ಎಕ್ಸಿಟ್ ಪೋಲ್ ಬಳಿಕ ಸೋಮವಾರ ಆರಂಭದಿಂದಲೂ ಜಿಗಿತ ಕಂಡಿತ್ತು. ಇಂದು ಮಾರುಕಟ್ಟೆ ಓಪನ್ ಆಗುತ್ತಿದ್ದಂತೆ ಕುಸಿತ ಕಾಣಲು ಆರಂಭಿಸಿದೆ. ಈ ಬೆಳವಣಿಗೆ ಮಾರುಕಟ್ಟೆಯಲ್ಲಿ ತೀವ್ರ ಆತಂಕವನ್ನು ಸೃಷ್ಟಿಸುತ್ತಿದೆ.
ಮುಂಬೈ: ಇಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಷೇರು ಮಾರುಕಟ್ಟೆಯಲ್ಲಿ ಆರಂಭಿಕ ಭಾರೀ ಕುಸಿತ ಕಾಣುತ್ತಿದೆ. ಸೆನ್ಸೆಕ್ಸ್ 1600 ಪಾಯಿಂಟ್ಸ್ ಮತ್ತು ನಿಫ್ಟಿ 500 ಪಾಯಿಂಟ್ಸ್ ಕುಸಿತ ಕಂಡಿದೆ. ಎಕ್ಸಿಟ್ ಪೋಲ್ ಬಳಿಕ ಸೋಮವಾರ ಆರಂಭದಿಂದಲೂ ಜಿಗಿತ ಕಂಡಿತ್ತು. ಇಂದು ಮಾರುಕಟ್ಟೆ ಓಪನ್ ಆಗುತ್ತಿದ್ದಂತೆ ಕುಸಿತ ಕಾಣಲು ಆರಂಭಿಸಿದೆ. ಈ ಬೆಳವಣಿಗೆ ಮಾರುಕಟ್ಟೆಯಲ್ಲಿ ತೀವ್ರ ಆತಂಕವನ್ನು ಸೃಷ್ಟಿಸುತ್ತಿದೆ.
ಬ್ಯಾಂಕ್ ನಿಫ್ಟಿಯಲ್ಲಿ 1500 ಅಂಕಗಳ ದೊಡ್ಡ ಕುಸಿತ ಕಂಡು ಬಂದಿದ್ದು, ಸರ್ಕಾರಿ ಕಂಪನಿಗಳ ಷೇರುಗಳಲ್ಲಿ ಕುಸಿತವು ಅಧಿಕವಾಗುತ್ತಿದೆ. ನಿಫ್ಟಿ, ಬ್ಯಾಂಕ್ ನಿಫ್ಟಿಯಲ್ಲಿ ಸುಮಾರು ಶೇ.3ರಷ್ಟು ಕುಸಿತ ಕಂಡಿದೆ. ಅದಾನಿ ಸಮೂಹದ ಎಲ್ಲಾ ಕಂಪನಿಗಳ ಷೇರುಗಳಲ್ಲಿ ಕುಸಿತವಾಗಿದೆ. ಅದಾನಿ ಪೋರ್ಟ್ಸ್ ಶೇರುಗಳಲ್ಲಿ ಶೇ.9, ಅದಾನಿ ಪವರ್ ಶೇ.10, ಅಂಬುಜಾ ಸಿಮೆಂಟ್ ಶೇ.10, ಅದಾನಿ ಎಂಟರ್ ಪ್ರೈಸಸ್ ಶೇ.10 ಕುಸಿತ ಕಾಣುತ್ತಿದೆ.
