ಫಾರ್ಮ್ 15ಜಿ/ಎಚ್ ಅನ್ನು ವಾಟ್ಸ್ಅಪ್ ಮೂಲಕ ಸಲ್ಲಿಕೆ ಮಾಡಿ ತೆರಿಗೆ ವಿನಾಯ್ತಿ ಪಡೆಯಲು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಅವಕಾಶ ಕಲ್ಪಿಸಿದೆ. ಯೂನಿಯನ್ ವರ್ಚುವಲ್ ಕನೆಕ್ಟ್ ಮೂಲಕ ಯೂನಿಯನ್ ಬ್ಯಾಂಕ್ ಗ್ರಾಹಕರು ಈ ಸೌಲಭ್ಯವನ್ನು ಏಳು ವಿವಿಧ ಭಾಷೆಗಳಲ್ಲಿ ಪಡೆಯಬಹುದು.
ನವದೆಹಲಿ (ಏ.22): ಟಿಡಿಎಸ್ ವಿನಾಯ್ತಿ ಪಡೆಯಲು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಫಾರ್ಮ್ 15ಜಿ/ಎಚ್ ಅನ್ನು ವಾಟ್ಸ್ಅಪ್ ಮೂಲಕ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಿದೆ. ರಿಸರ್ವ್ ಬ್ಯಾಂಕ್ ಇನೋವೇಷನ್ ಹಬ್ (ಆರ್ ಬಿಐಎಚ್) ಸಹಯೋಗದೊಂದಿಗೆ ಗ್ರಾಹಕರಿಗೆ ಫಾರ್ಮ್ 15ಜಿ/ಎಚ್ ವಾರ್ಷಿಕ ಸಲ್ಲಿಕೆಯನ್ನು ಸರಳೀಕರಿಸಿದ್ದು, ಬ್ಯಾಂಕಿನ ವಾಟ್ಸ್ ಅಪ್ ಚಾನೆಲ್ (ಯೂನಿಯನ್ ವರ್ಚುವಲ್ ಕನೆಕ್ಟ್ ) ಮೂಲಕ ಆನ್ ಲೈನ್ ಸಲ್ಲಿಕೆಗೆ ಅವಕಾಶ ನೀಡಲಾಗಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಯೂನಿಯನ್ ವರ್ಚುವಲ್ ಕನೆಕ್ಟ್ ಮೂಲಕ ಯೂನಿಯನ್ ಬ್ಯಾಂಕ್ ಗ್ರಾಹಕರು ಈ ಸೌಲಭ್ಯವನ್ನು ಏಳು ವಿವಿಧ ಭಾಷೆಗಳಲ್ಲಿ ಪಡೆಯಬಹುದು. ಬ್ಯಾಂಕ್ ನಲ್ಲಿ ನೋಂದಣಿಗೊಂಡಿರುವ ತಮ್ಮ ಮೊಬೈಲ್ ಸಂಖ್ಯೆಯಿಂದ ಬ್ಯಾಂಕ್ ಸಂಖ್ಯೆ 09666606060 ಕ್ಕೆ ವಾಟ್ಸ್ ಅಪ್ ನಲ್ಲಿ‘Hi’ಎಂದು ಕಳುಹಿಸುವ ಮೂಲಕ ಈ ಸೌಲಭ್ಯವನ್ನು 7 ವಿಭಿನ್ನ ಭಾಷೆಗಳಲ್ಲಿ ಪಡೆಯಬಹುದು. ಈ ಹಿಂದೆ ಯೂನಿಯನ್ ಬ್ಯಾಂಕ್ ಆರ್ ಬಿಐಎಚ್ ಸಹಯೋಗದೊಂದಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಡಿಜಿಟಲೀಕರಣವನ್ನು ಪರಿಚಯಿಸಿತ್ತು.
ಕಿಸಾನ್ ಕ್ರೆಡಿಟ್ ಕಾರ್ಡ್ ಡಿಜಿಟಲೀಕರಣದ ಬಳಿಕ ಬ್ಯಾಂಕ್ ಹಾಗೂ ಆರ್ ಬಿಐಎಚ್ ಫಾರ್ಮ್ 15ಜಿ ಮತ್ತು ಎಚ್ ಸಲ್ಲಿಕೆಯನ್ನು ಉಚಿತ ಹಾಗೂ ಸುಲಭಗೊಳಿಸಿವೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ನಿತೇಶ್ ರಂಜನ್ ಮಾಹಿತಿ ನೀಡಿದ್ದಾರೆ.ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸದಾ ತನ್ನ ಹಿರಿಯ ನಾಗರಿಕರು ಹಾಗೂ ತಂತ್ರಜ್ಞಾನ ಸ್ನೇಹಿ ಗ್ರಾಹಕರ ಬಯಕೆಗಳನ್ನು ಪೂರ್ಣಗೊಳಿಸಲು ಉತ್ಸುಕವಾಗಿದ್ದು, ಎಲ್ಲರಿಗೂ ಹಣಕಾಸು ಸೇವೆಗಳು ಲಭ್ಯವಾಗುವಂತೆ ಮಾಡಲು ಪ್ರಯತ್ನಿಸುತ್ತಿದೆ' ಎಂದು ರಂಜನ್ ತಿಳಿಸಿದರು.
