ತಾನೇ ಹುಟ್ಟು ಹಾಕಿದ್ದ ಏರಿಂಡಿಯಾ ಖರೀದಿಗೆ ಟಾಟಾ ಕಂಪನಿ ಆಸಕ್ತಿ!

By Kannadaprabha NewsFirst Published Feb 5, 2020, 9:14 AM IST
Highlights

ತಾನೇ ಹುಟ್ಟುಹಾಕಿದ್ದ ಏರಿಂಡಿಯಾ ಖರೀದಿಗೆ ಟಾಟಾ ಕಂಪನಿ ಆಸಕ್ತಿ| ಸಿಂಗಾಪುರ ಏರ್‌ಲೈನ್ಸ್‌ ಜತೆಗೂಡಿ ಬಿಡ್‌ಗೆ ತಯಾರಿ| ಖರೀದಿ ನಂತರ ಏನು ಮಾಡಬೇಕೆಂಬ ಯೋಜನೆಯೂ ಸಿದ್ಧ

ಮುಂಬೈ[ಫೆ.05]: ಒಂದು ಕಾಲದಲ್ಲಿ ತಾನೇ ಹುಟ್ಟು ಹಾಕಿದ್ದ, ಈಗ ಸರ್ಕಾರಿ ಸ್ವಾಮ್ಯದ ವಿಮಾನಯಾನ ಕಂಪನಿಯಾಗಿರುವ ಏರ್‌ ಇಂಡಿಯಾವನ್ನು ಖರೀದಿಸುವ ಸಂಬಂಧ ಸಿಂಗಾಪುರ ಏರ್‌ಲೈನ್ಸ್‌ ಪಾಲುದಾರಿಕೆಯಲ್ಲಿ ಬಿಡ್‌ ಮಾಡಲು ದೇಶದ ಅತಿದೊಡ್ಡ ಉದ್ಯಮ ಸಾಮ್ರಾಜ್ಯವಾದ ಟಾಟಾ ಕಂಪನಿ ಮುಂದಾಗಿದೆ. ಏರ್‌ ಇಂಡಿಯಾ ಕಂಪನಿ ತನಗೆ ಒಲಿದರೆ ಅದರ ಒಂದು ಭಾಗವಾಗಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಕಂಪನಿಯನ್ನು ತನ್ನ ಒಡೆತನದ ಏರ್‌ ಏಷ್ಯಾ ಜತೆ ವಿಲೀನಗೊಳಿಸುವ ಯೋಜನೆಯನ್ನೂ ಸಿದ್ಧಪಡಿಸಿಟ್ಟುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಟಾಟಾ ಕಾಲಿಗೆ ಬಿದ್ದ ಮೂರ್ತಿ: ಇದು ಭಾರತದ ಸಂಸ್ಕೃತಿ!

ಸಿಂಗಾಪುರ ಏರ್‌ಲೈನ್ಸ್‌ ಜತೆಗೂಡಿ ವಿಸ್ತಾರ ವಿಮಾನಯಾನ ಕಂಪನಿಯನ್ನು ಟಾಟಾ ನಡೆಸುತ್ತಿದೆ. ಇದೇ ವೇಳೆ, ಮಲೇಷ್ಯಾದ ಉದ್ಯಮಿ ಟೋನಿ ಫರ್ನಾಂಡಿಸ್‌ ಜತೆ ಸೇರಿ ಏರ್‌ ಏಷ್ಯಾವನ್ನು ಮುನ್ನಡೆಸುತ್ತಿದೆ. ಏರ್‌ ಇಂಡಿಯಾವನ್ನು ಖರೀದಿಸಿದ ತರುವಾಯ ಅದರ ಅಗ್ಗದ ವಿಮಾನಯಾನ ಸೇವೆಯಾದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಅನ್ನು ತನ್ನ ಅಗ್ಗದ ವಿಮಾನಯಾನ ಕಂಪನಿ ಏರ್‌ ಏಷ್ಯಾ ಜತೆ ವಿಲೀನಗೊಳಿಸುವ ಉದ್ದೇಶವನ್ನು ಹೊಂದಿದೆ.

ಏರ್‌ ಏಷ್ಯಾದಲ್ಲಿ ಶೇ.51ರಷ್ಟುಷೇರುಗಳನ್ನು ಟಾಟಾ ಹೊಂದಿದೆಯಾದರೂ, ಮತ್ತೊಂದು ಕಂಪನಿ ಖರೀದಿಸುವ ವೇಳೆ ಶೇ.49ರಷ್ಟುಷೇರುಗಳನ್ನು ಹೊಂದಿರುವ ಟೋನಿ ಅವರ ಒಪ್ಪಿಗೆ ಪಡೆಯಬೇಕು. ಹೀಗಾಗಿ ಟೋನಿ ಅವರನ್ನೂ ಈ ವಿಚಾರವಾಗಿ ಸಂಪರ್ಕಿಸಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಏರ್‌ ಇಂಡಿಯಾಗೆ ಬಿಡ್‌ ಮಾಡಲು ಮಾ.17 ಕಡೆಯ ದಿನ.

ಭರವಸೆಯ ಕಂಗಳು: ಉದ್ಯಮಿ ರತನ್ ಟಾಟಾ ಅವರ ಆ ದಿನಗಳು!

click me!