
ವಾಷಿಂಗ್ಟನ್: ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಜುಲೈ, 2025ರಿಂದ ಜುಲೈ 2026ರ ನಡುವೆ 30.5 ಲಕ್ಷ ಕೋಟಿ ರು. ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ. ಅಂದರೆ ಪ್ರತಿ ದಿನ ಸರಾಸರಿ 8,347 ಕೋಟಿ ರು. ಗಳಿಸಿದ್ದಾರೆ ಎಂದು ಹಣಕಾಸು ಸಂಶೋಧನಾ ಸಂಸ್ಥೆ ಬೆಸ್ಟ್‌ಬ್ರೋಕರ್ಸ್ ತಿಳಿಸಿದೆ. ಸ್ಪೇಸ್ ಎಕ್ಸ್‌ನ ಐಪಿಒ ಷೇರುಮಾರುಕಟ್ಟೆಗೆ ಜೂ.12ರಂದು ಕಾಲಿಟ್ಟಾಗ ಮಸ್ಟ್ ವಿಶ್ವದ ಮೊದಲ 'ಟ್ರಿಲಿಯನೇರ್' ಆದರು. ಆದರೆ ಕಳೆದ ತಿಂಗಳು ಅವರ ಕಂಪನಿಯ ಷೇರು ಭಾರೀ ಪ್ರಮಾಣದಲ್ಲಿ ಕುಸಿದಾಗ ಆ ಪಟ್ಟ ಕಳೆದುಕೊಂಡಿದ್ದರು. ಈಗ ಅವರ ಅಂದಾಜು ಆಸ್ತಿ 65.72 ಲಕ್ಷ ಕೋಟಿ ಆಗಿದೆ.
ಮಸ್ಕ್ ಬಳಿಕ ಅತಿ ಹೆಚ್ಚು ಸಂಪತ್ತು ಗಳಿಸಿದವರು ಡೆಲ್ ಟೆಕ್ನಾಲಜೀಸ್ ಸಿಇಒ ಮೈಕಲ್ ಡೆಲ್. ಅವರು ಜುಲೈ, 2025 ಮತ್ತು ಜುಲೈ, 2026ರ ನಡುವೆ 10.25 ಲಕ್ಷ ಕೋಟಿ ರು. ಸಂಪತ್ತು ಗಳಿಸಿದ್ದಾರೆ. ಇದೇ ಅವಧಿಯಲ್ಲಿ ಡೀಪ್ ಸೀಕ್ ಸಂಸ್ಥಾಪಕ ಲಿಯಾಂಗ್ ವೆನ್‌ಫೆಂಗ್ ಅವರ ಸಂಪತ್ತು ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. 2025ರಲ್ಲಿ 9,527 ಕೋಟಿ ಇದ್ದ ಅವರ ಸಂಪತ್ತು 2026ರಲ್ಲಿ 3,76,456 ಕೋಟಿ ರು. ಆಗಿತ್ತು. ಅಂದರೆ ಅವರ ಆದಾಯ ಕೇವಲ ಒಂದು ವರ್ಷದಲ್ಲಿ 3,850 ಪಟ್ಟು ಹೆಚ್ಚಾಗಿತ್ತು. ಲಿಯಾಂಗ್ ಅವರು ವಿಶ್ವದ 50 ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ.
ಕೇವಲ ಒಂದು ಲಗೇಜ್ ಬ್ಯಾಗ್ ಮತ್ತು ಕಣ್ಣು ತುಂಬಾ ಕನಸುಗಳನ್ನು ಹೊತ್ತು ಅಮೆರಿಕದ ನೆಲಕ್ಕೆ ಕಾಲಿಟ್ಟಿದ್ದ ಆ ದಕ್ಷಿಣ ಆಫ್ರಿಕಾದ ಹುಡುಗ, ಇಂದು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ. ಇತ್ತೀಚೆಗಷ್ಟೇ ಅವರ ಕಂಪನಿಯ ಐಪಿಓ 1.77 ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯವನ್ನು ತಲುಪುವ ಮೂಲಕ ಇತಿಹಾಸ ಸೃಷ್ಟಿಸಿದೆ. ಆದರೆ, ಈ ಯಶಸ್ಸಿನ ಹಿಂದಿರುವುದು ಕೇವಲ ಹಣದ ಕಥೆಯಲ್ಲ, ಬದಲಿಗೆ ಅವಮಾನ, ಅಪಹಾಸ್ಯ, ದಿವಾಳಿತನ ಮತ್ತು ಅದನ್ನೆಲ್ಲ ಮೆಟ್ಟಿ ನಿಂತ ಅಪೂರ್ವ ಛಲದ ರೋಚಕ ಮಹಾಕಾವ್ಯ.
ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಜನಿಸಿದ ಎಲಾನ್ ಮಸ್ಕ್ ಬಾಲ್ಯ ಅಷ್ಟು ಸುಲಭದ್ದಾಗಿರಲಿಲ್ಲ. ಶಾಲೆಯಲ್ಲಿ ಸಹಪಾಠಿಗಳಿಂದ ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದ ಹುಡುಗ ಆತ. ಒಮ್ಮೆ ಸಹಪಾಠಿಗಳು ಆತನನ್ನು ಮೆಟ್ಟಿಲುಗಳಿಂದ ಕೆಳಗೆ ದೂಡಿ, ಪ್ರಜ್ಞೆ ತಪ್ಪುವವರೆಗೆ ಹೊಡೆದಿದ್ದರು. ಆ ಗಾಯಗಳ ಕಲೆಗಳು ಬಹುಶಃ ಇಂದಿಗೂ ಅವರ ಮನಸ್ಸಿನಲ್ಲಿದೆ.
ಹದಿಹರೆಯದಲ್ಲೇ ಉತ್ತರ ಅಮೆರಿಕಾಕ್ಕೆ ವಲಸೆ ಬಂದ ಮಸ್ಕ್ ಕೈಯಲ್ಲಿದ್ದದ್ದು ಕೇವಲ ಒಂದು ಬ್ಯಾಕ್ ಪ್ಯಾಕ್. ಆದರೆ, ಅವರ ತಲೆಯಲ್ಲಿ ಜಗತ್ತನ್ನೇ ಬದಲಾಯಿಸುವ ಕಲ್ಪನೆಗಳಿದ್ದವು. ಅವರು ಆರಂಭದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪ್ರವೇಶ ಪಡೆದರು. ಆದರೆ ಕೇವಲ ಎರಡೇ ದಿನಗಳಲ್ಲಿ ಅಲ್ಲಿಂದ ಹೊರಬಂದರು. ಆಗಿನ ಪ್ರಮುಖ ಇಂಟರ್ನೆಟ್ ಕಂಪನಿಯಾದ ನೆಟ್‌ಸ್ಕೇಪ್‌ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದರು. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಕೊನೆಗೆ ಬೇರೆ ದಾರಿ ಇಲ್ಲದೆ, ತಾವೇ ಇಂಟರ್ನೆಟ್ ಜಗತ್ತಿನ ಭಾಗವಾಗಲು ಸಾಫ್ಟ್‌ವೇರ್ ಬರೆಯಲು ನಿರ್ಧರಿಸಿದರು.
1995ರಲ್ಲಿ ತಮ್ಮ ಸಹೋದರ ಕಿಂಬಾಲ್ ಮಸ್ಕ್ ಮತ್ತು ಗೆಳೆಯ ಗ್ರೆಗ್ ಕೌರಿ ಜೊತೆಗೂಡಿ ಜಿಪ್ 2 ಕಂಪನಿ ಮಾಡಿದರು. ಆಗ ಅವರ ಬಳಿ ಇದ್ದದ್ದು ಕೇವಲ ತಾವೇ ಅಸೆಂಬಲ್ ಮಾಡಿದ್ದ ಹೋಮ್-ಬಿಲ್ಟ್ ಕಂಪ್ಯೂಟರ್ ಮತ್ತು ಕೇವಲ $2,000 ಹಣ ಮಾತ್ರ. ಬಂಡವಾಳದ ತೀವ್ರ ಕೊರತೆಯಿದ್ದ ಆ ದಿನಗಳಲ್ಲಿ ಮಸ್ಕ್ ಸಹೋದರರು ಮನೆ ಬಾಡಿಗೆ ಕಟ್ಟಲು ಹಣವಿಲ್ಲದೆ ಕಷ್ಟಪಟ್ಟಿದ್ದರು.
