ನಕಲಿ ಎಸ್‌ಬಿಐ ಶಾಖೆ ತೆರೆದ ಭೂಪ!| ಅನುಕಂಪದ ಉದ್ಯೋಗ ಕೊಡದ್ದಕ್ಕೆ ಬ್ಯಾಂಕ್ ಆರಂಭಿಸಿದ| ತಮಿಳುನಾಡಿನ ಶಾಖೆ ಕಂಡು ಬ್ಯಾಂಕ್‌ನವರಿಗೇ ಶಾಕ್
ಚೆನ್ನೈ(ಜು.12): ನಕಲಿ ಎಟಿಎಂ ಕಾರ್ಡ್, ಚೆಕ್‌ಬುಕ್ ಮೊದಲಾದವುಗಳನ್ನು ಸೃಷ್ಟಿಸಿ ಜನರನ್ನು ವಂಚಿಸುವುದು ಗೊತ್ತು. ಆದರೆ ತಮಿಳುನಾಡಿನಲ್ಲಿ ಭೂಪನೊಬ್ಬ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)ನ ನಕಲಿ ಶಾಖೆಯನ್ನೇ ತೆರೆದಿರುವ ಅಚ್ಚರಿ ಹಾಗೂ ಕಳವಳಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಎಸ್‌ಬಿಐನ ಮಾಜಿ ಉದ್ಯೋಗಿಯೊಬ್ಬರ ಪುತ್ರ ಕಮಲ್‌ಬಾಬು (19), ಎ. ಕುಮಾರ್ (42), ಎಂ. ಮಾಣಿಕ್ಯಂ (52) ಎಂಬುವರೇ ನಕಲಿ ಶಾಖೆ ತೆರೆದು ಈಗ ಕಂಬಿ ಎಣಿಸುತ್ತಿರುವ ವ್ಯಕ್ತಿಗಳು. ಬ್ಯಾಂಕ್‌ನಿಂದ ಈವರೆಗೆ ಯಾರೂ ವಂಚನೆಗೀಡಾಗಿಲ್ಲ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
undefined
ಪ್ರಕರಣ ಹಿನ್ನೆಲೆ:
ಕಮಲ್‌ಬಾಬುವಿನ ತಂದೆ ಮತ್ತು ತಾಯಿ ಇಬ್ಬರೂ ಎಸ್‌ಬಿಐ ಉದ್ಯೋಗಿಗಳು. ತಂದೆ 10 ವರ್ಷದ ಹಿಂದೆ ಮೃತಪಟ್ಟಿದ್ದಾರೆ. ತಾಯಿ ಇತ್ತೀಚೆಗೆ ನಿವೃತ್ತಿಯಾಗಿದ್ದಾರೆ. ನಿರುದ್ಯೋಗಿಯಾಗಿದ್ದ ಕಮಲ್, ಕರ್ತವ್ಯದ ವೇಳೆ ಮೃತರಾದ ತಂದೆಯ ಉದ್ಯೋಗವನ್ನು ತನಗೆ ನೀಡುವಂತೆ ಕೋರಿದ್ದ. ಆದರೆ ಅದು ಈಡೇರಿರಲಿಲ್ಲ.
ಆರ್ಥಿಕ ಚೇತರಿಕೆಯಲ್ಲಿ ಭಾರತವೇ ಮುಂಚೂಣಿ: ಬಂಡವಾಳ ಹೂಡಲು ಮೋದಿ ಕರೆ!
ಇದರಿಂದ ಬೇಸತ್ತ ಕಮಲ್ ಇಬ್ಬರ ಜತೆಗೂಡಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ಲಾಕ್‌ಡೌನ್ ಅವಧಿಯಲ್ಲೇ ಕಡಲೂರು ಜಿಲ್ಲೆಯ ಪನರುಟ್ಟಿಯಲ್ಲಿ ಸಂಪೂರ್ಣವಾಗಿ ಎಸ್‌ಬಿಐ ಹೋಲುವ ಶಾಖೆಯೊಂದನ್ನು ತೆರೆದಿದ್ದ. ಯಾರಿಗೂ ಅನುಮಾನ ಬಾರದೇ ಇರಲಿ ಎಂದು ಶಾಖೆಯ ಹೆಸರಲ್ಲಿ ವೆಬ್‌ಸೈಟ್ ಕೂಡ ಆರಂಭಿಸಿದ್ದ. ಪ್ರಾರಂಭದಿಂದಲೂ ಬ್ಯಾಂಕ್ ವ್ಯವಹಾರದ ಕುರಿತು ಪೂರ್ಣ ಮಾಹಿತಿ ಇದ್ದ ಕಾರಣ ಬ್ಯಾಂಕ್‌ಗೆ ಅಗತ್ಯವಾದ ಕಂಪ್ಯೂಟರ್, ಲಾಕರ್, ನಕಲಿ ದಾಖಲೆಗಳು, ಚಲನ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಸೃಷ್ಟಿಸಿ ಶಾಖೆ ಆರಂಭಿಸಿದ್ದ.
ಇತ್ತೀಚೆಗೆ ವ್ಯಕ್ತಿಯೊಬ್ಬರು ಅನುಮಾನ ಬಂದು ತಾವು ಮಾಮಾಲಿಯಾಗಿ ವ್ಯವಹರಿಸುವ ಬ್ಯಾಂಕ್‌ನ ಮ್ಯಾನೇಜರ್ ಗಮನಕ್ಕೆ ವಿಷಯ ತಂದಿದ್ದರು. ಮ್ಯಾನೇಜರ್ ಹಿರಿಯ ಅಧಿಕಾರಿಗಳ ಬಳಿ ವಿಚಾರಿಸಿದಾಗ ಪನರುಟ್ಟಿಯಲ್ಲಿ ಕೇವಲ 2 ಶಾಖೆ ಮಾತ್ರ ಇದ್ದು, 3ನೇ ಶಾಖೆ ಆರಂಭಿಸಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಪೊಲೀಸರೊಂದಿಗೆ ನಕಲಿ ಶಾಖೆಗೆ ಭೇಟಿ ನೀಡಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಅಷ್ಟುಮಾತ್ರ ನಕಲಿ ಶಾಖೆ ಥೇಟ್ ಅಸಲಿ ಶಾಖೆಯನ್ನು ಹೋಲುತ್ತಿರುವುದನ್ನು ಕಂಡು ಅಧಿಕಾರಿಗಳು ಕೂಡ ದಂಗಾಗಿ ಹೋಗಿದ್ದಾರೆ.
ಡಿಜಿಟಲ್ ಸ್ಟ್ರೈಕ್ ಬೆನ್ನಲ್ಲೇ ಚೀನಾಕ್ಕೆ ರಸ್ತೆ, ರೈಲು, ಟೆಲಿಕಾಂ ಶಾಕ್!
ತನಗೆ ಯಾರನ್ನೂ ವಂಚಿಸುವ ಉದ್ದೇಶ ಇರಲಿಲ್ಲ. ತಂದೆಯ ಉದ್ಯೋಗ ಸಿಗದೇ ಇದ್ದಿದ್ದರಿಂದ ಬೇಸತ್ತು ನನ್ನದೇ ಆದ ಬ್ಯಾಂಕ್ ತೆರೆಯುವ ನಿರ್ಧಾರ ಮಾಡಿದ್ದೆ ಎಂದು ಕಮಲ್‌ಬಾಬು ಹೇಳಿದ್ದಾನೆ.