ಯುಎಇ ತೊರೆದು ಹಾಳೆಪ್ಲೇಟ್ ಉದ್ಯಮ ಸ್ಥಾಪಿಸಿದ ಕಾಸರಗೋಡಿನ ದಂಪತಿ : ಬರ್ತಿದೆ ತಿಂಗಳಿಗೆ ಲಕ್ಷ ಲಕ್ಷ ಆದಾಯ

By Suvarna NewsFirst Published Jan 22, 2022, 2:58 PM IST
Highlights
  • ಕಾರ್ಪೋರೇಟ್‌ ಉದ್ಯೋಗ ತೊರೆದು ಸ್ವಂತ ಉದ್ಯಮ
  • ಯುಎಇ ತೊರೆದು ಕಾಸರಗೋಡಿನಲ್ಲಿ ಹಾಳೆಪ್ಲೇಟ್ ತಯಾರಿ
  • ತಿಂಗಳಿಗೆ ಎರಡು ಲಕ್ಷ ವಹಿವಾಟು

ಕಾಸರಗೋಡು(ಜ. 22): ವಿದೇಶಕ್ಕೆ ತರಳಿ ಒಳ್ಳೆ ಸಂಪಾದನೆ ಮಾಡಿ ಜೀವನದಲ್ಲಿ ಸೆಟ್ಲ್‌ ಆಗಬೇಕು ಎಂದು ಬಯಸುವವರು ಹಲವರಾದರೆ, ವಿದೇಶದ ಕೆಲಸ ಸಾಕಾಗಿ ದೇಶಕ್ಕೆ ಬಂದು ಸ್ವಂತ ಉದ್ಯಮ ಮಾಡಲು ಮನಸ್ಸು ಮಾಡುವವರು ಅನೇಕರಿದ್ದಾರೆ. ಅಂತವರಲ್ಲಿ ಒಬ್ಬರು ಕಾಸರಗೋಡಿನ ಈ ದಂಪತಿ. ಕೇರಳದ ದಂಪತಿಯಾದ ದೇವಕುಮಾರ್ ಮತ್ತು ಶರಣ್ಯ ಯುಎಇಯಲ್ಲಿ ತಮಗಿದ್ದ ಕಾರ್ಪೊರೇಟ್ ಉದ್ಯೋಗವನ್ನು ತೊರೆದು ಊರಿಗೆ ಮರಳಿ ಬಂದು ಇಲ್ಲಿ, ಅಡಿಕೆ ಹಾಳೆಯನ್ನು ಕಚ್ಚಾವಸ್ತುವನ್ನಾಗಿ ಇರಿಸಿಕೊಂಡು ಹೊಸ ಉದ್ಯಮ ಸ್ಥಾಪಿಸಿದ್ದು, ಈಗ ಇವರ ತಿಂಗಳ ಆದಾಯ ಲಕ್ಷದ ಮೇಲಿದೆ. 

ಇಂಜಿನಿಯರ್ ದೇವಕುಮಾರ್ ನಾರಾಯಣನ್ ಅವರು ಯುಎಇಯಲ್ಲಿ ನಾಲ್ಕು ವರ್ಷಗಳ ಕಾಲ ಕಾರ್ಪೊರೇಟ್ ಉದ್ಯೋಗದಲ್ಲಿದ್ದರು. ನಂತರ ಇವರ ಪತ್ನಿಯೂ ಇವರಿಗೆ ಜೊತೆಯಾಗಿದ್ದು, ನಂತರ ಅಲ್ಲಿನ ಕಠಿಣ ಜೀವನ ಶೈಲಿ ಇವರನ್ನು ತಾಯ್ನಾಡಿಗೆ ಮರಳುವ ಮನಸ್ಸು ಮಾಡಿಸಿತ್ತು. ಹೀಗಾಗಿ 2018ರಲ್ಲಿ ಸ್ವಂತ ಉದ್ಯಮ ಆರಂಭಿಸುವ ಆಲೋಚನೆಯೊಂದಿಗೆ ಕಾಸರಗೋಡಿಗೆ ಈ ದಂಪತಿ ಮರಳಿದ್ದರು. 

ನಾವು ನಮ್ಮದೇ ಆದ ಸ್ವಂತ ಉದ್ಯಮವನ್ನು ಆರಂಭಿಸಲು ಬಯಸಿದ್ದೆವು. ನಂತರ ಆ ಬಗ್ಗೆ ಆಲೋಚನೆ ಮಾಡಲು ಶುರು ಮಾಡಿದಾಗ ಸ್ಥಳೀಯವಾಗಿ ಇರುವ ಅಡಿಕೆ ಹಾಳೆಯನ್ನು ಕಚ್ಚವಸ್ತುವಾಗಿ ಬಳಸಿ ಉದ್ಯಮ ಆರಂಭಿಸುವ ಐಡಿಯಾ ಬಂತು. ಜೊತೆಗೆ ಅದು ಸಾಮಾಜಿಕ ಜವಾಬ್ದಾರಿಯ ಜೊತೆ ವ್ಯವಹಾರವಾಗಿರಬೇಕು ಎಂದು ನಿರ್ಧರಿಸಿದೆವು. ಅಡಿಕೆ ಹಾಳೆಗಳು ಪ್ಲಾಸ್ಟಿಕ್ ಮತ್ತು ಕಾಗದಕ್ಕೆ ಉತ್ತಮ ಪರ್ಯಾಯವಾಗಿದೆ. ಕಡಿಮೆ ಕಾಗದ ಮತ್ತು ಕಡಿಮೆ ಪ್ಲಾಸ್ಟಿಕ್ ಎಂಬ ಕಲ್ಪನೆಯನ್ನು ಸಂಯೋಜಿಸುವ ಮೂಲಕ ನಾವು ಅದಕ್ಕೆ 'ಪಾಪ್ಲಾ' ಎಂದು ಹೆಸರಿಟ್ಟೆವು ಎಂದು ಶರಣ್ಯಾ ಹೇಳುತ್ತಾರೆ.

