
ಬೆಂಗಳೂರು (ಆ.4): ಕೊರೋನಾ ಬಳಿಕ ಸ್ವಂತ ಉದ್ಯಮ ಮಾಡೋರ ಸಂಖ್ಯೆ ಹೆಚ್ಚಿದೆ. ಇದೇ ಕಾರಣಕ್ಕೆ ಅನೇಕ ಸ್ಟಾರ್ಟ್ ಅಪ್ ಗಳು ಹುಟ್ಟಿಕೊಂಡಿವೆ. ಅದರಲ್ಲೂ ಸ್ಟಾರ್ಟ್ ಅಪ್ ಹಬ್ ಎಂದೇ ಕರೆಸಿಕೊಂಡಿರುವ ಬೆಂಗಳೂರಿನಲ್ಲಿ ಅನೇಕ ಸ್ವ ಉದ್ಯಮಗಳು ಹುಟ್ಟಿಕೊಂಡಿವೆ. ಐಟಿ, ಬಿಟಿ ಕಂಪನಿಗಳಲ್ಲಿ ಲಕ್ಷಾಂತರ ರೂಪಾಯಿ ವೇತನ ಪಡೆಯುತ್ತಿದ್ದ ಅನೇಕರು ಕೆಲಸ ತೊರೆದು ಸ್ವಂತ ಉದ್ಯಮ ಪ್ರಾರಂಭಿಸಿದ್ದಾರೆ. ಅದರಲ್ಲೂ ಕೆಲವರು ಹೋಟೆಲ್ ಉದ್ಯಮದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅನೇಕ ಮಹಿಳೆಯರು ಕೂಡ ಹೋಟೆಲ್ ಉದ್ಯಮ ಪ್ರಾರಂಭಿಸುವ ಮೂಲಕ ಯಶಸ್ಸು ಕಂಡಿದ್ದಾರೆ. ಈ ರೀತಿ ಉತ್ತಮ ವೇತನದ ಕೆಲಸ ಬಿಟ್ಟು ಹೋಟೆಲ್ ಉದ್ಯಮ ಪ್ರಾರಂಭಿಸಿದವರಲ್ಲಿ ಅಪೇಕ್ಷಾ ಕೂಡ ಒಬ್ಬರು. ಇಂಜಿನಿಯರಿಂಗ್ ಪದವೀಧರೆಯಾಗಿರುವ ಅಪೇಕ್ಷಾ, ಉದ್ಯೋಗ ತೊರೆದು ಹೋಟೆಲ ಉದ್ಯಮಕ್ಕೆ ಪ್ರವೇಶಿಸಿರುವ ಜೊತೆಗೆ ಯಶಸ್ಸು ಕೂಡ ಕಂಡಿದ್ದಾರೆ. ಬೆಂಗಳೂರಿನ ಪದ್ಮನಾಭನಗರದಲ್ಲಿ ಬ್ರಾಹ್ಮಿನ್ಸ್ ವೆಜ್ ಕಾರ್ನರ್ ಎಂಬ ಪುಟ್ಟ ಹೋಟೆಲ್ ಪ್ರಾರಂಭಗೊಂಡ ಅಲ್ಪ ಅವಧಿಯಲ್ಲೇ ದೊಡ್ಡ ಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಅಪೇಕ್ಷಾ ಅವರಿಗೆ ಮೊದಲಿನಿಂದಲೂ ಆಹಾರ ಉದ್ಯಮದಲ್ಲಿ ಸಾಕಷ್ಟು ಆಸಕ್ತಿಯಿತ್ತು. ಇವರ ಆಸಕ್ತಿಗೆ ಬೆನ್ನೆಲುಬಾಗಿ ನಿಂತವರು ಪತಿ ಹಾಗೂ ಅವರ ಒಬ್ಬರು ಸ್ನೇಹಿತರು. 2022ರ ಪ್ರಾರಂಭದಲ್ಲಿ ಪದ್ಮನಾಭ್ ನಗರದಲ್ಲಿ ಪುಟ್ಟದಾದ ಈ ಕೆಫೆ ಪ್ರಾರಂಭಿಸಿದರು. ಬೆಳಗ್ಗೆ ಕಾಫಿ, ಟೀ, ತಿಂಡಿ, ಮಧ್ಯಾಹ್ನದ ಊಟ, ಸಂಜೆ ತಿಂಡಿಯನ್ನು ಈ ಹೋಟೆಲ್ ನಲ್ಲಿ ಸಿಗುತ್ತದೆ. ಇಡ್ಲಿ, ವಡಾ, ಸಂಬಾರ್, ಮಂಗಳೂರು ಬನ್ಸ್, ಬೋಂಡಾ ಸೋಪ್, ಚೌ ಚೌ ಬಾತ್, ಬೆಲ್ಲದ ಕಾಫಿ ಇಲ್ಲಿನ ಜನಪ್ರಿಯ ಖಾದ್ಯಗಳು. ಇದರ ಜೊತೆಗೆ ಇನ್ನೂ ಅನೇಕ ವಿಧದ ತಿಂಡಿಗಳು ಈ ಹೋಟೆಲ್ ನಲ್ಲಿ ಸಿಗುತ್ತವೆ.