ಆದರೆ ಅವರ ಹಸಿವು ಹೇಗಿತ್ತು ಎಂದರೆ, ಕೇವಲ ನಾಲ್ಕೇ ವರ್ಷಗಳಲ್ಲಿ ಅದನ್ನು 300 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಿದರು. ಅಲ್ಲಿಗೆ ಅವರು ಸುಮ್ಮನೆ ಕೂರಲಿಲ್ಲ. ಡಿಜಿಟಲ್ ಪಾವತಿ ವ್ಯವಸ್ಥೆಯ ಭವಿಷ್ಯವನ್ನು ಮುಂಚಿತವಾಗಿಯೇ ಊಹಿಸಿ ಪೇಪಾಲ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಮುಂದೆ ಇದನ್ನು ಇಬೇ ಸಂಸ್ಥೆಗೆ 1.5 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡಿದಾಗ ಮಸ್ಕ್ ಹಣದಲ್ಲಿ ಶ್ರೀಮಂತರಾಗಿಬಿಟ್ಟಿದ್ದರು. ಆಗಲೇ ಅವರು ಬೇಕಿದ್ದರೆ ಐಷಾರಾಮಿ ಜೀವನ ನಡೆಸಬಹುದಿತ್ತು. ಕೂತು ತಿನ್ನಬಹುದಿತ್ತು. ಆದರೆ ಅವರ ಗುರಿ ಬೇರೆಯದೇ ಆಗಿತ್ತು.
ಪೇಪಾಲ್ ಮಾರಾಟದಿಂದ ಬಂದ ಪ್ರತಿಯೊಂದು ಪೈಸೆಯನ್ನೂ ಮಸ್ಕ್ ಎರಡು ಅತ್ಯಂತ ಅಪಾಯಕಾರಿ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದರು. ಅದರಲ್ಲಿ ಒಂದು ಎಲೆಕ್ಟ್ರಿಕ್ ಕಾರು ತಯಾರಿಕಾ ಸಂಸ್ಥೆ ಟೆಸ್ಲಾ, ಮತ್ತೊಂದು ಬಾಹ್ಯಾಕಾಶ ಸಂಶೋಧನೆಯ ಸ್ಪೇಸ್ ಎಕ್ಸ್.
ಯಾವಾಗ ಇಡೀ ಜಗತ್ತು ಎಲೆಕ್ಟ್ರಿಕ್ ಕಾರುಗಳನ್ನು ನೋಡಿ ನಗುತ್ತಿತ್ತೋ, ರಾಕೆಟ್‌ಗಳನ್ನು ಮರುಬಳಕೆ ಮಾಡಲು ಸಾಧ್ಯವೇ ಇಲ್ಲ ಎಂದು ಗೇಲಿ ಮಾಡುತ್ತಿತ್ತೋ, ಆಗ ಮಸ್ಕ್ ಮಾತ್ರ ಯಾರ ಮಾತಿಗೂ ಕಿವಿಗೊಡಲಿಲ್ಲ. ತಾನು ನಂಬಿದ ಕನಸಿಗೆ ಜೊತೆಯಾದರು. ರಾತ್ರಿ-ಹಗಲು ಕೆಲಸ ಮಾಡಿದರು. ಆದರೆ ಅಂದುಕೊಂಡದ್ದು ನಡೆಯಲು ಬದುಕು, ಸಿನಿಮಾ ಅಲ್ಲವಲ್ಲ.
2008ರ ವೇಳೆಗೆ ಪರಿಸ್ಥಿತಿ ತಲೆಕೆಳಗಾಯಿತು. ಸ್ಪೇಸ್ ಎಕ್ಸ್‌ನ ಮೊದಲ ಮೂರು ರಾಕೆಟ್ ಉಡಾವಣೆಗಳು ಸತತವಾಗಿ ವಿಫಲವಾದವು. ಟೆಸ್ಲಾ ಕಂಪನಿ ತೀವ್ರ ಆರ್ಥಿಕ ನಷ್ಟ ಅನುಭವಿಸಿತು. ಮಸ್ಕ್ ಸಂಪೂರ್ಣವಾಗಿ ದಿವಾಳಿಯಾಗುವ ಅಂಚಿಗೆ ಬಂದು ತಲುಪಿದ್ದರು. ಹೆಂಡತಿ ತೊರೆದಿದ್ದರು. ವಿವಾಹ ವಿಚ್ಛೇದನವಾಗಿತ್ತು, ಕಂಪನಿಯ ಉದ್ಯೋಗಿಗಳಿಗೆ ಸಂಬಳ ನೀಡಲು ಹಣವಿರಲಿಲ್ಲ. ಏನೇ ಮಾಡಬೇಕಿದ್ದರೂ ಸಾಲ ಮಾಡಬೇಕಾಗಿತ್ತು. ಎಲ್ಲವೂ ಕೈಮೀರಿ ಹೋಗಿತ್ತು. ಬದುಕಲ್ಲಿ ಚಂಡಮಾರುತವೇ ಎದ್ದಿತ್ತು.