2018 ರಲ್ಲಿ ಪ್ರಾರಂಭವಾದ ಪಾಪ್ಲಾ ಸಂಸ್ಥೆ ಈಗ ಟೇಬಲ್‌ವೇರ್‌ನಿಂದ ಹಿಡಿದು ಅಡಿಕೆ ಹಾಳೆಯ ಚೀಲಗಳವರೆಗೆ ಉತ್ಪನ್ನಗಳನ್ನು ತಯಾರಿಸುತ್ತಿದೆ. ತಿಂಗಳಿಗೆ 2 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದೆ. ಅಲ್ಲದೇ ದೇವಕುಮಾರ್ ಮತ್ತು ಶರಣ್ಯ ಮಡಿಕೈ ಪಂಚಾಯತ್‌ನಲ್ಲಿ ತಮ್ಮ ಮನೆಯ ಸಮೀಪದಲ್ಲಿ ಒಂದು ಸಣ್ಣ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದು. ಅಲ್ಲಿ ಈಗ ಏಳು ಸ್ಥಳೀಯ ಯುವಕರಿಗೆ ಉದ್ಯೋಗ ನೀಡಲಾಗಿದೆ ಎಂದು ದೇವಕುಮಾರ್ ಹೇಳುತ್ತಾರೆ.

ನಾವು ಹೆಚ್ಚಾಗಿ ಕಾಸರಗೋಡಿನಿಂದ ಮತ್ತು ಕೆಲವೊಮ್ಮೆ ಕಚ್ಚಾವಸ್ತುಗಳನ್ನು ಕರ್ನಾಟಕದಿಂದ ಪಡೆಯುತ್ತೇವೆ. ಅವುಗಳ ಗುಣಮಟ್ಟವನ್ನು ಖಚಿತಪಡಿಸಿಕೊಂಡ ನಂತರ ನಾವು ಅವುಗಳನ್ನು ಖರೀದಿಸುತ್ತೇವೆ ಮತ್ತು ವೈವಿಧ್ಯತೆ, ಗಾತ್ರ ಮುಂತಾದ ವಿವಿಧ ಅಂಶಗಳ ಆಧಾರದ ಮೇಲೆ  ಅದಕ್ಕೆ ಹಣ ಪಾವತಿಸುತ್ತೇವೆ ಎಂದು ದೇವಕುಮಾರ್ ಹೇಳಿದರು.

ಅಡಿಕೆ ಮರಗಳು ಹೂ ಬಿಡುವ ಕಾಲದಲ್ಲಿ ಮಾತ್ರ ಹಾಳೆಗಳು ಸಿಗುತ್ತವೆ. ವರ್ಷದ ಆರು ತಿಂಗಳು ಮಾತ್ರ ಅವುಗಳನ್ನು ಸಂಗ್ರಹಿಸಬಹುದಾಗಿದೆ. ಇದನ್ನು ದಾಸ್ತಾನು ಇಡುವುದು ಕೂಡ ಸವಾಲು ಆದಾಗ್ಯೂ ನಾವು ಉಳಿದ ಆರು ತಿಂಗಳ ಉಪಯೋಗಕ್ಕೆ ಅವುಗಳನ್ನು ಸಂಗ್ರಹಿಸಿಡುತ್ತೇವೆ. ಇದಕ್ಕೆ ನಮ್ಮ ಘಟಕದ ಜೊತೆಗೆ  ದೊಡ್ಡ ಶೇಖರಣಾ ಸ್ಥಳ ಕೂಡ ಬೇಕಾಗುತ್ತದೆ ಎನ್ನುತ್ತಾರೆ ಶರಣ್ಯ.

ಪಾಪ್ಲಾದ ಉತ್ಪನ್ನಗಳಲ್ಲಿ ಹೆಚ್ಚಾಗಿ ಪ್ಲೇಟ್‌ಗಳು, ಬೌಲ್‌ಗಳು, ಸ್ಪೂನ್‌ಗಳಂತಹ ಟೇಬಲ್‌ವೇರ್‌ಗಳು ಇದ್ದು. ನಾವು 4 ಇಂಚುಗಳಿಂದ 10 ಇಂಚುಗಳವರೆಗಿನ ಪ್ಲೇಟ್‌ಗಳು, ಆಳವಿಲ್ಲದ ಮತ್ತು ಆಳವಾದ ಬಟ್ಟಲುಗಳು, ಸ್ಪೂನ್‌ಗಳು ಮುಂತಾದ ವಿವಿಧ ಗಾತ್ರಗಳ ಮತ್ತು ಆಕಾರದ ಟೇಬಲ್‌ವೇರ್‌ಗಳನ್ನು ಹೊಂದಿದ್ದೇವೆ. ನಾವು ಬೇಡಿಕೆಗೆ ಅನುಗುಣವಾಗಿ ಅವುಗಳನ್ನು ಸಿದ್ಧಪಡಿಸುತ್ತೇವೆ ಎಂದು ದೇವಕುಮಾರ್ ವಿವರಿಸಿದರು. 

click me!