SBI ಡೆಬಿಟ್ ಕಾರ್ಡ್ ಕಳೆದು ಹೋಗಿದೆಯಾ? ನೆಟ್ ಬ್ಯಾಂಕಿಂಗ್ ಬಳಸಿ ಬ್ಲಾಕ್ ಮಾಡೋದು ಹೇಗೆ?
ಫಾರ್ಮ್ 15ಜಿ/ಎಚ್ ಅಂದರೇನು?
60 ವರ್ಷ ಕೆಳಗಿನ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಟಿಡಿಎಸ್ (TDS) ಕಡಿತ ಕ್ಲೇಮ್ ಮಾಡಲು ಫಾರ್ಮ್ 15ಜಿ/ಎಚ್ ಸ್ವ ಘೋಷಿತ ಫಾರ್ಮ್ ಗಳನ್ನು ಬಳಸಲಾಗುತ್ತದೆ. ಒಟ್ಟು ಆದಾಯ ತೆರಿಗೆ ವ್ಯಾಪ್ತಿಗಿಂತ ಕೆಳಗಿರುವ ವ್ಯಕ್ತಿಗಳು ಫಾರ್ಮ್ 15ಜಿ ಹಾಗೂ 15ಎಚ್ ಅನ್ನು ಬ್ಯಾಂಕ್ ಗೆ ಸಲ್ಲಿಕೆ ಮಾಡಬಹುದು. ಹಾಗೆಯೇ ಬಡ್ಡಿ ಮೊತ್ತದ ಮೇಲೆ ಟಿಡಿಎಸ್ ಕಡಿತಗೊಳಿಸದಂತೆ ಕೋರಬಹುದು.
ಒಬ್ಬ ವ್ಯಕ್ತಿ ಬಡ್ಡಿಯಿಂದ ಗಳಿಸಿದ ಆದಾಯ ವಾರ್ಷಿಕ 10 ಸಾವಿರ ರೂ.ಗಿಂತ ಅಧಿಕವಿದ್ದರೆ ಆಗ ಬ್ಯಾಂಕ್ ಗಳು ಟಿಡಿಎಸ್ ಕಡಿತಗೊಳಿಸುತ್ತವೆ. ಬ್ಯಾಂಕ್ ಗಳು ಎಲ್ಲ ಶಾಖೆಗಳಲ್ಲಿರುವ ಠೇವಣಿಗಳನ್ನು ಪರಿಗಣಿಸಿ ಬಡ್ಡಿ ಈ ಮಿತಿಯೊಳಗೆ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯ ತೆರಿಗೆ ವ್ಯಾಪ್ತಿಗೊಳಪಡದ ಸಂದರ್ಭದಲ್ಲಿ ಆತ ತನ್ನ ಬಡ್ಡಿ ಮೊತ್ತದಿಂದ ಟಿಡಿಎಸ್ ಕಡಿತಗೊಳಿಸದಂತೆ ಬ್ಯಾಂಕ್ ಗೆ ಫಾರ್ಮ್ 15G ಹಾಗೂ ಫಾರ್ಮ್ 15H ಸಲ್ಲಿಕೆ ಮಾಡುವ ಮೂಲಕ ಮನವಿ ಸಲ್ಲಿಸಬಹುದು.
ಉತ್ತಮ ಕ್ರೆಡಿಟ್ ಸ್ಕೋರ್ ಸಾಲ ಪಡೆಯಲು ಮಾತ್ರವಲ್ಲ, ಉಳಿತಾಯಕ್ಕೂ ನೆರವು ನೀಡುತ್ತೆ; ಹೇಗೆ? ಇಲ್ಲಿದೆ ಮಾಹಿತಿ
ಫಾರ್ಮ್ 15ಜಿ ಹಾಗೂ 15ಎಚ್ ಯಾವಾಗ ಸಲ್ಲಿಕೆ ಮಾಡಬೇಕು?
ಫಾರ್ಮ್ 15ಜಿ ಹಾಗೂ 15ಎಚ್ ವ್ಯಾಲಿಡಿಟಿ ಒಂದು ವರ್ಷ. ಈ ಅರ್ಜಿಗಳನ್ನು ಪ್ರತಿ ಹಣಕಾಸು ಸಾಲಿನ ಪ್ರಾರಂಭದಲ್ಲಿ ಸಲ್ಲಿಕೆ ಮಾಡಬೇಕು. ಒಂದು ವೇಳೆ ಈ ಅರ್ಜಿಗಳನ್ನು ಸಲ್ಲಿಕೆ ಮಾಡದಿದ್ರೆ ಬ್ಯಾಂಕ್ ಟಿಡಿಎಸ್ (TDS) ಕಡಿತ ಮಾಡುತ್ತದೆ. ಇಂಥ ಸಂದರ್ಭಗಳಲ್ಲಿ ನೀವು ಅರ್ಜಿಗಳನ್ನು ತಕ್ಷಣ ಫೈಲ್ (File) ಮಾಡಬೇಕು ಅಥವಾ ಐಟಿಆರ್ (ITR) ಫೈಲ್ ಮಾಡಬೇಕು. ಹೀಗೆ ಮಾಡೋದ್ರಿಂದ ಟಿಡಿಎಸ್ ವಾಪಸ್ ಸಿಗುತ್ತದೆ.