ಚುನಾವಣೋತ್ತರ ಸಮೀಕ್ಷಾ ವರದಿಗಳು ಬಾಂಬೆ ಷೇರುಪೇಟೆಗೆ ಭರ್ಜರಿ ಕಿಕ್ ನೀಡಿತ್ತು. ‘ಮೋದಿ ಸರ್ಕಾರ ಆರ್ಥಿಕತೆ ಉತ್ತೇಜನಕ್ಕೆ ಮತ್ತಷ್ಟು ಕ್ರಮ ಕೈಗೊಳ್ಳಲಿದೆ’ ಎಂಬ ನಿರೀಕ್ಷೆಯಲ್ಲಿ ಸೆನ್ಸೆಕ್ಸ್ ಸೋಮವಾರ 2507 ಅಂಕಗಳ ಭಾರೀ ಏರಿಕೆ ಕಂಡು ದಾಖಲೆಯ 76468 ಅಂಕಗಳಲ್ಲಿ ಮುಕ್ತಾಯವಾಗಿತ್ತು.ಇದು 2019ರ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕಂಡುಬಂದ ಸೆನ್ಸೆಕ್ಸ್‌ನ ಗರಿಷ್ಠ ದೈನಂದಿನ ಏರಿಕೆಯಾಗಿತ್ತು. ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 13.78 ಲಕ್ಷ ಕೋಟಿ ರೂ ಹೆಚ್ಚಳವಾಗಿದೆ.
ಏಪ್ರಿಲ್ 19 ರಿಂದ ಆರಂಭವಾಗಿದ್ದ 18ನೇ ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆದು ಜೂನ್ 1 ರಂದು ಮುಕ್ತಾಯವಾಗಿತ್ತು. ಇಂದು ಲೋಕಕದನದ ಮಹಾತೀರ್ಪು ಇಂದು ಹೊರಬೀಳಲಿದೆ. ಜಿದ್ದಾಜಿದ್ದಿಯ ಚುನಾವಣೆಯ ಫಲಿತಾಂಶ ದೇಶದ ಕುತೂಹಲ ಕೆರಳಿಸಿದೆ. ಬಿಜೆಪಿಯ ಚಾರ್ ಸೌ ಪಾರ್ ಎನ್ನುವ ಟಾರ್ಗೆಟ್ ನಿಜವಾಗಲಿದೆಯೇ? ಅಥವಾ ಇಂಡಿಯಾ ಮೈತ್ರಿಯ ಅಧಿಕಾರದ ಆಸೆ ಈಡರೇಲಿದೆಯೇ ಅನ್ನೋದು ತಿಳಿಯಲಿದೆ. ದೇಶದ 543 ಲೋಕಸಭಾ ಕ್ಷೇತ್ರಕ್ಕೆ ಶೇ. 66.33 ರಷ್ಟು ಮತದಾನವಾಗಿದೆ. ಬಿಜೆಪಿ ಒಟ್ಟು 441 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೆ, ಕಾಂಗ್ರೆಸ್ 328 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಚುನಾವಣಾ ಆರಂಭಕ್ಕೂ ಮುನ್ನವೇ ಸೂರತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಯನಾಡ್, ರಾಯ್‌ಬರೇಲಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ, ಗುಜರಾತ್‌ನ ಗಾಂಧಿನಗರದಲ್ಲಿ ಅಮಿತ್ ಶಾ, ತಮಿಳುನಾಡಿನ ಕೊಯಮತ್ತೂರಿನಲ್ಲಿ ಅಣ್ಣಾಮಲೈ ಅವರ ರಿಸಲ್ಟ್ ಬಗ್ಗೆ ಹೆಚ್ಚಿನ ನಿರೀಕ್ಷ ಗರಿಗೆದರಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಾಬಲ್ಯ ಹೇಗಿರಲಿದೆ, ಉತ್ತರ ಭಾರತದ ಮತದಾರರನ್ನು ಸೆಳೆಯಲು ಇಂಡಿಯಾ ಮೈತ್ರಿ ಯಶಸ್ವಿಯಾಗಿದ್ಯಾ ಅನ್ನೋದು ಇಂದು ತೀರ್ಮಾನವಾಗಲಿದೆ.