷನ್ ನಲ್ಲಿ ಶೇ.70ರಷ್ಟು ಉತ್ಪನ್ನಗಳು ಚರ್ಮದ ಆರೈಕೆ ಹಾಗೂ ಮೇಕ್ ಅಪ್ ಗೆ ಸಂಬಂಧಿಸಿದ್ದಾಗಿವೆ. ಟಾಟಾ ಗ್ರೂಪ್ ಬ್ಯೂಟಿ ಮಳಿಗೆಗಳಲ್ಲಿ ಗ್ರಾಹಕರಿಗೆ ಡಜನ್ ಗಟ್ಟಲೆ ಲಿಪ್ ಸ್ಟಿಕ್ ಶೇಡ್ ಗಳನ್ನು ಸ್ಕ್ರೀನ್ ಗಳಲ್ಲಿ ವರ್ಚುವಲ್ ಆಗಿ ಪ್ರಯತ್ನಿಸಲು ಅವಕಾಶ ನೀಡಲಾಗುತ್ತದೆ. ಹಾಗೆಯೇ ಸ್ಕಿನ್ ಟೆಸ್ಟ್ ಮೂಲಕ ಯಾವ ಉತ್ಪನ್ನ ಅವರ ಚರ್ಮಕ್ಕೆ ಸೂಕ್ತ ಎಂದು ತಿಳಿದುಕೊಳ್ಳುವ ಅವಕಾಶವನ್ನು ಕೂಡ ಒದಗಿಸಲಿದೆ. 

Global Technology Summit: ಜಾಗತಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ IN-SPACe, ನವೋದ್ಯಮಗಳ ಚರ್ಚೆ

ಚೀನಾಕ್ಕೆ ಹೋಲಿಸಿದರೆ ಭಾರತದ ಸೌಂದರ್ಯ ಹಾಗೂ ವೈಯಕ್ತಿಕ ಕಾಳಜಿ ಮಾರುಕಟ್ಟೆ (Beauty and personal care market) ತುಂಬಾ ಚಿಕ್ಕದು. ಭಾರತ 16 ಬಿಲಿಯನ್ ಡಾಲರ್ ಮೌಲ್ಯದ ಸೌಂದರ್ಯ ಹಾಗೂ ವೈಯಕ್ತಿಕ ಕಾಳಜಿ ಮಾರುಕಟ್ಟೆ ಹೊಂದಿದ್ರೆ, ಚೀನಾದ ಮಾರುಕಟ್ಟೆ 92 ಬಿಲಿಯನ್ ಡಾಲರ್ ಗಾತ್ರದ್ದಾಗಿದೆ. ಆದರೆ ಯುರೋಮಾನಿಟರ್ ಎಂಬ ಮಾರುಕಟ್ಟೆ ಸಂಶೋಧನೆ ಸಂಸ್ಥೆ ಪ್ರಕಾರ ಮುಂದಿನ ಕೆಲವು ವರ್ಷಗಳಲ್ಲಿ ಭಾರತದ ಮಾರುಕಟ್ಟೆ ವರ್ಷಕ್ಕೆ ಶೇ.7 ಅಂದಾಜಿನಲ್ಲಿ ಬೆಳವಣಿಗೆ ಕಾಣಲಿದೆ. 

click me!