
ನವದೆಹಲಿ[ಆ.07]: ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ಸಂವಿಧಾನದ 35ಎ ವಿಧಿ ತಿದ್ದು ಪಡಿ ಮಾಡಿದ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲಿ ಕೈಗಾರಿಕೆ ಸ್ಥಾಪಿಸಲು ಏಷ್ಯಾದ ಅತಿ ದೊಡ್ಡ ಹೆಲ್ಮೆಟ್ ತಯಾರಿಕಾ ಕಂಪನಿ ಸ್ಟೀಲ್ ಬರ್ಡ್ ಹೈ-ಟೆಕ್ ಇಂಡಿಯಾ ಮುಂದೆ ಬಂದಿದೆ.
ಈ ಬಗ್ಗೆ ಮಾತನಾಡಿರುವ ಕಂಪನಿ ಅಧ್ಯಕ್ಷ ಸುಭಾಷ್ ಕಪೂರ್, ಕೇಂದ್ರ ಸರ್ಕಾರದ ಈ ನಿಲುವು ಕಣಿವೆ ರಾಜ್ಯದಲ್ಲಿ ಕೈಗಾರಿಕಾ ಕ್ರಾಂತಿಗೆ ನಾಂದಿ ಹಾಡಲಿದ್ದು, ಅಲ್ಲಿನ ಜನರಿಗೆ ಉದ್ಯೋಗಾವಕಾಶಗಳು ಸಿಗುವುದಲ್ಲದೇ ದೇಶದ ಒಟ್ಟಾರೆ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಸ್ಟೀಲ್ ಬರ್ಡ್ ಕಂಪನಿ ಸರ್ಕಾರದ ಈ ನಿಲುವನ್ನು ಸ್ವಾಗತಿಸುತ್ತದೆ ಎಂದರು.
ಇಷ್ಟರವರೆಗೆ ಜಮ್ಮುವಿನಲ್ಲಿ ಅಲ್ಲಿನ ಸಂಪನ್ಮೂಲ ಕೃಷಿ ಹಾಗೂ ಕರಕುಶಲ ಉತ್ಪಾದನೆಗೆ ಮಾತ್ರ ಸೀಮಿತವಾಗಿತ್ತು. ನಾವೀಗ ಅಲ್ಲಿ ಕೈಗಾರಿಕೆ ಸ್ಥಾಪಿಸಲು ಉದ್ದೇಶಿಸಿದ್ದು ಸ್ಥಳೀಯ ಉತ್ಪಾದಕರೊಂದಿಗೆ ಸೇರಿ ಉತ್ತಮ ಸರಪಳಿಯನ್ನು ಸೃಜಿಸಲು ಎದುರು ನೋಡುತ್ತಿದ್ದೇವೆ. ಹೆಚ್ಚಿನ ನಗರಗಳು ಇದೇ ರೀತಿ ಬೆಳವಣಿಗೆ ಕಂಡಿದ್ದು ಸ್ಥಳೀಯರಿಗೆ ಇದರಿಂದ ಉತ್ತಮ ಅವಕಾಶ ಸಿಗಲಿದೆ. ಮುಂದಿನ ಅಕ್ಟೋಬರ್ನಲ್ಲಿ ನಡೆಯುವ ಹೂಡಿಕೆದಾರರ ಸಮಾವೇಶದಲ್ಲಿ ನಾವು ಈ ಕುರಿತ ಯೋಜನೆಯೊಂದಿಗೆ ಬರಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಇಲ್ಲಿಯವರೆಗೆ ಕಾಶ್ಮೀರದಲ್ಲಿ 35ರ ವಿಧಿ ಜಾರಿಯಲ್ಲಿದ್ದರಿಂದ ಹೊರರಾಜ್ಯದ ಯಾವುದೇ ಕಂಪನಿಗಳಿಗೆ ವ್ಯವಹಾರ ನಡೆಸುವ ಅವಕಾಶ ಇರಲಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.