
ನವದೆಹಲಿ (ಆ.11): ದೇಶದ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ (PSB) ಲಭ್ಯವಿರುವ ಒಟ್ಟು ಗೋಲ್ಡ್‌ಲೋನ್ ಪೈಕಿ ಶೇಕಡಾ 80ಕ್ಕೂ ಹೆಚ್ಚಿನ ಪಾಲು ದಕ್ಷಿಣ ಭಾರತದ ಐದು ರಾಜ್ಯಗಳಲ್ಲೇ ಕೇಂದ್ರೀಕೃತವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಲೋಕಸಭೆಗೆ ತಿಳಿಸಿದೆ. ಲೋಕಸಭೆಯಲ್ಲಿ ಸಂಸದರು ಕೇಳಿದ ಪ್ರಶ್ನೆಗೆ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ನೀಡಿರುವ ಲಿಖಿತ ಉತ್ತರದಿಂದ ಈ ಕುರಿತ ಕುತೂಹಲಕಾರಿ ಅಂಕಿ-ಅಂಶಗಳು ಬೆಳಕಿಗೆ ಬಂದಿವೆ.
ಸಚಿವರು ಸದನಕ್ಕೆ ಸಲ್ಲಿಸಿರುವ ವರದಿಯ ಪ್ರಕಾರ, ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಮಾರ್ಚ್ 31, 2026ರ ವೇಳೆಗೆ ಒಟ್ಟು ₹11.31 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಚಿನ್ನದ ಸಾಲ ಬಾಕಿ ಉಳಿದಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಸಾಲದ ಬಾಕಿ ಇದ್ದರೂ, ಚಿನ್ನದ ಸಾಲದ ಮೇಲಿನ ಸುಸ್ತಿ ಸಾಲ (NPA - ಕಟ್ಟುಬಾಕಿ) ಗಣನೀಯವಾಗಿ ಕಡಿಮೆಯಾಗಿರುವುದು ಸಮಾಧಾನಕರ ಸಂಗತಿಯಾಗಿದೆ.
ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಅಂಕಿ-ಅಂಶಗಳ ಪ್ರಕಾರ, ಸಾಲದ ಪಟ್ಟಿಯಲ್ಲಿ ತಮಿಳುನಾಡು ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕ ಮೂರನೇ ಸ್ಥಾನದಲ್ಲಿದೆ:
ತಮಿಳುನಾಡು ₹4 ಲಕ್ಷ ಕೋಟಿಗೂ ಹೆಚ್ಚು ಬಾಕಿ ಸಾಲದೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ, ಆಂಧ್ರಪ್ರದೇಶ ₹2.22 ಲಕ್ಷ ಕೋಟಿಗೂ ಅಧಿಕ ಸಾಲದೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು ಕರ್ನಾಟಕ ₹98,000 ಕೋಟಿಗೂ ಹೆಚ್ಚಿನ ಸಾಲದೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ತೆಲಂಗಾಣ ₹92,000 ಕೋಟಿ ಹಾಗೂ ಕೇರಳ ₹83,000 ಕೋಟಿಗೂ ಹೆಚ್ಚಿನ ಸಾಲದೊಂದಿಗೆ ಐದನೇ ಸ್ಥಾನದಲ್ಲಿದೆ.
ಸಚಿವಾಲಯದ ಹೇಳಿಕೆಯಲ್ಲಿ ನೇರ ಕಾರಣಗಳನ್ನು ನೀಡದಿದ್ದರೂ, ದಕ್ಷಿಣ ಭಾರತದ ರಾಜ್ಯಗಳ ಮನೆಗಳಲ್ಲಿ ಚಿನ್ನದ ಸಂಗ್ರಹಣೆ ಹಾಗೂ ಬಳಕೆಯ ಪ್ರಮಾಣ ಅತ್ಯಂತ ಹೆಚ್ಚಾಗಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸತತವಾಗಿ ಏರಿಕೆಯಾಗುತ್ತಿರುವುದರಿಂದ, ಅಡವಿಟ್ಟ ಚಿನ್ನಕ್ಕೆ ದೊರೆಯುವ ಸಾಲದ ಮೌಲ್ಯ (Loan Value) ಕೂಡ ಗಣನೀಯವಾಗಿ ಹೆಚ್ಚಾಗಿದೆ.