ಸುಧಾ ಮೂರ್ತಿ ಹೇಳಿದ ಮನಿ ಮಂತ್ರ, ಎಮರ್ಜೆನ್ಸಿ ಫಂಡ್ ಏಕಿರಬೇಕು?
ಅಪೇಕ್ಷಾ ಅವರ ಪತಿ ಕೂಡ ಇಂಜಿನಿಯರ್ ಆಗಿದ್ದು, ಕ್ರೈಸ್ಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಹೀಗಾಗಿ ಹೋಟೆಲ್ ನ ಸಂಪೂರ್ಣ ಜವಾಬ್ದಾರಿಯನ್ನು ಅಪೇಕ್ಷಾ ಅವರೇ ನೋಡಿಕೊಳ್ಳುತ್ತಿದ್ದಾರೆ.
ಒಂದು ಪುಟ್ಟ ಜಾಗದಲ್ಲಿ ಪುಟ್ಟ ತಂಡದೊಂದಿಗೆ ಬ್ರಾಹ್ಮಿನ್ಸ್ ವೆಜ್ ಕಾರ್ನರ್ ಎಂಬ ಹೋಟೆಲ್ ಅನ್ನು ಅಪೇಕ್ಷಾ ಅವರು ಇಂದು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅಂದ ಹಾಗೇ ಅವರ ಈ ಪ್ರಯಾಣ ಅಷ್ಟೊಂದು ಸುಲಭದ್ದೇನೂ ಆಗಿರಲಿಲ್ಲ. ಹೋಟೆಲ್ ಪ್ರಾರಂಭಿಸಿದ ಮೊದಲ ಒಂದು ತಿಂಗಳು ಗ್ರಾಹಕರ ಸಂಖ್ಯೆ ತೀರಾ ಕಡಿಮೆ ಇತ್ತಂತೆ. ಜನರು ನಮ್ಮ ಹೋಟೆಲ್ ಕಡೆ ಮುಖ ತಿರುಗಿಸಿ ಕೂಡ ನೋಡುತ್ತಿರಲಿಲ್ಲ ಎನ್ನುತ್ತಾರೆ ಅಪೇಕ್ಷಾ. ದಿನಕ್ಕೆ ಒಂದು ಸಾವಿರ ರೂ.ವಷ್ಟೇ ವ್ಯಾಪಾರ ಆಗುತ್ತಿತ್ತು. ಆ ಬಳಿಕ ನಿಧಾನವಾಗಿ ಹೋಟೆಲ್ ಗೆ ಗ್ರಾಹಕರು ಬರಲು ಪ್ರಾರಂಭಿಸಿದರು ಎನ್ನುತ್ತಾರೆ ಅಪೇಕ್ಷಾ. ಹೋಟೆಲ್ ನಲ್ಲಿ ಸಿಗುವ ಖಾದ್ಯಗಳ ರುಚಿ, ಸೇವೆ ಹಾಗೂ ಕಡಿಮೆ ದರ ಗ್ರಾಹಕರನ್ನು ಇಂದು ದೊಡ್ಡ ಪ್ರಮಾಣದಲ್ಲಿ ಸೆಳೆಯುತ್ತಿದೆ ಕೂಡ.
ಅಪ್ಪನನ್ನೇ ಮೀರಿಸಿದ ಮಗಳು: ರಿಲಯನ್ಸ್‌ನ ಎಲ್ಲ ಕಂಪನಿಗಳಿಗಿಂತ ರಿಲಯನ್ಸ್ ರೀಟೇಲ್ ಮೌಲ್ಯವೇ ಹೆಚ್ಚು!
ಸಾಮಾಜಿಕ ಜಾಲತಾಣ ಸೇರಿದಂತೆ ಅನೇಕ ಕಡೆ ಬ್ರಾಹ್ಮಿನ್ಸ್ ವೆಜ್ ಕಾರ್ನರ್ ಬಗ್ಗೆ ಅನೇಕ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಹೋಟೆಲ್ ನಲ್ಲಿ ಬೆಲೆ ಕೂಡ ಯೋಗ್ಯವಾಗಿರುವ ಜೊತೆಗೆ ರಚಿ ಹಾಗೂ ಶುಚಿಯ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭೇಟಿ ನೀಡುತ್ತಿದ್ದಾರೆ. 100ರೂ. ಇದ್ದರೆ ನಮ್ಮ ಹೋಟೆಲ್ ನಲ್ಲಿ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟವನ್ನು ಕೂಡ ಮುಗಿಸಬಹುದು ಎನ್ನುತ್ತಾರೆ ಅಪೇಕ್ಷಾ. ಹಾಗೆಯೇ ಹೋಟೆಲ್ ನಲ್ಲಿ ಇಡ್ಲಿಗೆ ನೀಡುವ ಸಾಂಬಾರ್ ಬಗ್ಗೆ ಗ್ರಾಹಕರು ಹೆಚ್ಚಿನ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕೆಲವರು ಸಾಂಬಾರನ್ನೇ ಎರಡ್ಮೂರು ಬಾರಿ ಕೇಳಿ ಹಾಕಿಸಿಕೊಳ್ಳುತ್ತಾರೆ ಎನ್ನುತ್ತಾರೆ ಅಪೇಕ್ಷಾ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.