ಆದರೆ ಮಸ್ಕ್ ಮಹಾಶಯ ಸೋಲೊಪ್ಪಲು ತಯಾರಿರಲಿಲ್ಲ. ಫ್ಯಾಕ್ಟರಿಗಳಲ್ಲೇ ದಿನ ಕಳೆದರು. ಸಮಯದ ಪರಿವೆ ಇಲ್ಲದೆ ದುಡಿದರು. ನಿದ್ದೆ ಬಂದಾಗ ಕಚೇರಿಯ ನೆಲದ ಮೇಲೆಯೇ ಮಲಗಿಕೊಂಡರು. ದಿನ, ವಾರ, ತಿಂಗಳು ಕಳೆದವು. ಛಲಗಾರನಿಗೆ, ಆಗಲೇಬೇಕು ಎಂದು ಹೋರಾಡುವವನಿಗೆ ಒಂದಲ್ಲ ಒಂದು ದಿನ ಒಳ್ಳೆ ದಿನ ಬರಲೇಬೇಕು.
ತನ್ನ ಕರ್ತೃತ್ವ ಶಕ್ತಿಯಿಂದಲೇ ಮಸ್ಕ್ ಟೆಸ್ಲಾವನ್ನು ಜಗತ್ತಿನ ಅತ್ಯಂತ ಮೌಲ್ಯಯುತ ವಾಹನ ತಯಾರಿಕಾ ಕಂಪನಿಯನ್ನಾಗಿ ರೂಪಿಸಿದರು. ಜಗತ್ತು ಯಾವುದನ್ನು ನೋಡಿ ನಕ್ಕಿತ್ತೋ, ಅದೇ ಮಾದರಿಯನ್ನು ಇವತ್ತು ಇಡೀ ಜಗತ್ತು ಅನುಸರಿಸುವ ಹಾಗೆ ಮಾಡಿದರು. ಇಂದು ಜಗತ್ತಿನ ಪ್ರತಿಯೊಂದು ಪ್ರಮುಖ ಆಟೋಮೊಬೈಲ್ ಕಂಪನಿಯೂ ಇವಿ ಕಾರುಗಳನ್ನು ತಯಾರಿಸುತ್ತಿದೆ. ಅದಕ್ಕೆ ಮಸ್ಕ್ ಮಾಡಿದ ಕ್ರಾಂತಿಯೇ ಕಾರಣ.
ಇನ್ನು ಬಾಹ್ಯಾಕಾಶದ ಕ್ಷೇತ್ರದ ಧ್ರುವತಾರೆಯಂಥ ಕಂಪನಿ ಸ್ಪೇಸ್ ಎಕ್ಸ್ ಕಥೆಯಂತೂ ಅದ್ಭುತ. ಮೊದಲು ಬಾಹ್ಯಾಕಾಶಕ್ಕೆ ಕಳುಹಿಸಿದ ರಾಕೆಟ್ ಅನ್ನು ಯಶಸ್ವಿಯಾಗಿ ಇಳಿಸುವ ತಂತ್ರಜ್ಞಾನವೇ ಇರಲಿಲ್ಲ. ಅಂಥದ್ದೊಂದು ಪರಿಕಲ್ಪನೆಯೇ ಯಾರೂ ಮಾಡಿರಲಿಲ್ಲ. ಆದರೆ ಮಸ್ಕ್ ಕನಸು ಕಂಡರು. ಒಂದು ಕನಸು ಕಂಡ ಮೇಲೆ, ಅವರು ಅದನ್ನು ಅರ್ಧಕ್ಕೆ ಬಿಡುವವರಲ್ಲ. ಹಲವು ಸೋಲುಗಳನ್ನು ನೋಡಿ ಧೃತಿಗೆಡದೆ ಕೆಲಸ ಮಾಡಿ ಕೊನಗೊಂದು ದಿನ ಸ್ಪೇಸ್ ಎಕ್ಸ್ ಮೂಲಕ ರಾಕೆಟ್‌ಗಳನ್ನು ಯಶಸ್ವಿಯಾಗಿ ಭೂಮಿಗೆ ಮರಳಿ ಇಳಿಸುವ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಿದರು.