ಆರ್‌ಬಿಐನ 'ಹಣಕಾಸು ಸ್ಥಿರತೆ ವರದಿ (ಜೂನ್ 2026)' ಉಲ್ಲೇಖಿಸಿ ಮಾತನಾಡಿದ ಸಚಿವರು, ಚಿನ್ನದ ಬೆಲೆ ಏರಿಕೆಯು ಈ ಸಾಲದ ಶೀಘ್ರ ಬೆಳವಣಿಗೆಗೆ ಪ್ರಮುಖ ಬೆಂಬಲ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಬ್ಯಾಂಕ್‌ಗಳು ಹಾಗೂ ಎನ್‌ಬಿಎಫ್‌ಸಿಗಳು (NBFC) ನೀಡುವ 'ಲೋನ್-ಟು-ವ್ಯಾಲ್ಯೂ' (LTV) ಪ್ರಮಾಣದಲ್ಲಿ ಕುಸಿತ ಕಂಡುಬಂದಿರುವುದರಿಂದ, ಮೇಲಾಧಾರದ (Collateral Buffer) ಭದ್ರತೆ ಹೆಚ್ಚಾಗಿದೆ. ಹೀಗಾಗಿ ಬೆಲೆಗಳ ಏರಿಳಿತವನ್ನು ತಡೆದುಕೊಳ್ಳುವ ಶಕ್ತಿ ಸಾಲದಾತ ಸಂಸ್ಥೆಗಳಿಗೆ ದೊರೆತಿದ್ದು, ಸಾಲದ ಗುಣಮಟ್ಟ ಸ್ಥಿರವಾಗಿದೆ.
ಒಟ್ಟು ಚಿನ್ನದ ಸಾಲದ ಮೊತ್ತ ಹೆಚ್ಚಾಗಿದ್ದರೂ, ಮರುಪಾವತಿಯಾಗದ ಸುಸ್ತಿ ಸಾಲಗಳ (Defaulters) ಸಂಖ್ಯೆಯಲ್ಲಿ ಕಳೆದ 5 ವರ್ಷಗಳಲ್ಲಿ ಸ್ಪಷ್ಟ ಇಳಿಕೆ ಕಂಡುಬಂದಿದೆ:
ಸಾಲಗಾರರು ಹಣ ಪಾವತಿಸದಿದ್ದಾಗ ಅವರ ಚಿನ್ನವನ್ನು ಹರಾಜು ಹಾಕಿ ತೊಂದರೆಗೆ ಈಡುಮಾಡುವುದನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ವಿಧಿಸಿದೆ. ಹರಾಜಿಗೂ ಮುನ್ನ ಕಡ್ಡಾಯವಾಗಿ ಸೂಕ್ತ ನಿರೀಕ್ಷಿತ ನೋಟಿಸ್ ನೀಡುವುದು.ಆಭರಣದ ಪ್ರಸ್ತುತ ಮೌಲ್ಯದ ಕನಿಷ್ಠ ಶೇ. 90 ರಷ್ಟು ಮೀಸಲು ಬೆಲೆಯನ್ನು (Reserve Price) ನಿಗದಿಪಡಿಸುವುದು, ಬಾಕಿ ಹಣ ಸರಿದೂಗಿದ ನಂತರ ಉಳಿಯುವ ಯಾವುದೇ ಹೆಚ್ಚುವರಿ ಹಣವನ್ನು ಗ್ರಾಹಕರಿಗೆ ಮರಳಿಸುವುದು ಹಾಗೂ ಹರಾಜು ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಹಾಗೂ ಸೇವಾ ಶುಲ್ಕಗಳ ಮುಂಗಡ ಬಹಿರಂಗಪಡಿಸುವಿಕೆಯನ್ನು ಆರ್‌ಬಿಐ ಕಡ್ಡಾಯಗೊಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.