ಇದರ ಪರಿಣಾಮವಾಗಿ, ಬಾಹ್ಯಾಕಾಶಕ್ಕೆ ಹೋಗುವ ವೆಚ್ಚ ಬರೋಬ್ಬರಿ ಶೇಕಡಾ 95 ರಷ್ಟು ಕಡಿಮೆಯಾಯಿತು. ಇಂದು ನಾಸಾ ಕೂಡ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸ್ಪೇಸ್ ಎಕ್ಸ್ ಕಂಪನಿಯನ್ನು ಅವಲಂಬಿಸಿದೆ. ಅದಷ್ಟೇ ಅಲ್ಲ, ಮಸ್ಕ್ ಸ್ಟಾರ್‌ಲಿಂಕ್ ಉಪಗ್ರಹಗಳ ಮೂಲಕ ಜಗತ್ತಿನ ಮೂಲೆ ಮೂಲೆಗೂ ಅತಿವೇಗದ ಇಂಟರ್ನೆಟ್ ತಲುಪಿಸಿ, ಸ್ಪೇಸ್ ಎಕ್ಸ್ ಅನ್ನು ಇತಿಹಾಸದಲ್ಲೇ ಅತ್ಯಂತ ಶ್ರೀಮಂತ ಖಾಸಗಿ ಕಂಪನಿಯನ್ನಾಗಿ ಪರಿವರ್ತಿಸಿದರು.
ಮಸ್ಕ್ ಅವರ ಜೀವನದ ಅತ್ಯಂತ ದೊಡ್ಡ ವಿವಾದ ಎಂದರೆ ಟ್ವಿಟರ್ ಖರೀದಿ. 44 ಬಿಲಿಯನ್ ಡಾಲರ್ ನೀಡಿ ಟ್ವಿಟರ್ ಖರೀದಿಸಿದಾಗ, ಮಸ್ಕ್ ಗೆ ಬುದ್ಧಿಭ್ರಮಣೆಯಾಗಿದೆ, ಇದು ತಂತ್ರಜ್ಞಾನ ಇತಿಹಾಸದ ಅತ್ಯಂತ ಕೆಟ್ಟ ಹೂಡಿಕೆ ಎಂದು ಮಾಧ್ಯಮಗಳು ಹೀಯಾಳಿಸಿದವು. ಜಾಹೀರಾತುದಾರರು ಕಂಪನಿಯನ್ನು ತೊರೆದರು. ಮಾಧ್ಯಮಗಳು ಟ್ವಿಟರ್ ಇನ್ನು ಸತ್ತೇ ಹೋಯಿತು ಎಂದು ಬರೆದವು. ಇನ್ನು ಟ್ವಿಟರ್ ಮುಳುಗಿತು ಎಂದೇ ಇಡೀ ಜಗತ್ತು ಭಾವಿಸಿತು.
ಮಸ್ಕ್ ಜಗ್ಗಲಿಲ್ಲ. ಕುಗ್ಗಲಿಲ್ಲ. ಅವರು ಇಡೀ ಪ್ಲಾಟ್‌ಫಾರ್ಮ್ ಅನ್ನು ರೀಬ್ರಾಂಡ್ ಮಾಡಿ ಎಕ್ಸ್ ಎಂದು ಮರುನಾಮಕರಣ ಮಾಡಿದರು. ಕಠಿಣ ನಿರ್ಧಾರಗಳನ್ನು ತೆಗೆದುಕೊಂಡರು. ಇಡೀ ವ್ಯವಸ್ಥೆಯನ್ನು ಪುನರ್ನಿರ್ಮಿಸಿದರು. ನೋಡುನೋಡುತ್ತಿದ್ದಂತೆಯೇ ಇಂದು ಎಕ್ಸ್ ಜಗತ್ತಿನ ಅತ್ಯಂತ ಪ್ರಭಾವಶಾಲಿ ಮತ್ತು ಮುಕ್ತ ಅಭಿವ್ಯಕ್ತಿಯ ಪ್ರಮುಖ ಸೋಷಿಯಲ್ ಮೀಡಿಯಾ ವೇದಿಕೆಯಾಗಿ ಗುರುತಿಸಿಕೊಂಡಿದೆ. ಅದರ ಬೆನ್ನಲ್ಲೇ ಅವರು ಎಕ್ಸ್ಎಐ ಸಂಸ್ಥೆಯನ್ನು ಹುಟ್ಟುಹಾಕಿ, ಎಐ ರೇಸ್‌ಗೂ ಹೊಸ ಆಯಾಮ ನೀಡಿರುವುದು ಮತ್ತೊಂದು ಕುತೂಹಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.